ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಪ್ರಸಾರಗೊಳ್ಳುತ್ತಿರುವ ಹಿಂದಿ ವೆಬ್ ಸರಣಿಯ ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರು, ಹಿಂದೂ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ, ಆದ್ದರಿಂದ ಅವರು ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಸರಣಿಯ ವಿರುದ್ಧ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಅನೇಕ ಪೊಲೀಸ್ ಪ್ರಕರಣಗಳು ದಾಖಲಾಗಿವೆ.
“ವೆಬ್ ಸರಣಿ ತಾಂಡವ್‌ನ ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರು ಸಾಮಾಜಿಕ ಸಾಮರಸ್ಯ ಮತ್ತು ಐಕ್ಯತೆಯನ್ನು ಹಾಳುಮಾಡುವ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧ ಮಾಡಿದ್ದಾರೆ. ಆದ್ದರಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಟ್ವೀಟ್ ಮಾಡಿದ್ದಾರೆ.
तांडव बेब सिरीज़ के निर्माता निर्देशक और कलाकार समाजिक समरसता एकता को बिगाड़ने हिन्दुओं की धार्मिक भावनाओं को चोट पहुँचाने के अपराधी हैं कठोर क़ानूनी कार्यवाही की जायेगी
— Keshav Prasad Maurya (@kpmaurya1) January 20, 2021
ಇದನ್ನೂ ಓದಿ: ’ತಲೆಗಳನ್ನು ಕತ್ತರಿಸುವ ಸಮಯ’ – ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ
ವೆಬ್ ಸರಣಿಯ ತಯಾರಕರು ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನ ಅಧಿಕಾರಿಯ ವಿರುದ್ಧ ಲಖನೌದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಯುಪಿ ಪೊಲೀಸ್ ತಂಡವು ತನಿಖೆಗಾಗಿ ಮುಂಬೈ ತಲುಪಿದೆ.
ಸೋಮವಾರದಂದು ತಾಂಡವ್ ವೆಬ್ ಸರಣಿಯ ಪಾತ್ರವರ್ಗಗಳು ಮತ್ತು ಇತರ ಸಿಬ್ಬಂದಿಗಳು “ಬೇಷರತ್ತಾದ” ಕ್ಷಮೆಯಾಚಿಸಿದ್ದಾರೆ. “ನಾವು ಧಾರ್ಮಿಕ ನಂಬಿಕೆಗಳನ್ನು ಅಥವಾ ಭಾವನೆಗಳನ್ನು ಕೆರಳಿಸುವ ಉದ್ದೇಶವನ್ನು ಹೊಂದಿಲ್ಲ. ವೆಬ್ ಸರಣಿಯು ಕಾಲ್ಪನಿಕವಾಗಿದ್ದು ಸಂಪೂರ್ಣವಾಗಿ ಕಾಕತಾಳೀಯ” ಎಂದು ಹೇಳಿದ್ದಾರೆ. ಕ್ಷಮೆಯಾಚನೆಯ ನಂತರ ಅಮೆಜಾನ್ ಪ್ರೈಮ್‌ನಿಂದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರತಿಕ್ರಿಯೆ ಕೋರಿದೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ವೆಬ್ ಸರಣಿಯಲ್ಲಿ ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ ಮತ್ತು ಮೊಹಮ್ಮದ್ ಝೀಶನ್ ಅಯೂಬ್ ನಟಿಸಿದ್ದಾರೆ. ಸರಣಿಯು ಕಳೆದ ಶುಕ್ರವಾರ ಬಿಡುಗಡೆಯಾಯಿತು. ಸರಣಿಯ ವಿರುದ್ದ ಈಗಾಗಲೇ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಹಿಂದೂ ದೇವತೆಗಳಿಗೆ ಅವಮಾನ ಮಾಡಿದ ಆರೋಪ: ‘ತಾಂಡವ್’ ವೆಬ್ ಸೀರೀಸ್ ವಿರುದ್ಧ ದೂರು
