HomeUncategorizedಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ

ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ

- Advertisement -
- Advertisement -

ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಭಾರತೀಯ ಮೂಲದ ಅಮೆರಿಕನ್ ಲೇಖಕ ವೇದ್ ಮೆಹ್ತಾ ಜನವರಿ 9ರಂದು ಕೊನೆಯುಸಿರೆಳೆದರು. ತಮ್ಮ ಮೂರನೇ ವಯಸ್ಸಿನಲ್ಲಿಯೇ ಮೆನೆಂಜೈಟಿಸ್‌ನಿಂದ ದೃಷ್ಟಿ ಕಳೆದುಕೊಂಡು ಕುರುಡಾದರೂ, ಅವರ ಲೋಕದೃಷ್ಟಿ ಮಾತ್ರ ಎಂದಿಗೂ ತೀಕ್ಷ್ಣವಾಗಿಯೇ ಇತ್ತು. ಅಂಧರ ಶಾಲೆಯಲ್ಲಿ ಕಲಿತು ನಂತರ ಆರ್ಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಅಧ್ಯಯನ ಮಾಡಿ, ನ್ಯೂಯಾರ್ಕರ್ ಪತ್ರಿಕೆಯಲ್ಲಿ ಬರಹಗಾರನಾಗಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಈ ತಮ್ಮ ಸಾಹಸಗಾಥೆ ಕೇವಲ ಶಿಕ್ಷಣ ಮತ್ತು ಅಧ್ಯಯನಗಳನಲ್ಲಿಯೇ ಮುಗಿಯದೆ, ನೂರಾರು ಲೇಖನಗಳನ್ನು ಮತ್ತು ಹತ್ತಾರು ಪುಸ್ತಕಗಳನ್ನು ಬರೆದರು ವೇದ್ ಮೆಹ್ತಾ. ಭಾರತದ ಆಧುನಿಕ ಇತಿಹಾಸದ ಹಲವು ಸಂಗತಿಗಳು ಮತ್ತು ವಿದ್ಯಮಾನಗಳನ್ನು ಪಶ್ಚಿಮಕ್ಕೆ ಪರಿಚಯಮಾಡಿಕೊಟ್ಟ ಲೇಖಕ ಎಂದೇ ಅವರು ಜನಜನಿತರಾಗಿದ್ದರೂ ಭಾರತದಲ್ಲಿಯೂ ಅವರ ಅಪಾರ ಓದುಗರಿದ್ದಾರೆ. ‘ಮಹಾತ್ಮ ಗಾಂಧಿ ಅಂಡ್ ಹಿಸ್ ಅಪೋಸ್ಟಲ್ಸ್’, ಪೋಟ್ರೆಟ್ ಆಫ್ ಇಂಡಿಯಾ’, ‘ರಾಜೀವ್ ಗಾಂಧಿ ಅಂಡ್ ರಾಮಾಸ್ ಕಿಂಗ್‌ಡಮ್’, ‘ದ ನ್ಯೂ ಇಂಡಿಯಾ’ ಸೇರಿದಂತೆ ತಮ್ಮ ಜೀವನಗಾಥೆಯನ್ನು ಚಿತ್ರಿಸುವ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಅದರಲ್ಲಿ ‘ದ ನ್ಯೂ ಇಂಡಿಯಾ’ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತ ಪರಿಸ್ಥಿತಿಯ ಕರಾಳ ನೆನಪುಗಳನ್ನು ದಾಖಲಿಸುವ ಪುಸ್ತಕ.

ಅದರ ಒಂದು ಅಧ್ಯಾಯದ ಹೆಸರು ‘ದ ಕಾಂಟಿನೆಂಟ್ ಆಫ್ ಸೈಲೆನ್ಸ್’ ಎಂದು. 1975ರಲ್ಲಿ ಹೇರಿದ ತುರ್ತು ಪರಿಸ್ಥಿತಿ ಹೇಗೆ ಇಡೀ ಉಪಖಂಡವನ್ನು ಮೌನಕ್ಕೆ ನೂಕಿತು ಎಂದು ವಿವರಿಸುವ ಅವರು ತಮ್ಮ ಪತ್ರಿಕಾ ವರದಿಯ ಶೈಲಿಯಲ್ಲಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಭಯಾನಕ ಸಂಗತಿಗಳು ಮತ್ತು ಅದಕ್ಕೆ ಅಂದಿನ ಸರ್ಕಾರ ನೀಡುತ್ತಿದ್ದ ಸಮರ್ಥನೆಗಳು, ಮುಂತಾದ ಸಂಗತಿಗಳನ್ನು ದಾಖಲಿಸುತ್ತಾರೆ. ಅದೇ ಪುಸ್ತಕದ ಒಂದು ಅಧ್ಯಾಯದಲ್ಲಿ ಅವರು ಹೀಗೆ ದಾಖಲಿಸುತ್ತಾರೆ: “1977 ಮಾರ್ಚ್‍ನಲ್ಲಿ, ಇಂದಿರಾ ಗಾಂಧಿ ಅವರ ಆರ್ವೇಲಿಯನ್ ಪ್ರಭುತ್ವ ಅಂತ್ಯವಾಯಿತು… ಈ ಬಡ ದೇಶದಲ್ಲಿ ಪ್ರಜಾಪ್ರಭುತ್ವ ಬೆಳೆಯುವುದಕ್ಕೆ, ಈ ಪ್ರಭುತ್ವದ ಕೊನೆ ಅತಿ ದೊಡ್ಡ ಭರವಸೆಯ ಸಂಕೇತವಾಗಿ ಕಾಣುತ್ತಿದೆ”.


ಚಿಂತಕ, ಭಾಷಾ ಶಾಸ್ತ್ರಜ್ಞ ಮತ್ತು ಹೋರಾಟಗಾರ ಪ್ರೊ. ಜಿಎನ್ ದೇವಿ, ತಮ್ಮ ‘ಎ ಪ್ಯಾರಾ-ಬಯೋಗ್ರಫಿ’ ಎಂದು ಕರೆದುಕೊಳ್ಳುವ ಆತ್ಮಕಥಾನಕ ಶೈಲಿಯ ಪ್ರಬಂಧದ ಶೀರ್ಷಿಕೆ ‘ದ ಕೊಶ್ಚನ್ ಆಫ ಸೈಲೆನ್ಸ್’ (ಮೌನದ ಪ್ರಶ್ನೆ) ಎಂದು. ಅದರಲ್ಲಿ ಅವರು ಒಂದು ಕಡೆಗೆ ಹೀಗೆ ದಾಖಲಿಸುತ್ತಾರೆ: “ನಮ್ಮ ಸಮಯದಲ್ಲಿ ನಾವು ಚಿಂತಿಸುತ್ತಿರುವ ಈ ಮೌನಕ್ಕೆ ಭಯಾನಕ ಗುಣವೊಂದಿದೆ ಮತ್ತದರ ಬೇರಿರುವುದು ನಾಜಿ ಕಾನ್ಸೆಂಟ್ರೇಶನ್ ಶಿಬಿರಗಳಲ್ಲಿ ಮತ್ತು ಪ್ರಭುತ್ವ ಆಯೋಜಿಸುವ ನರಮೇಧಗಳಲ್ಲಿ” ಎನ್ನುವ ಅವರು ಮುಂದುವರೆದು “ಒಂದು ರೀತಿಯಲ್ಲಿ, ನಮ್ಮ ಸಮಯದಲ್ಲಿ ಮೌನದ ಪ್ರಶ್ನೆ ಬಹಳ ಮುಖ್ಯವಾಗಿದೆ, ಪ್ರಾಯಶಃ ಹಿಂಸೆಯ ಪ್ರಶ್ನೆಗಿಂತಲೂ ಹೆಚ್ಚು ಮುಖ್ಯವಾಗಿದೆ” ಎನ್ನುತ್ತಾರೆ.

ಈ ದೇಶ ಕಂಡ ಅತಿ ದೊಡ್ಡ ಹಿಂಸಾತ್ಮಕ ಘಟನೆಗಳಲ್ಲಿ ಒಂದಾದ ಬಾಬ್ರಿ ಮಸೀದಿ ಧ್ವಂಸ ಮತ್ತು ನಂತರ ದೇಶದೆಲ್ಲೆಡೆ ಹಬ್ಬಿದ ಹಿಂಸೆಯಿಂದ ಮತ್ತು ಅದು ಸೃಷ್ಟಿಸಿದ ಒಡಕು-ಅಪನಂಬಿಕೆ-ಅವಿವೇಕ-ವೈಮನಸ್ಯಗಳಿಂದ ಈ ದೇಶಕ್ಕೆ ಮುಕ್ತಿಯೇ ಇಲ್ಲದಂತಾಗಿದೆ. ಬಾಬ್ರಿ ಮಸೀದಿ ಹೊಡೆದುರುಳಿಸಿದ್ದು ಕ್ರಿಮಿನಲ್ ಅಪರಾಧ ಎಂದು ತಿಳಿಸಿತಾದರೂ, ಯಾರಿನ್ನೂ ಶಿಕ್ಷಿಸದೆ ಅಲ್ಲಿ ರಾಮಮಂದಿರವನ್ನು ಕಟ್ಟಲು ಅವಕಾಶ ಕೊಟ್ಟಿತು ಸುಪ್ರೀಂ ಕೋರ್ಟ್. ಇದು ತಂದ ಅಘಾತಕ್ಕೆ ಉಪ್ಪು ಸವರುವಂತೆ ಈಗ ಎಲ್ಲೆಲ್ಲಿಯೂ ರಾಮಮಂದಿರ ನಿರ್ಮಾಣಕ್ಕೆ ಚಂದಾ ಎತ್ತುವ ಕೆಲಸಕ್ಕೆ ಸಂಘ ಪರಿವಾರದವರು ಮುಂದಾಗಿದ್ದಾರೆ. ಈಗ ಆನ್‌ಲೈನ್‌ನಲ್ಲಿ ಅವರು ಪಸರಿಸುತ್ತಿರುವ ಪೋಸ್ಟರ್‌ಗಳಲ್ಲಿಯೂ ಅದೇ ದ್ವೇಷದ ಮತ್ತು ಪ್ರಚೋದನಕಾರಿ ಭಾಷೆ! ವಿಶಾಲ ಅರ್ಥದಲ್ಲಿ ಸಮುದಾಯಗಳಿಗೆ ಒಳಿತಾಗುವ ನಂಬಿಕೆ ಅಥವಾ ಆಧ್ಯಾತ್ಮವನ್ನು ಗಾಳಿಗೆ ತೂರಿ ಪ್ರತಿಷ್ಟೆ-ಸುಳ್ಳುಗಳು-ಮತ್ತೊಂದು ಮತಧರ್ಮದ ಬಗ್ಗೆ ದ್ವೇಷ ಇವುಗಳ ಅಡಿಪಾಯದಲ್ಲಿ ಕಟ್ಟಲಾಗುವ ಈ ಮಂದಿರ ಜನಸಮೂಹದ ಒಳಿತಿಗಾಗಿ ಎಲ್ಲಿ ಕೆಲಸ ಮಾಡೀತು? ಇವೆಲ್ಲದರ ನಡುವೆ ಹೆಚ್ಚು ಕಳವಳಕಾರಿಯಾಗಿರುವುದು ಎಷ್ಟೋ ಬರಹಗಾರರ, ಕಲಾವಿದರ ಮತ್ತು ಸಮಾಜದಲ್ಲಿ ಹೆಚ್ಚು ಜನರನ್ನು ತಲುಪುವ ಪ್ರಭಾವ ಇರುವವರ ‘ದಿವ್ಯ ಮೌನ’.

ಕೋಮುವಾದಿಗಳು ಬಾಬ್ರಿ ಮಸೀದಿ ಧ್ವಂಸ ಮಾಡಿದ ಸಂದರ್ಭದಲ್ಲಿ ಕನ್ನಡದ ಎಷ್ಟೋ ಸಾಹಿತಿಗಳು ಅದರ ವಿರುದ್ಧ ಧ್ವನಿ ಎತ್ತಿ ವಿವೇಕದ ಮಾತುಗಳನ್ನಾಡಿ ಎಚ್ಚರಿಸಿದ್ದರು. ಪಿ ಲಂಕೇಶ್ ಅವರು ‘ಇಟ್ಟಿಗೆ ಪವಿತ್ರವಲ್ಲ; ಜೀವ ಪವಿತ್ರ’ ಎಂಬ ಬರಹದ ಮೂಲಕ ಎಚ್ಚರಿಸಿದ್ದರು. ಧಾರ್ಮಿಕತೆಯನ್ನು ಸಮಾಜದ ವಿನಾಶಕ್ಕೆ ಬಳಸುವುದುರ ವಿರುದ್ಧ ಕಿಡಿಕಾರಿದ್ದರು. ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿ, ಯುಆರ್ ಅನಂತಮೂರ್ತಿಯವರೂ ಈ ಕರಾಳ ಇತಿಹಾಸದ ವಿರುದ್ಧ ಮಾತನಾಡುತ್ತಲೇ ಬಂದಿದ್ದರು. ಮತ್ತೆ ಕೆಲವರನ್ನು ಇಲ್ಲಿ ನೆನಪಿಸಿಕೊಳ್ಳಬಹುದಾದರೆ, ದೇವನೂರು ಮಹದೇವ, ಜಿ ರಾಜಶೇಖರ್ ಹೀಗೆ ಹಲವು ಚಿಂತಕರು ಇಂದಿಗೂ ಆ ದುರಂತದ ಬಗ್ಗೆ, ಧಾರ್ಮಿಕ ಭಯೋತ್ಪಾದನೆಯ ಬಗ್ಗೆ ಯುವ ಜನತೆಯನ್ನು ಎಚ್ಚರಿಸುವ ಕೆಲವನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ. ಆದರೆ, ತಮ್ಮ ಕೃತಿಗಳ ಇಂಗ್ಲಿಷ್ ಅನುವಾದಕ್ಕೆ ಹಾತೊರೆಯುವ ಎಷ್ಟೋ ಪ್ರಸಕ್ತ ಕನ್ನಡ ಲೇಖಕರು ಸೇರಿದಂತೆ, ಜನಪ್ರಿಯ ಸಿನೆಮ ನಟರ ಆದಿಯಾಗಿ ಕಲಾವಿದರು-ಪತ್ರಕರ್ತರು ಮುಂತಾದ ಪ್ರಭಾವಿಗಳು ತಳೆದಿರುವ ಮೌನ, ಕೋಮುವಾದಿಗಳ ಅಟ್ಟಹಾಸದಷ್ಟೇ ದುರಂತದ ಸಂಗತಿಯಾಗಿದೆ.

ಕೆಲವು ತಿಂಗಳುಗಳ ಹಿಂದೆ ಹಳೆಯ ಪುಸ್ತಕದಂಗಡಿಯೊಂದರಲ್ಲಿ ‘ಅಯೋಧ್ಯೆಯಲ್ಲಿ ರಾಮನಿಲ್ಲ!’ ಎಂಬ ಶೀರ್ಷಿಕೆಯ ಪುಸ್ತಕವೊಂದು ಕಣ್ಣಿಗೆ ಬಿತ್ತು. ಇದು ಕಾದಂಬರಿ ಮತ್ತು ಲೇಖಕರ ಹೆಸರು ಪರಿಚಿತವಾದುದೇ, ಆದರೆ ಈ ಶೀರ್ಷಿಕೆಯ ಬಗ್ಗೆ ತಿಳಿದಿರಲಿಲ್ಲ. ಮಸೀದಿ-ಮಂದಿರ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಈ ಪುಸ್ತಕದ ಬಗೆಗಿನ ಪ್ರಸ್ತಾಪ ಎಲ್ಲೂ ನನ್ನ ಗಮನಕ್ಕೆ ಬಂದಿರಲಿಲ್ಲ. ಲೇಖಕ ಶೇಷನಾರಾಯಣ ಅವರು ಕಾವೇರಿ ನದಿಯ ಬಗೆಗಿನ ತಮ್ಮ ಪುಸ್ತಕ ‘ಕಾವೇರಿ: ಒಂದು ಚಿಮ್ಮು, ಒಂದು ಹೊರಳು’, ತಮಿಳು ಲೇಖಕ ಕಲ್ಕಿ ಅವರ ಕೃತಿಗಳ ಕನ್ನಡಾನುವಾದಗಳಿಂದ ಚಿರಪರಿಚಿತರೇ! 1995ರಲ್ಲಿ ಪ್ರಕಟವಾಗಿರುವ 342 ಪುಟಗಳ ‘ಅಯೋಧ್ಯೆಯಲ್ಲಿ ರಾಮನಿಲ್ಲ!’ ಕೃತಿ, ಕಥೆ ಹೊಸೆಯುವ ತಂತ್ರಗಾರಿಕೆಯ ದೃಷ್ಟಿಯಿಂದ, ಶೈಲಿಯಲ್ಲಿ ಅಷ್ಟೇನು ಪರಿಣಾಮಕಾರಿಯಲ್ಲದ ಕಾದಂಬರಿ ಎನಿಸಿದರೂ, ಅಂದಿನ ಆಪತ್ತಿನ ಮತ್ತು ವಿನಾಶದ ಘಟನೆಗೆ ಸ್ಪಂದಿಸಿರುವ ರಾಜಕೀಯ ಕಾದಂಬರಿಯಾಗಿ ಮಹತ್ವದ ಪಾತ್ರ ವಹಿಸುತ್ತದೆ. ವರ್ಣವ್ಯವಸ್ಥೆ ಶ್ರೇಣಿಯ ಮೇಲ್ಜಾತಿಯಿಂದ ಬಂದಿರುವ ಒಬ್ಬ ಲೇಖಕ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿ ಪ್ರಾರ್ಥನ ಮಂದಿರವನ್ನು ಒಡೆಯುವ ಕೋಮುವಾದಿಗಳ ಕುತಂತ್ರವನ್ನು ವಿರೋಧಿಸಿರುವ ಕಾರಣಕ್ಕೆ, ದೇಶಕಾಲದ ಅಂದಿನ ಮನೋಧರ್ಮಕ್ಕೆ ಪ್ರತಿಕ್ರಿಯಿಸುವ ಲೇಖಕನ ಜವಬ್ದಾರಿಯ ದೃಷ್ಟಿಯಿಂದ ಇದು ಪ್ರಮುಖವಾಗುತ್ತದೆ.

ಈ ಕೃತಿಯಲ್ಲಿ ಮಸೀದಿ ಉರುಳಿಸಲು ರಥಯಾತ್ರೆ ಮಾಡುವ ಪಕ್ಷ ಹಿಂದೂಸ್ತಾನ ಜನತಾ ಪಕ್ಷ (ಹಿಂಜಪ). ಅದಕ್ಕೆ ಬೆನ್ನೆಲುಬಾಗಿ ನಿಲ್ಲುವ ಸಂಘಟನೆ ಶಿಲಾರಂಗದಳ. ಶಿಲಾಯುಗಕ್ಕೆ ಕರೆದುಕೊಂಡು ಹೋಗಲು ಹವಣಿಸುವ, ನಾಜಿ ಗೊಬೆಲ್ಸ್ ನ ರೀತಿಯಲ್ಲಿ ಜನರಿಗೆ ಬ್ರೇನ್ ವಾಶ್ ಮಾಡುವ ಸಂಘ ಅದು. ಕಾದಂಬರಿಯಲ್ಲಿ ಹಿಂಜಪ ಅಧಿಕಾರಕ್ಕೆ ಬಂದ ಮೇಲೆ, ಕೋರ್ಟ್ ಆದೇಶವನ್ನು ಬೈಪಾಸ್ ಮಾಡಲು, ಸಂವಿಧಾನವನ್ನು ಬದಲಿಸಿಯೇ, ಮಸೀದಿಯನ್ನು ಉರುಳಿಸುತ್ತದೆ. ದೇಶದಲ್ಲಿನ ಬಹುತ್ವದ ನಾಶದ ಅವರ ಬಹು ವರ್ಷಗಳ ಕನಸು ನನಸಾಗುತ್ತದೆ. ಕಾದಂಬರಿಯಲ್ಲಿ ಜರುಗುವ ಈ ಎಲ್ಲ ವಿದ್ಯಮಾನಗಳು, ಹಳ್ಳಿಯೊಂದರಲ್ಲಿ ಕೋದಂಡರಾಮ ದೇವಸ್ಥಾನದ ಅರ್ಚಕರಾಗಿರುವ ಸಂಪತ್ತಯ್ಯಂಗಾರರ ದೃಷ್ಟಿಯಲ್ಲಿ ಮತ್ತು ನಡೆಯುತ್ತಿರುವ ಘಟನೆಗಳನ್ನು ಅವರು ತಡೆಯಲಾಗದೆ ಕೊರಗುವ, ನಶಿಸಿ ಹೋಗುತ್ತಿರುವ ಸಮಾಜದ ವಿವೇಕಕ್ಕೆ ತಾವೂ ಬಲಿಯಾಗುವಂತೆ ಚಿತ್ರಿಸುತ್ತಾ ಮುಂದುವರೆಯುತ್ತದೆ. ಗಾಂಧಿವಾದಿಯಾದ ಸಂಪತ್ತಯ್ಯಂಗಾರರು ಗೋಡ್ಸೆಯನ್ನು ವಿಜೃಂಭಿಸುವ ದಿನಗಳನ್ನು ಕಾಣುತ್ತಾರೆ. ಅವರ ಸಂಬಂಧಿಕನೇ ಶಿಲಾರಂಗದ ಪ್ರೊಪೊಗಾಂಡಗೆ ಬಲಿಯಾಗಿ ಮುಸ್ಲಿಮನನ್ನು ಕೊಲ್ಲುವುದನ್ನು ಕಾಣುತ್ತಾರೆ. ಹೀಗೆ ಇಂದು ಘಟಿಸಿರುವ ವಿದ್ಯಮಾನಗಳೆಲ್ಲವೂ ಆ ಕಾದಂಬರಿಯಲ್ಲಿ ಜನಪ್ರಿಯ ಧಾಟಿಯಲ್ಲಿ ಅಡಗಿದೆ. ಸಂಪತ್ತಯ್ಯಂಗಾರರು ಬಹಳ ಪ್ರಗತಿಪರರು ಅಲ್ಲದೆ ಇದ್ದರೂ, ಅಂದು ಗಾಂಧಿವಾದಕ್ಕೆ ತೆರೆದುಕೊಂಡು ಬದಲಾವಣೆಗೆ ಒಡ್ಡಿಕೊಳ್ಳುತ್ತಿದ್ದ ಪೀಳಿಗೆಯೊಂದರ ಪ್ರತೀಕ. ಹೊಸ ಪ್ರಪಂಚಕ್ಕೆ, ಹೊಸ ವೈಚಾರಿಕತೆಗೆ ತೆರೆದುಕೊಳ್ಳುತ್ತಿದ್ದ ಈ ಸಮುದಾಯಗಳ ಇಂತಹ ಜನರನ್ನು ದೊಡ್ಡ ಸಂಖ್ಯೆಯಲ್ಲಿ ಪ್ರಗತಿಹೀನರನ್ನಾಗಿಸುವ ತಮ್ಮ ಯೋಜನೆಯಲ್ಲಿ, ವಾಸ್ತವದಲ್ಲಿರುವ ಸಂಘ ಪರಿವಾರ ಯಶಸ್ವಿಯಾಗಿರುವುದು ನಿಜ. ಇದು ಪ್ರಗತಿಪರ ಮನಸ್ಸುಗಳ ಸಂಘಟಿತ ಸೋಲಾದರೂ, ಜನರನ್ನು ಹೆಚ್ಚು ತಲುಪಲು ಸಾಧ್ಯವಿರುವ ಬರಹಗಾರರ, ನಟರ, ಪತ್ರಕರ್ತರ ಜವಬ್ದಾರಿ ಇದರಲ್ಲಿ ತುಸು ಹೆಚ್ಚೇ ಇದೆ.

ಮತ್ತೊಬ್ಬ ಕನ್ನಡದ ಮೇರು ಸಾಹಿತಿಯೊಬ್ಬರಿಗೆ ಸಂಬಂಧಿಸಿದಂತೆ ಹೆಚ್ಚು ಜನ ನೆನಪಿಸಿಕೊಳ್ಳುವ ಕಥೆಯನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯ. ಬಾಬ್ರಿ ಮಸೀದಿಯನ್ನು ಉರುಳಿಸಿದ ಮೇಲೆ, ಒಂದು ದಿನ ಬೆಂಗಳೂರಿನ ಟೌನ್‌ಹಾಲ್ ಮುಂದೆ ಮಸೀದಿಯನ್ನು ಉರುಳಿಸಿದ್ದರ ವಿರುದ್ಧ ಹಾಗೂ ಮಂದಿರ ಕಟ್ಟುವುದನ್ನು ಬೆಂಬಲಿಸಿ ಎರಡು ಪ್ರತ್ಯೇಕ ಪ್ರತಿಭಟನೆಗಳು ನಡೆಯುತ್ತಿದ್ದವಂತೆ. ಪರಂಪರೆಯನ್ನು ಬಳಸಿಕೊಂಡು ಹೆಚ್ಚೆಚ್ಚು ಸೃಜನಶೀಲ ಕೃತಿಗಳನ್ನು ಬರೆದಿರುವ ಖ್ಯಾತ ಕವಿ ಪುತಿನ ಅವರು ಅಂದು ಟೌನ್‌ಹಾಲ್‌ಗೆ ಬಂದು, ಮಸೀದಿ ಉರುಳಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಗುಂಪನ್ನು ಸೇರಿಕೊಂಡು, ಮತ್ತೊಂದು ಕೋಮಿನ ಪ್ರಾರ್ಥನಾ ಮಂದಿರ ಉರುಳಿಸಿದ್ದು ಮಹಾ ತಪ್ಪು ಎಂದು ಹೇಳಿ, ವಿವೇಕದ ಭಾಷಣ ಮಾಡಿ ತೆರಳಿದ್ದು ನಮಗೆಲ್ಲಾ ಇಂದು ಆದರ್ಶಪ್ರಾಯವಾಗಬೇಕಲ್ಲವೇ!

ಸಾಮಾಜಿಕ ಸಾಮರಸ್ಯ ಹದಗೆಡುತ್ತಿರುವ ಈ ಸಂದರ್ಭದಲ್ಲಿ, ಕರಾಳ ಕಾಯಿದೆಗಳನ್ನು ಬಳಸಿ ಹೋರಾಟಗಾರರು-ಚಿಂತಕರನ್ನು ಬಂಧಿಸುತ್ತಿರುವ ಈ ಆತಂಕಿತ ದಿನಗಳಲ್ಲಿ, ದೈತ್ಯ ಬಂಡವಾಳಶಾಹಿಗಳಿಗೆ ಮಣೆ ಹಾಕಿ ರೈತರ ಜೀವ ಹಿಂಡಲಿರುವ ಕಾನೂನುಗಳನ್ನು ಲೀಲಾಜಾಲವಾಗಿ ಪಾಸ್ ಮಾಡುತ್ತಿರುವ ಇಂತಹ ಸಮಯದಲ್ಲಿ, ರಾಮಮಂದಿರ ಕಟ್ಟುವ ನೆಪವನ್ನು ಮತ್ತೆ ಒಡ್ಡಿ ಸಮಾಜದಲ್ಲಿ ಒಡಕನ್ನು ಇನ್ನಷ್ಟು ಹೆಚ್ಚಿಸುತ್ತಿರುವ ಕಾಲದಲ್ಲಿ ನಮ್ಮ ಧ್ವನಿಗಳು ಇನ್ನೂ ಹೆಚ್ಚು ಗಟ್ಟಿಯಾಗಿ ಇವನ್ನೆಲ್ಲ ವಿರೋಧಿಸಿ ಕೂಗಿ ಹೇಳಬೇಕಾಗಿದೆ. ಮೌನ ಮುರಿಯಲೇಬೇಕಾಗಿದೆ.

– ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...