ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ರೈತ ಹೋರಾಟದಲ್ಲಿ ಹಸಿವು ನೀಗಿಸುವ ಲಂಗರ್‌ಗಳಂತೆ ಇನ್ನಷ್ಟು ಆಧಾರ ಸ್ತಂಭಗಳಾಗಿರುವುದು ವೈದ್ಯರು, ಆಸ್ಪತ್ರೆಗಳು, ಪುಟ್ಟ ಕ್ಲಿನಿಕ್‌ಗಳು, ಆಂಬ್ಯುಲೆನ್ಸ್ ಮತ್ತು ಔಷಧಾಲಯಗಳು.
ಹೌದು, ಹೊಲಗಳಲ್ಲಿ ದುಡಿಯುವ ರೈತರಿಗೆ ಚಳಿ ಹೊಸದಲ್ಲದೆ ಇರಬಹುದು. ಆದರೆ ಈಗ ದೆಹಲಿಯ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತರಿಗೆ ಇಲ್ಲಿನ ವಾತಾವರಣ, ತೀವ್ರಚಳಿ, ಮಂಜು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಈಗಾಗಲೇ ತೀವ್ರ ಚಳಿಗೆ ಹಲವಾರು ರೈತರು ಬಲಿಯಾಗಿದ್ದಾರೆ.
ಹೀಗಾಗಿ ಎಲ್ಲಾ ಪ್ರತಿಭಟನಾ ಸ್ಥಳಗಳಲ್ಲಿಯೂ ಆಸ್ಪತ್ರೆಗಳು, ವೈದ್ಯರು ದಂಡು, ನೂರಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನೀವು ಕಾಣಬಹುದು. ಆಂಬ್ಯುಲೆನ್ಸ್‌ಗಳೆ ಇಲ್ಲಿ ಆಸ್ಪತ್ರೆಗಳಾಗಿ, ಕ್ಲಿನಿಕ್‌ಗಳಾಗಿ ಹೆಚ್ಚು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ನಡುವೆ ಲೈಫ್ ಕೇರ್ ಫೌಂಡೇಷನ್‌ನಂತಹ ಸಂಸ್ಥೆಗಳು 6, 7 ಬೆಡ್‌ಗಳಿರುವ ಸಣ್ಣ ಪ್ರಮಾಣದ 24 ಗಂಟೆಗಳು ಕಾರ್ಯ ನಿರ್ವಹಿಸುವ ಆಸ್ಪತ್ರೆಗಳನ್ನು ನಡೆಸುತ್ತಿವೆ.
ಇದನ್ನೂ ಓದಿ: Breaking: ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ತಡೆಯಲ್ಲಿಡಲು ಮುಂದಾದ ಕೇಂದ್ರ!

ಸಿಂಘು ಗಡಿಯಲ್ಲಿರುವ ಲೈಫ್ ಕೇರ್ ಫೌಂಡೇಷನ್‌ನ ಕಿಸಾನ್ ಆಸ್ಪತ್ರೆಯಲ್ಲಿ ಸುಮಾರು 20 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ ಮತ್ತು ಪಕ್ಕದಲ್ಲೇ ಮೆಡಿಕಲ್ ಎರಡನ್ನು ಹೊಂದಿರುವ ಈ ಸಂಸ್ಥೆ ಸಾವಿರಾರು ಜನರಿಗೆ ಉಚಿತವಾಗಿ ಸೇವೆ ನೀಡುತ್ತಿದೆ.
“ಪ್ರತಿಭಟನೆ ಆರಂಭವಾದಾಗ ನಾವು ಒಂದು ಆಂಬ್ಯುಲೆನ್ಸ್‌ನಲ್ಲಿ ಇಲ್ಲಿ ಕ್ಲಿನಿಕ್ ಆರಂಭ ಮಾಡಿದ್ದೆವು. ಕಡಿಮೆ ಸಿಬ್ಬಂದಿ ಇದ್ದರು. ಆದರೆ ದಿನ ಕಳೆದಂತೆ ಪ್ರತಿಭಟನೆ ತೀವ್ರಗೊಳ್ಳತೊಡಗಿತು. ಕೆಲವು ರೈತರು ಸಾವನ್ನಪ್ಪಿದರು. ಹಾಗಾಗಿ ನಮ್ಮ ಸಂಸ್ಥೆ ಇಲ್ಲಿ ಸಣ್ಣ ಆಸ್ಪತ್ರೆ ನಿರ್ಮಿಸಲು ಯೋಚಿಸಿ, ಕಾರ್ಯರೂಪಕ್ಕೆ ತಂದಿತು. ಈಗ ವೈದ್ಯರು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ ಸೇರಿ 20 ಮಂದಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪಕ್ಕದಲ್ಲಿ ಮೆಡಿಕಲ್ ಇದೆ. ಅಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ” ಎಂದು 12 ವರ್ಷಗಳಿಂದ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಪೂಜಾ ನಾನುಗೌರಿ.ಕಾಂಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: NIAಯಿಂದ ಸಮನ್ಸ್ ಪಡೆದಿದ್ದ ‘ಖಾಲ್ಸಾ ಏಡ್’ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ!
ಪಂಜಾಬ್‌ನ ಅಮೃತ್‌ಸರದ ಕ್ಲಿನಿಕಲ್ ಲ್ಯಾಬೊರೇಟರಿ ಅಸೋಸಿಯೆಷನ್ ಸದಸ್ಯರು, 15 ದಿನಕ್ಕೆ ಒಂದರಂತೆ 25 ಜನರ ತಂಡ ಸಿಂಘು ಬಾರ್ಡರ್, ಟಿಕ್ರಿ ಬಾರ್ಡ್‌ರ್‌ಗಳಲ್ಲಿ ಉಳಿದುಕೊಂಡು ರೈತರ ಸೇವೆ ಮಾಡುತ್ತಿದೆ. ರಕ್ತದ ಪರೀಕ್ಷೆ, ಮಧುಮೇಹ ಪರೀಕ್ಷೆ ಮಾಡುವ ಇವರ ತಂಡ ವರದಿ ಆಧಾರದಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡುವ ಕೆಲಸ ಮಾಡುತ್ತಿದೆ.
ತಮ್ಮ ಸಂಸ್ಥೆ ವತಿಯಿಂದ ನೀಡಲಾಗುತ್ತಿರುವ ಸೇವೆ ಬಗ್ಗೆ ಮಾತನಾಡಿದ ಮಂಜಿಂದರ್ ಸಿಂಗ್, ರಂದೀಪ್ ಸಿಂಗ್ ಮತ್ತು ಗುರು ವಿಶ್ವಾಸ್ ಸಿಂಗ್, “ನಾವು ಕಳೆದ ವಾರದಿಂದ ಇಲ್ಲಿ ಉಳಿದುಕೊಂಡಿದ್ದೇವೆ. ಈ ಮೊದಲು ಟಿಕ್ರಿ ಗಡಿಯಲ್ಲಿ ಇದ್ದೆವು. ರಕ್ತ ಮತ್ತು ಮಧುಮೇಹ ಪರೀಕ್ಷೆ ನಡೆಸುತ್ತೆವೆ. ದೇಶದ ರೈತರು ಇಂದು ಕಷ್ಟದಲ್ಲಿದ್ದಾರೆ. ನಮ್ಮಿಂದಾಗುವ ಎಲ್ಲಾ ಸೇವೆ ಮಾಡಲು ನಾವು ತಯಾರಿದ್ದೇವೆ. ಪ್ರತಿಭಟನೆ ಮುಗಿಯುವವರೆಗೂ ನಾವು ಇಲ್ಲಿಯೇ ಇರಲು ತೀರ್ಮಾನಿಸಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ರೈತ ಹೋರಾಟದಲ್ಲಿ ಜ್ಞಾನ ಪ್ರಸರಣ: ಗಮನ ಸೆಳೆದ ಕಿಸಾನ್ ಗ್ರಂಥಾಲಯಗಳು!
ಇನ್ನೂ ಪಂಜಾಬಿನಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಆರಂಭವಾದಾಗಿನಿಂದಲೂ ರೈತರ ಜೊತೆಗೆ ನಿಂತು ಸೇವೆ ನೀಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ಯುನೈಟೆಡ್ ಸಿಖ್ಸ್, ಗಡಿಗಳಲ್ಲೂ ಪ್ರತಿಭಟನಾ ನಿರತ ರೈತರ ಸೇವೆಗೆ ಆಧಾರ ಸ್ತಂಭವಾಗಿ ನಿಂತಿದೆ.
ನೈಸರ್ಗಿಕ ವಿಕೋಪಗಳು, ಆರೋಗ್ಯ, ಶಿಕ್ಷಣ ಮತ್ತು ಹೋರಾಟಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಳ್ಳುವ ಈ ಸಂಸ್ಥೆ ಸಿಂಘು ಗಡಿಯಲ್ಲಿ ದೆಹಲಿ ಚಲೋ ಆರಂಭವಾದಾಗಿನಿಂದಲೂ ಇದೆ. ಅದು ಮೂರು ಬೆಡ್‌ಗಳ ಪುಟ್ಟ ಆಸ್ಪತ್ರೆ ಜೊತೆಗೆ ಮೆಡಿಕಲ್ ಶಾಪ್ ಹೊಂದಿದೆ.
ಬರೀ ಆರೋಗ್ಯ ಸೇವೆಗೆ ಮಾತ್ರ ತನ್ನ ಸೇವೆ ಮೀಸಲಿರಿಸದ ಈ ಸಂಸ್ಥೆ ಪ್ರತಿಭಟನಾ ನಿರತ ರೈತರಿಗೆ ದಿನ ಬಳಕೆಯ ಮೂಲ ವಸ್ತುಗಳಿಂದ ಹಿಡಿದು ರೈತರಿಗೆ ಚಳಿಯಿಂದ ತಪ್ಪಿಸಿಕೊಳ್ಳಲು, ಮಲಗಲು ಸ್ಲೀಪಿಂಗ್ ಬ್ಯಾಗ್‌ಗಳನ್ನು ಉಚಿತವಾಗಿ ನೀಡುತ್ತಿದೆ.
ದೆಹಲಿ ಚಲೋ ಆರಂಭವಾದ ತಕ್ಷಣ ಪಂಜಾಬ್‌ನಲ್ಲಿಯೇ ಇದ್ದ ನಾವು 2 ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯರೊಂದಿಗೆ ಇಲ್ಲಿಗೆ ಬಂದೆವು. ತಕ್ಷಣ ಊಟ, ನೀರಿನ ವ್ಯವಸ್ಥೆ ಮಾಡಿದೆವು. ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಬರುತ್ತಿದ್ದ ಕಾರಣ ಮೂರು ಬೆಡ್‌ಗಳ ಸಣ್ಣ ಆಸ್ಪತ್ರೆ ಮಾಡಿಕೊಂಡೆವು. ಹರಿಯಾಣದ ಆರೋಗ್ಯ ಆಸ್ಪತ್ರೆ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೆವೆ ಎಂದು ಯುನೈಟೆಡ್ ಸಿಖ್ಸ್ ಸಂಸ್ಥೆಯ ಅಧಿಕಾರಿ ರಾಜೇಂಧರ್ ಸಿಂಗ್ ತಿಳಿಸಿದ್ದಾರೆ.
ಗಡಿಗಳಲ್ಲಿ ವಿಪರೀತ ಎನಿಸುವಷ್ಟು ಚಳಿ ಇದೆ. ಇದರಿಂದ ದೇಹದ ಭಾಗಗಳು ಹೆಚ್ಚಾಗಿ ನೋವಿಗೆ ಒಳಗಾಗುತ್ತಿದ್ದು, ಇಂತವರಿಗೆ ಆಸ್ಪತ್ರೆಗಳು ನೆರವು ನೀಡುತ್ತಿದೆ. ರೈತ ಹೋರಾಟದಲ್ಲಿ ಹೆಚ್ಚಾಗಿರುವ ವೃದ್ಧರು ಬೇಗನೆ ಕಾಯಿಲೆಗೆ ಒಳಗಾಗುತ್ತಿದ್ದು, ಆಸ್ಪತ್ರೆಗಳು, ವೈದ್ಯರು ಇಲ್ಲದಿದ್ದರೇ ಈ ಐತಿಹಾಸಿಕ ಹೋರಾಟದ ಗತಿ ಬೇರೆ ರೀತಿಯಲ್ಲಿರುತ್ತಿತ್ತು ಎನಿಸುತ್ತದೆ.
ಇದನ್ನೂ ಓದಿ: ಹೋರಾಟ ನಿರತ ರೈತರ ಸೇವೆಗಾಗಿ ವಿದೇಶಿ ಕೆಲಸದ ಅವಕಾಶ ತೊರೆದ ಯುವಕ..!