ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ರೈತರೊಡನೆ ಕೇಂದ್ರ ಸರ್ಕಾರ ಇಂದು (ಜನವರಿ 20) 10 ನೇ ಸುತ್ತಿನ ಮಾತುಕತೆ ನಡೆಸಿದ್ದು, “ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಒಂದೂವರೆ ವರ್ಷ ತಡೆಹಿಡಿಯಲಾಗುವುದು” ಎಂದು ಒಪ್ಪಿಕೊಂಡಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಈ ಕುರಿತು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಅವರ ಹೇಳಿಕೆಯನ್ನು ವರದಿ ಮಾಡಿರುವ ಎಎನ್‌ಐ, “ಒಂದೂವರೆ ವರ್ಷದವರೆಗೆ ಕಾನೂನುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರ ಸಿದ್ಧವಾಗಿರುವುದಾಗಿ ಹೇಳಿದೆ” ಎಂದು ವರದಿ ಮಾಡಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ಪರ ಇರುವವರ ಅಭಿಪ್ರಾಯ ಬದಲಾಗಬಹುದು: ಸುಪ್ರೀಂ ಸಮಿತಿ ಪರ ಬ್ಯಾಟಿಂಗ್ ಮಾಡಿದ…
They also said that a committee would be formed on MSP & the laws & they would implement the recommendations of the committee. We'll hold a meeting tomorrow & take a decision on the proposal: Hannan Mollah, General Secretary, All India Kisan Sabha https://t.co/hZI29yfCDf
— ANI (@ANI) January 20, 2021
“ಕನಿಷ್ಟ ಬೆಂಬಲ ಬೆಲೆ ಮತ್ತು ಕೃಷಿ ಕಾನೂನುಗಳ ಬಗ್ಗೆ ಸಮಿತಿಯನ್ನು ರಚಿಸಲಾಗುವುದು. ಜೊತೆಗೆ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ನಾವು ನಾಳೆ ಸಭೆ ನಡೆಸಿ, ಈ ಪ್ರಸ್ತಾಪದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಹನ್ನನ್ ಮೊಲ್ಲಾ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಿಕ್ಕಟ್ಟಿನ ಕುರಿತು ಕೇಂದ್ರ ಸರ್ಕಾರ ಮತ್ತು ರೈತರ ನಡುವೆ 9 ಸುತ್ತಿನ ಮಾತುಕತೆಗಳು ನಡೆದಿದ್ದು, ಎಲ್ಲವೂ ವಿಫಲವಾಗಿವೆ. ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೆಕು ಎಂದು ರೈತರು ಒತ್ತಾಯಿಸುತ್ತಿದ್ದರೆ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ.
ಹಾಗಾಗಿ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಲೇ ಇದ್ದಾರೆ. ಇದರ ಭಾಗವಾಗಿಯೇ ಈ ಟ್ರ್ಯಾಕ್ಟರ್ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ ನಮ್ಮ ಸಾಂವಿಧಾನಿಕ ಹಕ್ಕು: ಸುಪ್ರೀಂಗೆ ಪರೋಕ್ಷ ಸಂದೇಶ ರವಾನಿಸಿದ ರೈತರು