ಭೂಮಂಡಲದ ಹೊರಗಿನ ಲೋಕದ ಎಷ್ಟು ವಿಸ್ಮಯಗಳನ್ನೂ ಭೇದಿಸಿದ್ದರೂ ಅದು ಇನ್ನೂ ಮುಗಿಯದ ಪಯಣ. ಅದೇ ರೀತಿಯಲ್ಲಿ ಆಕಾಶ ವೀಕ್ಷಣೆ ಕೂಡ ಎಂದಿಗೂ ಮುಗಿಯದ, ಎಂದಿಗೂ ಬೇಸರ ತರಿಸದ ಹವ್ಯಾಸ.
ಜನವರಿ 21 ರಂದು ಚಂದಿರನ ಪಕ್ಕದಲ್ಲಿ ಕಾಣುವ ಮಂಗಳ ಗ್ರಹ
ಅಮಾವಾಸ್ಯೆ ಕಳೆದು ಒಂದು ವಾರವಾಗಿದೆ. ಚಂದ್ರ ಈಗ ವೃದ್ಧಿಸುತ್ತಿರುವ ಚಂದ್ರ. ಅಂದರೆ, ದಿನೆ ದಿನೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಹೆಚ್ಚುತ್ತಾ ಹೋಗುತ್ತದೆ. ಈ ತಿಂಗಳ 20ಕ್ಕೆ ಅಮಾವಾಸ್ಯೆ ಕಳೆದು ಒಂದು ವಾರವಾಗುತ್ತದೆ, ಅಂದರೆ ಏಳನೇ ದಿನ. ಈ ದಿನ ಚಂದ್ರನ ಅಧದಷ್ಟು ಭಾಗ ಕಾಣುತ್ತದೆ. ಅಲ್ಲದೆ, ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದರೆ, ಚಂದ್ರ ನೆತ್ತಿಯ ಮೇಲೆ ಕಾಣುತ್ತಾನೆ. 20ರಂದು ಸೂರ್ಯಾಸ್ತದ ಸಮಯದಲ್ಲಿ ನೆತ್ತಿಯ ಮೇಲೆ ಕಾಣುತ್ತಾನಾ? ಇದನ್ನು ನೀವು ಆಕಾಶ ವೀಕ್ಷಣೆ ಮೂಲಕ ಪರೀಕ್ಷಿಸಿ.
ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶ ಏನೆಂದರೆ, ಚಂದ್ರನ ಯಾವ ಭಾಗ ಸೂರ್ಯನ ಬೆಳಕಿನಿಂದ ಹೊಳೆಯುತ್ತಿದೆ ಎಂದು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇನೆಂದರೆ, ಚಂದ್ರನಿಗೆ ತನ್ನದೇ ಆದ ಸ್ವಂತ ಬೆಳಕಿಲ್ಲ. ಚಂದ್ರ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಾನೆ. ಈ ಕಾರಣದಿಂದ 20ರಂದು ಸೂರ್ಯಾಸ್ತವನ್ನು ನೋಡುತ್ತಿದ್ದರೆ, ನೆತ್ತಿಯ ಮೇಲೆ ಕಾಣುವ ಚಂದ್ರನ ಯಾವ ಭಾಗ ಸೂರ್ಯನ ಬೆಳಕಿನಿಂದ ಹೊಳೆಯುತ್ತಿದೆ ಮತ್ತು ಆ ಭಾಗ ಯಾವ ದಿಕ್ಕಿಗಿದೆ ಎಂದು ಗಮನಿಸಿ. ಇದರಿಂದ ಸೂರ್ಯ ಮುಳುಗಿದ ನಂತರ ರಾತ್ರಿ ಆಕಾಶದಲ್ಲಿ, ಚಂದ್ರನ ಸಹಾಯದಿಂದ ಸುಲಭವಾಗಿ ದಿಕ್ಕನ್ನು ಗುರುತಿಸಲು ಸಹಾಯವಾಗುತ್ತದೆ. ಅಲ್ಲದೆ, ಈ ಚಟುವಟಿಕೆಯನ್ನು ೨೦ರಂದೇ ಮಾಡಬೇಕೆಂದೇನಿಲ್ಲ. ಯಾವ ದಿನವೇ ಆಗಲಿ, ಚಂದ್ರನ ಬೆಳಕಿನ ಭಾಗ ಯಾವ ದಿಕ್ಕಿಗೆ ಮುಖ ಮಾಡಿದೆ ಎಂದು ಗಮನಿಸುತ್ತಿರಿ.
ಅಂದಹಾಗೆ, 21ರಂದು ರಾತ್ರಿ ಆಕಾಶದಲ್ಲಿ ನೀವು ಚಂದ್ರನನ್ನು ಗಮನಿಸಿದರೆ, ಚಂದ್ರನ ಆಸು ಪಾಸಿನಲ್ಲಿಯೇ ಪ್ರಕಾಶಮಾನವಾದ ಕೆಂಪು ಚುಕ್ಕೆ ಕಾಣುತ್ತದೆ. ಸೂಕ್ಷ್ಮವಾಗಿ ಗಮನಿಸಿ, ಈ ಚುಕ್ಕೆ ಮಿನುಗುವುದಿಲ್ಲಾ. ಇದೇ ಮಂಗಳ ಗ್ರಹ.
ಜನವರಿ 28ರಂದು ಹುಣ್ಣಿಮೆ. ಅಂದು ಸೂರ್ಯಾಸ್ತವನ್ನು ಗಮನಿಸಿ. ಚಂದ್ರ ಅವೊತ್ತು ನೆತ್ತಿಯಲ್ಲಿ ಕಾಣುತ್ತಾನಾ ಅಥವಾ ಬೇರೆಡೆ ಕಾಣುತ್ತಾ ಅನ್ನುವುದನ್ನು ಗಮನಿಸಿ.
ಬುಧ ಗ್ರಹವನ್ನು ಸೂರ್ಯಾಸ್ತ ನಂತರ ನೋಡಬಹುದು
ಕಳೆದ ಡಿಸೆಂಬರ್‌ನಲ್ಲಿ, ಗುರು ಮತ್ತು ಶನಿ ಗ್ರಹಗಳ ಸಮಾಗಮವನ್ನು ಆಗಸದಲ್ಲಿ ಕಂಡೆವು. ಅಂದರೆ, ಗುರು ಮತ್ತು ಶನಿ ಗ್ರಹಗಳು ಆಗಸದಲ್ಲಿ ಹಿಂದೆಂದಿಗಿಂತಲೂ ಸನಿಹ ಬಂದಿದ್ದನ್ನು ನಾವು ವೀಕ್ಷಿಸಿದೆವು. ಸದ್ಯ ಈಗ ಎರಡೂ ಗ್ರಹಗಳ ಸೂರ್ಯನ ಆಸುಪಾಸಿನಲ್ಲಿಯೇ ಇರುವುದರಿಂದ, ಸೂರ್ಯನ ತೀಕ್ಷ್ಣವಾದ ಬೆಳಕಿನ ಕಾರಣ ಈ ಗ್ರಹಗಳನ್ನು ನೋಡುವುದು ಕಷ್ಟವಾಗಿರುತ್ತದೆ. ಆದರೆ, ಸೌರಮಂಡಲದ ಮೊದಲ ಗ್ರಹವಾದ ಬುಧ ಗ್ರಹವನ್ನು ನೋಡಬಹುದು.
ಈ ತಿಂಗಳಿನಲ್ಲಿ, ಸೂರ್ಯ ಮುಳುಗಿದ ನಂತರ ದಿಗಂತದಲ್ಲಿನ ಸೂರ್ಯನ ಸ್ಥಾನದಿಂದ ಸುಮಾರು 20 ಡಿಗ್ರಿ ಎತ್ತರದಲ್ಲಿ ಒಂದು ಚುಕ್ಕಿ ಕಾಣುತ್ತದೆ. ಈ ಚುಕ್ಕಿಯೇ ಬುಧ ಗ್ರಹ. ಬೈನಾಕ್ಯುಲರ್ ಅಥವಾ ದೂರದರ್ಶಕದಲ್ಲಿ ಬುಧ ಗ್ರಹವನ್ನು ಚೆನ್ನಾಗಿ ನೋಡಬಹುದು. ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಅಥವಾ ಸೂರ್ಯ ಉದಯಿಸುವ ಮೊದಲು ಸುಮಾರು ಒಂದೂವರೆ ಗಂಟೆಯವರೆಗೆ ಮಾತ್ರ ಬುಧ ಗ್ರಹವನ್ನು ನಾವು ನೋಡಬಹುದಾಗಿದೆ.
ಇದಕ್ಕೆ ಕಾರಣ, ಸೌರಮಂಡಲದಲ್ಲಿ ಭೂಮಿಯ ಕಕ್ಷೆಯಿಂದ ಹೊರಗಿರುವ ಗ್ರಹಗಳನ್ನು ಹೊರಗ್ರಹಗಳು ಮತ್ತು ಒಳಗಿರುವ ಗ್ರಹಗಳನ್ನು ಒಳಗ್ರಹಗಳು ಎಂದು ಕರೆಯುತ್ತೇವೆ. ಬುಧ ಒಳಗ್ರಹಗಳ ಪಟ್ಟಿಗೆ ಸೇರುತ್ತದೆ. ಒಳಗ್ರಹಗಳು ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಅಥವಾ ಸೂರ್ಯ ಉದಯಿಸುವ ಮೊದಲ ನಾಲ್ಕು ಗಂಟೆಯವರೆಗೆ ಕಾಣುತ್ತದೆ. ಬುಧ ಗ್ರಹಕ್ಕೆ ಈ ಸಮಯ ಸುಮಾರು ಎರಡು ಗಂಟೆಯಾಗಿದೆ. ಹಾಗಾಗಿ, ಒಳ ಗ್ರಹಗಳಾದ ಬುಧ ಮತ್ತು ಶುಕ್ರ ಆಗಸದಲ್ಲಿ ಎತ್ತರದಲ್ಲಿ ಕಾಣಸಿಗುವುದಿಲ್ಲ. ಆಗಸದಲ್ಲಿ, ಬುಧ ಗ್ರಹ ಕ್ಷಿತಿಜದಿಂದ (Horizon) ಹೆಚ್ಚು ಎಂದರೆ 20 ಡಿಗ್ರಿ ಎತ್ತರದಲ್ಲಿ ಕಾಣಿಸಿದರೆ, ಶುಕ್ರ ಗ್ರಹ 45 ಡಿಗ್ರಿವರೆಗೆ ತಲುಪುತ್ತದೆ. ಈ ಎತ್ತರ ಬಿಟ್ಟು ಈ ಎರಡೂ ಗ್ರಹಗಳು ಎಂದಿಗೂ ನೆತ್ತಿಯಲ್ಲಿ ಕಾಣಿಸುವುದಿಲ್ಲ.
ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?
ಆಗಸವನ್ನು 88 ನಕ್ಷತ್ರ ಪುಂಜಗಳಿಂದ ಗುರುತಿಸಿರುವುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇವುಗಳಲ್ಲಿ ಕೆಲವು ನಕ್ಷತ್ರ ಪುಂಜಗಳ ಆಕೃತಿಗಳು ಆಗಸದಲ್ಲಿ ಗುರುತಿಸಲು ಬಹಳ ಸುಲಭ ಮತ್ತು ಈ ನಕ್ಷತ್ರ ಪುಂಜದಲ್ಲಿನ ನಕ್ಷತ್ರಗಳು ಹೆಚ್ಚು ಪ್ರಕಾಶಮಾನ ಹೊಂದಿರುವುದರಿಂದ, ನಗರ ಪ್ರದೇಶದಿಂದಲೂ ಇವುಗಳನ್ನು ಸುಲಭವಾಗಿ ಕಾಣಬಹುದು. ಇಂತಹ ಪ್ರಕಾಶಮಾನವಾದ ನಕ್ಷತ್ರ ಪುಂಜಗಳನ್ನು ಆಗಸದಲ್ಲಿನ ಗ್ರಹ, ನಕ್ಷತ್ರ ಮತ್ತು ಧೂಮಕೇತುಗಳನ್ನು ಗುರುತಿಸಲು ಮಾರ್ಗದರ್ಶಕವಾಗಿ ಬಳಸುತ್ತೇವೆ. ಇಂತಹ ಒಂದು ನಕ್ಷತ್ರ ಪುಂಜ ಉತ್ತರ ದಿಕ್ಕಿನಲ್ಲಿ ಕಾಣುವ ಕ್ಯಾಸಿಯೋಪಿಯ (ದಿ ಕ್ವೀನ್), ಕನ್ನಡದಲ್ಲಿ ಇದನ್ನು ಕುಂತಿ ನಕ್ಷತ್ರ ಪುಂಜ ಎಂದು ಕರೆಯುತ್ತಾರೆ.
ಈ ತಿಂಗಳಿನಲ್ಲಿ, ಮೋಡವಿಲ್ಲದ ರಾತ್ರಿಯಂದು ಸುಮಾರು 7.30 ಗಂಟೆಗೆ, ಆಗಸದ ಉತ್ತರ ದಿಕ್ಕಿನಲ್ಲಿ ಗಮನಿಸಿದರೆ ಚಿತ್ರ 1 ರಲ್ಲಿ ಗುರುತಿಸಿರುವ ಒ ಆಕಾರದ ಒಂದು ನಕ್ಷತ್ರ ಪುಂಜವನ್ನು ನೋಡಬಹುದು. ಈ ಒ ಆಕಾರದ ನಕ್ಷತ್ರ ಪುಂಜವೇ ಕುಂತಿ ನಕ್ಷತ್ರ ಪುಂಜ.
ಈಗ ಚಿತ್ರ 2ನ್ನು ಗಮನಿಸಿ, ಕುಂತಿ ನಕ್ಷತ್ರ ಪುಂಜದಲ್ಲಿ ಪ್ರಕಾಶಮಾನವಾದ 5 ನಕ್ಷತ್ರಗಳನ್ನು ಗುರುತಿಸಲಾಗಿದೆ. ಇಲ್ಲಿ, 3 ಮತ್ತು 4ನೇ ನಕ್ಷತ್ರದ ಕಾಲ್ಪನಿಕ S ಕ್ಷಿತಿಜಕ್ಕೆ (Horizon) ಲಂಬ ಕೋನದಲ್ಲಿ ಒಂದು ಗೆರೆಯನ್ನು ಎಳೆದುಕೊಂಡು ಬಂದರೆ, ಅದು ಒಂದು ನಕ್ಷತ್ರಕ್ಕೆ ತಾಗುವುದು. ಈ ನಕ್ಷತ್ರವೇ ಧ್ರುವ ನಕ್ಷತ್ರ, ಅಂದರೆ Pole Star. ಈ ನಕ್ಷತ್ರದ ವಿಶೇಷತೆ ಏನೆಂದರೆ, ಬೇರೆ ಆಕಾಶಕಾಯಗಳಂತೆ ಈ ನಕ್ಷತ್ರ ಪೂರ್ವದಲ್ಲಿ ಹುಟ್ಟುವುದಿಲ್ಲ ಅಥವಾ ಪಶ್ಚಿಮದಲ್ಲಿ ಮುಳುಗುವುದೂ ಇಲ್ಲ. ಈ ನಕ್ಷತ್ರ ನಿಶ್ಚಲ ಸ್ಥಿತಿಯಲ್ಲಿ ಅದೇ ದಿಕ್ಕಿನಲ್ಲಿ ಯಾವಾಗಲೂ ಇರುತ್ತದೆ. ನಕ್ಷತ್ರ ಪುಂಜಗಳ ಸಹಾಯದಿಂದ ಧ್ರುವ ನಕ್ಷತ್ರವನ್ನು ಗುರುತಿಸಲು ನಾವು ಕಲಿತರೆ, ದಿಕ್ಕುಗಳನ್ನು ಬೇರ್‍ಯಾವುದೇ ಸಹಾಯ ಇಲ್ಲದೆ ಗುರುತಿಸಬಹುದು. ಹಿಂದೆ, ರಾತ್ರಿ ಸಮಯದಲ್ಲಿ ಕಾಡಿನಲ್ಲಿ ಸಂಚರಿಸಲು, ಸಮುದ್ರಯಾನ ಕೈಗೊಳ್ಳಲು ಧ್ರುವ ನಕ್ಷತ್ರವನ್ನು ಈ ರೀತಿ ಗುರುತಿಸಿಯೇ, ದಿಕ್ಕುಗಳನ್ನು ಕಂಡುಕೊಳ್ಳುತ್ತಿದ್ದರು.
ಧ್ರುವ ನಕ್ಷತ್ರ ಏಕೆ ಹುಟ್ಟುವುದಿಲ್ಲ ಮತ್ತು ಮುಳುಗುವುದಿಲ್ಲ ಎಂಬ ವಿಷಯವನ್ನು ಯೋಚಿಸುತ್ತಿದ್ದೀರಿ ಅಲ್ಲವೇ? ಮುಂದಿನ ಸಂಚಿಕೆಯಲ್ಲಿ ಅದರ ಬಗ್ಗೆ ಚರ್ಚಿಸೋಣ.
(ಚಿತ್ರ ಕೃಪೆ: Stellarium Software)
ಇದನ್ನೂ ಓದಿ:


