ನರೇಂದ್ರ ಮೋದಿ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಇಂದು ಹೋರಾಟ ನಿರತ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಿದರು. ರೈತರ ಒಂದು ಗುಂಪು ಉದ್ದೇಶಿತ ಮಾರ್ಗ ಬಿಟ್ಟು ಕೆಂಪು ಕೋಟೆಗೆ ರ್ಯಾಲಿ ನಡೆಸಿತು. ಅಲ್ಲದೇ ಕೋಟೆಯ ಮೇಲೆ ಹತ್ತಿದ ರೈತರು ರೈತ ಧ್ವಜ ಮತ್ತು ಸಿಖ್ ರಿಗೆ ಪವಿತ್ರ ಎಂದು ಭಾವಿಸುವ ನಿಶಾನ್ ಸಾಹಿಬ್ ಧ್ವಜ ಹಾರಿಸಿದರು. ಆದರೆ ಕೆಲ ಮಾಧ್ಯಮಗಳು ಕೆಂಪುಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಲಾಗಿದೆ ಎಂದು ಆರೋಪಿಸಿ ಸುಳ್ಳು ಸುದ್ದಿ ಮಾಡಿವೆ.
ಟೈಮ್ಸ್ ನೌ ಆಂಗ್ಲ ಮಾಧ್ಯಮ “ಕೆಂಪುಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಲಾಗಿದೆ, ರೈತರು ಭಾರತದ ರಾಷ್ಟ್ರ ಚಿಹ್ನೆಗಳಿಗೆ ಅವಮಾನ ಮಾಡಿದ್ದಾರೆ” ಎಂದು ಸುದ್ದಿ ಮಾಡಿದೆ. ಆದರೆ ಈ ಪ್ರತಿಪಾದನೆ ತಪ್ಪಾಗಿದೆ. ಇಂದು ಕೆಂಪು ಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜ ಎತ್ತರದಲ್ಲಿ ಹಾರಾಡುತ್ತಿದೆ. ಅದಕ್ಕೆ ರೈತರು ಯಾವುದೇ ಹಾನಿ ಮಾಡಿಲ್ಲ. ಬದಲಿಗೆ ಅದರ ಪಕ್ಕದಲ್ಲಿದ್ದ ಚಿಕ್ಕ ಖಾಲಿ ಕಂಬಗಳಲ್ಲಿ ರೈತರು ತಮ್ಮ ಧ್ವಜಗಳನ್ನು ಹಾರಿಸಿದ್ದಾರೆ.

ಈ ಮೇಲಿನ ಹಳೆಯ ಚಿತ್ರದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರುವುದನ್ನು ನಾವು ಗಮನಿಸಬಹುದು. ಹಾಗೆಯೇ ಇಂದು ರೈತರು ನಿಶಾನ್ ಸಾಹಿಬ್ ಧ್ವಜ ಹಾರಿಸಲಾದ ಕಂಬ ಖಾಲಿ ಇರುವುದನ್ನೂ ಗಮನಿಸಿ. ರಾಷ್ಟ್ರಧ್ವಜಕ್ಕಿಂತ ಕೆಳಭಾಗದ ಖಾಲಿ ಕಂಬಗಳಲ್ಲಿ ರೈತರು ತಮ್ಮ ಧ್ವಜ ಮತ್ತು ನಿಶಾನ್ ಸಾಹಿಬ್ ಹಾರಿಸಿದ್ದಾರೆ. ಈ ಕೆಳಗಿನ ಚಿತ್ರ ನೋಡಿ. (ರಾಷ್ಟ್ರಧ್ವಜಕ್ಕಿಂತ ಕೆಳಭಾಗದಲ್ಲಿ ಬೇರೆ ಧ್ವಜಗಳನ್ನು ಹಾರಿಸುವುದು ಕಾನೂನು ಸಮ್ಮತ. ಬೇರೆ ದೇಶದ ಪ್ರಧಾನಿಗಳು ಬಂದಾಗ ರಾಷ್ಟ್ರಧ್ವಜದ ಪಕ್ಕದಲ್ಲೇ ವಿದೇಶದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ.)

ಇನ್ನು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಕೆಂಪು ಕೋಟೆಯ ಮೇಲೆ ಖಾಲಿಸ್ತಾನಿ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅದು ಸಂಪೂರ್ಣ ಸುಳ್ಳಾಗಿದೆ. ಇಂದು ರೈತರು ತ್ರಿವರ್ಣ ಧ್ವಜಕ್ಕಿಂತ ಕೆಳಭಾಗದಲ್ಲಿ ರೈತಧ್ವಜ ಮತ್ತು ನಿಶಾನ್ ಸಾಹಿಬ್ ಹಾರಿಸಿದ್ದಾರೆ.
ನಿಶಾನ್ ಸಾಹಿಬ್ ಎಂಬುದು ಸಿಖ್ಖರ ಪವಿತ್ರ ಧ್ವಜ ಎಂದು ಹೆಸರು ಪಡೆದಿದೆ. ಖಾಲ್ಸಾದ ನೆನಪಿಗಾಗಿ ಅದನ್ನು ಪ್ರತಿ ಗುರುದ್ವಾರದ ಆವರಣದಲ್ಲಿ ಹಾರಿಸಲಾಗುತ್ತದೆ. ಇನ್ನು ಖಾಲ್ಸಾಗೂ ಖಾಲಿಸ್ತಾನ್ ಚಳವಳಿಗೂ ಯಾವುದೇ ಸಂಬಂಧವಿಲ್ಲ. ಅಮೃತಸರದ ಹರ್‌ಮಂದಿರ್ ಸಾಹಿಬ್ ಕಾಂಪ್ಲೆಕ್ಸ್ ಗುರುದ್ವಾರದ ಎದುರು ನಿಶಾನ್ ಸಾಹಿಬ್ ಹಾರಾಡುವುದನ್ನು ಈ ಕೆಳಗಿನ ಚಿತ್ರದಲ್ಲಿ ನೋಡಬಹುದು.

ನಿಶಾನ್ ಸಾಹಿಬ್ ತ್ರಿಕೋನಾಕಾರದ ಬಾವುಟವಾಗಿದೆ ಮತ್ತು ಖಾಲಿಸ್ತಾನ ಬಾವುಟಕ್ಕೂ ಅದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಖಾಲಿಸ್ತಾನಿ ಧ್ವಜ ಆಯಾತಾಕಾರದಲ್ಲಿದ್ದು ಅದರ ಬಾವುಟವನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು.

ನಿಶಾನ್ ಸಾಹಿಬ್ ಭಾರತೀಯ ಸೇನೆಯ ಸಿಖ್ ರೆಜಿಮೆಂಟ್‌ಗೆ ಅಪಾರ ಮಹತ್ವದ್ದಾಗಿದೆ. ಒಟ್ಟಿನಲ್ಲಿ ಕೆಂಪುಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಲಾಗಿಲ್ಲ. ಮತ್ತು ರೈತರು ಕೆಳಗಡೆ ಹಾರಿಸಿದ ಧ್ವಜ ಖಾಲಿಸ್ತಾನಿ ಧ್ವಜ ಅಲ್ಲ. ಹಾಗೂ ರೈತ ಹೋರಾಟಕ್ಕೂ ಖಾಲಿಸ್ತಾನಿಗಳಿಗೂ ಯಾವುದೇ ಸಂಬಂಧವಿಲ್ಲ.
ಇದನ್ನೂ ಓದಿ: ದೆಹಲಿಯಲ್ಲಿ ಪರಸ್ಪರ ಗುಲಾಬಿ ವಿನಿಮಯ, ಒಟ್ಟಿಗೆ ಊಟ ಮಾಡಿದ ರೈತರು ಮತ್ತು ಪೊಲೀಸರು!


