ಸ್ಟಾಂಡ್‌ಅಪ್ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಮತ್ತು ಸಹ ಆರೋಪಿ ನಳಿನ್ ಯಾದವ್ ಅವರ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶದ ಹೈಕೋರ್ಟ್‌ನ ಇಂದೋರ್ ನ್ಯಾಯಪೀಠ ಗುರುವಾರ ತಿರಸ್ಕರಿಸಿದೆ.
ಇಂದೋರ್‌ನಲ್ಲಿ ನಡೆದ ಹೊಸ ವರ್ಷದ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಜನವರಿ 1 ರಂದು ಬಂಧಿಸಲಾಗಿತ್ತು.
ಮುನಾವರ್ ಫಾರೂಕಿ ಸ್ಥಳೀಯ ರೆಸ್ಟೋರೆಂಟ್‌ವೊಂದರಲ್ಲಿ ತಮ್ಮ ಪ್ರದರ್ಶನವನ್ನು ಪ್ರಾರಂಭಿಸುವ ಮುನ್ನ ಇಂದೋರ್‌ನ ಬಿಜೆಪಿ ಶಾಸಕ ಮಾಲಿನಿ ಸಿಂಗ್ ಗೌಡ್ ಅವರ ಪುತ್ರ, ಹಿಂದೂ ರಕ್ಷಕ ಸಂಘಟನ್ ಮುಖ್ಯಸ್ಥ ಏಕಲವ್ಯ ಸಿಂಗ್ ಗೌಡ್ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಅಲಾವುದ್ದೀನ್ ಮತ್ತು ಅದ್ಭುತ ದೀಪದ ’ಜಿನ್’: ಕುನಾಲ್ ಕಮ್ರಾ ಟ್ವೀಟ್ ವೈರಲ್!
ಅವರು ಇತರ ನಾಲ್ವರು ಸಹ ಆರೋಪಿಗಳೊಂದಿಗೆ ಜನವರಿ 2 ರಿಂದ ಜೈಲಿನಲ್ಲಿದ್ದಾರೆ. ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ಜನವರಿ 25 ರಂದು ವಿಚಾರಣೆ ನಡೆಸಿದ್ದು ಆದೇಶವನ್ನು ಕಾಯ್ದಿರಿಸಿತ್ತು.
ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ರೋಹಿತ್ ಆರ್ಯ ಅವರ ಏಕ-ನ್ಯಾಯಪೀಠವು, “ಆರೋಪಿಗಳ ವಿರುದ್ದ ಇನ್ನೂ ಹೆಚ್ಚು ದೋಷಾರೋಪಣೆ ಸಂಗ್ರಹಿಸುವ ಸಾಧ್ಯತೆ ಇದೆ. ಅಲ್ಲದೆ ಪ್ರಕರಣದಲ್ಲಿ ಇತರ ವ್ಯಕ್ತಿಗಳ ಪಾತ್ರವನ್ನು ಕೂಡಾ ಕಡೆಗಣಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.
ಮುನಾವರ್ ಫಾರೂಕಿಯ ವಕೀಲ ಅನ್ಶುಮಾನ್ ಶ್ರೀವಾಸ್ತವ, “ನಾವು ನಮ್ಮ ಕಾನೂನು ಮತ್ತು ನ್ಯಾಯಾಂಗವನ್ನು ನಂಬುತ್ತೇವೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ” ಎಂದು ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಹಿಂದೂ ದೇವತೆಗಳ ಅಪಹಾಸ್ಯ: ಹಾಸ್ಯ ನಟನ ವಿರುದ್ದ ಯಾವುದೇ ಪುರಾವೆಯಿಲ್ಲ ಎಂದ ಪೊಲೀಸರು


