ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ಪರೇಡ್ ನಂತರ ಶುಕ್ರವಾರ ದೆಹಲಿಯ ಸಿಂಘು ಗಡಿಯಲ್ಲಿ ಉದ್ವಿಗ್ನತೆ ಆರಂಭವಾಗಿತ್ತು. ಸ್ಥಳೀಯರು ಎಂದು ಹೇಳಿಕೊಂಡು ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಆಯುಧ ಹಿಡಿದು ರೈತರು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಈ ಅಹಿತಕರ ಘಟನೆಯಲ್ಲಿ ಭಾಗಿಯಾಗಿದ್ದರೆಂದು 44 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ರೈತರು ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ ಎಂದು ಆಪಾದಿಸಿ, ಪ್ರತಿಭಟನಾ ನಿರತ ರೈತರ ಮೇಲೆ ಗುಂಪೊಂದು ಹಲ್ಲೆ ನಡೆಸಿತು. ಈ ವೇಳೆ ಕಲ್ಲು ತೂರಾಟ, ಘರ್ಷಣೆ ನಡೆದು ಹಲವು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್: ಸುಳ್ಳು, ಸಂಚು, ದಮನಗಳೇ ತಿರುಗುಬಾಣವಾದ ಗಳಿಗೆ
ಗಾಯಾಗೊಂಡವರಲ್ಲಿ ಅಲೀಪುರ ಠಾಣಾಧಿಕಾರಿ ಪ್ರದೀಪ್ ಪಾಲಿವಾಲ್ ಸೇರಿದ್ದು, ಗಲಭೆಕೋರರಲ್ಲಿನ ಒಬ್ಬ ಖಡ್ಗ ಬೀಸಿದಾಗ ಪ್ರದೀಪ್ ತೀವ್ರವಾಗಿ ಗಾಯಗೊಂಡಿದ್ದರು. ಇವರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ಆರೋಪದಲ್ಲಿ ನವಾನ್‌ಶಹರ್ ನಿವಾಸಿ ರಂಜೀತ್ ಸಿಂಗ್ ಎಂಬಾತ ಸೇರಿದಂತೆ 44 ಮಂದಿಯನ್ನು ಬಂಧಿಸಲಾಗಿದೆ.
“ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಫಲಕ ಹಾಗೂ ಧ್ವಜಗಳನ್ನು ಹಿಡಿದಿದ್ದ 200ಕ್ಕೂ ಹೆಚ್ಚು ಮಂದಿಯ ಗುಂಪೊಂದು ಆಗಮಿಸಿ, ರೈತರ ಪ್ರತಿಭಟನೆಯಿಂದಾಗಿ ತಮಗೆ ಆರ್ಥಿಕ ಸಂಕಷ್ಟ ತಲೆದೋರಿದೆ. ತಕ್ಷಣ ರೈತರು ಜಾಗ ಖಾಲಿ ಮಾಡಬೇಕು” ಎಂದು ಆಗ್ರಹಿಸಿದರು ಎಂಬುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ರೈತ ಹೋರಾಟ ಮುಗಿಸಲು ಕೇಂದ್ರದ ಸಂಚು: ಕ್ರೊನೊಲಜಿ ಹೀಗಿದೆ
ನಂತರ ಈ ಗುಂಪು ಪ್ರತಿಭಟನಾ ಸ್ಥಳಕ್ಕೆ ನುಗ್ಗಿ ರೈತರ ಟೆಂಟ್‌ಗಳನ್ನು ಕಿತ್ತೆಸೆದು, ರೈತರ ವಸ್ತುಗಳನ್ನು ಗುಂಪು ಹಾಳುಗೆಡವಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ಈ ಘಟನೆಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆಯುಧ ಹಿಡಿದ ಕೆಲವರು ಬಂದು ರೈತರ ಮೇಲೆ ದಾಳಿ ಮಾಡಿ, ಅವರ ವಸ್ತುಗಳನ್ನು ಹಾಳುಗೆಡವುತ್ತಿದ್ದಾಗ ಪೊಲೀಸರು ಕೈಕಟ್ಟಿ ನಿಂತಿದ್ದರು ಎಂದು ಹಲವರು ಆರೋಪಿಸಿದ್ದಾರೆ.
ಇನ್ನೂ ಕೆಲವರು ಇದು ಸರ್ಕಾರದ ಸಂಚು ಎಂದು ದೂರಿದ್ದಾರೆ. ಆದರೆ ರೈತರ ಸಂಘಟನೆಗಳು ಇದಾವುದಕ್ಕೂ ಹೆದರುವುದಿಲ್ಲ ಎಂದು ಮತ್ತೊಮ್ಮೆ ಘಂಟಾಘೊಷವಾಗಿ ಹೇಳಿದ್ದಾರೆ.
ನುಗ್ಗಿದ ಈ ಗುಂಪು ಯಾರದು?
ಇಂಥದ್ದೇ ಸಂಘಟನೆಗೆ ಸೇರಿದ ಗುಂಪೆಂದು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲವಾದರೂ, ನಿನ್ನೆ ಸ್ಥಳೀಯರ ಹೆಸರಲ್ಲಿ ಒಂದು ಸಣ್ಣ ಗುಂಪು ಪ್ರತಿಭಟನೆ ಮಾಡಿತ್ತು. ಬಹುಪಾಲು ಮಾಧ್ಯಮಗಳು ಸ್ಥಳೀಯರಿಂದ ಪ್ರತಿಭಟನೆ ಎಂದೇ ಬಿಂಬಿಸಿದ್ದವು.
ಅದರೆ, ಅಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್ ಚೆಕ್‌ನಲ್ಲಿ, ಹಿಂದೂ-ಸೇನಾ ಸಂಘಟನ್‌ನವರು ಆ ಪ್ರತಿಭಟನೆ ನಡೆಸಿದ್ದರು. ಅದರಲ್ಲಿ ಕೆಲವು ಸ್ಥಳಿಯರನ್ನು ಸೇರಿಸಿಕೊಂಡಿದ್ದರು. ತಮ್ಮದೇ ಸಂಘಟನೆ ಪ್ರತಿಭಟನೆ ನಡೆಸಿದೆ ಎಂದು ಹಿಂದೂ-ಸೇನಾ ಸಂಘಟಣ್ ಅಧ್ಯಕ್ಷ ಅಲ್ಟ್ ನ್ಯೂಸ್ ಎದುರು ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ‘ಜ. 26ರ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಕಾರಣ’: ಬಿಜೆಪಿ ತೊರೆದ ಹಿರಿಯ ನಾಯಕ ರಾಂಪಾಲ್ ಮಜ್ರಾ


