ತಮ್ಮ ಚುನಾಯಿತ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಸಲುವಾಗಿಯೇ ದೇಶದ ಎಲ್ಲಾ ಮೂಲೆಗಳಿಂದ ರೈತರು ದೆಹಲಿಯ ಗಡಿಗಳಿಗೆ ಬಂದಿದ್ದಾರೆ. ಆದ್ದರಿಂದ, ಸರ್ಕಾರದೊಂದಿಗೆ ಮಾತುಕತೆ ನಡೆಸಲು ರೈತ ಸಂಘಟನೆಗಳು ಬಾಗಿಲು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ.
‘ಕೃಷಿ ಕಾನೂನುಗಳ ಅನುಷ್ಠಾನವನ್ನು 18 ತಿಂಗಳುಗಳ ಕಾಲ ಅಮಾನತಿನಲ್ಲಿರಿಸುವ ತಮ್ಮ ಸರ್ಕಾರದ ಪ್ರಸ್ತಾವನೆ ಹಾಗೆ ಇದೆ. ಕೋಪಗೊಂಡ ರೈತರೊಂದಿಗೆ ವಾರಗಳ ಕಾಲ ಸ್ಥಗಿತಗೊಂಡಿರುವ ಮಾತುಕತೆ ಮುಂದುವರೆಸುವ ಪ್ರಯತ್ನ ಸಾಗಿವೆ’ ಎಂದು ನಿನ್ನೆ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರೈತ ಮುಖಂಡರು ಮೂರು ಕಾನೂನುಗಳನ್ನು ರದ್ದುಗೊಳಿಸುವವರೆಗೂ ಮತ್ತು ಎಂಎಸ್‌ಪಿ ಖಾತ್ರಿಗಾಗಿ ಕಾನೂನು ಜಾರಿಗೊಳಿಸುವವರೆಗೂ ಮಾತುಕತೆ ಮತ್ತು ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಹೋರಾಟದ 67ನೇ ದಿನದ ಪತ್ರಿಕಾ ಹೇಳಿಕೆಯಲ್ಲಿ “ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದಂದು ಮಹಾತ್ಮ ಗಾಂಧಿ ಮತ್ತು ರೈತ ಚಳವಳಿಯಲ್ಲಿ ಹುತಾತ್ಮಾದವರಿಗೆ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ದೆಹಲಿಯ ಎಲ್ಲಾ ಗಡಿಗಳಲ್ಲಿ ಮತ್ತು ಭಾರತದಾದ್ಯಂತ ಒಂದು ದಿನದ ಉಪವಾಸವನ್ನು ಆಚರಿಸಲಾಯಿತು. ಗಾಂಧೀಜಿಯವರ ಜೀವನದಿಂದ ಕಲಿತು ರೈತರು ಈ ಆಂದೋಲನವನ್ನು ಶಾಂತಿಯುತವಾಗಿ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದರು” ಎಂದು ರೈತ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.
ಸದ್ಭಾವನಾ ದಿವಾಸ್ ವರದಿಗಳು ದೇಶದಾದ್ಯಂತ ಬರುತ್ತಿವೆ. ಮಹಾರಾಷ್ಟ್ರದಲ್ಲಿ ಮುಂಬೈ, ಥಾಣೆ, ಪುಣೆ, ಅಹ್ಮದ್‌ನಗರ, ನಂದೂರ್‌ಬಾರ್, ಸತಾರಾ, ಔರಂಗಾಬಾದ್, ನಾಸಿಕ್ ಇತ್ಯಾದಿಗಳಿಂದ ವರದಿಗಳು ಬಂದಿವೆ. ತಮಿಳುನಾಡಿನಲ್ಲಿ, ಕರೂರ್ ಮತ್ತು ಕಲ್ಲಕುರುಚಿಯಂತಹ ಜಿಲ್ಲೆಗಳಲ್ಲಿ ದಿನವನ್ನು ಆಚರಿಸಲಾಯಿತು. ಕರ್ನಾಟಕದ ಮೈಸೂರು, ಶಿವಮೊಗ್ಗ, ಚಿಕ್ಕಬಲ್ಲಾಪುರ, ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ಸದ್ಭಾವನಾ ದಿವಾಸ್ ಆಚರಿಸಲಾಗಿದೆ. ಗುಜರಾತ್‌ನಲ್ಲೂ ರೈತರು ಇಂದು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸಬೆರ್‌ಕಂತದಲ್ಲಿ ತಮ್ಮ ಎಂದಿನ ದಮನಕಾರಿ ಮನೋಭಾವವನ್ನು ಪ್ರದರ್ಶಿಸಿದ ಗುಜರಾತ್ ಪೊಲೀಸರು ಸತ್ಯಾಗ್ರಹಿಗಳನ್ನು ಬಂಧಿಸಿದ್ದಾರೆ. ಹರಿಯಾಣದಿಂದಲೂ ಉಪವಾಸ ಸತ್ಯಾಗ್ರಹದ ವರದಿಗಳು ಬಂದಿವೆ. ಬಿಹಾರದಲ್ಲಿ, ಮುಜಫರ್ಪುರ್, ನಳಂದ ಮುಂತಾದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸದ್ಭಾವನಾ ದಿವಾಸ್ ಅನ್ನು ಉದ್ದನೆಯ ಮಾನವ ಸರಪಳಿಗಳಿಂದ ಆಚರಿಸಲಾಗಿದೆ. ಮಧ್ಯಪ್ರದೇಶದಲ್ಲಿಯೂ ಸಹ ಭೋಪಾಲ್, ಬೆತುಲ್, ಮುಲ್ತೈ ಮತ್ತು ಇತರ ಸ್ಥಳಗಳಲ್ಲಿ ಉಪವಾಸ ಆಚರಿಸಲಾಯಿತು. ಇಂದಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬ ನಾಗರಿಕರ ಭಾಗವಹಿಸುವಿಕೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಕಾನೂನುಬಾಹಿರ ಬಳಕೆಯಿಂದ ಈ ಆಂದೋಲನವನ್ನು ದುರ್ಬಲಗೊಳಿಸಲು ಮತ್ತು ನಾಶಪಡಿಸುವ ಪೊಲೀಸರ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸರು ವಿವಿಧ ದಾಳಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪೋಲಿಸ್ ಮತ್ತು ಬಿಜೆಪಿ ಗೂಂಡಾಗಳ ನಿರಂತರ ಹಿಂಸಾಚಾರವು ಸರ್ಕಾರದೊಳಗಿನ ಸ್ಪಷ್ಟ ಭಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪ್ರತಿಭಟನಾಕಾರರನ್ನು ಮತ್ತು ಪತ್ರಕರ್ತರನ್ನು ಪೊಲೀಸರು ಸಿಕ್ಕಸಿಕ್ಕಲ್ಲಿ ಬಂಧಿಸುತ್ತಿದ್ದಾರೆ. ಎಲ್ಲಾ ಶಾಂತಿಯುತ ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ರೈತರ ಪ್ರತಿಭಟನೆಯನ್ನು ನಿರಂತರವಾಗಿ ವರದಿ ಮಾಡುತ್ತಿರುವ ಪತ್ರಕರ್ತರ ಮೇಲಿನ ಪೊಲೀಸ್ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಪರವಾಗಿ ಡಾ. ದರ್ಶನ್ ಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ರದ್ದತಿ: ಇಂದಿನ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?


