ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ ಪಂಜಾಬ್‌ನ ರೈತರನ್ನು ಪೊಲೀಸರು ಹೊಡೆಯುತ್ತಿದ್ದಾರೆ ಮತ್ತು ಗೂಂಡಾಗಳಿಂದ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಮಂಗಳವಾರ ಸರ್ವಪಕ್ಷ ಸಭೆ ಕರೆದು ರೈತ ಹೋರಾಟದ ಪರ ಒಗ್ಗಟ್ಟು ತೋರಿಸಲು ಕರೆ ನೀಡಿದ್ದಾರೆ.
ಸಭೆ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪಂಜಾಬ್ ಭವನದಲ್ಲಿ ನಡೆಯಲಿದೆ ಎಂದು ಭಾನುವಾರ ಹೊರಡಿಸಿರುವ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಇದು ಅಹಂಕಾರದ ಮೇಲೆ ನಿಲ್ಲುವ ಸಮಯವಲ್ಲ. ನಮ್ಮ ರಾಜ್ಯ ಮತ್ತು ನಮ್ಮ ಜನರನ್ನು ಉಳಿಸಲು ಒಗ್ಗೂಡಬೇಕಾದ ಸಮಯ” ಎಂದಿರುವ ಅವರು, ಎಲ್ಲ ಪಕ್ಷಗಳು ಸಭೆಗೆ ಬನ್ನಿ ಎಂದು ತಿಳಿಸಿದ್ದಾರೆ.
ಪಂಜಾಬ್ ಸರ್ಕಾರದ ಹೇಳಿಕೆಯ ಪ್ರಕಾರ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನ, ಅದರಲ್ಲೂ ವಿಶೇಷವಾಗಿ ಗಣರಾಜ್ಯೋತ್ಸವದ ಹಿಂಸಾಚಾರ, ರೈತರ ಮೇಲಿನ ಸಿಂಘು ಗಡಿಯಲ್ಲಿ ದಾಳಿ, ಮತ್ತು ರೈತರ ವಿರುದ್ಧದ ಅಪಪ್ರಚಾರ ಅಭಿಯಾನದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಿದೆ.
ರೈತರಿಗೆ ಬೆಂಬಲವಾಗಿ ಮತ್ತು ಪಂಜಾಬ್‌ನ ಹಿತದೃಷ್ಟಿಯಿಂದ ಎಲ್ಲಾ ಪಕ್ಷಗಳು ಏಕತೆಯ ಮನೋಭಾವದಿಂದ ಸಭೆಗೆ ಸೇರಬೇಕೆಂದು ಸಿಂಗ್ ಆಗ್ರಹಿಸಿದ್ದಾರೆ.
ಕೃಷಿ ಕಾನೂನುಗಳಿಂದ ಉದ್ಭವಿಸಿದ “ಬಿಕ್ಕಟ್ಟು” ಇಡೀ ರಾಜ್ಯ ಮತ್ತು ಅದರ ಜನರಿಗೆ ಕಳವಳಕಾರಿ ವಿಷಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“ಎಲ್ಲಾ ಪಂಜಾಬಿಗಳು ಮತ್ತು ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಸಾಮೂಹಿಕ ಪ್ರಯತ್ನಗಳ ಮೂಲಕ ಮಾತ್ರ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಮತ್ತು ರೈತರ ಹಿತಾಸಕ್ತಿಗಳನ್ನು ಕಾಪಾಡಬಹುದು” ಎಂದು ಅವರು ಹೇಳಿದ್ದಾರೆ.
“ನಮ್ಮ ರೈತರು ದೆಹಲಿ ಗಡಿಯಲ್ಲಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಸಾಯುತ್ತಿದ್ದಾರೆ. ಅವರನ್ನು ಪೊಲೀಸರು ಹೊಡೆದು ಗೂಂಡಾಗಳಿಂದ ಹಲ್ಲೆ ಮಾಡಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರನ್ನಾಗಿ ಮಾಡಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ ”ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಸಿಂಘು ಗಡಿಯಲ್ಲೀಗ ರೈತಾಪಿ ಮಹಿಳೆಯರ ದಂಡು


