ಎಂದೆಂದೂ ಕಂಡರಿಯದ ಬಜೆಟ್ ಮಂಡಿಸುತ್ತೇವೆ ಎಂದು ಒಕ್ಕೂಟ ಸರ್ಕಾರ ಕೊಚ್ಚಿಕೊಂಡಿತ್ತು. ವಾಸ್ತವವಾಗಿ ವಿತ್ತ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ 2021-2022ನೆಯ ಸಾಲಿನ ಒಕ್ಕೂಟ(ಕೇಂದ್ರ) ಬಜೆಟ್ ಅತಿ ಸಾಮಾನ್ಯ ಬಜೆಟ್ಟಾಗಿ ಹೊರಬಿದ್ದಿದೆ. ನಿಜ, 2020-21ರಲ್ಲಿ ಕೋವಿಡ್ ರೋಗದಿಂದಾಗಿ ಲಕ್ಷಾಂತರ ಜನರು ಜೀವ ಕಳೆದುಕೊಂಡರೆ, ಕೋಟ್ಯಂತರ ಜನರ ಬದುಕು ಮುರಿದುಹೋಯಿತು. ಆರ್ಥಿಕತೆಯು 2020ರ ಮಾರ್ಚ್‌ನಿಂದ ಆಗಸ್ಟ್‌ವರೆಗೆ ಸ್ತಬ್ಧವಾಗಿತ್ತು ಮತ್ತು ಸೆಪ್ಟೆಂಬರ್ ನಂತರ ನಿಧಾನವಾಗಿ ಚೇತರಿಸಿಕೊಳ್ಳತೊಡಗಿತು.
ನಿಜಕ್ಕೂ 2020 ವಿಶೇಷ ವರ್ಷ. ನಮ್ಮ ಆರ್ಥಿಕತೆಯು ಪ್ರಾಕೃತಿಕವಾಗಿ ಕೋವಿಡ್ ದುರಂತವನ್ನು ಎದುರಿಸಿದ್ದ ಒಂದು ಆಯಾಮವಾದರೆ, ಅನೇಕ ಅರ್ಥಶಾಸ್ತ್ರಜ್ಞರು ಎಚ್ಚರಿಸಿದಂತೆ ಆಳುವ ವರ್ಗವು ದೇಶದಾದ್ಯಂತ ಉಂಟುಮಾಡಿರುವ ಭಯ ಮತ್ತು ಅಸಹಿಷ್ಣುತೆಯ ವಾತಾವರಣ, ಕೋಮು ದಳ್ಳುರಿ, ಸಾಮಾಜಿಕ ವಿಷಮತೆಗಳಿಂದಾಗಿ ಉಂಟಾದ ಆರ್ಥಿಕತೆಯ ದುಸ್ಥಿತಿ ಮತ್ತೊಂದು ಆಯಾಮವಾಗಿದೆ. ಇಂದು ನಾವು ಎದುರಿಸುತ್ತಿರುವ ಆರ್ಥಿಕ ಬರ್ಬರತೆ, ಸಾಮಾಜಿಕ ಹಿಂಸೆ, ರಾಜಕೀಯ ಭ್ರಷ್ಟಾಚಾರ ಮುಂತಾದವು ಪ್ರಕೃತಿ ವಿಕೋಪದ ಪರಿಣಾಮವೂ ಹೌದು ಮತ್ತು ಮನುಷ್ಯ ಉಂಟುಮಾಡಿರುವ ವಿಕೃತಿಗಳು ಹೌದು. ಉದಾ: ನಾಡಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರ, ಕೊಲೆಗಳನ್ನು ಹೇಗೆ ಅಥಮಾಡಿಕೊಳ್ಳುವುದು? ದಲಿತರ ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ಮೇಲಿನ ಆಕ್ರಮಣವನ್ನು, ಕೊಲೆ-ಸುಲಿಗೆಗಳನ್ನು ಹೇಗೆ ವಿವರಿಸಿಕೊಳ್ಳುವುದು? ಇದಕ್ಕೂ ಬಜೆಟ್ಟಿಗೂ ಏನು ಸಂಬಂಧ ಎಂದು ಯಾರಾದರೂ ಕೇಳಬಹುದು. ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಯು ತೀವ್ರಗತಿಯ ಅಭಿವೃದ್ಧಿಗೆ ಅಗತ್ಯ. ಈ ಹಿನ್ನೆಲೆಯಲ್ಲಿ ಒಕ್ಕೂಟದ 2021-2022ರ ಬಜೆಟ್ಟನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಬಜೆಟ್ಟಿನ ಗಾತ್ರ
ಒಂದು ಆರ್ಥಿಕತೆಯ ಬೆಳವಣಿಗೆಯನ್ನು ನಿಧರಿಸುವ ಒಂದು ಸಂಗತಿಯೆಂದರೆ ವಾರ್ಷಿಕ ಬಜೆಟ್ಟಿನಲ್ಲಿನ ಸಾರ್ವಜನಿಕ ವೆಚ್ಚ. ನಮ್ಮ ದೇಶದ ಸಾರ್ವಜನಿಕ ವೆಚ್ಚ 2019-2020ರಲ್ಲಿ ರೂ 26.86 ಲಕ್ಷ ಕೋಟಿಯಷ್ಟಿದ್ದರೆ 2020-2021ರಲ್ಲಿ ಪರಿಷ್ಕೃತ ಬಜೆಟ್ ಅಂದಾಜಿನ ಪ್ರಕಾರ ವೆಚ್ಚವು ರೂ. 34.50 ಲಕ್ಷ ಕೋಟಿಯಾಗಿದೆ. ಇಲ್ಲಿನ ಏರಿಕೆ ಶೇ. 28.44. ಆದರೆ 2021-2022ರಲ್ಲಿನ ಸಾರ್ವಜನಿಕ ವೆಚ್ಚ ರೂ. 34.83 ಲಕ್ಷ ಕೋಟಿ. ಇಲ್ಲಿನ ಏರಿಕೆ ಕೇವಲ ಶೇ. 0.92. ಈ ಏರಿಕೆಯು ಆರ್ಥಿಕತೆಯಲ್ಲಿ ಯಾವ ಬಗೆಯ ಪುನಶ್ಚೇತನ ಉಂಟುಮಾಡಬಲ್ಲದು ಎಂಬುದುನ್ನು ನಾವು ತಿಳಿದುಕೊಳ್ಳಬಹುದು.
ಕೇಂದ್ರದ ಸಂಪನ್ಮೂಲ ಸಂಗ್ರಹಣೆ
ಒಕ್ಕೂಟ ಸರ್ಕಾರದ 2020-2021ರ ಬಜೆಟ್ ಅಂದಾಜಿನಲ್ಲಿ ರೆವಿನ್ಯೂ ಸ್ವೀಕೃತಿ ರೂ. 20.20 ಲಕ್ಷ ಕೋಟಿ. ಆದರೆ ವಾಸ್ತವಿಕವಾಗಿ ಸಂಗ್ರಹವಾಗಿದ್ದು ರೂ. 15.55 ಲಕ್ಷ ಕೋಟಿ. ಈ ಕೊರತೆಯನ್ನು ತುಂಬಿಕೊಳ್ಳಲು ಸರ್ಕಾರವು ಸಾಲದ ಮೊರೆ ಹೋಯಿತು. ಬಂಡವಾಳ ಸ್ವೀಕೃತಿಯ 2020-21ರ ಬಜೆಟ್ ಅಂದಾಜು ರೂ. 10.21 ಲಕ್ಷ ಕೋಟಿ. ಆದರೆ ಬಂಡವಾಳ ವೆಚ್ಚದ ಪರಿಷ್ಕೃತ ಅಂದಾಜು ರೂ. 18.95 ಲಕ್ಷ ಕೋಟಿ. ತೆರಿಗೆ ಮೂಲಕ ತನ್ನ ಖಚಾನೆಯನ್ನು ತುಂಬಿಕೊಳ್ಳುವುದಕ್ಕೆ ಪ್ರತಿಯಾಗಿ ಸರ್ಕಾರವು ಸಾಲದ ಮೊರೆ ಹೋಗಿರುವುದು ಸಾರ್ವಜನಿಕ ಹಣಕಾಸಿನ ನಿರ್ವಹಣೆಯಲ್ಲಿನ ವೈಫಲ್ಯವನ್ನು ಮತ್ತು ಅಶಿಸ್ತನ್ನು ತೋರಿಸುತ್ತದೆ.
ಕೇಂದ್ರವು ತನ್ನ ಸಂಪನ್ಮೂಲಕ್ಕೆ ಹೆಚ್ಚುಹೆಚ್ಚಾಗಿ ಅಪ್ರತ್ಯಕ್ಷ ತೆರಿಗೆಗಳನ್ನು ಅವಲಂಬಿಸಿದೆ. ಜಿಎಸ್‌ಟಿ ಒಂದು ಅತಿದೊಡ್ಡ ಅಪ್ರತ್ಯಕ್ಷ ತೆರಿಗೆ. ಇದನ್ನು ಆಳುವ ಪಕ್ಷವು ಕಳೆದ ಅನೇಕ ವರ್ಷಗಳಿಂದ ಸಂಪನ್ಮೂಲಕ್ಕೆ ಅವಲಂಬಿಸಿಕೊಂಡಿದೆ. ಇದನ್ನು ಗೇಮ್ ಚೇಂಚರ್ ಎಂದೂ, ಸ್ವಾತಂತ್ರೋತ್ತರ ಭಾರತ ಕಂಡ ಬೃಹತ್ ತೆರಿಗೆ ಸುಧಾರಣೆ ಎಂದೂ ಸರ್ಕಾರವು ಹೇಳುತ್ತಿದೆ. ಆದರೆ ಇದು ಅತ್ಯಂತ ಪ್ರತಿಗಾಮಿ ತೆರಿಗೆ. ಉದಾ: ಬಿಸ್ಕತ್ ಪಟ್ಟಣಕ್ಕೆ ಮುಖೇಶ್ ಅಂಬಾನಿ ಎಷ್ಟು ತೆರಿಗೆ ನೀಡುತ್ತಾನೋ ಅಷ್ಟೇ ತೆರಿಗೆಯನ್ನು ನಿರುದ್ಯೋಗಿ ಗ್ರಾಮೀಣ ಬಡವನೂ ಕೊಡುತ್ತಾನೆ. ಅಂದರೆ ಬಡವರ ಮೇಲೆ ತೆರಿಗೆ ಹೇರಲು ಕೇಂದ್ರ ತೋರುವ ಉತ್ಸಾಹವನ್ನು ಅದು ಶ್ರೀಮಂತರ ಮೇಲೆ, ಕಾರ್ಪೊರೆಟ್‌ಗಳ ಮೇಲೆ ವಿಧಿಸಲು ತೋರುವುದಿಲ್ಲ.
ಈ ಕಾರಣದಿಂದ 2020-2021ರಲ್ಲಿ ನೇರ ತೆರಿಗೆಗಳ ಬೆಳವಣಿಗೆ ಪ್ರಮಾಣ ಶೇ. 4.7 ರಷ್ಟಿದ್ದರೆ ಅಪ್ರತ್ಯಕ್ಷ ತೆರಿಗೆಗಳ ಬೆಳವಣಿಗೆ ಶೇ. 5.1 ರಷ್ಟಿತ್ತು. ಆಕ್ಸಫಾಮ್ ಸಂಸ್ಥೆಯ ಅಧ್ಯಯನದ ಪ್ರಕಾರ ಕೋವಿಡ್ ದುರಂತದ 2020ರಲ್ಲಿ ಭಾರತದ 100 ಬಿಲಿಯನ್ನರುಗಳ ಸಂಪತ್ತು ಸುಮಾರು ರೂ. 13 ಲಕ್ಷ ಕೋಟಿ ಏರಿಕೆಯಾಗಿದೆ. ಇಡೀ ದೇಶ ಹಸಿವು, ನಿರುದ್ಯೋಗ, ಸಾವು-ನೋವುಗಳಿಂದ ಮತ್ತು ರೋಗ-ರುಜಿನಗಳಿಂದ ನರಳುತ್ತಿರುವಾಗ, ಜಿಡಿಪಿ ಬೆಳವಣಿಗೆ ನೆಲ ಕಚ್ಚಿದ್ದಾಗ ಕಾರ್ಪೊರೆಟ್ ಕುಳಗಳ ಖಚಾನೆ ಸಮೃದ್ಧವಾಗಿದೆ. ಈ ವರಮಾನದ ಮೇಲೆ ತೆರಿಗೆ ವಿಧಿಸಲು ನಮ್ಮ ಆಳುವವರ್ಗ ಸಿದ್ಧವಿಲ್ಲ. ಕೇಂದ್ರದ 2021-2022ರ ಬಜೆಟ್ ಅಧ್ಯಯನ ಮಾಡಿದರೆ ಇದು ಸ್ಪಷ್ಟ್ಟವಾಗಿ ತಿಳಿದುಬರುತ್ತದೆ.
ಒಕ್ಕೂಟ ಸರ್ಕಾರವು ಹೀಗೆ ನಡೆದುಕೊಳ್ಳುತ್ತಿರುವುದಕ್ಕೆ ಕಾರಣವುಂಟು. ಇಂದಿನ ಸರ್ಕಾರದ ಪ್ರಕಾರ ಖಾಸಗಿ ಉದ್ಯಮಪತಿಗಳು ’ವೆಲ್ಥ್ ಕ್ರಿಯೇಟರ್‍ಸ್’. ಅವರಿಗೆ ಅವಮಾನ ಮಾಡಬಾರದು, ಅವರನ್ನು ಅನುಮಾನ ದೃಷ್ಟಿಯಿಂದ ನೋಡಬಾರದು ಎಂಬುದು ಪ್ರಧಾನಮಂತ್ರಿಗಳ ಮತ್ತು ವಿತ್ತಮಂತ್ರಿಗಳ ಬಲವಾದ ನಂಬಿಕೆ. ಒಕ್ಕೂಟದ 2018-19ರ ಆರ್ಥಿಕ ಸಮೀಕ್ಷೆಯ ಮೊದಲ ಅಧ್ಯಾಯದ ಶೀರ್ಷಿಕೆ ಇದು: ’ಪಥ ತಿರುಗಣಿ: ಬೆಳವಣಿಗೆ, ಉದ್ಯೋಗಗಳು, ರಫ್ತು ಮತ್ತು ಬೇಡಿಕೆಗಳ ಹಿಂದಿನ ಚಾಲಕ ಶಕ್ತಿ ಖಾಸಗಿ ಬಂಡವಾಳ’. ಮುಂದೆ 2019-2020ರ ಆರ್ಥಿಕ ಸಮೀಕ್ಷೆಯಲ್ಲಿನ ಒಂದು ಅಧ್ಯಾಯದ ಶೀರ್ಷಿಕೆ ’ಪ್ರೊ. ಬಿಸನೆಸ್ ವರ್ಸ್‌ಸ್ ಪ್ರೊ. ಕ್ರೋನಿ’. ಸಾರ್ವಜನಿಕ ಹಣಕಾಸು ತತ್ವ ಹೇಳುವ ಮೊದಲ ಪಾಠವೆಂದರೆ ಖಾಸಗಿ ಹಣಕಾಸಿನಲ್ಲಿ ವರಮಾನವು ವೆಚ್ಚವನ್ನು ನಿರ್ಧರಿಸಿದರೆ ಸಾರ್ವಜನಿಕ ಹಣಕಾಸಿನಲ್ಲಿ ವೆಚ್ಚವು ವರಮಾನವನ್ನು ನಿಧರಿಸುತ್ತದೆ. ಈ ನಿಯಮವನ್ನು ಶ್ರೀಮತಿ ನಿರ್ಮಲಾ ಸೀತಾರಾಮನ್ 2021-22ರ ಬಜೆಟ್ ರೂಪಿಸುವಾಗ ಪಾಲಿಸಿಲ್ಲ.
ಮಾನಿಟೈಸೇಶನ್ ಆಫ್ ಅಸೆಟ್ಸ್
ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಯನ್ನು ಮಾರಾಟ ಮಾಡುವುದು ಅವಮಾನದ ಸಂಗತಿ. ಹೀಗೆ ಆಸ್ತಿ ಮಾರಾಟ ಮಾಡುವವರಿಗೆ ಸರೀಕರಲ್ಲಿ ಗೌರವವಿರುವುದಿಲ್ಲ. ಆದರೆ 2021-22ರ ಬಜೆಟ್ಟಿನಲ್ಲಿ ಇದನ್ನು ಸಂಪನ್ಮೂಲ ಸಂಗ್ರಹಕ್ಕೆ ಒಂದು ಅತ್ಯುತ್ತಮ ಸಾಧನವನ್ನಾಗಿ ಮಾಡಿಕೊಳ್ಳಲಾಗಿದೆ. ಇದನ್ನು ಘನತೆಯ ಅರ್ಥಶಾಸ್ತ್ರವೆಂದಾಗಲಿ ಅಥವಾ ಗೌರವಯುತ ರಾಜಕಾರಣವೆಂದಾಗಲಿ ಕರೆಯುವುದು ಸಾಧ್ಯವಿಲ್ಲ. ಸರ್ಕಾರ ತನ್ನ ಆಸ್ತಿಯ ಮಾರಾಟಕ್ಕೆ ರೂಪಿಸಿರುವ ನುಡಿಗಟ್ಟು ’ಮಾನಿಟೈಸೇಶನ್ ಆಫ್ ಅಸೆಟ್ಸ್’. ಸಾರ್ವಜನಿಕ ಭೂಮಿಯನ್ನು, ಆಸ್ತಿಯನ್ನು, ಸಾರ್ವಜನಿಕ ಉದ್ದಿಮೆಗಳನ್ನು, ಮಾರಾಟ ಮಾಡಿ ದೇಶವನ್ನು ಕಟ್ಟುವುದು ಸಾಧ್ಯವಿಲ್ಲ.
ಸಂಪನ್ಮೂಲ ಸಂಗ್ರಹದ-ಅಭಿವೃದ್ಧಿಯ ಹೆಸರಿನಲ್ಲಿ ಇಂತಹ ದ್ರೋಹದ ಕೆಲಸ ಮಾಡುವ ನಾಯಕರನ್ನು ನಮ್ಮ ಮುಂದಿನ ತಲೆಮಾರಿನ ಜನರು ಕ್ಷಮಿಸುವುದಿಲ್ಲ. ಖಾಸಗೀಕರಣಕ್ಕೆ, ಆಸ್ತಿ ಮಾರಾಟಕ್ಕೆ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಬಂಡವಾಳಿಗರ ವಶಕ್ಕೆ ನೀಡುವುದಕ್ಕೆ ಒಕ್ಕೂಟ ಸರ್ಕಾರ ನೀಡಿರುವ ಶೀರ್ಷಿಕೆ ಮಾನಿಟೈಸೇಶನ್ ಆಫ್ ಅಸೆಟ್ಸ್. ಸಾರ್ವಜನಿಕ ಆಸ್ತಿ, ಸಂಪತ್ತು, ಭೂಮಿ ಮಾರಾಟ ಮಾಡಿ ಯಾರೂ ಬಜೆಟ್ಟಿಗೆ ಸಂಪನ್ಮೂಲ ಸಂಗ್ರಹಿಸಿಕೊಳ್ಳುವುದಿಲ್ಲ. ಇದು ಸಾರ್ವಜನಿಕ ಹಣಕಾಸು ನಿರ್ವಹಣೆಯ ಅಶಿಸ್ತಿಗೆ ನಿದಶನವಾಗುತ್ತದೆ.
ಎಂಎಸ್‌ಪಿ ಕಾರ್ಯಕ್ರಮ ಮತ್ತು ಪಡಿತರ ವ್ಯವಸ್ಥೆಗೆ ತಿಲಾಂಜಲಿ
ರೈತರು ದೇಶವ್ಯಾಪಿ ಕೇಂದ್ರದ ಮೂರು ಕರಾಳ ಕೃಷಿ ಕಾಯಿದೆಗಳ ವಿರುದ್ಧ ನಡೆಸುತ್ತಿರುವ ಆಂದೋಲನದಲ್ಲಿ ವ್ಯಕ್ತವಾಗುತ್ತಿರುವ ’ಎಂಎಸ್‌ಪಿ ಕೊನೆಯಾಗುತ್ತದೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮುಚ್ಚಲಾಗುತ್ತದೆ’ ಎಂಬ ಆತಂಕಗಳು ನಿಜವಾಗುತ್ತಿರುವುದರ ಸೂಚನೆಯನ್ನು 2021-22ರ ಬಜೆಟ್ಟಿನಲ್ಲಿ ಕಾಣಬಹುದು. ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿಯಲ್ಲಿ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾಕ್ಕೆ ನೀಡುವ ಸಹಾಯಧನವನ್ನು 2020-21ರ ಪರಿಷ್ಕೃತ ಅಂದಾಜಿನಲ್ಲಿ ರೂ. 3.44 ಲಕ್ಷ ಕೋಟಿಯಿದ್ದುದನ್ನು 2021-22ರ ಬಜೆಟ್ ಅಂದಾಜಿನಲ್ಲಿ ರೂ. 2.02 ಲಕ್ಷ ಕೋಟಿಗೆ ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿಯಲ್ಲಿನ ಆಹಾರ ಸಂಗ್ರಹಣೆಗೆ 2020-21ರಲ್ಲಿ ನೀಡಿದ್ದ ಅನುದಾನ ರೂ. 78337 ಕೋಟಿ. ಇದನ್ನು 2021-22ರಲ್ಲಿ ರೂ. 40000 ಕೋಟಿ ಇಳಿಸಲಾಗಿದೆ. ಇದೇ ರೀತಿಯಲ್ಲಿ ಆಹಾರ ದಾಸ್ತಾನು ಮತ್ತು ಉಗ್ರಾಣ ವ್ಯವಸ್ಥೆಗೆ 2020-21ರಲ್ಲಿ ನೀಡಿದ್ದ ಅನುದಾನ ರೂ. 4.37 ಲಕ್ಷ ಕೋಟಿಗೆ ಪ್ರತಿಯಾಗಿ 2021-22ರಲ್ಲಿ ರೂ. 2.50 ಲಕ್ಷ ಕೋಟಿಗೆ ಕಡಿತಗೊಳಿಸಲಾಗಿದೆ.
ಒಕ್ಕೂಟ ಸರ್ಕಾರದ 2021-22ರ ಬಜೆಟ್ಟಿನ ಅತ್ಯಂತ ಕ್ರೂರ ಮತ್ತು ಅಮಾನವೀಯ ಆಯಾಮ ಇದಾಗಿದೆ. ನಮ್ಮ ದೇಶದ ದುಡಿಯುವ ವರ್ಗ, ಮಹಿಳೆಯರು, ದಲಿತರು, ಆದಿವಾಸಿಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಡಿತರವನ್ನು ತೀವ್ರತರವಾಗಿ ಅವಲಂಬಿಸಿಕೊಂಡಿದ್ದಾರೆ. ವಾಸ್ತವವಾಗಿ ವೆಲ್ಥ್ ಕ್ರಿಯೆಟರ್‍ಸ್ ಯಾರು ಅಂದರೆ ದೇಶದ ಕೂಲಿಕಾರರು, ಮಹಿಳಾ ದುಡಿಮೆಗಾರರು, ದಲಿತರು ಮತ್ತು ಆದಿವಾಸಿಗಳು. ಈ ವರ್ಗಗಳಿಗೆ ಧಕ್ಕೆಯನ್ನು ಉಂಟು ಮಾಡುವುದು ಅಭಿವೃದ್ಧಿಗೆ ಮಾರಕವಾಗುತ್ತದೆ. ಸಮಾಜದಲ್ಲಿ ಯಾರೂ ಹಸಿವಿನಿಂದಿರಬಾರದು ಎಂಬುದು ಸಂವಿಧಾನಾತ್ಮಕ ಮಾನವ ಹಕ್ಕು.
ಉಳ್ಳವರಿಗೆ ಮಣೆ: ಉಳಿದವರಿಗೆ ದೊಣ್ಣೆ
ಈ ದೇಶದ ಬಡವರಿಗೆ, ದುಸ್ಥಿತಿಯಲ್ಲಿರುವವರಿಗೆ ಜಾರಿಯಲ್ಲಿದ್ದ ಅನೇಕ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಅನುದಾನ ಕಡಿತಗೊಳಿಸಲಾಗಿದೆ. ಉದಾ: ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದ ಅನುದಾನ 2020-21ರಲ್ಲಿ ರೂ. 12,900 ಕೋಟಿಯಷ್ಟಿದ್ದುದನ್ನು 2021-22ರಲ್ಲಿ ರೂ. 11,500 ಕೋಟಿಗೆ ಇಳಿಸಲಾಗಿದೆ. ನರೇಗಾ ಉದ್ಯೋಗ ಕಾರ್ಯಕ್ರಮಕ್ಕೆ 2019-20ರಲ್ಲಿನ ಅನುದಾನ ರೂ. 71686 ಕೋಟಿ. ಇದನ್ನು 2020-21ರಲ್ಲಿ ರೂ. 61500 ಕೋಟಿಗೆ ಕಡಿತಗೊಳಿಸಲಾಗಿತ್ತು. ಆದರೆ ಕೊರೊನಾ ಮತ್ತು ಲಾಕ್‌ಡೌನ್‌ನಿಂದ ಉಂಟಾದ ಹಾಹಾಕಾರಕ್ಕೆ ಹೆದರಿ ಸರ್ಕಾರ ಇದಕ್ಕೆ 2020-21ರಲ್ಲಿ ಹೆಚ್ಚು ಅನುದಾನ ನೀಡಿತು (ರೂ. 1.11 ಲಕ್ಷ ಕೋಟಿ).
ಆದರೆ 2021-22ರಲ್ಲಿ ಇದಕ್ಕೆ ನೀಡಿರುವ ಮೊತ್ತ ರೂ. 73000 ಕೋಟಿ. ಗ್ರಾಮೀಣ ಬಡ ಕುಟುಂಬಗಳ ಆಶಾಕಿರಣವಾಗಿರುವ ನರೇಗಾ ಕಾರ್ಯಕ್ರಮವು ಬಜೆಟ್ಟಿನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮತ್ತೆ 15ನೆಯ ಹಣಕಾಸು ಆಯೋಗದ ಶಿಫಾರಸ್ಸಿನಂತೆ 2020-21ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಿದ್ದ ಅನುದಾನ ರೂ. 85750 ಕೋಟಿ. ಇದನ್ನು 2021-22ರಲ್ಲಿ ರೂ. 67015 ಕೋಟಿಗಿಳಿಸಲಾಗಿದೆ. ವಿಶ್ವ ಬ್ಯಾಂಕು 2012ರ ತನ್ನ ವಿಶ್ವ ಅಭಿವೃದ್ಧಿ ವರದಿಯಲ್ಲಿ ಲಿಂಗ ಸಮಾನತೆಯು ’ಸ್ಮಾರ್ಟ್ ಎಕನಾಮಿಕ್ಸ್’ ಎಂದು ಹೇಳಿದೆ. ಲಿಂಗ ಸಮಾನತೆ ಮೌಲ್ಯವು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಇದು ಅಭಿವೃದ್ಧಿ ಚಾಲಕ ಶಕ್ತಿ. ಆದರೆ 2020-21ರಲ್ಲಿ ಬಜೆಟ್ಟಿನಲ್ಲಿ ಮಹಿಳೆ ಬಜೆಟ್ಟಿನ ಅನುದಾನ ರೂ. 2.07 ಲಕ್ಷ ಕೋಟಿ. ಆದರೆ 2021-22ರಲ್ಲಿ ಇದಕ್ಕೆ ನೀಡಿರುವ ಅನುದಾನ ರೂ. 1.53 ಲಕ್ಷ ಕೋಟಿ.
ಅತ್ಯಂತ ಯಾಂತ್ರಿಕವಾಗಿ ಮಹಿಳೆಯರ ಅಭಿವೃದ್ಧಿಯನ್ನು ಇಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಇದಕ್ಕೆ ನಿದರ್ಶನವೆಂದರೆ ಬಾಡಿಗೆ ತಾಯ್ತನಕ್ಕೆ ಸರ್ಕಾರವು ನಿಯಮಿಸಿರುವ ಅಸಂಬದ್ದ ನಿಯಮಗಳು. ಇಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ.
ಒಕ್ಕೂಟ ವ್ಯವಸ್ಥೆಗೆ ಕೊಡಲಿಪೆಟ್ಟು
ನಮ್ಮದು ಸಂವಿಧಾನಾತ್ಮಕ ಒಕ್ಕೂಟ ರಾಜಕೀಯ ವ್ಯವಸ್ಥೆ. ಕಳೆದ 6-7 ವರ್ಷಗಳಿಂದ ಈ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತಿದೆ. ಭಾರತೀಯ ಸರ್ಕಾರವು ಸಂವಿಧಾನ ತತ್ವಕ್ಕೆ ವಿರುದ್ಧವಾಗಿ ’ಕೇಂದ್ರೀಕರಣ’ ನೀತಿಯನ್ನು ಅನುಸರಿಸುತ್ತಿದೆ. ಇದರಿಂದಾಗಿ ರಾಜ್ಯಗಳ ಸಂವಿಧಾನದತ್ತ ಸ್ವಾಯತ್ತತೆಗೆ ಅಪಾಯಯುಂಟಾಗುತ್ತಿದೆ. ತೆರಿಗೆ ವಿಧಿಸುವ ರಾಜ್ಯಗಳ ಸಂವಿಧಾನದತ್ತ ಹಕ್ಕನ್ನು ಜಿಎಸ್‌ಟಿ ಮೂಲಕ ಹರಣ ಮಾಡಲಾಯಿತು. ಕೃಷಿ ಮತ್ತು ಕೃಷಿ ಮಾರುಕಟ್ಟೆ ವಿಷಯ ಸಂವಿಧಾನದಲ್ಲಿ ರಾಜ್ಯಗಳ ಪಟ್ಟಿಯಲ್ಲಿದೆ. ಇದನ್ನು ವಿಕೃತಗೊಳಿಸಿ ಕೇಂದ್ರವು ಕೃಷಿ ಕಾನೂನುಗಳನ್ನು ತಂದಿದೆ. ಮುಂದುವರಿದು ಕೃಷಿಯನ್ನು ಸಂವಿಧಾನದ ಉಭಯ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಸುತ್ತಿದೆ.
ಒಕ್ಕೂಟ ಸರ್ಕಾರದಿಂದ ರಾಜ್ಯಗಳಿಗೆ ಮೂರು ರೀತಿಯಲ್ಲಿ ಸಂಪನ್ಮೂಲ ವರ್ಗಾವಣೆಯಾಗುತ್ತದೆ. ಇದರಲ್ಲಿ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿನ ವರ್ಗಾವಣೆಯಲ್ಲಿ ಕಡಿತ ಮಾಡಲಾಗಿದೆ. ಈ ಬಾಬ್ತು 2020-21ರಲ್ಲಿ ರೂ. 3.87 ಲಕ್ಷ ಕೋಟಿ ವರ್ಗಾವಣೆಯಾಗಿದ್ದರೆ 2021-22ರಲ್ಲಿ ಮೀಸಲಿಟ್ಟಿರುವ ಹಣ ರೂ. 3.81 ಲಕ್ಷ ಕೋಟಿ. ಇತರೆ ವರ್ಗಾವಣೆ ಬಾಬ್ತುನಲ್ಲಿ 2020-21ರ ಬಜೆಟ್ ಅಂದಾಜು ರೂ. 2.23 ಲಕ್ಷ ಕೋಟಿ. ಆದರೆ ವಾಸ್ತವಿಕವಾಗಿ ವರ್ಗಾವಣೆಯಾದ ಮೊತ್ತ ರೂ. 1.91 ಲಕ್ಷ ಕೋಟಿ. ಒಟ್ಟು ಕೇಂದ್ರದಿಂದ ರಾಜ್ಯಗಳಿಗೆ ವರ್ಗಾವಣೆಯು 2019-20ರಲ್ಲಿ ಒಟ್ಟು ಬಜೆಟ್ ಮೊತ್ತದ ಶೇ. 23.52 ರಷ್ಟಿದ್ದುದು 2021-22ರಲ್ಲಿಯೂ ಇದು ಸ್ಥಿರವಾಗಿ ಶೇ. 23.25ರಲ್ಲಿ ಉಳಿದಿದೆ.
ರಾಜ್ಯಗಳ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ನಿಂತಿದೆ. ದಕ್ಷಿಣ ಭಾರತದ ರಾಜ್ಯಗಳು ಅತ್ಯಧಿಕ ಪ್ರಮಾಣದಲ್ಲಿ ಜಿಡಿಪಿಗೆ ಕಾಣಿಕೆ ನೀಡುತ್ತಿವೆ. ಉದಾ: ದೇಶದ 2018-19ರಲ್ಲಿನ ಪ್ರಸಕ್ತ ಬೆಲೆಗಳಲ್ಲಿ ರಾಷ್ಟ್ರೀಯ ನಿವ್ವಳ ಆಂತರಿಕ ಉತ್ಪನ್ನ ರೂ. 169.91 ಲಕ್ಷ ಕೋಟಿ. ದಕ್ಷಿಣ ಭಾರತದ ಆರು ರಾಜ್ಯಗಳ ನಿವ್ವಳ ಆಂತರಿಕ ಉತ್ಪನ್ನ ರೂ. 51.72 ಲಕ್ಷ ಕೋಟಿ. ಈ ರಾಜ್ಯಗಳು ದೇಶದ ಉತ್ಪನ್ನಕ್ಕೆ ನೀಡುತ್ತಿರುವ ಕಾಣಿಕೆ ಶೇ. 30.44. ಈ ರಾಜ್ಯಗಳಿಗೆ ಅನುದಾನ ವರ್ಗಾವಣೆಯಲ್ಲಿ, ಭಾಷಾ ನೀತಿಯಲ್ಲಿ, ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಅನ್ಯಾಯ ಮಾಡಿದರೆ ಅದು ದೇಶದ ಅಭಿವೃದ್ಧಿಗೆ ದಕ್ಕೆಯುಂಟು ಮಾಡುತ್ತದೆ. ಹಿಂದಿ ಭಾಷೆಯ ಹೇರಿಕೆ ಮೂಲಕ, ಜಿಎಸ್‌ಟಿ ಪರಿಹಾರದಲ್ಲಿನ ಕಡಿತದ ಮೂಲಕ ಈ ರಾಜ್ಯಗಳಿಗೆ ಒಕ್ಕೂಟ ಸರ್ಕಾರವು ಅನ್ಯಾಯ ಮಾಡುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರಗಳು ಸಮಾನ ಸ್ಥಾನಮಾನ ಹೊಂದಿವೆ ಎಂಬುದನ್ನು ಎಲ್ಲರೂ ನೆನಪಿಡಬೇಕಿದೆ.
ಜಿಡಿಪಿ ಬೆಳವಣಿಗೆ
ಜಿಡಿಪಿ ಬೆಳವಣಿಗೆಯಲ್ಲಿ ಬಜೆಟ್ ನಿರ್ಣಾಯಕ ಮಹತ್ವ ಪಡೆದಿದೆ. ನಮ್ಮ ಆರ್ಥಿಕತೆಯ ಜಿಡಿಪಿ ಬೆಳವಣಿಗೆಯು 2017-18ರಿಂದಲೂ(2017-18: ಶೇ.7.1. 2018-19: ಶೇ. 6.1. 2019-20: ಶೇ. 4.2) ಕುಸಿಯುತ್ತಾ ನಡೆದಿದ್ದು 2020-21ರಲ್ಲಿ ಇದು ಸರ್ಕಾರವೇ ಹೇಳಿರುವಂತೆ ಶೇ. 7.9 ರಷ್ಟು ಕುಸಿತದ ಮಟ್ಟ ತಲುಪಲಿದೆ. ಜಿಡಿಪಿ ಕುಸಿತವು ಕೋವಿಡ್ ಪೂರ್ವದಲ್ಲಿಯೇ ಆರಂಭವಾಗಿತ್ತೆಂಬುದು ಸ್ಪಷ್ಟ. ಇದೀಗ ಆರ್ಥಿಕ ಸಮೀಕ್ಷೆಯಲ್ಲಿ, 2021-22ರಲ್ಲಿ ಜಿಡಿಪಿ ಬೆಳವಣಿಗೆಯು ಶೇ.11.5 ರಷ್ಟಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದು ಕೇವಲ ಒಂದು ಊಹೆ ಮತ್ತು ಕಾಲ್ಪನಿಕ ಆಶಯ. ಆರ್ಥಿಕತೆಯಲ್ಲಿ ಜಿಡಿಪಿ ಬೆಳವಣಿಗೆ 2020-21ರಲ್ಲಿ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕುಸಿತದ ಕಂದಕವನ್ನು ದಾಟಿ ಸಕಾರಾತ್ಮಕವಾಗಿ ಶೇ.11.5 ರಷ್ಟು ಬೆಳೆಯುತ್ತದೆ ಎಂಬುದನ್ನು ನಂಬಲು ಅಥವಾ ಒಪ್ಪಲು ಸಾಧ್ಯವಿಲ್ಲ.
ಒಟ್ಟಾರೆ 2021-22ರ ಒಕ್ಕೂಟ ಬಜೆಟ್ ಆರ್ಥಿಕತೆಯ ಪುನಶ್ಚೇತನದ ಆಶಾದಾಯಕ ಚಿತ್ರವನ್ನೇನು ನೀಡುತ್ತಿಲ್ಲ. ಬಡವರು, ಅಸಮಾನತೆ, ನಿರುದ್ಯೋಗ, ಹಸಿವು, ದಲಿತರು ಮುಂತಾದ ನುಡಿಗಳನ್ನು ಬಜೆಟ್ ಕೋಶದಿಂದ ಬಹಿಷ್ಕರಿಸಿದರೆ. ಕೋಶದಲ್ಲಿ ಬಹಿಷ್ಕರಿಸಿದಿರೆ ಅವು ಇಲ್ಲವಾಗುತ್ತವೆಯೇನು? ಬಜೆಟ್ ನಿಜಕ್ಕೂ ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಅಭಿಮುಖವಾಗಿರಬೇಕು. ಆದರೆ ಶ್ರೀಮತಿ ನಿರ್ಮಲಾ ಸೀತಾರಾಮನ್ ನೀಡಿರುವ 2021-22ರ ಬಜೆಟ್ ಉಳ್ಳವರನ್ನು, ಉದ್ಯಮಪತಿಗಳನ್ನು, ವಾಣಿಜ್ಯೋದ್ಯಮಿಗಳನ್ನು ತಣಿಸಲು ಪ್ರಯತ್ನ ಪಟ್ಟಿದೆ ಎಂಬುದರ ಬಗ್ಗೆ ಯಾರೂ ಅನುಮಾನ ಪಡುವ ಪ್ರಮೇಯವೇ ಬರುವುದಿಲ್ಲ. ವಿತ್ತಮಂತ್ರಿಗಳು ವೈಭವಪೂರಿತ ಮಾತುಗಳಿಂದ ಬಜೆಟ್ ರೂಪಿಸಿದ್ದಾರೆಯೇ ವಿನಾ ಅರ್ಥಶಾಸ್ತ್ರ-ರಾಜ್ಯಶಾಸ್ತ್ರ ಮತ್ತು ಆಡಳಿತಶಾಸ್ತ್ರದ ಮೂಲ ತತ್ವಗಳನ್ನು ಆಧರಿಸಿ ರೂಪಿಸಿಲ್ಲ.
(ಟಿಪ್ಪಣಿಗಳು. (1). ಈ ಲೇಖನದಲ್ಲಿ ಕೇಂದ್ರ ಸರ್ಕಾರ ಎನ್ನುವ ನುಡಿಯನ್ನು ಬಳಸುವುದಕ್ಕೆ ಪ್ರತಿಯಾಗಿ ಒಕ್ಕೂಟ ಸರ್ಕಾರ ಎನ್ನುವ ನುಡಿಯನ್ನು ಬಳಸಲಾಗಿದೆ. ಏಕೆಂದರೆ ನಮ್ಮ ಸಂವಿಧಾನದಲ್ಲಿ ಒಕ್ಕೂಟ ಎಂಬ ನುಡಿಯನ್ನು ಬಳಸಲಾಗಿದೆ ವಿನಾ ಕೇಂದ್ರ ಸರ್ಕಾರ ಎನ್ನುವುದನ್ನು ಬಳಸಿಲ್ಲ. (2). ಇಲ್ಲಿನ ಅಂಕಿಅಂಶಗಳನ್ನು ಒಕ್ಕೂಟ ಸರ್ಕಾರದ ಅಧಿಕೃತ ಬಜೆಟ್ ದಾಖಲೆಗಳಿಂದ ಆಯ್ದುಕೊಳ್ಳಲಾಗಿದೆ).

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


