Homeಮುಖಪುಟಕೃಷಿಗೆ ಏನಿದೆ ಬಜೆಟ್‌ನಲ್ಲಿ? ರೈತರಿಗೆ ಆದ ಮೋಸ ಅಷ್ಟೇ! : ಯೋಗೇಂದ್ರ ಯಾದವ್

ಕೃಷಿಗೆ ಏನಿದೆ ಬಜೆಟ್‌ನಲ್ಲಿ? ರೈತರಿಗೆ ಆದ ಮೋಸ ಅಷ್ಟೇ! : ಯೋಗೇಂದ್ರ ಯಾದವ್

- Advertisement -
- Advertisement -

ಬಜೆಟ್ ಬಗ್ಗೆ ಅನೇಕ ಟಿಪ್ಪಣಿಗಳು ಬರುತ್ತಿವೆ. ಪ್ರಧಾನಮಂತ್ರಿಯವರೂ ಈ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದರೊಂದಿಗೆ ಸ್ವಾಭಾವಿಕವಾಗಿ ಟಿವಿ ಚಾನೆಲ್‌ಗಳಲ್ಲೂ ಇದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆ ಚರ್ಚೆಗಳನ್ನೇ ನಾನೂ ನೋಡುತ್ತಿದ್ದೆ. ಟಿವಿ ಚಾನೆಲ್‌ಗಳಲ್ಲಿ ಚರ್ಚೆ ನಡೆಯುತ್ತಿರುವುದೇನೆಂದರೆ, ತೆರಿಗೆ ಕಟ್ಟುವ ಜನರ ಮೇಲೆ ಬಜೆಟ್‌ನ ಪರಿಣಾಮ ಏನಾಗುವುದು ಎಂದು. ಅಂದರೆ ಯಾರು ಆದಾಯ ತೆರಿಗೆ ಕಟ್ಟುವುದಿಲ್ಲವೋ, ಅವರು ಯಾವುದೇ ತೆರಿಗೆ ಕಟ್ಟುವುದೇ ಇಲ್ಲವೆಂಬಂತೆ ಚರ್ಚೆ ಆಗುತ್ತಿದೆ. ಎಲ್ಲಾ ಚರ್ಚೆಗಳೂ ನಗರಕ್ಕೆ ಅಂದರೆ ನಾವು ಏನನ್ನು ಮಧ್ಯಮ ವರ್ಗ ಎಂದು ಕರೆಯುತ್ತೇವೆಯೋ, ಅದರ ಬಗ್ಗೆಯೇ ಆಗುತ್ತಿವೆ. ಆದರೆ, ಹಳ್ಳಿಗಾಡು, ರೈತ, ಕೃಷಿಗೆ ಆಗಿದ್ದೇನು? ಇದರ ಬಗ್ಗೆ ಚರ್ಚೆ ಆಗುತ್ತಿಲ್ಲ. ಆದರೆ ನಾವು ಇದರ ಬಗ್ಗೆ ಫೋಕಸ್ ಮಾಡುತ್ತೇವೆ ಎಂದು ಮುಂಚೆಯೇ ಹೇಳಿದ್ದೆವು. ಕಳೆದ ಐದು ವರ್ಷಗಳಿಂದ ನಾವು ಬಜೆಟ್ ನೋಡುತ್ತಿದ್ದೇವೆ ಹಾಗೂ ಬಜೆಟ್‌ನಲ್ಲಿ ರೈತರಿಗಾಗಿ ಏನಿದೆ ಎಂಬುದನ್ನು ತಿಳಿಸುತ್ತೇವೆ.

ನಾನು ಈ ಮುಂಚೆ ಹೇಳಿದ್ದು ನಿಮಗೆ ನೆನಪಿರಬಹುದು; ಬಜೆಟ್‌ನ ಡೈಲಾಗ್‌ಗಳನ್ನು ನೋಡಬೇಡಿ, ಬಜೆಟ್‌ನ ಅಂಕಿಅಂಶಗಳನ್ನು ನೋಡಿ. ಅಂಕಿಅಂಶಗಳಲ್ಲೂ ಪ್ರಮುಖವಾಗಿ ಹಂಚಿಕೆಯ ಅಂಕಿಅಂಶಗಳನ್ನು ನೋಡಿ. ಅಂದರೆ ಯಾವ ವಲಯಕ್ಕೆ ಎಷ್ಟು ದುಡ್ಡನ್ನು ನೀಡಲಾಗಿದೆ ಅಥವಾ ಹಂಚಲಾಗಿದೆ ಎಂಬುದನ್ನು ನೋಡಿ. ಬಜೆಟ್ ಅಂದರೆ ಇದು, ಮಿಕ್ಕದ್ದೆಲ್ಲಾ ಹರಟೆ. ಹಾಗೂ ನೀವು ಇದನ್ನು ನೋಡಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತೆ.

ಪ್ರಧಾನಮಂತ್ರಿಯವರ ಮಾತನ್ನು ಕೇಳುತ್ತಿದ್ದೆ. ಈ ಬಜೆಟ್ ಅತ್ಯಂತ ಪಾರದರ್ಶಕವಾಗಿದೆ ಎಂದು ಹೇಳುತ್ತಿದ್ದರು. ಪಾರದರ್ಶಕ ಬಜೆಟ್ ಎಂದರೆ ಯಾವುದು? ಯಾವ ಬಜೆಟ್‌ನಲ್ಲಿ ಏನು ಹೇಳಲಾಗುತ್ತೋ, ಅದೇ ಅದರ ಅಂಕಿಅಂಶಗಳಲ್ಲಿ ಬರೆದಿದ್ದರೆ ಅದನ್ನು ಪಾರದರ್ಶಕ ಎಂದು ಹೇಳಲಾಗುತ್ತೆ. ಈಗ ನಾವು ನೋಡುವ, ಈ ಬಜೆಟ್ ಎಷ್ಟು ಪಾರದರ್ಶಕವಾಗಿದೆ ಎಂಬುದನ್ನು.

ನಮ್ಮ ಹಣಕಾಸು ಸಚಿವರು ಮತ್ತು ನಮ್ಮ ಪ್ರಧಾನಿಗಳು ಹೇಳಿದ್ದು; ಇದು ಕೃಷಿಯನ್ನು ಮುಂದೆ ತೆಗೆದುಕೊಂಡು ಹೋಗುವ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಜೆಟ್ ಆಗಿದೆ ಎಂದು. ಬಹುಶಃ ಇವರಿಗೆ ಅನಿಸುವುದೇನೆಂದರೆ, ’ಆಯ್ತು ಹೇಳುತ್ತಾ ಹೋಗುವ, ಹೇಗೂ ಯಾರೂ ನೋಡುವುದಿಲ್ಲ ಎಂದು. ಈ ಮುಂಚೆಯೇ ಹೇಳಿದಂತೆ, ಯಾರಾದರೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾತನ್ನು ಆಡಿದರೆ, ಅವರಿಗೆ ಒಂದು ಪುಟ್ಟ ಪ್ರಶ್ನೆ ಕೇಳಬೇಕು; ನೀವು ಈ ಘೋಷಣೆ ಮಾಡಿ ಐದು ವರ್ಷಗಳಾದವು, ನೀವು ಹೇಳಿದ್ದು, ಆರು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳುವುದೆಂದು. ಇಲ್ಲಿಯವರೆಗೆ ಎಷ್ಟಾಗಿದೆ? ಇದರ ಅಂಕಿಅಂಶಗಳನ್ನು ಎಲ್ಲಿಯೂ ನೀಡಿಲ್ಲ! ಇಲ್ಲಿಯವರೆಗೆ ಸರಕಾರ ಇದಕ್ಕೆ ಉತ್ತರ ನೀಡಿಲ್ಲ, ಇಂದೂ ನೀಡಿಲ್ಲ. ಪ್ರಧಾನಮಂತ್ರಿಗಳೂ ಎನೋ ಜುಮ್ಲಾ ಮಾತನಾಡಿಕೊಂಡು, ಯಾವ ಅಂಕಿಅಂಶಗಳನ್ನೂ ಬಿಡುಗಡೆ ಮಾಡುವ ಗೋಜಿಗೆ ಹೋಗಿಲ್ಲ.

ಆದರೆ ನಾವು ಇನ್ನೂ ಶಾಕಿಂಗ್ ವಿಷಯಗಳನ್ನು ನೋಡಲಿದ್ದೇವೆ. ನಮ್ಮ ರೈತರಿಗಾಗಿ ಈ ಬಜೆಟ್‌ನ ಅಸಲಿಯತ್ತು ಏನು?

PC : Justicenews

ನಮ್ಮ ಹಣಕಾಸು ಸಚಿವರು ಹಲವಾರು ಅಂಕಿಅಂಶಗಳನ್ನು ಬಿಡುಗಡೆ ಮಾಡಿದರು. ಗೋದಿಯು ಇಷ್ಟು ಖರೀದಿ ಆಯಿತು, ಭತ್ತ ಇಷ್ಟೊಂದು ಖರೀದಿ ಆಯಿತು, ಬೇಳೆಕಾಳುಗಳು ಇಷ್ಟೊಂದು ಖರೀದಿ ಆಯಿತು ಎಂತೆಲ್ಲ. ಅವರು ಹೇಗೆ ಬೊಟ್ಟು ಮಾಡಿ ತೋರಿಸುತ್ತಾ ಇದ್ದಾರೆಂದರೆ, ಸರಕಾರವೇ ಇಷ್ಟೆಲ್ಲಾ ಖರೀದಿ ಮಾಡಿದೆ ಎಂಬಂತೆ ಬಿಂಬಿಸುತ್ತಿದ್ದರು ಹಾಗೂ ಚಾಣಾಕ್ಷತೆಯಿಂದ ಮಾಡಿದ್ದೇನೆಂದರೆ; 2013-14ರ ಅಂಕಿಅಂಶಗಳನ್ನು ನೀಡುತ್ತ ಮತ್ತು ಅದರೊಂದಿಗೆ ಈ ಸಾಲಿನ ಅಂಕಿಅಂಶಗಳನ್ನು ನೀಡುತ್ತಿದ್ದರು. ಅಂದರೆ, ಕಾಂಗ್ರೆಸ್‌ನವರು ಇಷ್ಟು ಖರೀದಿ ಮಾಡಿದ್ದರು, ನಾವು ಇಷ್ಟೊಂದು ಖರೀದಿ ಮಾಡಿದ್ದೇವೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಆದರೆ ವಿತ್ತ ಸಚಿವರೇ, ಇದಕ್ಕೂ ಬಜೆಟ್‌ಗೂ ಏನು ಸಂಬಂಧ? ಇದು ಬಜೆಟ್‌ನ ಅಂಕಿಅಂಶ ಅಲ್ಲವೇ ಅಲ್ಲ. ಬಜೆಟ್‌ನೊಂದಿಗೆ ಇದರ ಸಂಬಂಧ ಏನು? ಸಂಬಂಧ ಇರಬಹುದಾಗಿತ್ತು, ಒಂದು ವೇಳೆ ಸರಕಾರಿ ದುಡ್ಡನ್ನು ತಮ್ಮ ಜೇಬಿನಿಂದ ನೀಡುತ್ತಿದ್ದಲ್ಲ್ಲ! ಎಫ್‌ಸಿಐ(ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಇದರ ಖರೀದಿ ಮಾಡುತ್ತಿದೆ. ಹಾಗೂ ಎಫ್‌ಸಿಐ ಸಾಲ ಪಡೆದುಕೊಂಡಿದೆ. ಇದಲ್ಲದೆ, ಎಫ್‌ಸಿಐಗೆ ಸರಕಾರ ಎಷ್ಟು ಬೆಂಬಲ ನೀಡುತ್ತಿತ್ತೋ, ಅ ಬೆಂಬಲವನ್ನು ಹೆಚ್ಚಿಸುವುದನ್ನು ಬಿಟ್ಟು ಕಡಿತಗೊಳಿಸಲಾಗಿದೆ. ಇದು ನಿಮ್ಮನ್ನು ಚಕಿತಗೊಳಿಸುತ್ತಲ್ಲವೇ?

ಇನ್ನೂ ಕೆಲವು ಅಂಕಿಅಂಶಗಳನ್ನು ನೋಡುವ. ಇನ್ನೂ ಮಹತ್ವದ ವಿಷಯಗಳಿವೆ

ದೇಶದ ಬಜೆಟ್ ಅಂದಾಜು 30 ಲಕ್ಷ ಕೋಟಿಗಳಷ್ಟಿರುತ್ತದೆ. ಅದರಲ್ಲಿ ಸುಮಾರು ಒಂದೂವರೆ ಲಕ್ಷ ಕೋಟಿ ರೂಗಳನ್ನು ಕೃಷಿಯ ಮೇಲೆ ವ್ಯಯಿಸಲಾಗುತ್ತದೆ. ಇದಕ್ಕೆ ಸರಕಾರದ ಹೆಸರು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ’(ಅಗ್ರಿಕಲ್ಚರ್ ಆಂಡ್ ಅಲೈಡ್ ಆಕ್ಟಿವಿಟೀಸ್)’ ಎಂದು. ಇದರಲ್ಲಿ ಖರ್ಚು ಆಗಿದ್ದೆಷ್ಟು? ಇದನ್ನು ಗಮನವಿಟ್ಟು ಓದಿ; ಕಳೆದ ವರ್ಷ ತನ್ನ ಬಜೆಟ್‌ನಲ್ಲಿ ಸರಕಾರವು ಅಗ್ರಿಕಲ್ಚರ್ ಆಂಡ್ ಅಲೈಡ್ ಆಕ್ಟಿವಿಟೀಸ್‌ಗಳಿಗಾಗಿ 1 ಲಕ್ಷ 54 ಸಾವಿರ ಕೋಟಿಗಳನ್ನು ಇಡಲಾಗಿತ್ತು. ಈ ವರ್ಷ ಎಷ್ಟು ಇಡಲಾಗಿದೆ? ಗಮನವಿಟ್ಟು ಓದಿ. ಈ ವರ್ಷ ಇಟ್ಟಿದ್ದು; 1 ಲಕ್ಷ 48 ಸಾವಿರ ಕೋಟಿ ರೂಪಾಯಿಗಳು. ಅಂದರೆ, ಕೃಷಿಯ ಬಜೆಟ್ ಅನ್ನು ಕಡಿತಗೊಳಿಸಲಾಗಿದೆ. ಹೌದು, ಈ ಎಲ್ಲಾ ರೈತ, ಅನ್ನದಾತ ಮುಂತಾದ ಮಾತುಗಳ, ಈ ಎಲ್ಲಾ ಚರ್ಚೆಗಳ ಮಧ್ಯೆಯೇ ಅಡಗಿರುವ ಸತ್ಯವೇನೆಂದರೆ, ಈ ವರ್ಷ ಕೃಷಿಯ ಮೇಲಿನ ಬಜೆಟ್ ಅನ್ನು ಕಡಿಮೆ ಮಾಡಲಾಗಿದೆ. ಇದರಲ್ಲಿ ಕಡಿತಗೊಳಿಸಿದ್ದು ನಿರ್ದಿಷ್ಟವಾಗಿ ಯಾವ್ಯಾವುದರಲ್ಲಿ ಎಂದು ನೋಡುವ;

ಪಿಎಂ ಕಿಸಾನ್ ಎಂಬುದು ಸರಕಾರದ ಅತ್ಯಂತ ದೊಡ್ಡ ಯೋಜನೆ; ಈ ಯೋಜನೆಯ ಹೆಸರನ್ನು ಪದೇಪದೇ ಬಳಸುವಲ್ಲಿ ಸರಕಾರ ಎಂದೂ ದಣಿಯುವಂತೆ ಕಾಣಿಸುವುದಿಲ್ಲ. ಇಂತಹ ಯೋಜನೆಯಲ್ಲಿಯೇ, ಕಳೆದ ವರ್ಷ 75 ಸಾವಿರ ಕೋಟಿ ಇಡಲಾಗಿತ್ತು. ಈ ವರ್ಷ ಅದನ್ನು ಕಡಿಮೆ ಮಾಡಿ, 65 ಸಾವಿರ ಕೋಟಿ ಮಾಡಲಾಗಿದೆ. 10 ಸಾವಿರ ಕೋಟಿ ರೂಪಾಯಿಗಳನ್ನು ಕಡಿಮೆ ಮಾಡಲಾಗಿದೆ ಹಾಗೂ ಇದು ಯಾವ ಸಮಯದಲ್ಲಿ ಆಗಿದೆ ಎಂದರೆ, ಈ ಸರಕಾರವು ಈ ಯೋಜನೆಯನ್ನು ಈ ದೇಶದ ಅರ್ಧದಷ್ಟು ರೈತರಿಗೂ ತಲುಪಿಸಲಾಗದ ಸಮಯದಲ್ಲಿ. ಒಂದು ವೇಳೆ ಎಲ್ಲಾ ರೈತರಿಗೂ ತಲುಪಿಸಬೇಕಾದರೆ, 75 ಸಾವಿರದಿಂದ ಒಂದೂಕಾಲು ಲಕ್ಷ ಕೋಟಿಗೆ ಏರಿಸಬೇಕಾಗುತ್ತದೆ. ಆದರೆ, ಅದರ ಬದಲಿಗೆ ಕಡಿತಗೊಳಿಸಿ 65 ಸಾವಿರ ಕೋಟಿ ಮಾತ್ರ ನಿಗದಿಮಾಡಲಾಗಿದೆ.

ಪಿಎಂ ಆಶಾ: ಈ ಸರಕಾರದ ಯೋಜನೆಯು ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಿಗಲೆಂದು, ಸರಕಾರದಿಂದ ಮಾಡುವ ಖರೀದಿಯಲ್ಲಿ ಸಹಾಯವಾಗಲೆಂದು ಇರುವ ಯೋಜನೆ ಎಂದು ಸರಕಾರ ಹೇಳಿಕೊಳ್ಳುತ್ತದೆ. ಅದಕ್ಕಿರುವ ದುಡ್ಡು ಎಷ್ಟು? ಕಳೆದ ವರ್ಷದ ಬಜೆಟ್‌ನಲ್ಲಿ ಇದ್ದ ಹಣ 500 ಕೋಟಿ ರೂಪಾಯಿಗಳು. ಹೌದು ಹಾಸ್ಯಾಸ್ಪದವಾಗಿದೆ. ಭಾರತ ಸರಕಾರ ರೈತರಿಗೆ ಕನಿಷ್ಠ ಬೆಂಬಲ ಸಿಗುವಂತೆ ಮಾಡಲು 500 ಕೋಟಿ ರೂಪಾಯಿಗಳ ಅನುದಾನ ಇಟ್ಟಿತ್ತು, ಇದಕ್ಕಿಂತ ದೊಡ್ಡ ತಮಾಷೆ ಇನ್ನೇನಿರಬಹುದು? ಈ ವರ್ಷ ಅದನ್ನು ಕಡಿತಗೊಳಿಸಿ 400 ಕೋಟಿ ಮಾಡಲಾಗಿದೆ.

ಇನ್ನೂ ಎರಡು ಯೋಜನೆಗಳಿವೆ; ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಥವಾ ಎಂಐಸ್ (market intervention scheme) ಮತ್ತು ಬೆಲೆ ಬೆಂಬಲ ಯೋಜನೆ ಅಥವಾ ಪಿಎಸ್‌ಎಸ್ (price support scheme). ಈ ಯೋಜನೆಗಳ ಅಡಿಯಲ್ಲಿ ಸರಕಾರವು ಮಾರುಕಟ್ಟೆಯಲ್ಲಿ ರೈತರ ಬೆಳೆಗಳ ಬೆಲೆ ಹೆಚ್ಚಿಸುವ ಪ್ರಯತ್ನ ಮಾಡುತ್ತದೆ. ಇದಕ್ಕಾಗಿ ಕಳೆದ ವರ್ಷ 2 ಸಾವಿರ ಕೋಟಿ ರೂಪಾಯಿಗಳನ್ನು ಇಡಲಾಗಿತ್ತು. ಆದರೆ ಅದರಲ್ಲಿ ಎಷ್ಟು ವ್ಯಯಿಸಲಾಗಿದೆ ಎಂಬುದು ಗೊತ್ತೆ? 996 ಕೋಟಿಗಳು. ಅಂದರೆ ಅರ್ಧಕ್ಕಿಂತ ಕಡಿಮೆ. ಅದೇ ಕಾರಣದಿಂದಲೇ ಏನೋ, ಇದರ ಬಜೆಟ್ ಕೂಡ ಕಡಿಮೆ ಮಾಡಿ, ಒಂದೂವರೆ ಸಾವಿರ ಕೋಟಿಗಳನ್ನು ಇದಕ್ಕಾಗಿ ಇಡಲಾಗಿದೆ.

ಈಗ ಈ ಬಹುಚರ್ಚಿತ ಅಗ್ರಿಕಲ್ಚರ್ ಇನ್‌ಫ್ರಾ ಫಂಡ್ ಬಗ್ಗೆ ನೋಡುವ. ಎಲ್ಲರೂ ಇದರ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಮಂತ್ರಿಗಳೂ ಇದರ ಬಗ್ಗೆ ಮಾತನಾಡುತ್ತ ಅಗ್ರಿಕಲ್ಚರ್ ಇನ್‌ಫ್ರಾ ಫಂಡ್ ಎಂಬ ಬೃಹತ್ ಯೋಜನೆಯನ್ನು ಸೃಷ್ಟಿಸಿದ್ದೇವೆ ಎಂದು ಹೇಳಿದ್ದಾರೆ. 1 ಲಕ್ಷ ಕೋಟಿ ರೂಪಾಯಿಗಳು. ಕೇಳಲು ಎಷ್ಟು ಇಂಪಾಗಿದೆಯಲ್ಲವೇ? ಇದನ್ನು ಕಳೆದ ವರ್ಷ ಘೋಷಿಸಲಾಗಿತ್ತು. ಒಂದು ಪುಟ್ಟ ಪ್ರಶ್ನೆ; ಇದರಲ್ಲಿ ಸರಕಾರ ಎಷ್ಟು ನೀಡಿದೆ? ಇಲ್ಲಿಯವರೆಗೆ ಅನುದಾನದ ಒಟ್ಟು ಮೊತ್ತ ಎಷ್ಟಾಗಿದೆ? ಈ ಒಂದು ಲಕ್ಷ ಕೋಟಿಯ ಘೋಷಣೆಯಲ್ಲಿ ಇಲ್ಲಿಯವರೆಗೆ 2990 ಸಾವಿರ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದೂ ತತ್ವಾಧಾರಿತ ಒಪ್ಪಂದ ಮಾತ್ರ; ಇದೂ ಇನ್ನೂ ಸಿಕ್ಕಿಲ್ಲ. ಇಷ್ಟು ಮಾಡಲಾಗುವುದು ಎಂಬಂತೆ ಒಪ್ಪಂದವಾಗಿದೆಯಷ್ಟೆ. ಹಾಗೂ ಇದರಲ್ಲಿ ಸರಕಾರ ಎಷ್ಟು ಖರ್ಚು ಮಾಡಿದೆ ಗೊತ್ತೆ? ಸರಕಾರ ಕಳೆದ ವರ್ಷ ಕೇವಲ 200 ಕೋಟಿಗಳಷ್ಟು ಖರ್ಚು ಮಾಡಿತ್ತು. ಇದಕ್ಕಾಗಿ ಈಗ 900 ಕೋಟಿ ರೂಪಾಯಿಗಳ ಅವಕಾಶ ಇಡಲಾಗಿದೆ. ಕೇವಲ 900 ಕೋಟಿ ರೂಪಾಯಿಗಳು! ಮಾತು ಒಂದು ಲಕ್ಷ ಕೋಟಿಯದ್ದು, ಬಜೆಟ್‌ನಲ್ಲಿ ಕೊಟ್ಟಿದ್ದು ಕೇವಲ 900 ಕೋಟಿ.

ರೈತರೊಂದಿಗೆ ಈ ರೀತಿಯ ತಮಾಷೆ ಮೊದಲನೆ ಸಲ ಆಗಿಲ್ಲ. ರೈತರೊಂದಿಗೆ, ಕೃಷಿ ಕಾರ್ಮಿಕರೊಂದಿಗೆ ಸರಕಾರ ಪದೇಪದೇ ಇಂತಹ ತಮಾಷೆ ಮಾಡುತ್ತಲೇ ಇದೆ.

ಈಗ ಕೊನೆಯದಾಗಿ ನರೇಗಾ ಯೋಜನೆಯ ಬಗ್ಗೆ ನೋಡುವ. (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ). ಇದರ ಬಗ್ಗೆ ನಮ್ಮಂತವರೆಲ್ಲರೂ ಹೇಳುತ್ತಲೇ ಬಂದಿದ್ದೇವೆ. ಅದೇನೆಂದರೆ, ಈ ಯೋಜನೆಗೆ ಕನಿಷ್ಠ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು, ಇಲ್ಲದಿದ್ದರೆ ಇದು ಸರಿಯಾಗಿ ನಡೆಯುವುದಿಲ್ಲ ಎಂದು. ಸರಕಾರ ಈ ಹಿಂದೆ ಇಟ್ಟಿದ್ದ ಬಜೆಟ್ ಕೇವಲ 65 ಸಾವಿರ ಕೋಟಿ ರೂಪಾಯಿಗಳು. ಆದರೆ ಕೋವಿಡ್ ಆಯ್ತು, ಅದರೊಂದಿಗೆ ನಿರುದ್ಯೋಗ ಹೆಚ್ಚಾಯಿತು, ಹೀಗಾಗಿ ಸರಕಾರವು ನಿಜವಾಗಿಯೂ ಈ ಯೋಜನೆಗೆ ಹೆಚ್ಚು ಖರ್ಚು ಮಾಡಬೇಕಾಯಿತು. ಮಾಡಿದ ಖರ್ಚು; 1.11 ಲಕ್ಷ ಕೋಟಿ ರೂಪಾಯಿಗಳು. ಅಂದರೆ ಈ ವರ್ಷವೂ ಈ ಯೋಜನೆಗೆ ಒಳ್ಳೆಯ ಮೊತ್ತವನ್ನೇ ಇಟ್ಟಿರುತ್ತೆ ಅಂದುಕೊಂಡಿದ್ದರೆ ಅದು ತಪ್ಪಾಗುತ್ತೆ. ಆದರೆ ಈ ವರ್ಷ ಮತ್ತೆ ಅದನ್ನು 73 ಸಾವಿರ ಕೋಟಿಗೆ ತಂದಿಳಿಸಲಾಗಿದೆ.

ಅಂದರೆ, ಆನೆಯ ಹಲ್ಲು ಅಗಿಯಲು ಬೇರೆ, ತೋರಿಸಲು ಬೇರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾಷಣ ನೀವು ಕೇಳಿದಿರಿ, ಪ್ರಧಾನ ಮಂತ್ರಿಗಳ ಭಾಷಣ ನೀವು ಕೇಳಿದಿರಿ; ಇವುಗಳು ತೋರಿಸಲು ಇದ್ದ ಹಲ್ಲುಗಳು. ಹಾಗೂ ಅಗಿಯಲು ಇರುವ ಹಲ್ಲುಗಳು ಅಡಗಿರುವುದು ಆ ನಂತರ ಬರುವ ಕೋಷ್ಟಕಗಳಲ್ಲಿ. ಹಾಗೂ ಆ ಕೋಷ್ಟಕ ತಿಳಿಸುವುದೇನೆಂದರೆ, ರೈತರ ಬಗ್ಗೆ ಹೊಡೆದ ಎಲ್ಲಾ ಡಾಯಲಾಗ್‌ಗಳ ಹೊರತಾಗಿಯೂ, ಅನ್ನದಾತ ಮುಂತಾದ ಮಾತುಗಳ ಹೊರತಾಗಿಯೂ, ಈಗ ನಡೆಯುತ್ತಿರುವ ಐತಿಹಾಸಿಕ ಹೋರಾಟದ ಹೊರತಾಗಿಯೂ, ಇವರ ಮೇಲೆ ಇವ್ಯಾವೂ ಎಳ್ಳಷ್ಟು ಪರಿಣಾಮ ಬೀರಿಲ್ಲ ಎಂಬುದು ಗೊತ್ತಾಗುತ್ತದೆ. ಕೃಷಿಯ ಮೇಲೆ ಮಾಡಬೇಕಾದ ವೆಚ್ಚವನ್ನು ಹೆಚ್ಚಿಸುವ ಬದಲಿಗೆ ಕಡಿಮೆ ಮಾಡಿದೆ ಈ ಸರಕಾರ.

ಈ ಪ್ರಶ್ನೆಯನ್ನು ಈಗ ಕೇಳಬೇಕಿದೆ. ಇದೇ ಹೆಡ್‌ಲೈನ್ ಆಗಿರಬೇಕಿತ್ತಲ್ಲವೇ? ಇದೇ ಬ್ರೇಕಿಂಗ್ ನ್ಯೂಸ್ ಆಗಿರಬೇಕಿತ್ತಲ್ಲವೇ? ಈ ಸುದ್ದಿ ಚಾನೆಲ್‌ಗಳು ನಿಮಗೆ ಸತ್ಯ ಹೇಳುತ್ತಿವೆಯೇ? ಈ ಬಜೆಟ್ ಸತ್ಯ ನೀವು ತಿಳಿದುಕೊಳ್ಳಲೇಬೇಕು. ತಿಳಿದುಕೊಂಡು ಎಲ್ಲರಿಗೂ ಹೇಳಬೇಕು.

(ಬಜೆಟ್‌ನಲ್ಲಿ ಕೃಷಿಗಾಗಿ ನೀಡಿರುವ ಹಂಚಿಕೆಯ ಬಗ್ಗೆ ಯೋಗೇಂದ್ರ ಯಾದವ್ ಅವರ ಬಾಷಣವನ್ನು ರಾಜಶೇಖರ್ ಅಕ್ಕಿ ಕನ್ನಡಿಸಿದ್ದಾರೆ)

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಸಕ್ತ ದೇಶದ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆಯೇ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ‘ಡಿಜಿಟಲ್ ಕುದುರೆಯ ಮೇಲೆ ಕನಸಿನ ಪ್ರವಾಸ’ ಬಜೆಟ್ ಟೀಕಿಸಿದ ಶಿವಸೇನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...