ಆಕಾಶ ವೀಕ್ಷಣೆಯಲ್ಲಿ ಗ್ರಹಗಳು ಮತ್ತು ನಕ್ಷತ್ರ ಪುಂಜಗಳನ್ನು ನೋಡುವುದಷ್ಟೇ ಅಲ್ಲ, ಇತರೆ ಖಗೋಳೀಯ ಕಾಯಗಳಾದ ನಿಹಾರಿಕೆಗಳು (ನೆಬುಲ್ಲಾಗಳು), ತೆರೆದ ಕ್ಲಸ್ಟರ್‌ಗಳು (ನಕ್ಷತ್ರಗಳ ಗೊಂಚಲು) ಮತ್ತು ಗೋಳಾಕಾರ ಕ್ಲಸ್ಟರ್‌ಗಳು ಮತ್ತು ಗ್ಯಾಲಾಕ್ಸಿಗಳನ್ನು ಕೂಡ ನೋಡಬಹುದು. ಇಂತಹ ಆಕಾಶ ಕಾಯಗಳನ್ನು ಆಕಾಶ ವೀಕ್ಷಣಾಕಾರರು ಆಳವಾದ ಆಕಾಶಕಾಯಗಳು (Deep Sky Objects- DSO’s)ಎಂದು ಕರೆಯುತ್ತಾರೆ.
ಸಾಮಾನ್ಯವಾಗಿ DSO’s ನೋಡಲು ಕನಿಷ್ಠ ಅಂದರೂ ಬೈನಾಕ್ಯೂಲರ್ ಮುಂದುವರೆದು ಟೆಲಿಸ್ಕೋಪ್ ಅತ್ಯಗತ್ಯ. ಬರಿಕಣ್ಣಿನಲ್ಲೂ ನೋಡಬಹುದಾದ ಕೆಲವು ನಿಹಾರಿಕೆಗಳು, ಕ್ಲಸ್ಟರ್‌ಗಳು ಮತ್ತು ಗ್ಯಾಲಾಕ್ಸಿಗಳು ಇವೆ. ನಗರ ಪ್ರದೇಶಗಳಲ್ಲಿ ಬೆಳಕಿನ ಮಾಲಿನ್ಯ ಹೆಚ್ಚು ಇರುವುದರಿಂದ ಈ ಕಾಯಗಳನ್ನು ನೋಡಲು ಕಷ್ಟವಿದ್ದರೂ ಪ್ರಯತ್ನಿಸಬಹುದು.
ಒರಿಯಾನ್ ಮತ್ತು ಒರಿಯಾನ್ ನಿಹಾರಿಕೆ

ಡಿಸೆಂಬರ್ ತಿಂಗಳನಲ್ಲಿ ನಾವು ಒರಿಯಾನ್ ಮತ್ತು ಒರಿಯಾನ್ ನಿಹಾರಿಕೆಯನ್ನು ಹೇಗೆ ಗುರುತಿಸುವುದು ಎಂಬುದನ್ನು ನೋಡಿದೆವು. ಈ ತಿಂಗಳೂ ಕೂಡ ಯಾವುದೇ ರಾತ್ರಿಯಂದು 8 ಗಂಟೆಯ ಸುಮಾರಿಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತರೆ, ಅಂದಾಜು 45 ಡಿಗ್ರಿ ಎತ್ತರದಲ್ಲಿ ಈ ಒರಿಯಾನ್ ನಕ್ಷತ್ರ ಪುಂಜ ಕಾಣುತ್ತದೆ (ಚಿತ್ರ- 1ನ್ನು ಗಮನಿಸಿ). ಒರಿಯಾನ್ ಬಹಳ ಸುಲಭವಾಗಿ ಗುರುತಿಸಬಹುದಾದ ನಕ್ಷತ್ರ ಪುಂಜ. ಚಿತ್ರ(1)ರಲ್ಲಿ ಗುರುತು ಮಾಡಿರುವ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೂರು ನಕ್ಷತ್ರಗಳು ಗೋಚರಿಸುತ್ತವೆ. ಅದರಲ್ಲಿ ಮಧ್ಯ ಭಾಗದಲ್ಲಿರುವುದು ಒರಿಯಾನ್ ನಿಹಾರಿಕೆ. ನಕ್ಷತ್ರಗಳು ಹುಟ್ಟುವ ಪ್ರದೇಶ!
ಚಿತ್ರ (1)- ಒರಿಯಾನ್ ನಕ್ಷತ್ರ ಪುಂಜ ಮತ್ತು ಒರಿಯಾನ್ ನಿಹಾರಿಕೆ

ಚಳಿಗಾಲದ ಆಕಾಶ ವೀಕ್ಷಣೆಗೆ ಒರಿಯಾನ್ ನಕ್ಷತ್ರ ಪುಂಜ ಒಂದು ದಿಕ್ಸೂಚಿ. ಈ ನಕ್ಷತ್ರ ಪುಂಜದ ಸಹಾಯದಿಂದ ಇತರೆ ನಕ್ಷತ್ರ ಪುಂಜಗಳು, ನಿಹಾರಿಕೆಗಳು ಮತ್ತು ಕ್ಲಸ್ಟರ್‌ಗಳನ್ನು (ನಕ್ಷತ್ರಗಳ ಗೊಂಚಲು) ಸುಲಭವಾಗಿ ನೋಡಬಹುದಾಗಿದೆ.
ಕೃತಿಕಾ ನಕ್ಷತ್ರಗಳ ಗೊಂಚಲು
ಚಿತ್ರ (2)ರಲ್ಲಿ ತೋರಿಸಿರುವಂತೆ, ಒರಿಯಾನ್ ನಕ್ಷತ್ರ ಪುಂಜದ ಮಧ್ಯಭಾಗದ ಮೂರು ಪ್ರಕಾಶಮಾನವಾದ ನಕ್ಷತ್ರಗಳನ್ನು ಸೇರಿಸಿದಂತೆ ಒಂದು ಕಾಲ್ಪನಿಕ ಗೆರೆಯನ್ನು ಕಲ್ಪಿಸಿಕೊಂಡು ಅದೇ ಚಿತ್ರದಲ್ಲಿ ತೋರಿಸಿರುವ ದಿಕ್ಕಿನಲ್ಲಿ ನಕ್ಷತ್ರಗಳನ್ನು ಗಮನಿಸುತ್ತಾ ಬನ್ನಿ. ಹಾಗೆ ಗಮನಿಸುವಾಗ, ಆ ಕಾಲ್ಪನಿಕ ರೇಖೆಯು ಒಂದು ನಕ್ಷತ್ರ ಗೊಂಚಲುಗಳ ಬಳಿ ಹಾದುಹೋಗುತ್ತದೆ. ಇದೇ ಕೃತಿಕಾ ನಕ್ಷತ್ರಗಳ ಗೊಂಚಲು.

ಕೃತಿಕಾ ನಕ್ಷತ್ರ ಗೊಂಚಲು ಒಂದು ತೆರೆದ ನಕ್ಷತ್ರಗಳ ಗೊಂಚಲುಗಳಾಗಿದ್ದು (Open Cluster) ಅತ್ಯಂತ ಸುಂದರವಾಗಿ ಬರಿಗಣ್ಣಿಗೆ ಕಾಣುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ Pleiades Cluster ಎಂದು ಕರೆಯುತ್ತಾರೆ. ಕೃತಿಕಾ ನಕ್ಷತ್ರಗಳ ಗೊಂಚಲುಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಗೊಂಚಲಿನಲ್ಲಿ ಏಳು ನಕ್ಷತ್ರಗಳನ್ನು ಗುರುತಿಸಬಹುದು. ಪುರಾಣ ಕಥೆಗಳಿಗೆ ಹೋಲಿಸಿಕೊಂಡು ಈ ಏಳು ನಕ್ಷತ್ರಗಳನ್ನು ಸೆವೆನ್ ಸಿಸ್ಟ್‌ರ್‍ಸ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಬೈನಾಕ್ಯೂಲರ್‌ನಲ್ಲಿ ನೋಡಿದರೆ ಈ ನಕ್ಷತ್ರಗಳ ಗೊಂಚಲು ಇನ್ನೂ ಚಂದವಾಗಿ ಕಾಣುತ್ತದೆ.
ಚಿತ್ರ (3) ಕೃಪೆ: Hubble Site
ಈ ನಕ್ಷತ್ರಗಳ ಗೊಂಚಲುಗಳ ಚಿತ್ರವನ್ನು ಸಾಮಾನ್ಯವಾಗಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳಲ್ಲಿ ಚಿತ್ರಿಸಿರುತ್ತಾರೆ. ಹೆಚ್ಚು ಸಮಯದ ಎಕ್ಸ್‌ಪೋಶರ್ ಹೊಂದಿರುವ ಕ್ಯಾಮರಾದಿಂದ ಈ ನಕ್ಷತ್ರಗಳ ಗೊಂಚಲಿನ ಫೋಟೋ ತೆಗೆದರೆ, ಈ ಏಳು ನಕ್ಷತ್ರಗಳ ಸುತ್ತಲೂ ತಿಳಿ ನೀಲಿ ಬಣ್ಣದ ಮೋಡಗಳನ್ನು ಕಾಣಬಹುದು. ಈ ಮೋಡಗಳು ಹೈಡ್ರೋಜನ್ ಅನಿಲಗಳಿಂದ ಕೊಡಿದೆ. ಹೈಡ್ರೋಜನ್ ಅನಿಲದ ಮೋಡಗಳು ನಕ್ಷತ್ರಗಳ ಉಗಮಕ್ಕೆ ಕಾರಣ.

ಖಗೋಳೀಯ ಅಧ್ಯಯನಗಳ ಪ್ರಕಾರ ನಕ್ಷತ್ರಗಳ ಗೊಂಚಲುಗಳು ಅಥವಾ ಕ್ಲಸ್ಟರ್‌ಗಳಲ್ಲಿರುವ ನಕ್ಷತ್ರಗಳು ಸಾಮಾನ್ಯವಾಗಿ ಒಂದೇ ಮೋಡಗಳಿಂದ ಒಂದೇ ಸಮಯದಲ್ಲಿ ಹುಟ್ಟಿರುತ್ತವೆ. ಈ ಕೃತಿಕಾ ನಕ್ಷತ್ರ ಪುಂಜದ ನಕ್ಷತ್ರಗಳೂ ಸಹ ಒಂದೇ ಮೋಡದಿಂದ ಹುಟ್ಟಿದ್ದು. ಇವು ನಕ್ಷತ್ರಗಳ ಜೀವಿತಾವಧಿಯ ಯೌವ್ವನದ ಅವಧಿಗಳಲ್ಲಿವೆ ಅಂದರೆ, all these are young stars. ನಕ್ಷತ್ರಗಳ ಹುಟ್ಟು ಮತ್ತು ಸಾವಿನ ಬಗ್ಗೆ ಅಧ್ಯಯನ ನಡೆಸುವ ಖಗೋಳ ವಿಜ್ಞಾನಿಗಳಿಗೆ ಯೌವ್ವನದ ನಕ್ಷತ್ರಗಳ ಬಗ್ಗೆ ಅಧ್ಯಯನ ನಡೆಸಲು ಕೃತಿಕಾ ನಕ್ಷತ್ರ ಗೊಂಚಲು ಒಂದು ಪ್ರಯೋಗಾಲಯವೇ ಸರಿ.
ರೋಹಿಣಿ ನಕ್ಷತ್ರ, ವೃಷಭ ರಾಶಿ
ಮತ್ತೊಮ್ಮೆ ಒರಿಯಾನ್ ನಕ್ಷತ್ರ ಪುಂಜಕ್ಕೆ ಹೋಗೋಣ. ಚಿತ್ರ (2) ರಲ್ಲಿ ಒರಿಯಾನ್ ನಕ್ಷತ್ರ ಪುಂಜದಿಂದ ಎಳೆದ ಕಾಲ್ಪನಿಕ ರೇಖೆ ಒಂದು ಕಿತ್ತಳೆ ಬಣ್ಣದ ನಕ್ಷತ್ರದ ಆಸು ಪಾಸಿನಲ್ಲಿ ಹಾದು ಹೋಗುವುದನ್ನ ಕಾಣುತ್ತೇವೆ. ಈ ಕಿತ್ತಳೆ ಬಣ್ಣದ ನಕ್ಷತ್ರವೇ ರೋಹಿಣಿ ನಕ್ಷತ್ರ. ಈ ರೋಹಿಣಿ ನಕ್ಷತ್ರ ಮತ್ತು ಕೃತಕಾ ನಕ್ಷತ್ರದ ಗೊಂಚಲುಗಳು ವೃಷಭ ರಾಶಿಯಲ್ಲಿವೆ/ ನಕ್ಷತ್ರ ಪುಂಜದಲ್ಲಿದೆ. ಅಂತೆಯೇ, ಚಿತ್ರ (2)ರಲ್ಲಿನ ಕಾಲ್ಪನಿಕೆ ಗೆರೆಗಳ ಸಹಾಯದಿಂದ ವೃಷಭ ರಾಶಿಯ ಇತರೆ ನಕ್ಷತ್ರಗಳನ್ನು ನೀವು ನೋಡಬಹುದು.
ಚಂದ್ರನ ಸಹಾಯದಿಂದ ದಿಕ್ಕು ಕಂಡುಹಿಡಿಯುವುದು ಹೇಗೆ?
ಚಂದ್ರ ರಾತ್ರಿ ಆಕಾಶದಲ್ಲಿ ಕಾಣುವ ದೊಡ್ಡದಾದ ಆಕಾಶ ಕಾಯ. ಕೆಲವೊಂದು ಸಾರಿ ಇಳಿಸಂಜೆಯಲ್ಲೂ, ಮುಂಜಾನೆಯಲ್ಲೂ ಮತ್ತು ಸೂರ್ಯನಿದ್ದಾಗಲೂ ಕಾಣುತ್ತಾನೆ. ಚಂದ್ರನ ಸಹಾಯದಿಂದ ದಿಕ್ಕುಗಳನ್ನು ಗುರುತಿಸುವುದು ಹೇಗೆ?

ವೃದ್ಧಿಸುವ ಚಂದ್ರ ಮತ್ತು ಕ್ಷೀಣಿಸುವ ಚಂದ್ರನ ಬಿಂಬಾವಸ್ಥೆಗಳ ಸಹಾಯದಿಂದ ದಿಕ್ಕುಗಳನ್ನು ಗುರುತಿಸುವುದನ್ನು ನೋಡೋಣ.
ಚಿತ್ರ (4)ನ್ನು ನೋಡಿ, ಫೆಬ್ರವರಿ ಐದರಂದು ಮುಂಜಾನೆ 4.10ಕ್ಕೆ ಆಕಾಶದಲ್ಲಿ ಚಂದ್ರ ಕಾಣಿಸುತ್ತಿರುವುದನ್ನು ಈ ಚಿತ್ರವು ಸೂಚಿಸುತ್ತದೆ. ಚಂದ್ರ ಕಾಣುತ್ತಿರುವ ದಿಕ್ಕು ಯಾವುದು ಅಂತ ಚಿತ್ರ (4)ನ್ನು ನೋಡಿ ಹೇಳಬಹುದಾ? ಚಿತ್ರ (5)ರಲ್ಲಿ ಪೂರ್ವ ದಿಕ್ಕು ಅಂತ ಸೂಚಿಸಲಾಗಿದೆ. ಆದರೆ, ಚಿತ್ರ (4)ರಿಂದಲೇ ಈ ದಿಕ್ಕನ್ನು ಗುರುತಿಸಬಹುದಾ ಎನ್ನುವುದು ಪ್ರಶ್ನೆ.
ಚಿತ್ರ (5)

ಚಿತ್ರ (4)ರಲ್ಲಿ ಅರ್ಧ ಚಂದ್ರ ಕಾಣುತ್ತಿದೆ. ನಮಗೆ ಕಾಣುತ್ತಿರುವ ಚಂದ್ರನ ಅರ್ಧ ಭಾಗವನ್ನು(A)ಎಂದು, ಕಾಣದಿರದ ಅರ್ಧ ಭಾಗವನ್ನು (B) ಎಂದು ಕರೆಯೋಣ. ಚಂದ್ರನಿಗೆ ತನ್ನದೇ ಆದ ಬೆಳಕು ಇಲ್ಲದಿರುವುದು ನಮಗೆ ತಿಳಿದ ವಿಚಾರ. ಹಾಗಾಗಿ, ಚಂದ್ರನನ್ನು ನಾವು ನೋಡುತ್ತಿದ್ದರೆ ಅದು ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು, ಪ್ರತಿಫಲಿತ ಕಿರಣಗಳು ನಮ್ಮ ಕಣ್ಣಿಗೆ ಬರುತ್ತಿರುವುದರಿಂದ ಮಾತ್ರ. ಚಿತ್ರ (4)ರಲ್ಲಿ ತೋರಿಸಿರುವಂತೆ ಚಂದ್ರನ(A) ಭಾಗದ ಪ್ರದೇಶದಲ್ಲಿ ಸೂರ್ಯನ ಬೆಳಕು ಬೀಳಬೇಕೆಂದರೆ ಸೂರ್ಯ ಕ್ಷಿತಿಜದ (Horizan) ಕೆಳಗೆ ಇದ್ದರೇ ಮಾತ್ರ ಸಾಧ್ಯ. ಸೂರ್ಯ ಬೇರೆ ಕಡೆಗೆ ಇದ್ದರೆ, ಈ ರೀತಿ ಚಂದ್ರನ(B) ಭಾಗದಲ್ಲಿ ಬೆಳಕು ಬಿದ್ದು, ಪ್ರತಿಫಲಿಸುವುದು ಅಸಾಧ್ಯ. ಇದಲ್ಲದೆ ಚಂದ್ರ ಕಾಣುತ್ತಿರುವ ಸಮಯವನ್ನು ಗಮನಿಸಿದರೆ ಅದು ಮುಂಜಾನೆ 04 ಗಂಟೆಯ ಸಮಯ. ಒಂದೆರಡು ಗಂಟೆಯಲ್ಲಿ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ ಎಂಬುದು ತಿಳಿದ ವಿಚಾರ. ಚಂದ್ರನ(A) ಭಾಗದ ಮೇಲೆ ಸೂರ್ಯನ ಬೆಳಕು ಬಿದ್ದು, ಪ್ರತಿಫಲಿಸುತ್ತಿರುವುದರಿಂದ, ಸೂರ್ಯ ಈ ಕ್ಷಿತಿಜದಿಂದಲೇ ಉದಯಿಸಬೇಕು. ಹಾಗಾಗಿ ಇದು ಪೂರ್ವ ದಿಕ್ಕು ಎನ್ನುವ ಅಭಿಪ್ರಾಯಕ್ಕೆ ಬರಬಹುದು.
ನಾನು ಈ ಚಿತ್ರಗಳನ್ನು Stellariumತಂತ್ರಾಂಶದ ಮುಖಾಂತರ ಸೃಷ್ಟಿಸಿರುವುದರಿಂದ, ಇದರಲ್ಲಿ ಸಮಯವನ್ನು ಮುಂದಕ್ಕೆ ಹಾಕಿ ಸೂರ್ಯ ಉದಯಿಸುವುದನ್ನು ಕೂಡ ನೋಡಬಹುದು. ಅದೇ ಚಿತ್ರ (5). ಈ ಚಿತ್ರದಲ್ಲಿ, ಸೂರ್ಯ ಮತ್ತು ಚಂದ್ರ ಮತ್ತು ಅದರ(A)& (B) ಭಾಗಗಳನ್ನು ಗಮನಿಸಿ, ಬೆಳಕಿನ ಪ್ರತಿಫಲನ ನಿಯಮ ಸರಿ ಇದೆಯೇ ಪರೀಕ್ಷಿಸಿ.
ಇದೇ ವಿಧಾನದಲ್ಲಿ ಚಂದ್ರನನ್ನು ನೀವು ನೋಡಿದಾಗಲೆಲ್ಲಾ ದಿಕ್ಕುಗಳನ್ನು ಗುರುತಿಸಲು ಪ್ರಯತ್ನಿಸಿ. ಅಲ್ಲದೆ, ಆಕಾಶ ವೀಕ್ಷಣೆಯ ಬಗ್ಗೆ ನಿಮ್ಮ ಪ್ರಶ್ನೆಗಳನ್ನು, ಅಭಿಪ್ರಾಯಗಳನ್ನು ಸಹ ಹಂಚಿಕೊಳ್ಳಲು ಈಮೇಲ್ ವಿಳಾಸಕ್ಕೆ ಬರೆಯಿರಿ: [email protected].


