ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಿಡಲಾಗಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ, ನಿಯಮಗಳನ್ನು ಉಲ್ಲಂಘಿಸಿ ಹಿಂದುಳಿದ ‘ಬ’ ವರ್ಗ ಸದಸ್ಯರೊಬ್ಬರನ್ನು ಆಯ್ಕೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೆ.ಹೊನ್ನಮಾಚನಹಳ್ಳಿಯಲ್ಲಿ ಜರುಗಿದೆ.
ಹಿಂದುಳಿದ ‘ಎ’ ವರ್ಗದಿಂದ ಆಯ್ಕೆಯಾಗಿದ್ದ ಇಬ್ಬರು ಸದಸ್ಯರು ಇದ್ದರೂ ಆ ಸದಸ್ಯರಿಗೆ ಬೆದರಿಕೆ ಹಾಕಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಂತೆ ನೋಡಿಕೊಳ್ಳಲಾಗಿದೆ. ಚುನಾವಣೆ ಅಧಿಕಾರಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಲಾಗಿದೆ.
ಕುಣಿಗಲ್ ತಾಲೂಕು ಕೊರಟಿ ಗ್ರಾಮ ಪಂಚಾಯ್ತಿಗೆ 12 ಸದಸ್ಯರು ಆಯ್ಕೆಯಾಗಿದ್ದರು. ಕೊರಟಿ ವಾರ್ಡ್ ನಿಂದ ಜಯಮ್ಮ ಮತ್ತು ಹಾಲಿಗೆರೆ ವಾರ್ಡ್ ನಿಂದ ರೇಣುಕಮ್ಮ ಹಿಂದುಳಿದ ‘ಎ’ ವರ್ಗ ಮೀಸಲು ಕ್ಷೇತ್ರದಿಂದ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ರಾಜ್ಯ ಸರ್ಕಾರ ಗ್ರಾಮ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿತ್ತು.
ಇದನ್ನೂ ಓದಿ: ಸ್ವಾರ್ಥ, ಹೇಡಿತನದಲ್ಲಿ ಚಿತ್ರನಟರನ್ನು ಮೀರಿಸಿದ ಕ್ರಿಕೆಟಿಗರು: ನಟ ಚೇತನ್ ಆಕ್ರೋಶ
ಈ ಸಂದರ್ಭದಲ್ಲಿ ಕುಣಿಗಲ್ ಕೊರಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಹಿಂದುಳಿದ ‘ಎ’ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಫೆಬ್ರವರಿ 6ರಂದು ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಹಿಂದುಳಿದ ‘ಎ’ ವರ್ಗದಿಂದ ಆಯ್ಕೆಯಾದ ಇಬ್ಬರು ಮಹಿಳಾ ಸದಸ್ಯರು ನಾಮಪತ್ರ ಸಲ್ಲಿಸದಂತೆ ಜೆಡಿಎಸ್ ಮುಖಂಡರೇ ಧಮಕಿ ಹಾಕಿದರು ಎಂದು ದೂರಲಾಗಿದೆ.
ನಿಯಮದಂತೆ ಜಯಮ್ಮ ಮತ್ತು ರೇಣುಕಮ್ಮ ಅವರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದರೂ ಜೆಡಿಎಸ್ ಮುಖಂಡರು ಈ ಇಬ್ಬರು ಮಹಿಳಾ ಸದಸ್ಯರಿಗೆ ಬೆದರಿಕೆ ಹಾಕಿ ನಾಮಪತ್ರ ಸಲ್ಲಿಸದಂತೆ ನೋಡಿಕೊಳ್ಳಲಾಗಿದೆ. ಇದರಿಂದ ಆ ಇಬ್ಬರು ಮಹಿಳಾ ಸದಸ್ಯರು ಏನೂ ಮಾಡಲು ತೋಚದೆ ಅಸಹಾಯಕರಾಗಿ ಕುಳಿತರೆಂದು ಹೇಳಲಾಗಿದೆ.
ಇದನ್ನೂ ಓದಿ: ಫೇಸ್‌ಬುಕ್ ಲೈವ್ ನೋಡಿ: ಪಂಜಾಬ್‌ನಿಂದ ನಾನುಗೌರಿ ತಂಡದ ಮಮತ ಎಂ
ತೆನೆಹೊತ್ತ ಮಹಿಳೆಯ ಗುರುತು ಹೊಂದಿರುವ ಜೆಡಿಎಸ್, ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಂತೆ ಮತ್ತು ಅಧ್ಯಕ್ಷರಾಗಿ ಆಯ್ಕೆಯಾಗದಂತೆ ನೋಡಿಕೊಂಡಿದ್ದಾರೆ. ಕೊರಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಬ’ ವರ್ಗದ ಸದಸ್ಯರೊಬ್ಬರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಚುನಾವಣೆ ಉಸ್ತುವಾರಿ ಹೊತ್ತ ಚುನಾವಣಾಧಿಕಾರಿಯೂ ನಿಯಮಗಳ ಉಲ್ಲಂಘನೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಜಿ.ಕೆ. ನಾಗಣ್ಣ ನಾನುಗೌರಿ.ಕಾಮ್ ಜೊತೆ ಮಾತನಾಡಿ, “ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನವನ್ನು ಚುನಾವಣಾಧಿಕಾರಿ ಮತ್ತು ಜೆಡಿಎಸ್ ಮುಖಂಡರು ದಬ್ಬಾಳಿಕೆ ಮಾಡಿ ಮಹಿಳಾ ಸದಸ್ಯರಿಗೆ ಬೆದರಿಕೆಯೊಡ್ಡಿ ಅವರು ನಾಮಪತ್ರ ಸಲ್ಲಿಸದಂತೆ ತಡೆಯೊಡ್ಡಿರುವುದು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಚುನಾವಣೆಯ ನಿಯಮಗಳನ್ನು ಉಲ್ಲಂಘಿಸಿದಂತೆ ಆಗಿದೆ. ತೆನೆಹೊತ್ತ ಮಹಿಳೆಯ ಗುರುತು ಹೊಂದಿರುವ ಜೆಡಿಎಸ್ ಮುಖಂಡರು ಮಹಿಳೆಯರ ಬಗ್ಗೆ ಮಾತನಾಡುತ್ತಲೇ ಮಹಿಳೆಯರಿಗೆ ದ್ರೋಹ ಬಗೆಯುತ್ತಿದ್ದಾರೆ. ಮೀಸಲಾತಿ ಪರಿಕಲ್ಪನೆಗೆ ಪೆಟ್ಟುಕೊಟ್ಟಂತೆ ಆಗಿದೆ ಎಂದು ದೂರಿದರು.
ಹಣ ಆಮಿಷ ಮತ್ತು ಗುಲಾಮಗಿರಿಗೆ ಒಳಗಾದ ಮಹಿಳಾ ಸದಸ್ಯರು:
ಆ ಇಬ್ಬರು ಮಹಿಳಾ ಸದಸ್ಯರಿಗೆ ಹಣದ ಆಮಿಷವೊಡ್ಡಿದ್ದಾರೆ. ಜೆಡಿಎಸ್ ಮುಖಂಡರು ನೀಡಿದ ಹಣಕ್ಕೆ ಖರೀದಿಯಾಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದೆ. “ಹಣ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದೇವೆ. ನೀವು ನ್ಯಾಯಾಲಯಕ್ಕೆ ಹೋದರೆ ಸುಮ್ಮನೆ ಬಿಡುವುದಿಲ್ಲ. ಈಗಲೂ ನೀವು ಹಣ ತೆಗೆದುಕೊಂಡಿದ್ದೀರಿ. ನಾವು ಹೇಳಿದಂತೆ ಕೇಳಬೇಕು ಅಷ್ಟೇ” ಎಂದು ಜೆಡಿಎಸ್ ಮುಖಂಡರು ಆ ಮಹಿಳಾ ಸದಸ್ಯರಿಗೆ ಧಮಕಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!


