ಖ್ಯಾತ ಅಂತಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಭಾರತೀಯ ರೈತ ಹೋರಾಟವನ್ನು ಹೇಗೆ ಬೆಂಬಲಿಸಬಹುದು ಎಂಬ ಮಾಹಿತಿಯಿರುವ ’ಟೂಲ್‌ಕಿಟ್’ ಒಂದನ್ನು ತಮ್ಮ ಟ್ವೀಟ್ ಒಂದರಲ್ಲಿ ಹಂಚಿಕೊಂಡಿದ್ದರು. ಕೇಂದ್ರ ಸರ್ಕಾರ ಇದೀಗ ಟೂಲ್‌ಕಿಟ್ ಬೆನ್ನು ಬಿದ್ದಿದ್ದು, ಟೂಲ್‌ಕಿಟ್ ತಯಾರಿಸಿದವರ ಮೇಲೆ ಎಫ್‌ಐಆರ್ ದಾಖಲಿಸಿದೆ. ಈ ಬಗ್ಗೆ ಮಾತನಾಡಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಗ್ರೇಟಾ ಹಂಚಿಕೊಂಡಿದ್ದ ‘ಟೂಲ್ ಕಿಟ್’ ತನಿಖೆಯಿಂದ ಬಹಳಷ್ಟು ವಿಚಾರಗಳು ಹೊರಬರಲಿವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಶನಿವಾರ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಸಚಿವ ಜೈಶಂಕರ್, “ಹೊರದೇಶಗಳ ಕೆಲ ಸೆಲೆಬ್ರಿಟಿಗಳು ರೈತರ ಪ್ರತಿಭಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ, ಅವರಿಗೆ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಹೆಚ್ಚು ತಿಳಿದಿಲ್ಲ. ಈ ಬಗ್ಗೆ ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತನಿಖೆ ಥನ್‌ಬರ್ಗ್ ವಿರುದ್ಧವಲ್ಲ, ಟೂಲ್‌ಕಿಟ್ ರೂಪಿಸಿದವರ ವಿರುದ್ಧ: ದೆಹಲಿ ಪೊಲೀಸ್
#WATCH: EAM Dr S Jaishankar speaks on 'Toolkit' matter, says, "It has revealed a lot. We've to wait & see what else comes out. There was a reason why Foreign Ministry reacted to statements which some celebrities gave out on matters on which they obviously didn't know very much." pic.twitter.com/wWmqWtFkL8
— ANI (@ANI) February 6, 2021
“ಟೂಲ್ ಕಿಟ್‌ನಿಂದ ಬಹಳಷ್ಟು ವಿಚಾರಗಳು ಈಗಾಗಲೇ ಬಹಿರಂಗಗೊಂಡಿವೆ. ಮುಂದಿನ ದಿನಗಳಲ್ಲಿ ಏನು ಹೊರಬರುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ಕೆಲ ಸೆಲೆಬ್ರಿಟಿಗಳು ತಮಗೆ ಹೆಚ್ಚು ಅರ್ಥವಾಗದ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಇದಕ್ಕೆ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯತೆ ಇತ್ತು” ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಗ್ರೇಟಾ ಥನ್‌ಬರ್ಗ್ ಬುಧವಾರ ಸಂಜೆ “ಟೂಲ್‌ಕಿಟ್” ಅನ್ನು ಟ್ವೀಟ್ ಮಾಡಿದ್ದರು, ಆದರೆ ಇದು ಜನವರಿ 26 ರಂದು ನಡೆದ ಗಣರಾಜ್ಯೋತ್ಸವದ ಪ್ರತಿಭಟನೆಯ ಮೇಲೆ ಕೇಂದ್ರೀಕೃತವಾಗಿತ್ತು. ಸ್ವಲ್ಪ ಸಮಯದ ನಂತರ ಆ ಪೋಸ್ಟ್ ಡಿಲೀಟ್ ಮಾಡಿ, ಗುರುವಾರ ಬೆಳಿಗ್ಗೆ, ಹೊಸ ಟೂಲ್‌ಕಿಟ್ ಅನ್ನು ಪೋಸ್ಟ್ ಮಾಡಿದ್ದರು. ಈ ಹೊಸ ಟೂಲ್‌ಕಿಟ್ ಫೆಬ್ರವರಿ 13 ಮತ್ತು 14 ರಂದು ಪ್ರಪಂಚಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು.
ಟೂಲ್‌ಕಿಟ್ ತಯಾರಿಸಿದವರ ಬಗ್ಗೆ ಎಫ್‌ಐಆರ್ ದಾಖಲಾದ ನಂತರವು ಗ್ರೇಟಾ ಥನ್‌ಬರ್ಗ್, “ನಾನು ಇನ್ನೂ ರೈತರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ಯಾವುದೇ ರೀತಿಯ ದ್ವೇಷ, ಬೆದರಿಕೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಗಳು ಅದನ್ನು ಎಂದಿಗೂ ಬದಲಾಯಿಸುವುದಿಲ್ಲ” ಎಂದಿದ್ದರು.
ಇದನ್ನೂ ಓದಿ: ಆಂತರಿಕ ವ್ಯವಹಾರಗಳಿಗೆ ತಲೆ ಹಾಕಬೇಡಿ: ಭಾರತಕ್ಕೆ ಮೀನಾ ಹ್ಯಾರಿಸ್ ನೀಡಿದ ಪ್ರತ್ಯುತ್ತರ ಏನು ಗೊತ್ತಾ?
Here’s an updated toolkit by people on the ground in India if you want to help. (They removed their previous document as it was outdated.)#StandWithFarmers #FarmersProtesthttps://t.co/ZGEcMwHUNL
— Greta Thunberg (@GretaThunberg) February 3, 2021
ಕಳೆದ ಕೆಲವು ದಿನಗಳಿಂದ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ ಹಲವಾರು ಅಂತಾರಾಷ್ಟ್ರೀಯ ವ್ಯಕ್ತಿಗಳಲ್ಲಿ ಈ ಯುವ ಪರಿಸರ ಕಾರ್ಯಕರ್ತೆ ಕೂಡ ಸೇರಿದ್ದಾರೆ. ಈ ಬೆಂಬಲದಿಂದ ಕೇಂದ್ರವು ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ನವೆಂಬರ್ ಅಂತ್ಯದಲ್ಲಿ ಪ್ರಾರಂಭವಾದ ಆಂದೋಲನಕ್ಕೆ ಜಾಗತಿಕ ಮನ್ನಣೆ ಪ್ರಾಪ್ತವಾಗಿದ್ದು, ಭಾರತ ಸರ್ಕಾರಕ್ಕೆ ಜಾಗತಿಕ ಮಟ್ಟದಲ್ಲಿ ಇರಿಸುಮುರಿಸು ಉಂಟಾಗಿದೆ.
ಟ್ವಿಟರ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪಾಪ್ ತಾರೆ ರಿಹಾನ್ನಾ ಅವರ ಪೋಸ್ಟ್‌ನೊಂದಿಗೆ ಮಂಗಳವಾರ ಸಂಜೆ ಇದು ಪ್ರಾರಂಭವಾಯಿತು. ಹಲವಾರು ಅಮೆರಿಕ ಜನಪ್ರತಿನಿಧಿಗಳು ಮತ್ತು ಇತರರು ಇದನ್ನು ಅನುಸರಿಸುತ್ತಿದ್ದಂತೆ, ಸರ್ಕಾರವು “ವಿದೇಶಿಗರು ಭಾರತದ ಆಂತರಿಕ ವಿಷಯದಲ್ಲಿ ತಲೆಹಾಕಬಾರದು” ಎಂದು ಎಚ್ಚರಿಕೆ ನೀಡಿ ಪ್ರಕಟಣೆ ಹೊರಡಿಸಿತ್ತು.
ಇದನ್ನೂ ಓದಿ:ಅಂತರಾಷ್ಟ್ರೀಯ ಗಣ್ಯರ ವಿರುದ್ಧ ತೆಂಡೂಲ್ಕರ್ ಅನ್ನು ಕಣಕ್ಕಿಳಿಸಿದ ಕೇಂದ್ರ – ಶಿವಾನಂದ್ ತಿವಾರಿ


