ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಕಳೆದ 79 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರಿಗೆ ಪ್ರಪಂಚದೆಲ್ಲೆಡೆಯಿಂದ ಬೆಂಬಲ ಮುಂದುವರೆದಿದೆ. ಕ್ಯಾಲಿಫೋರ್ನಿಯ ರಾಜ್ಯದ ಬೇಕರ್ಸ್‌ಫೀಲ್ಡ್ ನಗರದ ಮೇಯರ್ ಕೆರೆನ್ ಗೌ ಮತ್ತು ಮಿಚಿಗನ್‌ನ 13 ನೇ ಕಾಂಗ್ರೆಸ್ ಜಿಲ್ಲೆಯ ಯು.ಎಸ್. ಪ್ರತಿನಿಧಿ ರಶೀದಾ ಹರ್ಬಿ ತ್ಲೈಬ್ ಭಾರತದ ರೈತರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಶೀದಾ ಹರ್ಬಿ ತ್ಲೈಬ್ ಮಂಗಳವಾರ ರಾತ್ರಿ ಟ್ವೀಟ್ ಮಾಡಿ “ಭಾರತದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಇದುವರೆಗಿನ ಅತ್ಯಂತ ವಿವಿಧ್ಯಮಯ ಪ್ರತಿಭಟನೆಗಳಾಗಿವೆ. ಕೃಷಿಯನ್ನು ಕಾರ್ಪೊರೇಟ್ ವಯಲಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಭಾರತದ ರೈತರಿಗೆ (ಅಮೆರಿಕದಂತೆಯೇ) ತಮ್ಮ ಸಾಮೂಹಿಕ ಧ್ವನಿಯನ್ನು ಬಳಸುವ ಎಲ್ಲ ಹಕ್ಕಿದೆ” ಎಂದು ತಿಳಿಸಿದ್ದಾರೆ.
The Farm Bill protests in India are some of the largest, most diverse protests ever seen. India's farmers (just like America's) have every right to use their collective voice to oppose the spread of corporate agriculture.
— Congresswoman Rashida Tlaib (@RepRashida) February 9, 2021
ಸಿಎಎ, ಕಾಶ್ಮೀರ ಮತ್ತು ಕೃಷಿ ಕಾಯ್ದೆ ಬಿಕ್ಕಟ್ಟುಗಳ ಮೂಲಕ ನಾಗರಿಕರ ವಿರುದ್ಧ ಹೆಚ್ಚುತ್ತಿರುವ ರಾಜ್ಯ ಹಿಂಸಾಚಾರದ ಗೊಂದಲದ ಪ್ರವೃತ್ತಿಯನ್ನು ನಾವು ನೋಡಿದ್ದೇವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ, ಮೋದಿ ಸರ್ಕಾರ ಪ್ರತಿಭಟಿಸುವ ಹಕ್ಕನ್ನು ಗೌರವಿಸುವುದು ನಿರ್ಣಾಯಕ ಎಂದು ಅವರು ನ್ಯೂಯಾರ್ಕ್ ಟೈಮ್ಸ್‌ನ ಪತ್ರಿಕಾ ವರದಿಯೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಮೇರಿಕದ ಕ್ಯಾಲಿಫೋರ್ನಿಯ ರಾಜ್ಯದ ಬೇಕರ್ಸ್‌ಫೀಲ್ಡ್ ನಗರದ ಮೇಯರ್ ಕೆರೆನ್ ಗೌ ಕಿಸಾನ್ ಏಕತಾ ಜಿಂದಾಬಾದ್ ಹೆಸರಿನ ವಿಡಿಯೋವೊಂದನ್ನು ಮಾಡಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಅಸೋಸಿಯೇಟ್ಸ್ ಟೈಮ್ಸ್ ವರದಿ ಮಾಡಿದೆ.
ಆ ವಿಡಿಯೋದಲ್ಲಿ “ಭಾರತದ ರೈತರೆ, ನಿಮಗೆ ಶುಭಾಶಯಗಳು. ನಾನು ಭಾರತದಲ್ಲಿ ಜನಿಸಿದವಳು. ಭಾರತದ ಪುತ್ರಿಯಾಗಿ ನನ್ನ ಮಾತೃದೇಶದ ರೈತರ ಸ್ಥಿತಿಗತಿ ಬಗ್ಗೆ ನನಗೆ ಬಹಳ ಕಳವಳವಾಗಿದೆ. ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ. ನಮ್ಮ ಬೇಕರ್ಸ್‌ಫೀಲ್ಡ್ ನಗರವೊಂದು ರೈತಾಪಿ ಸೀಮೆ. ರೈತರ ಮಹತ್ವ ಎಷ್ಟೆನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ನೀವು ನಮ್ಮ ಅನ್ನದಾತರು. ನೀವು ಜಗತ್ತಿಗೇ ಊಟ ನೀಡುವವರು” ಎಂದು ಹೇಳಿದ್ದಾರೆ.
ಭಾರತದ ರೈತರಿಗೆ ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ನೀಡಬೇಕೆಂದೂ, ಅನ್ಯಾಯಯುತವಾಗಿರುವ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದೂ ನಾನು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇನೆ. ಕಿಸಾನ್ ಏಕತಾ ಜಿಂದಾಬಾದ್ ಎಂದು ವಿಡಿಯೋದಲ್ಲಿ ಅವರು ತಿಳಿಸಿದ್ದಾರೆ.
ಅಮೆರಿಕ ಸಂಸತ್ತಿನ ಇಂಡಿಯಾ ಕಾಕಸ್‌ನ ಸಹ-ಅಧ್ಯಕ್ಷ, ಸಂಸದ ಬ್ರಾಡ್ ಶೆರ್ಮನ್ ಅವರು ಭಾರತೀಯ ರೈತರ ಪ್ರತಿಭಟನೆ ಕುರಿತಂತೆ ಚರ್ಚೆ ಮಾಡಲು ಒಂದು ಸಭೆ ಕರೆದಿದ್ದಾರೆ. ಪ್ರಜಾಪ್ರಭುತ್ವದ ಬೇರುಗಳನ್ನು ಕಾಪಾಡಿಕೊಳ್ಳಲಾಗಿದೆಯೇ? ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ನೀಡಲಾಗಿದೆಯೇ? ಪ್ರತಿಭಟನಾಕಾರರಿಗೆ ಇಂಟರ್ನೆಟ್ ಲಭ್ಯವಿದೆಯೇ ಮತ್ತು ಪ್ರತಿಭಟನಾಕಾರರು ಪತ್ರಕರ್ತರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು” ಎಂದು ಬ್ರಾಡ್ ಶೆರ್ಮನ್ ಹೇಳಿದ್ದಾರೆ.
ಪಾಪ್ ತಾರೆ ರಿಹಾನ್ನ ನಾವು ವಿಷಯದ ಕುರಿತು ಮಾತನಾಡಬಾರದೇಕೆ ಎಂದು ರೈತರ ಹೋರಾಟವನ್ನು ಉಲ್ಲೇಖಿಸಿದ ನಂತರ ಈ ಚಳವಳಿಗೆ ವಿಶ್ವದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಇದನ್ನೂ ಓದಿ : ಭಾರತೀಯ ರೈತರ ಪರ ಧ್ವನಿಯೆತ್ತಿದ ಅಮೆರಿಕ ಸಂಸದರ ಗುಂಪು


