Homeಪಿಕೆ ಟಾಕೀಸ್ಪಿಕೆ ಟಾಕೀಸ್: ವ್ಯಕ್ತಿ ಮತ್ತು ಸಮಾಜದ ನಡುವಿನ ಅಮೂರ್ತ ಸಂಬಂಧಗಳ ಸಿನಿಯಾನ

ಪಿಕೆ ಟಾಕೀಸ್: ವ್ಯಕ್ತಿ ಮತ್ತು ಸಮಾಜದ ನಡುವಿನ ಅಮೂರ್ತ ಸಂಬಂಧಗಳ ಸಿನಿಯಾನ

- Advertisement -
- Advertisement -

ಪಿಕೆ ಟಾಕೀಸ್ 05/ ಜಾಗತಿಕ ಸಿನಿಮಾ/ ಗ್ರೀಸ್ ಸಿನಿಮಾ/ ಬಾಬಿಸ್ ಮಕ್ರಿಡೀಸ್

ಪಿಟಿ (2018): ಒಬ್ಬ ವ್ಯಕ್ತಿ ತನ್ನ ನೋವನ್ನು ಅಥವಾ ದುಃಖವನ್ನು ಮತ್ತೊಬ್ಬರ ಬಳಿ ಹಂಚಿಕೊಳ್ಳುವುದಾದರೂ ಏಕೆ? ಎದುರಿಗಿರುವವರಿಂದ ಕರುಣೆ ಅಥವಾ ಅನುಕಂಪವನ್ನು ಗಿಟ್ಟಿಸಿಕೊಳ್ಳಲಿಕ್ಕಾ? ಮತ್ತೊಬ್ಬರಿಂದ ಅನುಕಂಪವನ್ನು ನಿರೀಕ್ಷಿಸುವುದೇ ವ್ಯಸನವಾಗಿಬಿಟ್ಟರೆ? ಒಮ್ಮೆ ಬದುಕಿನಲ್ಲಿದ್ದ ನೋವೆಲ್ಲ ದೂರವಾಗಿ, ಸುತ್ತಲಿನವರು ಅನುಕಂಪವನ್ನು ವ್ಯಕ್ತಪಡಿಸುವುದು ನಿಲ್ಲಿಸಿದರೆ ಮುಂದೇನಾಗಬಹುದು?

ನಲವತ್ತರ ಅಸುಪಾಸಿನ ವ್ಯಕ್ತಿಯೊಬ್ಬ ಕಚೇರಿಗೆ ತಯಾರಾಗಿ ಕೈಗಡಿಯಾರವನ್ನು ನೋಡುತ್ತಾ ಬಾಗಿಲ ಮುಂದೆ ನಿಂತಿರುತ್ತಾನೆ. ಅದೇ ಸಮಯಕ್ಕೆ ಬಾಗಿಲ ಗಂಟೆಯ ಶಬ್ದ, ಪಕ್ಕದ ಮನೆಯಾಕೆ ಆರೆಂಜ್ ಕೇಕ್ ಕೊಟ್ಟು, ಕೋಮಾದಲ್ಲಿರುವ ತನ್ನ ಹೆಂಡತಿಯ ಆರೋಗ್ಯದ ಸ್ಥಿತಿಯನ್ನು ವಿಚಾರಿಸುತ್ತಾಳೆ. ಸಪ್ಪೆ ಮೋರೆಯಲ್ಲಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿ, ನಂತರ ಮಗನ ಜೊತೆ ಕುಳಿತು ಕೇಕ್‌ಅನ್ನು ಸವಿದು ಕಚೇರಿಗೆ ತೆರಳುತ್ತಾನೆ.

ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಬಿಕ್ಕಳಿಸಿ ಅಳುವ, ದಿನಾಲು ಕೋಮಾದಲ್ಲಿರುವ ಹೆಂಡತಿಯನ್ನು ಆಸ್ಪತ್ರೆಯಲ್ಲಿ ನೋಡಿ ದುಃಖಭರಿತನಾಗಿ ಅವಳಿಗೆ ಮುತ್ತನ್ನಿಡುವುದು, ಅದೇ ದುಗುಡದಲ್ಲಿ ಕಚೇರಿಯ ಕೆಲಸವನ್ನು ಸರಿಯಾಗಿ ಮಾಡದೆ, ತಂದೆ, ಗೆಳೆಯರು, ನೆರೆಹೊರೆಯವರು ಕಡೆಗೆ ಲಾಂಡ್ರಿವನ ಬಳಿಯೂ ಹೆಂಡತಿಯ ಸ್ಥಿತಿಯ ಬಗ್ಗೆ ದುಃಖ ತೋಡಿಕೊಂಡು ಸಮಯ ಕಳೆಯುತ್ತಿರುವ ವ್ಯಕ್ತಿ..

ಹೆಂಡತಿ ಮತ್ತೆ ಸಹಜವಾಗುವುದಿಲ್ಲವೆಂದು, ಅವಳ ಸಾವಿನ ತಯಾರಿ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗೆ ಆಘಾತವಾಗುತ್ತದೆ. ಅವನ ಹೆಂಡತಿಗೆ ಪ್ರಜ್ಞೆ ಬಂದು ಆರೋಗ್ಯಕರವಾಗಿ ಮನೆಗೆ ತೆರಳುತ್ತಾಳೆ. ಇದರಿಂದ ಅವನು ದಿನ ಬೆಳಿಗ್ಗೆ ಎದ್ದು ಅಳಲು ಕಾರಣವಿಲ್ಲವಾಗುತ್ತದೆ, ಪಕ್ಕದ ಮನೆಯಾಕೆಯ ಕೇಕ್ ಬರುವುದು ನಿಲ್ಲುತ್ತದೆ, ಸುತ್ತಮುತ್ತಲಿನವರ ಕಾಳಜಿ ಮತ್ತು ಕಾರುಣ್ಯದ ಮಾತುಗಳು ಇಲ್ಲವಾಗುತ್ತದೆ.

ಪಿಟಿ (2018)

ಈ ರೀತಿಯ ಮನಸ್ಥಿತಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಲ್ಲೂ ಸಹಜವಾಗಿ ಇರುತ್ತದೆ. ಮುಖ್ಯವಾಗಿ ಮಕ್ಕಳಲ್ಲಿ. ಹಠ ಮಾಡುವುದು, ಅತ್ತು ಕರೆಯುವುದು ಅದಕ್ಕೆ ಸಮಾಧಾನವನ್ನು ಅಪೇಕ್ಷಿಸುವುದು ಇವೆಲ್ಲವೂ ಬಾಲ್ಯದಲ್ಲಿ ಕಾಣುವಂತವೇ. ವಯೋವೃದ್ಧರಲ್ಲಿಯೂ ಇದು ಸಾಮಾನ್ಯವಾಗಿ ಕಾಣುವ ಮನೋಭಾವ ಕೂಡ. ಕೆಲವು ವಯೋವೃದ್ಧರು ಮನೆಗೆ ಯಾರೇ ಬಂದು ಸಹಜವಾದ ಸಂಭಾಷಣೆಗೆ ಪ್ರೇರೇಪಿಸಿದರೂ, ಅವರ ಮಾತು ಮಾತ್ರ ಸದಾ ಆಸ್ಪತ್ರೆ, ಕಾಯಿಲೆ, ಔಷಧಿಗಳ ಸುತ್ತ ಸುತ್ತುತ್ತಲೇ ಇರುತ್ತದೆ. ಇವರಷ್ಟೇ ಏಕೆ, ಕೊನೆಗೆ ಐಷಾರಾಮಿ ಹೆಲಿಕಾಪ್ಟರ್‌ನಿಂದ ಇಳಿದು ಬರುವ ನಮ್ಮ ಪ್ರಧಾನಮಂತ್ರಿಗಳು ತಮ್ಮ ಗತ ಜೀವನದ ಬಡತನ ದಿನಗಳನ್ನು ನೆನಪಿಸಿಕೊಳ್ಳುವುದರಿಂದಲೋ, ತಮ್ಮ ಹೋರಾಟವನ್ನು ಕಷ್ಟಮಯ ಎಂದು ಬಗೆದು ಅತಿರಂಜಿತವಾಗಿ ಬಣ್ಣಿಸುವುದರಿಂದಲೋ ಮತ್ತು ಸೈನಿಕರ ಸಾವನ್ನು ತಮ್ಮ ರಾಜಕೀಯ ಅನುಕೂಲಕ್ಕೆ ಪ್ರಸ್ತಾಪಿಸಿ ಮತದಾರರಿಂದ ಅನುಕಂಪ ಗಿಟ್ಟಿಸಿಕೊಂಡು ಗೆಲುವು ಸಾಧಿಸುವುದನ್ನು ಕಂಡಿದ್ದೇವೆ.

ಸಿನಿಮಾದ ಕೊನೆ ಭಾಗದಲ್ಲಿ ಸುತ್ತಲಿನವರಿಂದ ಅನುಕಂಪ ಸಿಗದೆ ಹೋದಾಗ ಪ್ರಧಾನ ಪಾತ್ರಧಾರಿ ತನ್ನ ಸಾಕು ನಾಯಿಯನ್ನೇ ಸಮುದ್ರದ ಮಧ್ಯೆ ಬಿಟ್ಟು ಬಂದು ತಂದೆ ಮತ್ತು ಹೆಂಡತಿಯ ಬಳಿ ದುಃಖ ತೋಡಿಕೊಳ್ಳುತ್ತಾನೆ. ಅದರೆ ಅವರು ಗಮನ ಹರಿಸದೆ ಹೋದಾಗ, ಕೊನೆಗೆ ತನ್ನ ತಂದೆ ಮತ್ತು ಹೆಂಡತಿಯನ್ನು ಕೊಂದು ಯಾರೋ ಕೊಲೆ ಮಾಡಿರುವುರಂತೆ ಚಿತ್ರಿಸಿ, ಮತ್ತೆ ಬೆಳಿಗ್ಗೆ ನಿದ್ದೆಯಿಂದ ಎದ್ದು ಅಳುವ ದೃಶ್ಯ ಮನುಷ್ಯನ ಮನಸ್ಸಿನ ಭಾವನೆಗಳ ಸಂಕೀರ್ಣತೆಯನ್ನು ತೋರಿಸುತ್ತದೆ. ಅನುಕಂಪದ ಬಯಕೆಯನ್ನು ವ್ಯಸನವಾಗಿಸಿಕೊಳ್ಳುವ ಮನುಷ್ಯ ಶಿಥಿಲಗೊಳ್ಳುವ ಬಗೆಯನ್ನು ಹಿಡಿದಿಡುತ್ತದೆ.

ಈ ಸಿನಿಮಾ ಡಾರ್ಕ್ ಕಾಮಿಡಿ. ದುಃಖದಲ್ಲಿರುವನು ಸದಾ ದುಃಖದಲ್ಲೇ ಇರಲು ಮಾಡುವ ಪ್ರಯತ್ನಗಳು ನಗು ತರಿಸುತ್ತವೆ, ಆದರೆ ಅಂತ್ಯ ಆಘಾತವನ್ನು ಹುಟ್ಟಿಸುತ್ತದೆ. ಸಿನಿಮಾದಲ್ಲಿ ಹೇಳಿರುವಂತೆ ನಗುವನ್ನು ನಕಲಿ ಮಾಡಬಹುದು, ಆದರೆ ದುಃಖವನ್ನಲ್ಲ. ಆದರೆ ನಮ್ಮಲ್ಲೇ ಎಷ್ಟು ಜನ ಅನುಕಂಪದ ನಿರೀಕ್ಷೆಯಲ್ಲಿ ದುಃಖಕ್ಕೆ ವ್ಯಸನಿಗಳಾಗಿ ಬದುಕಿನ ಒಳ್ಳೆಯ ಮತ್ತು ಸಂಭ್ರಮನ ಕ್ಷಣಗಳಲ್ಲೂ ದೋಷಗಳನ್ನು ಹುಡುಕುತ್ತಾ ಸಹಜ ಬದುಕನ್ನೇ ದುಃಖಕರವಾಗಿಸಿಕೊಳ್ಳುವುದಕ್ಕೆ ಸಿನಿಮಾ ಕನ್ನಡಿಯಾಗಿದೆ.

ನಮ್ಮಲ್ಲೇ ಶೇಕಡ ತೊಂಭತ್ತಕ್ಕೂ ಹೆಚ್ಚಿನ ಜನ ಅಂಧಶ್ರದ್ಧೆಗೆ ಸೋಲುವುದು, ಮದ್ಯಪಾನ ಮಾಡುವುದು, ಮನಸ್ಸೋ ಇಚ್ಛ ತಿನ್ನುವುದು ಹೀಗೆ ಬೇಜವಾಬ್ದಾರಿಯಾಗಿ ತಮ್ಮ ಕೆಲಸಗಳನ್ನು, ಸಮಯವನ್ನು ಮತ್ತು ಆರೋಗ್ಯವನ್ನು ನಿರ್ಲಕ್ಷಿಸಿ ಬದುಕಲು ದುಃಖವನ್ನು ಕಾರಣವಾಗಿ ಬಳಸುವುದು ದುಃಖಕರದ ಸಂಗತಿಯಲ್ಲವೇ!

ಎಲ್ (2012): ಇಂಗ್ಲಿಷ್ ವರ್ಣಮಾಲೆಯ ಎಲ್ ಅಕ್ಷರವನ್ನು, ಕಲಿಕೆಯ ಹಂತದಲ್ಲಿರುವ ಸೂಚಕವಾಗಿ ವಾಹನಗಳ ಮೇಲೆ ಬಳಸುವುದು ವಾಡಿಕೆ. ಒಂದು ವೇಳೆ ಸಮಾಜವನ್ನು ಕಾರು, ಬೈಕು, ದೋಣಿಗಳೆಂದು ಹಲವಾರು ವರ್ಗಗಳಾಗಿ ವಿಂಗಡಿಸಿದರೆ, ವ್ಯಕ್ತಿಯೊಬ್ಬ ಯಾವುದಾದರೂ ಒಂದು ವರ್ಗಕ್ಕೆ ಸೇರುವ ಸಲುವಾಗಿ ಮಾಡುವ ಕಲಿಕ ಪ್ರಯತ್ನಗಳು ಮತ್ತು ಅವನ ಸುತ್ತಮುತ್ತಲಿನವರ ಅನಿಸಿಕೆಗಳೇ ಈ ಸಿನಿಮಾ.

ವ್ಯಕ್ತಿಯೊಬ್ಬ ಕಾರನ್ನು ತನ್ನ ಮನೆಯನ್ನಾಗಿಸಿಕೊಂಡು ಬದುಕುತ್ತಿರುತ್ತಾನೆ. ಕಾರಿನಲ್ಲಿ ತಿನ್ನುವುದು, ಮಲಗುವುದು, ವ್ಯರ್ಥವಾಗಿ ಸುತ್ತುವುದು. ಮತ್ತೊಂದು ಕಾರಿನಲ್ಲಿ ಬಂದ ಹೆಂಡತಿ ಮಕ್ಕಳು ಮತ್ತು ಗೆಳೆಯರು ಇವನ ಕಾರಿನಲ್ಲಿ ಕೂತು ಹುಟ್ಟುಹಬ್ಬವನ್ನು ಆಚರಿಸುವುದು ಹೀಗೆ, ಇವನು ಕಾರಿನಿಂದ ಕೆಳಗಿಳಿದ ಸಂದರ್ಭಗಳೇ ಕಾಣುವುದಿಲ್ಲ.

ಈ ಸಿನಿಮಾದಲ್ಲಿ ಚಿತ್ರಿಸಿರುವ ಘಟನೆಗಳು ಹೆಚ್ಚು ರಸ್ತೆಗಳಲ್ಲೇ ನಡೆಯುತ್ತವೆ. ಇವನು ಮಾಡುತ್ತಿರುವ ವಿಚಿತ್ರ ಡ್ರೈವರ್ ನೌಕರಿಯಲ್ಲಿ ಎರಡು ಬಾರಿ ತಡವಾಗಿ ಬಂದ ಕಾರಣದಿಂದ, ಮತ್ತೊಬ್ಬ ಡ್ರೈವರ್‌ನೊಂದಿಗೆ ರೇಸ್‌ನಲ್ಲಿ ಪಾಲ್ಗೊಳ್ಳುತ್ತಾನೆ. ಆದರೆ ಅದರಲ್ಲಿ ಸೋತು, ಈ ಕಾರಿನ ಪಂಗಡದವರ ಮೇಲೆ ವಿರಕ್ತಿ ಹುಟ್ಟಿ ಕಾರನ್ನು ಗುದ್ದಿ, ಬೈಕ್ ಪಂಗಡಕ್ಕೆ ಸೇರುತ್ತಾನೆ.

ಎಲ್ (2012)

ಈ ಬೆಳವಣಿಗೆ ತನ್ನ ಹೆಂಡತಿ, ಮಕ್ಕಳು ಮತ್ತು ಗೆಳೆಯನಿಗೆ ಇಷ್ಟವಾಗುವುದಿಲ್ಲ. ಎಷ್ಟು ಪ್ರಯತ್ನಿಸಿದರೂ ಇವನಿಂದ ದೂರವಾಗಿ ಬಿಡುತ್ತಾರೆ. ಹೀಗೆ ಒಂಟಿಯಾಗಿ ಈತ ಬೈಕರ್ ಪಂಗಡವರೊಂದಿಗೆ, ಬೈಕ್ ಮೇಲೆ ಸುತ್ತುತ್ತಾ, ತಿನ್ನುತ್ತಾ, ಮಲಗುತ್ತಾ, ಪಂಗಡಕ್ಕಿರುವ ಹಾಡನ್ನು ಹಾಡುತ್ತಾ ಸಮಯ ಕಳೆಯುತ್ತಾನೆ.

ಇವನ ಗೆಳೆಯನೊಬ್ಬ ಅಂಬೆಗಾಲಿನಲ್ಲಿ ನಡೆಯುತ್ತಾ ಕರಡಿ ಪಂಗಡಕ್ಕೆ ಸೇರಿಕೊಂಡಿರುತ್ತಾನೆ. ಆ ಗೆಳೆಯ ಇವನ ಕೂದಲು ಮತ್ತು ಗಡ್ಡವನ್ನು ಮುಟ್ಟಿ ನೋಡಿ, ಇವನನ್ನು ಕರಡಿ ಪಂಗಡಕ್ಕೆ ಸೇರುವಂತೆ ಒತ್ತಾಯಿಸುತ್ತಾನೆ. ಕೊನೆಗೆ ಅಲ್ಲೂ ಇರಲಾಗದೆ ಸಮುದ್ರ ಅಥವಾ ದೋಣಿಗೆ ಹೊಂದುವಂತ ಶೂ ಧರಿಸಿ ದೋಣಿ ಪಂಗಡಕ್ಕೆ ಸೇರಿ ಅವರ ಹಾಡನ್ನು ಗಟ್ಟಿಯಾಗಿ ಹಾಡುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ.

ಈ ಸಿನಿಮಾ ಅಮೂರ್ತವಾಗಿದ್ದು, ಒಂದು ಕಡೆಯಿಂದ ತನ್ನತನವನ್ನು ಹುಡುಕುವ ವ್ಯಕ್ತಿಯೋರ್ವನ ಕಥೆಯಂತೆ ಕಂಡರೆ, ಮತ್ತೊಂದೆಡೆಯಿಂದ ಕಾರು, ಬೈಕು ಮತ್ತು ದೋಣಿಯ ಪಂಗಡಗಳನ್ನು ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ಸಮುದಾಯದವರಂತೆ ಕಾಣುತ್ತಾರೆ. ವ್ಯಕ್ತಿಯ ಸಮಾಜವಾಗಿರುವ ಕುಟುಂಬ, ಗೆಳೆಯರು ಮತ್ತು ಪರಿಚಿತರು ಸದಾ ವ್ಯಕ್ತಿಯನ್ನು ಅವರ ಕಥೆಯಲ್ಲಿರುವಂತೆಯೇ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಒಂದು ವೇಳೆ ವ್ಯಕ್ತಿ ಬದಲಾದರೂ ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲಾಗದೆ, ಮೊದಲೇ ಸರಿಯಿತ್ತೆಂದು ವಾದ ಮಾಡುವುದು, ವೈಯಕ್ತಿಕ ಬದುಕಿನಲ್ಲಿ ಸಮಾಜದ ಹಸ್ತಕ್ಷೇಪ ಇವೆಲ್ಲವನ್ನೂ ಸಿನಿಮಾ ಗಟ್ಟಿಯಾಗಿ ಹಿಡಿದಿಟ್ಟಿದೆ.

ರಸ್ತೆಯಲ್ಲಿ ಅಪಘಾತವಾಗಿ ರಕ್ತ ಸುರಿಸುತ್ತಾ ಇರುವ ವ್ಯಕ್ತಿಯನ್ನು ನೋಡುತ್ತಾ ನಿಂತ ಬೈಕರ್‌ಗಳು, ಕರಡಿಯಂತೆ ನಡೆಯುತ್ತಾ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಏನು ಆಗದವನಂತಿರುವ ಗೆಳೆಯ, ತನ್ನ ಕಾರನ್ನು ತಾನೇ ಪದೇ ಪದೇ ಗುದ್ದಿ ಹಾಳಾಗುವಂತೆ ಮಾಡಿದ್ದು ಮತ್ತು ಬೈಕ್ ಹೆಲ್ಮೆಟಿನ ಸುತ್ತಲು ಗಾಳಿಯಾಡದಂತೆ ಟೇಪನ್ನು ಆಂಟಿಸಿ ಉಸಿರಾಡದಂತೆ ಸಾಯುವವನ ದೃಶ್ಯಾವಳಿಗಳನ್ನು ನೋಡಿದಾಗ ಸಮಾಜದಲ್ಲಿರುವ ವಿವಿಧ ಗುಂಪುಗಳ ನಡುವಿನ ವೈರತ್ವದ ಅಸಂಬದ್ಧತೆಯನ್ನು ತೋರಿಸುತ್ತದೆ.

ವ್ಯಕ್ತಿಯೊಬ್ಬ ಸಮಾಜದಲ್ಲಿರುವ ಗುಂಪೊಂದಕ್ಕೆ ಸೇರಲು ಮಾಡುವ ಪ್ರಯತ್ನಗಳು ಸೋತಾಗ, ಅವನು ಯಾವುದೇ ಗುಂಪಿಗೆ ಸೇರಲು ಸಾಧ್ಯವಾಗದೇ ಹೋದಾಗ, ಅವನ ಸ್ಥಿತಿ ಏನೆಂಬ ಪ್ರಶ್ನೆ ನಮ್ಮ ನಾಗರಿಕತೆಯ ಖಾಲಿತನವನ್ನೇ ಪ್ರಶ್ನಿಸುತ್ತದೆ.

ಬಾಬಿಸ್ ಮಕ್ರಿಡೀಸ್: ಬಾಬಿಸ್‌ರ ಸಿನಿಮಾಗಳು ವ್ಯಕ್ತಿ ಮತ್ತು ಸಮಾಜದ ನಡುವಿನ ಅಮೂರ್ತ ಸಂಬಂಧಗಳ ಕುರಿತು ಮತ್ತು ಬದುಕಿನಲ್ಲಿ ಸಾಮಾನ್ಯವೆಂಬಂತಿರುವ ಅಸಂಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಬಾಬಿಸ್‌ರ ಸಿನಿಮಾ ಶೈಲಿ ಮತ್ತು ವಿನ್ಯಾಸ ಅತಿ ಸರಳ, ಯಾವುದೇ ರೀತಿಯ ಕ್ಯಾಮರಾದ ಚಲನೆಗಳೇ ಇಲ್ಲದೆ ಸೀದಾ ಸಾದಾ ಸ್ಥಿರ ಪೋಟೊಗ್ರಾಫಿಯಂತೆ ದೃಶ್ಯ ಕಟ್ಟುತ್ತಾರೆ.

ಇವರ ಎಲ್ಲ ಸಿನಿಮಾಗಳಲ್ಲೂ ವ್ಯಕ್ತಿ ಸಮಾಜದಿಂದ ಒಪ್ಪಿಗೆ ಪಡೆಯುವ ಚಡಪಡಿಕೆ ಎದ್ದು ಕಾಣುತ್ತದೆ. ಇವರ ದಿ ಲಾಸ್ಟ್ ಫಕೀರ್(2005) ಎಂಬ ಕಿರುಚಿತ್ರ ಭಾರತದ ಜೈಪುರದಲ್ಲಿ ನಡೆಯುವ ಕಥೆ. ಇದರಲ್ಲಿ ಫಕೀರನೊಬ್ಬ ಪ್ರೇಕ್ಷಕರಿಂದ ಪ್ರಶಂಸೆ ಪಡೆಯುವ ಆಸೆಯಿಂದ ಮಾಡುವ ವಿವಿಧ ಪ್ರಯತ್ನಗಳಲ್ಲಿ ಸೋತು, ಕೊನೆಗೆ ಫಕೀರನೇ ಮಾಯವಾಗಿ ಬಿಡುತ್ತಾನೆ.

ಬಾಬಿಸ್ ಮಕ್ರಿಡೀಸ್

ಫಕೀರ ಮತ್ತು ಪ್ರೇಕ್ಷಕರನ್ನು ಸಾಂಕೇತಿಕವಾಗಿ ವ್ಯಕ್ತಿ ಮತ್ತು ಸಮಾಜಕ್ಕೆ ಹೋಲಿಸಿದ್ದಾರೆ. ಕಿರುಚಿತ್ರದಲ್ಲಿ ಮೊದಲಿಗೆ ಗಾಜನ್ನು ಬಾಯಲ್ಲಿ ಅಗಿಯಲು ಪ್ರಯತ್ನಿಸಿ ರಕ್ತಸ್ರಾವವಾಗುತ್ತದೆ. ಮುಳ್ಳಿನ ಹಾಸಿಗೆಯ ಮೇಲೆ ಮಲಗುವುದು, ಮೂರಡಿ ಉದ್ದದ ಖಡ್ಗವೊಂದನ್ನು ಬಾಯಿಂದ ದೇಹದೊಳಗೆ ತೂರಿಸಲು ಪ್ರಯತ್ನಿಸಿ ಖಡ್ಗ ಅಲ್ಲೇ ಸಿಕ್ಕಿಕೊಳ್ಳುತ್ತದೆ. ಕೊನೆಗೆ ನೀರಿನಲ್ಲಿ ಮುಳುಗಿ ಫಕೀರನೇ ಮಾಯವಾಗಿಬಿಡುತ್ತಾನೆ. ಫಕೀರ ಮಾಡುವ ಪ್ರಯತ್ನಗಳು ನಾವು ಸಮಾಜಕ್ಕೆ ಹೊಂದಿಕೊಳ್ಳಲು ಮಾಡುವ ಮದುವೆಯ ಸಂಭ್ರಮ, ಆಚರಣೆಗಳು, ಎಷ್ಟೇ ಒತ್ತಡ ಮತ್ತು ಸಮಗಳಿದ್ದರೂ ಬೇರೆಯವರಿಗೆ ಹೆದರಿ ಸಮಸ್ಯೆಗಳಿಗೆ ಸಿಕ್ಕಿಕೊಳ್ಳುವುದನ್ನು ಮಾರ್ಮಿಕವಾಗಿ ಹೇಳುತ್ತದೆ.

ಇದೇ ವಿನ್ಯಾಸ ಎಲ್ ಮತ್ತು ಪಿಟಿ ಸಿನಿಮಾಗಳಲ್ಲೂ ಕಾಣಬಹುದು. ಸಂದರ್ಶನವೊಂದರಲ್ಲಿ ನಿರ್ದೇಶಕರು ಹೇಳುವಂತೆ, ಅವರು ಮಾಡುವ ಸಿನಿಮಾಗಳು ಎಲ್ಲರಿಗೂ ಒಂದೇ ರೀತಿ ಕಂಡರೆ ಅದು ಕಲೆ ಅಲ್ಲ ಬದಲಾಗಿ ಅವರ ಸಿನಿಮಾವನ್ನು ಪ್ರೇಕ್ಷಕ ವಿವಿಧ ರೀತಿಗಳಲ್ಲಿ ವ್ಯಾಖ್ಯಾನಿಸುತ್ತಾ ಅವರವರ ಬದುಕುಗಳ ಮತ್ತು ಸಮಾಜದ ಕುರಿತು ಆಲೋಚನೆಗಳಿಗೆ ಮುಖಾಮುಖಿಯಾಗಬೇಕು ಮತ್ತು ಪ್ರಶ್ನೆಗಳನ್ನು ಎತ್ತುವಂತಾಗಬೇಕು ಎನ್ನುತ್ತಾರೆ.

ಪಿಟಿ ಸಿನಿಮಾದಲ್ಲಿ ದುಃಖವನ್ನೇ ವ್ಯಕ್ತಿಯೊಬ್ಬ ವ್ಯಸನದಂತೆ ಅನುಭವಿಸುವುದನ್ನು ಸ್ಥಿರ ಚಿತ್ರಕ್ಕೆ ಜೋರಾದ ಒಪೆರಾ ಸಂಗೀತವನ್ನು ಬಳಸುವುದು ನಿರ್ದೇಶಕರ ಸಿನಿಮಾ ನೈಪುಣ್ಯತೆಯನ್ನು ತೋರಿಸುತ್ತದೆ.

ಬಾಬಿಸ್‌ರ ಸಿನಿಮಾಗಳು ಅಮೂರ್ತ ಮತ್ತು ಅಸಂಬದ್ಧವಾಗಿವೆ ಅನ್ನಿಸುವುದು ನಿಜ. ಇವುಗಳ ಕುರಿತು ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಮಾಡುವ ಮೊದಲು ಪಾತ್ರಗಳು ಅನುಭವಿಸುವ ಭಾವನೆಗಳು ಪ್ರೇಕ್ಷಕನಿಗೆ ಮುಟ್ಟಿದರೆ ಸಾಕೆನ್ನುವುದು ನಿರ್ದೇಶಕರ ಆಶಯ. ಗ್ರೀಕ್ ವಿಲಕ್ಷಣ ಸಿನಿಮಾ ಅಲೆಯನ್ನು ಮುಂದುವರೆಸುತ್ತಿರುವವರಲ್ಲಿ ಬಾಬಿಸ್ ಕೂಡ ಪ್ರಮುಖರು.


ಇದನ್ನೂ ಓದಿ: ಪಿಕೆ ಟಾಕೀಸ್: ಗ್ರೀಕ್ ವಿಲಕ್ಷಣ ಅಲೆಯ ಸಿನಿಮಾಗಳ ಪ್ರವರ್ತಕಿ ಅಥಿನಾ ರೇಚಲ್ ಸಂಗಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...