“ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಾದ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರ ಜನ್ಮದಿನದ ಪ್ರಯುಕ್ತ (ಫೆಬ್ರವರಿ 13) ಅವರ ಆಶಯದಂತೆ ರೈತರ ಹಕ್ಕುಗಳನ್ನು ಎತ್ತಿಹಿಡಿದು, ಪ್ರಗತಿಪರ, ನ್ಯಾಯಸಮ್ಮತ ಮತ್ತು ನ್ಯಾಯಯುತ ಸಮಾಜದ ನಿರ್ಮಾಣಕ್ಕಾಗಿ ಈ ಹೋರಾಟವನ್ನು ಇನ್ನಷ್ಟು ಮುಂದೆ ಸಾಗಿಸುವ ಕೆಲಸವನ್ನು ಮಾಡುತ್ತೇವೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ಪುನರುಚ್ಚರಿಸಿದೆ.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಮತ್ತು ಕನಿಷ್ಟ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಲಕ್ಷಾಂತರ ರೈತರು ನಡೆಸುತ್ತಿರುವ ಪ್ರತಿಭಟನೆ 80ನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ SKM, “ದೇಶದೆಲ್ಲೆಡೆ ಪ್ರಬಲವಾಗಿ ನಡೆಯುತ್ತಿರುವ ರೈತ ಮಹಾಪಂಚಾಯತ್‌ಗಳು ರೈತರ ಹೋರಾಟಕ್ಕೆ ಭಾರೀ ಪ್ರಮಾಣದ ಬೆಂಬಲವನ್ನು ನೀಡುತ್ತಿವೆ. ಇಂದು ಬಿಲಾರಿ ಮತ್ತು ಬಹದ್ದೂರ್‌ಗಡ್‌ನಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು” ಎಂದು ಹೇಳಿದೆ.
ಇದನ್ನೂ ಓದಿ: ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!
“ಆಹಾರದ ಹೆಸರಿನಲ್ಲಿ ಮತ್ತು ರೈತರ ಹಣದಲ್ಲಿ ಕಾರ್ಪೊರೇಟ್‌ಗಳು ಲಾಭ ಗಳಿಸಲು ಅವಕಾಶ ನೀಡುವುದಿಲ್ಲ. ಹಸಿವು ವ್ಯಾಪಾರವಲ್ಲ. ಹೀಗೆ ಯೋಚಿಸುವ ಸರ್ಕಾರಗಳು ಮತ್ತು ಕಾರ್ಪೊರೇಟ್‌ಗಳಿಗೆ ಇದು ಅವಮಾನ” ಎಂದು ಮಹಾಪಂಚಾಯತ್‌ನಲ್ಲಿ SKM ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು.
“ಈವರೆಗೆ 228 ಪ್ರತಿಭಟನಾಕಾರರು ತಮ್ಮ ಪ್ರಾಣ ತ್ಯಾಗ ಮಾಡಿ ಈ ಆಂದೋಲನದಲ್ಲಿ ಹುತಾತ್ಮರಾಗಿದ್ದಾರೆ. ಈ ಹುತಾತ್ಮರ ಕುಟುಂಬಗಳಿಗೆ ಬೆಂಬಲವನ್ನು ನೀಡುವ ಯಾವುದೇ ಯೋಜನೆಯೂ ಇಲ್ಲ ಎಂದು ಸರ್ಕಾರವು ಸಂಸತ್ತಿನಲ್ಲಿ ಒಪ್ಪಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಹುತಾತ್ಮರಾದ ಜೀವಗಳಿಗೆ ಸರ್ಕಾರವನ್ನೇ ದೂಷಿಸಬೇಕಾಗಿದೆ. ಪ್ರತಿಭಟನಾಕಾರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಒಪ್ಪುವುದಕ್ಕೆ ಇನ್ನೂ ಎಷ್ಟು ಜೀವಗಳನ್ನು ತ್ಯಾಗ ಮಾಡಬೇಕು. ನಾವು ಸರ್ಕಾರದ ಅಸೂಕ್ಷ್ಮತೆಯನ್ನು ಖಂಡಿಸುತ್ತೇವೆ” ಎಂದು SKM ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬ್ಯಾರಿಕೇಡ್‌ಗಳನ್ನು ತೆಗೆಯಿರಿ, ಬಂಧಿಸಿರುವ ರೈತರನ್ನು ಬಿಡುಗಡೆಗೊಳಿಸಿ: ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗ
“ಬಲಗೊಳ್ಳುತ್ತಿರುವ ಚಳವಳಿಯನ್ನು ಕಂಡು ಸರ್ಕಾರ ಹೆದರುತ್ತಿದೆ. ಹಾಗಾಗಿ ನಾಗರೀಕರ ಮತ್ತು ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಚಳವಳಿಯ ತೀವ್ರತೆಗೆ ಬೆಂಬಲವಾಗಿ ನಿಂತಿರುವ ಮಾಧ್ಯಮಗಳ ಮೇಲೆ ಸರ್ಕಾರ ನಿರಂತರವಾಗಿ ದಾಳಿ ಮಾಡುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ನ್ಯೂಸ್ ಕ್ಲಿಕ್ ಮೇಲೆ ನಡೆದ ದಾಳಿಯಾಗಿದೆ. ಇದನ್ನು SKM ಖಂಡಿಸುತ್ತದೆ” ಎಂದು ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
“ಬಿಜೆಪಿ ಸರ್ಕಾರದ ಹುಸಿ ರಾಷ್ಟ್ರೀಯತೆಯನ್ನು ಬಹಿರಂಗಪಡಿಸಲು ಮತ್ತು ಮಾಧ್ಯಮ ಮಿತ್ರರಿಬ್ಬರ ವಾಟ್ಸಾಪ್ ಚಾಟ್‌ನಿಂದ ಸೋರಿಕೆಯಾದ ರಕ್ಷಣಾ ರಹಸ್ಯಗಳ ಹಿನ್ನೆಲೆಯಲ್ಲಿ ಹಾಗೂ ಗಡಿಗಳಲ್ಲಿ ನಿಂತು ನಮ್ಮೆಲ್ಲರನ್ನೂ ರಕ್ಷಿಸುತ್ತಿರುವ ನಮ್ಮ ಸೈನಿಕರನ್ನು ನಾವು ನಿಜವಾಗಿಯೂ ಗೌರವಿಸುತ್ತೇವೆ ಎಂಬುದನ್ನು ತೋರಿಸಲು ಫೆಬ್ರವರಿ 14 ರಂದು ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದೇವೆ. ಟಾರ್ಚ್ ಲೈಟ್ ಮತ್ತು ಕ್ಯಾಂಡಲ್ ಲೈಟ್ ಮೆರವಣಿಗೆಯನ್ನು ದೇಶದಾದ್ಯಂತ ಪ್ರತಿ ನಗರ ಮತ್ತು ಹಳ್ಳಿಗಳಲ್ಲಿಯೂ ಆಯೋಜಿಸಲಾಗುವುದು. ಈ ಮೂಲಕ ಚಳವಳಿಯಲ್ಲಿ ಹುತಾತ್ಮರಾದ ರೈತರಿಗೆ ಗೌರವ ಸಲ್ಲಿಸಲಾಗುವುದು. ರೈತರ ಚಳವಳಿಯ ಧ್ಯೇಯವಾಕ್ಯವಾದ ಜೈ ಜವಾನ್-ಜೈಕಿಸಾನ್ ಘೋಷಣೆಯನ್ನು ಪುನರುಚ್ಚರಿಸಲಾಗುವುದು” ಎಂದು SKM ತೀರ್ಮಾನಿಸಿದೆ.
ಇದನ್ನೂ ಓದಿ: ನಮ್ಮ ಅನ್ನದಾತರ ಹೋರಾಟಕ್ಕೆ ಜಯವಾಗಲಿ: ತಿಂಗಳ ಹಿಂದಿನ ನಾಸಿರುದ್ದೀನ್ ಶಾ ವಿಡಿಯೋ ವೈರಲ್


