ರೈತರನ್ನು ಬೆಂಬಲಿಸಿ ಗ್ರೇಟಾ ಥನ್‌ಬರ್ಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಟೂಲ್‌ಕಿಟ್ ಅನ್ನು ತಯಾರಿಸಿದ್ದಾರೆ ಎಂಬ ಆರೋಪದಲ್ಲಿ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ ದಿಶಾ ರವಿ ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದರು. ದೆಹಲಿ ಪೊಲೀಸರ ಈ ಕ್ರಮವನ್ನು ’ಮೌಂಟ್ ಕಾರ್ಮೆಲ್ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ’ ಖಂಡಿಸಿದ್ದು, ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.
ಹಳೆಯ ವಿದ್ಯಾರ್ಥಿ ಸಂಘವು ತನ್ನ ಪ್ರಕಟಣೆಯಲ್ಲಿ, “ರೈತ ಹೋರಾಟವನ್ನು ಬೆಂಬಲಿಸುವ ಯುವ ಪ್ರಜೆಯನ್ನು ನಿರ್ದಾಕ್ಷಿಣ್ಯವಾಗಿ ಗುರಿಪಡಿಸುವುದು ಭಯಾನಕ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ದೆಹಲಿ ಪೊಲೀಸರು ಅವರನ್ನು ಬಿಡುಗಡೆ ಮಾಡಬೇಕು. ರಾಜ್ಯದ ಮಹಿಳೆಯ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಬೆಂಗಳೂರು ಪೊಲೀಸರು ಮತ್ತು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದಿಶಾ ಬಂಧನಕ್ಕೂ ಮುನ್ನ ಬೆಂಗಳೂರು ಪೊಲೀಸರಿಗೆ ಮಾಹಿತಿಯೇ ಇಲ್ಲ: ಇದೆಂಥ ಒಕ್ಕೂಟ ವ್ಯವಸ್ಥೆ?
“ದಿಶಾ ರವಿ ಅತ್ಯುತ್ತಮವಾದ ಕಾರ್ಯವನ್ನು ಮಾಡುತ್ತಿದ್ದು, ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ತನ್ನ ಕ್ರಿಯಾಶೀಲತೆಯ ಮೂಲಕ ಭಾರತದ ಪ್ರಜೆಯಾಗಿ ನಿಜಕ್ಕೂ ಪ್ರಪಂಚದ ಕರ್ತವ್ಯಗಳನ್ನು ಪೂರೈಸುತ್ತಿದ್ದಾರೆ. ಫ್ರೈಡೇಸ್ ಫಾರ್ ಫ್ಯೂಚರ್ ಇನ್ ಇಂಡಿಯಾದ ಸಹ-ಸಂಸ್ಥಾಪಕರಾಗಿ, ರಾಜಕಾರಣಿಗಳು ಮತ್ತು ಸರ್ಕಾರಗಳು ಜನತ್ತಿನ ವಾತಾವರಣ ಹಾಳಾಗದಂತೆ ತಡೆಯುವ ಕ್ರಮಗಳನ್ನು ಕೈಗೊಳ್ಳಲು ವಿಶ್ವದಾದ್ಯಂತದ ಹವಾಮಾನ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿದ್ದಾರೆ” ಎಂದು ಹೇಳಿದ್ದಾರೆ.
“ನಮಗೆಲ್ಲರಿಗೂ ತಿಳಿದಿರುವಂತೆ, ಹವಾಮಾನ ಬದಲಾವಣೆಯ ಭೀಕರ ಪರಿಣಾಮವನ್ನು ನಿರ್ಲಕ್ಷಿಸಲಾಗುವುದಿಲ್ಲ. ಉತ್ತರಾಖಂಡದಲ್ಲಿ ನಡೆಯುತ್ತಿರುವ ಅನಾಹುತ ಕೂಡಾ ಹವಮಾನ ವೈಪರೀತ್ಯದಿಂದಾಗಿಯೇ ಆಗಿದೆ. ಇದನ್ನು ದಿಶಾ ರವಿ ಸಾರ್ವಜನಿಕರ ಗಮನಕ್ಕೆ ತರಲು ಕೆಲಸ ಮಾಡಿದ್ದಾರೆ” ಎಂದು ಸಂಘವು ಹೇಳಿದೆ.
“ದಿಶಾ ರವಿಯ ಇತಿಹಾಸದ ಪ್ರಜ್ಞೆಯು ಗಮನಾರ್ಹವಾಗಿದೆ. ಅವರು ಸ್ವಾತಂತ್ರ್ಯ ಸಂಗ್ರಾಮದಿಂದ ಸ್ಪೂರ್ತಿ ಪಡೆದಿದ್ದಾರೆ. ತನ್ನ ಕೆಲಸದ ಮೂಲಕ ದಿಶಾ ಅನುಕರಣೀಯ ವ್ಯಕ್ತಿಯಾಗಿ ನಿಂತಿದ್ದಾರೆ. ಈ ಸಮಯದಲ್ಲಿ ನಾವು ಅವರ ಮತ್ತು ಅವರ ಕುಟುಂಬಕ್ಕೆ ಬೇಷರತ್ತಾಗಿ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ. ಅಲ್ಲದೆ ಹವಾಮಾನ ಬದಲಾವಣೆ ಹೋರಾಟದಲ್ಲಿ ಅವರು ಕೈಗೊಂಡ ಕಾರ್ಯದ ಬಗ್ಗೆ ಹೆಮ್ಮೆ ಪಡುತ್ತೇವೆ” ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಹೇಳಿದೆ.
ಸಂಘದ ಹೇಳಿಕೆಗೆ ನೂರಾರು ಹಳೆ ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ. ಹೇಳಿಕೆಯ ಪೂರ್ಣ ಪಾಠಕ್ಕೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಬೆಂಗಳೂರಿನಲ್ಲಿ ದಿಶಾ ರವಿ ಸ್ಥಾಪಿಸಿರುವ ‘Fridays For Future’ ಸಂಸ್ಥೆಯ ಬಗ್ಗೆ ಗೊತ್ತೆ?


