ಗುಡ್ಡ ಕರಗಿಸುವವರ ಹಾವಳಿ ಕಳೆದ 40 ವರ್ಷಗಳಿಂದಲೂ ನಡೆಯುತ್ತಿದೆ. ಕಲ್ಲುಬಂಡೆ ಡಿ.ಕೆ. ಶಿವಕುಮಾರ್ ಅವರ ತಮ್ಮ ಎಂಪಿ. ಡಿ.ಕೆ. ಸುರೇಶ್, ಮಾಲೂರು ಶಾಸಕ ನಂಜೇಗೌಡ, ಮೇಲುಕೋಟೆ ಶಾಸಕ ಪುಟ್ಟರಾಜು, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರ ಮಗ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಬೆಳಗಾವಿಯ ಶಾಸಕ ಸತೀಶ್ ಜಾರಕಿಹೊಳಿ, ಶಾಸಕ ಅಮರೇಗೌಡ, ಬೈಯ್ಯಾಪುರದಲ್ಲಿ ಅವರ ಅಣ್ಣನ ಮಗ ಶರಣಗೌಡ ಪಾಟೀಲ್, ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಮಗ ಅಮರೇಶ್ ಕರಡಿ ಶಾಸಕ ಹಾಲಪ್ಪ ಆಚಾರ್, ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಲ್ಲು ಕರಗಿಸುವ ಗುತ್ತಿಗೆ ಪಡೆದಿದ್ದಾರೆ. ಇವರೆಲ್ಲಾ ಭೂ ವಿಜ್ಞಾನ ನಿರ್ದೇಶಕರಿಂದ ಪರವಾನಗಿ ಪಡೆದು ಗುಡ್ಡ ಕರಗಿಸುವವರು. ಅಕ್ರಮವಾಗಿ ಬೆಟ್ಟಗಳನ್ನು ಕರಗಿಸುವವರ ವಿರುದ್ಧ ನ್ಯಾಯಾಲಯಕ್ಕೆ 2015-2020ರವರೆಗೆ 9076 ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಲ್ಲು ತೆಗೆಯುತ್ತಿರುವ ಕ್ವಾರಿಗಳ ಸಂಖ್ಯೆ 150. ಅವುಗಳಲ್ಲಿ ಅಕ್ರಮವಾಗಿ ದೋಚುತ್ತಿರುವುದು 73 ಕ್ವಾರಿಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 120 ಕ್ವಾರಿಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸ್ಥಳೀಯ ರಾಜಕಾರಣಿಗಳಲ್ಲದೇ ಹೊರ ಜಿಲ್ಲೆಗಳ ರಾಜಕಾರಣಿಗಳು ಇದ್ದಾರೆ. ಅಕ್ರಮ ಗಣಿಗಾರಿಕೆ ತಡೆಗಟ್ಟುವೆನೆಂದು ಗಣಿ ಮಂತ್ರಿ ಗುಡುಗುತ್ತಾರೆ. ಬೇಲಿಯೇ ಎದ್ದು ಹೊಲ ಮೇಯುವಾಗ ಪುಂಡ ಹಸುಗಳು ಹೊಲಕ್ಕೆ ನುಗ್ಗದೇ ಇರುತ್ತವೆಯೇ? ಶಾಸಕರೇ ಭ್ರಷ್ಟರಾದ ಮೇಲೆ ಇನ್ನು ದುರುಳ ಕಲ್ಲು ಉದ್ಯಮಿಗಳ ಭ್ರಷ್ಟಾಚಾರವನ್ನು ತಡೆಗಟ್ಟುವವರು ಯಾರು?

ಯಡಿಯೂರಪ್ಪನವರಿಗೆ ತಮ್ಮ ಸುತ್ತ ಇರುವ ಭ್ರಷ್ಟರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವೇ? ಆ ಜನರ ನೆರವಿನಿಂದ ಅವರ ಸಿಂಹಾಸನ ಉಳಿದಿದೆ. ಅವರನ್ನು ಎದುರುಹಾಕಿಕೊಂಡರೆ ಅವರಿಗೆ ಉಳಿಗಾಲವಿದೆಯೇ? ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಬಿಡುತ್ತಾರಾ?

ಶಾಸಕರಿಗೂ, ಮಂತ್ರಿಗಳಿಗೂ, ಅಧಿಕಾರಿಗಳಿಗೂ ಒಂದು ಸಂದೇಶ ಕೊಡಲು ಬಯಸುತ್ತೇನೆ. ಗಾಂಧೀಜಿ ಎಚ್ಚರಿಸಿದಂತೆ ಪ್ರಕೃತಿ ಮಾನವನ ಆಸೆಯನ್ನು ಸಹಿಸಬಲ್ಲದು. ದುರಾಸೆಯನ್ನು ಸಹಿಸಲು ಸಾಧ್ಯವೇ? ನೀವೆಲ್ಲಾ ದುರಾಸೆಯನ್ನು ಸಹಿಸಿಕೊಂಡಿದ್ದೀರಿ. ಪ್ರಕೃತಿ ಬೆಟ್ಟ ಗುಡ್ಡಗಳನ್ನು ಸೃಷ್ಟಿ ಮಾಡಿದೆ. ಅರಣ್ಯ ಸೃಷ್ಟಿ ಮಾಡಿದೆ. ಖನಿಜಗಳನ್ನು ಭೂಗರ್ಭದಲ್ಲಿ ಅಡಗಿಸಿಟ್ಟಿದೆ. ಅದು ಮುಗಿದರೆ ಮತ್ತೆ ಉತ್ಪತ್ತಿಯಾಗದು. ಸಮುದ್ರದಲ್ಲಿ ಹವಳ ಮುಂತಾದ ಬೆಲೆಬಾಳುವ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಮುತ್ತು ರತ್ನಗಳನ್ನು ಹುದುಗಿಸಿಟ್ಟ ಪಶ್ಚಿಮ ಘಟ್ಟಗಳಂತಹ ಬೃಹದಾಕಾರದ ಅರಣ್ಯಗಳಿವೆ. ಕಪ್ಪತಗುಡ್ಡದಲ್ಲಿ ಬಂಗಾರ ಇದೆ ಎಂದು ಅದನ್ನು ಆಕ್ರಮಣ ಮಾಡಲು ಹೊಂಚುಹಾಕುತ್ತಿರುವ ಪಟ್ಟಭದ್ರರು ಇದ್ದಾರೆ.

PC : News Express

ಭಾರತದಲ್ಲಿ ದೊರೆಯುವ ಎಲ್ಲಾ ಖನಿಜಗಳನ್ನು ಬಗೆದು ದೋಚಬೇಕೆಂಬ, ಬೆಟ್ಟಗಳನ್ನೆಲ್ಲಾ ತಮ್ಮ ತಲೆಮಾರಿನಲ್ಲೇ ಕರಗಿಸಿ ತಮ್ಮ ತಿಜೋರಿ ತುಂಬಿಕೊಳ್ಳಲು, ಅರಣ್ಯವನ್ನೆಲ್ಲಾ ಕೊಳ್ಳೆ ಹೊಡೆದು ಬರಿದಾಗಿಸಬೇಕೆಂಬ ದುರಾತ್ಮರ ಮತ್ತು ಸಮುದ್ರದ ಆದಳದಲ್ಲಿರುವ ಪೆಟ್ರೋಲಿಯಂ, ಹವಳ ಮತ್ತು ಮುತ್ತುಗಳನ್ನು ದೋಚಬೇಕೆಂದಿರುವ ಕಾರ್ಪೋರೇಟ್ ಕುಳಗಳದ್ದು ಒಂದೇ ಸಂಕಲ್ಪ. ಅದೇನೆಂದರೆ ನಮ್ಮ ತಲೆಮಾರಿನಲ್ಲೇ ಈ ಎಲ್ಲವನ್ನೂ ದೋಚಿ ಮುಂದಿನ ತಲೆಮಾರಿಗೆ ಅವು ಯಾವುದೂ ಲಭ್ಯವಾಗದಂತೆ ಮಾಡುವ ಮ್ಯಾಡ್ ರೇಸ್‌ನಲ್ಲಿ ಮುಳುಗುವುದು. ಇವರಿಗೆಲ್ಲಾ ದುಡ್ಡೇ ಆರಾಧ್ಯ ದೈವ. ದುಡ್ಡಿಗಾಗಿ ಇವರು ಎಂತಹ ಪಾತಕ ಮಾಡಲು ಹೇಸುವವರಲ್ಲ.

ನಮ್ಮ ಸರ್ಕಾರಗಳು ಈ ದೋಚುವ ಜನರಿಗೆ ಪೂರ್ಣ ಸಹಕಾರ ಕೊಡುತ್ತದೆ. 32% ಅರಣ್ಯ ಇರಬೇಕೆಂಬ ಕಾಳಜಿ ಸರ್ಕಾರಕ್ಕಿಲ್ಲ. ಅದು ಈಗ 13% ಇಳಿದಿರಬಹುದು. ಆನೆ, ಹುಲಿ, ಕರಡಿ, ತೋಳಗಳಿಗೆ ಕಾಡು ಕಿರಿದಾಗುತ್ತಿರುವುದರಿಂದ ನೆಲೆತಪ್ಪಿ ಆಹಾರ, ನೀರು, ಅಭಾವ ಕಾಣಿಸಿರುವುದರಿಂದ ಅವು ಈಗ ಕಾಡು ಬಿಟ್ಟು ನಾಡಿಗೆ ಅಧಿಕ ಸಂಖ್ಯೆಯಲ್ಲಿ ವಲಸೆ ಬರುತ್ತಿವೆ. ನಾಡಿನಲ್ಲಿ ವಾಸಿಸುವ ಜನಕ್ಕೆ ನೆಮ್ಮದಿ ತಪ್ಪಿದೆ. ಕಾಡುಪ್ರಾಣಿಗಳ ಭಯ ಕಾಡುತ್ತಿದೆ. ಅರಣ್ಯವಾಸಿ ಹುಲಿ, ಚಿರತೆಗಳೊಡನೆ ಅನಿವಾರ್ಯವಾಗಿ ಸಹಬಾಳ್ವೆ ಮಾಡುವ ಅನಿವಾರ್ಯತೆ ಉಂಟಾಗಿದೆ. ಸರ್ಕಾರಕ್ಕೆ, ಖನಿಜ ಇಲಾಖೆಯ ಅಧಿಕಾರಿಗಳಿಗೆ ಚಿನ್ನವಾಗಲಿ, ಬೆಳ್ಳಿಯಾಗಲಿ, ತಾಮ್ರವಾಗಲಿ, ಕಬ್ಬಿಣವಾಗಲಿ, ಮ್ಯಾಂಗನೀಸ್ ಆಗಲಿ, ಬೆಟ್ಟದ ಕಲ್ಲುಗಳಾಗಲಿ ಅವು ಉತ್ಪತ್ತಿಯಾಗುವುದಕ್ಕೆ ನೂರರಿಂದ ಐನೂರು ವರ್ಷಗಳು ಬೇಕಾಗುತ್ತದೆ ಎಂಬ ಪರಿಜ್ಞಾನವಿಲ್ಲ.

ಈ ಖನಿಜಗಳು ಬರಿದಾಗುವುದಕ್ಕೆ ಬಿಡದೇ ನಮ್ಮ ತಲೆಮಾರಿನಲ್ಲಿ ಇಂತಿಷ್ಟು ಮಾತ್ರ ತೆಗೆಯಲು ಶಾಸನ ಮಾಡಬೇಕು. ಉಳಿದ ಖನಿಜಗಳನ್ನು ಮುಂದಿನ ತಲೆಮಾರಿನ ಜನರಿಗಾಗಿ ಮೀಸಲಿಡಬೇಕು. ಅದು ಸರ್ಕಾರದ ಧರ್ಮ.ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು. ನ್ಯಾಯದ ದೃಷ್ಟಿಯಿಂದ ನೋಡಿದರೆ ಈ ಎಲ್ಲಾ ಪ್ರಕೃತಿ ಸಂಪತ್ತನ್ನು ಸೃಷ್ಟಿಕರ್ತ ತಾನು ಸೃಷ್ಟಿಸಿದ ಎಲ್ಲಾ ಮನುಷ್ಯರಿಗೆ ದೊರೆಯುವಂತಾಗಲಿ ಎಂದು ಬಗೆದಿದ್ದ. ಅನೀತಿಯುತ ಸರ್ಕಾರಗಳು ದೋಚುವ ಮಹಾನುಭಾವರ ಪರವಾಗಿ ನಿಂತು, ಜನರಿಗೆ ಅವುಗಳು ದೊರೆಯದಂತೆ ವಂಚನೆ ಮಾಡುತ್ತಿವೆ. ಪ್ರಕೃತಿ ಸಂಪತ್ತು ಎಲ್ಲರಿಗೂ ಸುಲಭ ಬೆಲೆಯಲ್ಲಿ ದೊರೆಯುವಂತಾಗಬೇಕಾದರೆ ಪ್ರಕೃತಿ ನೀಡಿರುವ ಎಲ್ಲಾ ಸಂಪತ್ತನ್ನು ರಾಷ್ಟ್ರೀಕರಣ ಮಾಡಬೇಕು. ಸರ್ಕಾರ ಈಗಲಾದರೂ ಪ್ರಕೃತಿ ಸಂಪತ್ತಿಗೆ ಪ್ರಜೆಗಳು ಒಡೆಯರು ಎಂದು ಘೋಷಿಸಲಿ.


ಇದನ್ನೂ ಓದಿ: ನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಎಚ್.ಎಸ್ ದೊರೆಸ್ವಾಮಿ
+ posts

LEAVE A REPLY

Please enter your comment!
Please enter your name here