Homeಅಂಕಣಗಳುನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ

ನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ

- Advertisement -
- Advertisement -

ಇಂದು ಸರ್ಕಾರಕ್ಕೆ ಸವಾಲಾಗಿರುವ, ಪ್ರಮುಖವಾಗಿ ಪಂಜಾಬ್, ಹರಿಯಾಣಗಳ ಮತ್ತು ದೇಶದೆಲ್ಲೆಡೆಯಿಂದ ಸೇರಿಕೊಳ್ಳುತ್ತಿರುವ ರೈತರ ಚಳವಳಿ ಭಾರತದಲ್ಲಿ ನಡೆಯುತ್ತಿರುವ ಎಲ್ಲ ಚಳವಳಿಗಿಂತ ಭಿನ್ನವಾದುದು ಮತ್ತು ಗಾಂಧಿಯವರ ಸತ್ಯಾಗ್ರಹದಷ್ಟೇ ಪರಿಣಾಮಕಾರಿಯಾದುದು. ಅಹಿಂಸೆಯ ಪ್ರಯೋಗ ಶಾಲೆಯಂತಿದೆ ರೈತ ಹೋರಾಟ.

ಉತ್ತರಕನ್ನಡ ಜಿಲ್ಲೆಯಲ್ಲಿ ನಾಡವ ಜನರು ನಡೆಸಿದ ಕರನಿರಾಕಣೆ ಸತ್ಯಾಗ್ರಹವನ್ನು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಸತ್ಯಾಗ್ರಹ ನೆನಪಿಗೆ ತರುತ್ತದೆ.

ಬ್ರಿಟಿಷರ ಕಾಲದಲ್ಲಿ ರೈತರನ್ನು, ಕಾರ್ಮಿಕರನ್ನು ಕಾಲ ಕೆಳಗಿನ ಕಸವಾಗಿ ಆಡಳಿತ ನಡೆಸುವವರು ಕಾಣುತ್ತಿದ್ದರು. ಕಮ್ಯುನಿಸ್ಟರು ಕಾರ್ಮಿಕ ಸಂಘಟನೆಗೆ ಗಮನ ಕೊಟ್ಟರು ಕಾರ್ಮಿಕರ ಹಕ್ಕು ಬಾಧ್ಯತೆಗಾಗಿ ಹೋರಾಟಗಳನ್ನು ನಡೆಸಿದರು, ಅವರು ಹಿಂಸೆ-ಅಹಿಂಸೆ ಇವೆಲ್ಲದರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಆಕ್ರಮಣಕಾರಿ ಕಾರ್ಮಿಕ ಸಂಘಟನೆಗಳನ್ನು ಕಟ್ಟಿದರು. ಹೋರಾಟ ನಡೆಸಿದ ಸಂದರ್ಭದಲ್ಲಿ ಹಿಂಸೆ, ಪ್ರತಿಹಿಂಸೆ, ಗೋಲಿಬಾರ್ ಎಲ್ಲವೂ ಸಾಂಗವಾಗಿ ನಡೆದವು. ಮಿಲ್ಲು ಕಾರ್ಖಾನೆಗಳ ಮಾಲೀಕರ ಅವರ ಹತ್ತಿರದ ಅಧಿಕಾರಿಗಳ ಕೊಲೆಗಳು ನಡೆದು ಹೋದವು. ಬಂಡವಾಳಶಾಹಿಗಳು ದಬ್ಬಾಳಿಕೆಯನ್ನು ಮುಂದುವರೆಸಲು ಇನ್ನು ಸಾಧ್ಯವಿಲ್ಲವೆಂದು ಅರಿತರು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಅನಿವಾರ್ಯತೆ ನಿಧಾನವಾಗಿ ಉಂಟಾಯಿತು. ಬ್ರಿಟಿಷ್ ಸರ್ಕಾರಕ್ಕೂ ಕೂಡ ಮುಂದೆ ಕಾರ್ಮಿಕರ ಹಿತರಕ್ಷಣೆಯ ಕಾಯ್ದೆಗಳನ್ನು ರಚಿಸುವುದು ಅನಿವಾರ್ಯವಾಯಿತು.

ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಒಂದೇ ಕಡೆ ಇದ್ದದ್ದರಿಂದ ಅವರನ್ನು ಸಂಘಟಿಸುವುದು ಸುಲಭವಾಯಿತು. ಭಾರತದ ನಾನಾ ಹಳ್ಳಿಗಳಲ್ಲಿ ರೈತರು ಚದುರಿಹೋಗಿದ್ದರಿಂದ ಅವರ ಸಂಘಟನೆ ಯಶಸ್ವಿಯಾಗಲಿಲ್ಲ. ರೈತರ ಶೋಷಣೆ ಮುಂದುವರೆಯಿತು. ಕಮ್ಯುನಿಸ್ಟರು ರೈತರ ಸಂಘಟನೆಗೂ ಕೈ ಹಾಕಿದರಾದರೂ ಅದು ಫಲ ಕೊಡಲಿಲ್ಲ. ಸ್ವಾತಂತ್ರ್ಯ ಪ್ರಾಪ್ತವಾಗುವವರೆಗೂ ರೈತರ ಈ ಬವಣೆ ಮುಂದುವರೆಯಿತು. ಸ್ವಾತಂತ್ರ್ಯ ಪ್ರಾಪ್ತವಾದ ಎಷ್ಟೋ ವರ್ಷಗಳ ನಂತರ ರೈತಸಂಘಗಳು ತಲೆ ಎತ್ತಿದವು. ಅವು ತಮ್ಮ ಇತಿಮಿತಿಯಲ್ಲಿ ರೈತರ ಶೋಷಣೆಯನ್ನು ತಡೆಗಟ್ಟಿದವು. ಈಗ ಪಂಜಾಬ್ ಮತ್ತು ಹರ್ಯಾಣ ರೈತರ ಸಂಘಟನೆಗಳ ಮುಂದಾಳತ್ವದಲ್ಲಿ ರೈತರು ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಡ ತರುವಷ್ಟು ಶಕ್ತಿಯುತವಾದ ಸಂಘಟನೆಯನ್ನು ರೂಪಿಸಿಕೊಂಡಿದ್ದಾರೆ. ಇದು ಒಂದು ವಿಸ್ಮಯಕರವಾದ ಬೆಳವಣಿಗೆ.

ಈಗ ಸರ್ಕಾರ ಈ ಸವಾಲನ್ನು ಎದುರಿಸಬೇಕಾದ ದುಸ್ಥಿತಿಗೆ ತಲುಪಿದೆ. ಸರ್ಕಾರ ಇದನ್ನು ತನ್ನ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿದೆ. ಅದ್ದರಿಂದ ಹೋರಾಟಕ್ಕಾಗಿ ಸುಮಾರು 60 ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಈ 30 ಸಾವಿರ ರೈತರನ್ನು tire out ಮಾಡುವುದು ಹೇಗೆ ಎಂದು ಸರ್ಕಾರ ತಂತ್ರ ಹೊಸೆಯುತ್ತಿದೆ. ರೈತ ಸಂಘಟನೆಗೆ ಸರ್ಕಾರದ ಆಲೋಚನೆಯ ಅರಿವಿದೆ. ಈ ಕಾನೂನುಗಳಿಂದ ಇದುವರೆಗೆ ತಾನು ಬೆಳೆದ ಬೆಳೆಗೆ ನಿಖರವಾದ ಆದಾಯ ದೊರೆಯುತ್ತದೆ, ಬೆಂಬಲ ಬೆಲೆ ದೊರೆಯುತ್ತದೆ ಎಂಬ ಭರವಸೆಯನ್ನು ಸರ್ಕಾರ ನೀಡುತ್ತಿದೆ. ಆದರೆ ಸರ್ಕಾರ ಎಲ್ಲಿ ತಮ್ಮನ್ನು ಅದಾನಿ, ಅಂಬಾನಿಗಳ ಅಧೀನರನ್ನಾಗಿ ಮಾಡಿಬಿಡುವುದೋ ಎಂಬ ಭಯ ರೈತರದ್ದು.

ಸರ್ವೋಚ್ಚ ನ್ಯಾಯಾಲಯ ಈ ಮೂರು ರೈತ ವಿರೋಧಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆಯಾದರೂ, ಅಂತಿಮವಾಗಿ ಈ ಮೂರು ಕಾಯ್ದೆಗಳನ್ನು ಅಲ್ಲಲ್ಲಿ ತಿದ್ದುಪಡಿ ಮಾಡಿ ರೈತರು ಇದಕ್ಕೆ ಒಪ್ಪಿಕೊಳ್ಳಬೇಕೆಂದು ತೀರ್ಪುಕೊಡಬಹುದು ಎಂಬ ಭಯ ರೈತ ಸಂಘಟನೆಗಳಿಗೆ ಇದೆ. ಅಷ್ಟೇ ಅಲ್ಲ ಸರ್ಕಾರ ಕೂಡ ರೈತ ಹೋರಾಟದ ತೀವ್ರತೆಯನ್ನು ಅಡಗಿಸಲು ಬೇರೆ ಬೇರೆ ತಂತ್ರಗಳನ್ನು ಹರಿಯಬಿಡಬಹುದು. ಆದರೆ ದೆಹಲಿಯಲ್ಲಿ ಝಾಂಡಾ ಹೂಡಿರುವ ಈ ರೈತ ಸಂಘಟನೆಯವರು ಸರ್ಕಾರದ ನಿಲುವು ಬದಲಾದಂತೆ ಕೂಡಲೇ ಆ ನಿಲುವನ್ನು ಬೆತ್ತಲೆ ಮಾಡುವುದಕ್ಕೆ ಅಷ್ಟೇ ಚಾಕಚಕ್ಯತೆಯನ್ನು ತೋರುತ್ತಾರೆ. ’ರೈತರ ಸಮಸ್ಯೆ ಪರಿಹಾರಕ್ಕೆ ದಾರಿಯನ್ನು ಹುಡುಕಲು ತೊಡಗಿದರೆ, ಈಗಾಗಲೇ ತರಲಾಗಿರುವ CAA ಮುಂತಾದ ಕಾನೂನುಗಳ ವಿಚಾರಕ್ಕೆ ಅದೇ ಮಾನದಂಡವನ್ನು ಉಪಯೋಗಿಸಿ ಎಂದು ಸರ್ಕಾರದ ಮೇಲೆ ಒತ್ತಡ ಬಂದೇಬರುತ್ತದೆ. ಆ ಭಯವೂ ಸರ್ಕಾರವನ್ನು ಕಾಡುತ್ತಿರಬಹುದು’ ಎಂದು ಹಿಂದೆ ಕೇರಳ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ಕೆ. ಜಯಕುಮಾರ್ ಅಭಿಪ್ರಾಯ ಪಡುತ್ತಾರೆ.

PC : The Week

ರೈತರ ಈ ಚಳವಳಿ ಸೋಲನ್ನು ಒಪ್ಪಿಕೊಳ್ಳುವ ಸಂಭವವೇ ಇಲ್ಲ. ಏಕೆಂದರೆ ಈಗಾಗಲೇ ಈ ರೈತ ಸಂಘಟನೆಗಳ ಮುಖಂಡರು ಭಾರತದ ಎಲ್ಲ ರಾಜ್ಯಗಳಲ್ಲಿರುವ ರೈತ ಸಂಘಟನೆಗಳನ್ನು ಸಂಧಿಸಿ, ಅವನ್ನೂ ಬಲಗೊಳಿಸುವ ಹೋರಾಟಕ್ಕೆ ಅನುಗೊಳಿಸುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಆದ್ದರಿಂದ ಸರ್ಕಾರ ತಮ್ಮ ಪ್ರತಿಷ್ಠೆಯ ನಿಲುವನ್ನು ಸಡಿಲಿಸಿ ರೈತರ ಕೋರಿಕೆಯಾದ ಈ ರೈತ ವಿರೋಧಿ ಶಾಸನಗಳನ್ನು ರದ್ದುಗೊಳಿಸುವುದು ವಿವೇಕಯುತವಾದ ನಿಲುವು.

ಇನ್ನು ಅದಾನಿ, ಅಂಬಾನಿಗಳ ಪಾತ್ರದ ಬಗೆಗೆ ಎರಡು ಮಾತು. ಮೋದಿಯವರು ಅಧಿಕಾರ ಹಿಡಿಯುವ ಮೊದಲು ಇದ್ದ ಸರ್ಕಾರಗಳೂ ಬಂಡವಾಳಶಾಹಿ ಕಾರ್ಪೊರೆಟ್‌ಗಳನ್ನು ಬೆಂಬಲಿಸುತ್ತಲೇ ಇದ್ದರು. ಅಂದಿನ ದಿನಗಳಲ್ಲಿ ಟಾಟಾ, ಬಿರ್ಲಾಗಳ ಹಾವಳಿಯ ಬಗೆಗೆ ಬಹಳ ಕೇಳಿಬರುತ್ತಿತ್ತು, ಆದರೆ ಇಂದಿನ ಅದಾನಿ, ಅಂಬಾನಿಗಳಂತೆ ಸರ್ಕಾರದೊಡನೆ ಹೆಣೆದುಕೊಳ್ಳಲು ಆಗಿನ ಸರ್ಕಾರಗಳು ಅವಕಾಶ ಕಲ್ಪಿಸುತ್ತಿರಲಿಲ್ಲ. ದೊಡ್ಡ ದೊಡ್ಡ ಕಂಟ್ರಾಕ್ಟುಗಳನ್ನು ಅವರ ಪಾಲಾಗಲು ಸರ್ಕಾರ ನಡೆಸುವವರು ನೆರವಾಗುತ್ತಿದ್ದರು. ಆದರೆ ಅವರ ತೆಕ್ಕೆಗೆ ಸರ್ಕಾರ ಎಂದೂ ಬಿದ್ದದ್ದಿಲ್ಲ.

ರೈತರ ಈ ಹೋರಾಟ 2024ರ ಪಾರ್ಲಿಮೆಂಟ್ ಚುನಾವಣೆವರೆಗೂ ನಡೆಯುತ್ತದೆ ಎಂದು ದೆಹಲಿಯಲ್ಲಿ ಸತ್ಯಾಗ್ರಹ ನಡೆಸುತ್ತಿರುವ ರೈತ ಸಂಘಟನೆಗಳ ಒಕ್ಕೂಟ ನಿರ್ಧರಿಸಿ ಹೇಳಿದೆ. ಮೋದಿಯವರು ಮರ್ಯಾದೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೊಂಡುತನಕ್ಕೆ ಬಿದ್ದರೆ, ಸರ್ಕಾರ ಮುಂದೆರಡು ವರ್ಷಗಳ ಕಾಲ ನೆಮ್ಮದಿಯಾಗಿ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೋದಿಯವರು ’ನಾನು ತಂದ ಈ ಕಾಯ್ದೆಗಳ ಬಗ್ಗೆ ನಿಮಗೆ ಆತಂಕ ಇದೆ. ಆದ್ದರಿಂದ ಈ ಮೂರು ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿ ರೈತರ ಹೋರಾಟವನ್ನು ಮುಕ್ತಾಯಗೊಳಿಸಿ ಎಂದು ರೈತ ಮುಖಂಡರಿಗೆ ತಿಳಿಸಬೇಕು.

ರೈತ ಸಂಘಟನೆ ಬೆಳೆದು ಸದೃಢವಾಗಿಸಲು ಬಹಳ ಕಾಲಬೇಕಾಯಿತು. ರೈತರು ಬೆಳೆದದ್ದನ್ನು ಸರ್ಕಾರವೇ ಕೊಳ್ಳಬೇಕು. ಈಗ ನಾವು ಮಧ್ಯವರ್ತಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದೇವೆ. ಈ ಮಿಡಲ್‌ಮ್ಯಾನ್ ಮತ್ತು ಸಗಟು ವರ್ತಕರು ನಮ್ಮನ್ನು ಅಡಕತ್ತರಿಯಲ್ಲಿ ಸಿಕ್ಕಿಸಿಕೊಂಡು ಅಪಾರವಾಗಿ ಲಾಭ ಸಂಪಾದಿಸುತ್ತಿದ್ದಾರೆ. ಬೆಳೆದ ಬೆಳೆಗೆ ಬೆಂಬಲ ನೀಡಿ ರೈತರಿಗಾಗುತ್ತಿರುವ ಶೋಷಣೆಯನ್ನು ತಪ್ಪಿಸಲು ಸರ್ಕಾರ ನೆರವಿಗೆ ಬರಬೇಕು ಆದರೆ ಈಗ ರೈತ ವಿರೋಧಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ.

ಬಂಡವಾಳಶಾಹಿ ಗ್ಯಾಂಗ್‌ನವರು ಈಗಾಗಲೇ ಆಹಾರ ಧಾನ್ಯಗಳನ್ನು ದೋಚಲು 53 ವ್ಯವಸಾಯಾಧಾರಿತ ತಳಹದಿಯ ಕಂಪನಿಗಳನ್ನು ರಿಜಿಸ್ಟರ್ ಮಾಡಿದ್ದಾರೆ. ರೈತರ ಸುಲಿಗೆ ಯಾನಕ್ಕೆ ಸಕಲ ಸಿದ್ಧತೆಯೂ ಆಗಿದೆ. ಕಾನೂನನ್ನು ನುಗ್ಗಿಸುವುದು ಮಾತ್ರ ಉಳಿದಿತ್ತು. ಎಚ್ಚೆತ್ತ ಪಂಜಾಬ್ ಮತ್ತು ಹರ್ಯಾಣ ರೈತರ ಮುಂದಾಳತ್ವದಲ್ಲಿ ದೇಶದ ರೈತರೆಲ್ಲ ಒಗ್ಗೂಡಿ ಸಕಾಲದಲ್ಲಿ ಆಂದೋಲನ ಆರಂಭಿಸಿ ಈ ಅನಾಹುತವನ್ನು ತಡೆ ಹಿಡಿದಿದ್ದಾರೆ.


ಇದನ್ನೂ ಓದಿ: ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...