Homeಅಂಕಣಗಳುರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

’ಹೊಲಗಳೇ ಇಲ್ದಿದ್ರೆ ನಮ್ಮಂಥ ಕೂಲಿ ಮಾಡೋರು ಹೊಟ್ಟೆ ಬಟ್ಟೆಗೆ ಏನ್ಮಾಡಬೇಕು... ರೈತನಿಗೆ ನಷ್ಟ ಆದ್ರೆ ನಮ್ಗೆ ಕೂಲಿ ಹೆಂಗೆ ಕೊಟ್ಟಾನು... ಈ ಹೋರಾಟಾನ ನಾವು ಒಗ್ಗಟ್ಟಾಗಿ ಮಾಡ್ಬೇಕು’ ಎನ್ನುತ್ತಾರೆ ದೆಹಲಿ ಗಡಿಗಳಲ್ಲಿ ರೈತ ಪ್ರತಿಭಟನೆಗಳಲ್ಲಿ ಭಾಗವಹಿಸಿರುವ ಕೃಷಿ ಕೂಲಿ ಕಾರ್ಮಿಕ ದೇವ್‌ಸಿಂಗ್.

- Advertisement -
- Advertisement -

ದೆಹಲಿ ಗಡಿಗಳ ರೈತ ಪ್ರತಿಭಟನೆಯ ಬೆನ್ನುಮೂಳೆ ಪಂಜಾಬಿನ ರೈತರು. ಆರ್ಥಿಕವಾಗಿ ಬಹುತೇಕ ಬಲಾಢ್ಯರು. ಮೋದಿ-ಶಾ ಅವರಂತಹ ಪ್ರಚಂಡ ಜೋಡಿಗೆ ಸವಾಲೆಸೆದು ನೆಲಕಚ್ಚಿ ನಿಂತು ವರ್ಷಗಳ ಹೋರಾಟಕ್ಕೆ ತಯಾರೆಂದು ತೊಡೆ ತಟ್ಟಿರುವವರು. ಇವರ ಈ ಧಾರಣಾ ಶಕ್ತಿಯ ಬೆನ್ನುಮೂಳೆಯ ಹಿಂದೆ, ದಲಿತ ಕೂಲಿ ಕಾರ್ಮಿಕರ ಬೆವರಿದೆ.

’ಹೊಲಗಳೇ ಇಲ್ದಿದ್ರೆ ನಮ್ಮಂಥ ಕೂಲಿ ಮಾಡೋರು ಹೊಟ್ಟೆ ಬಟ್ಟೆಗೆ ಏನ್ಮಾಡಬೇಕು… ರೈತನಿಗೆ ನಷ್ಟ ಆದ್ರೆ ನಮ್ಗೆ ಕೂಲಿ ಹೆಂಗೆ ಕೊಟ್ಟಾನು… ಈ ಹೋರಾಟಾನ ನಾವು ಒಗ್ಗಟ್ಟಾಗಿ ಮಾಡ್ಬೇಕು’ ಎನ್ನುತ್ತಾರೆ ದೆಹಲಿ ಗಡಿಗಳಲ್ಲಿ ರೈತ ಪ್ರತಿಭಟನೆಗಳಲ್ಲಿ ಭಾಗವಹಿಸಿರುವ ಕೃಷಿ ಕೂಲಿ ಕಾರ್ಮಿಕ ದೇವ್‌ಸಿಂಗ್. ’ತಾಸಿಗೆ ಮೂರು ರುಪಾಯಿ ಕೂಲಿ ಕೊಡ್ತಿದ್ರು. ಈಗ ದಿನಕ್ಕೆ 300 ರುಪಾಯಿ. ಕನಿಷ್ಠ ಪಕ್ಷ ಹನ್ನೆರಡು ತಾಸು ದುಡೀತೀವಿ’ ಎನ್ನುತ್ತಾರೆ ಅವರು. ಫಾಜಿಲ್ಕಾ ಜಿಲ್ಲೆಯ ದೇವ್ ಸಿಂಗ್ ಅವರ ವಯಸ್ಸು 65. ಇಬ್ಬರು ಮಕ್ಕಳು. ಅವರೂ ಕೂಲಿ ಆಳುಗಳು. ಮಜಹಬಿ ಸಿಖ್ ಎಂದು ಕರೆಯಲಾಗುವ ದಲಿತನೀತ. ಪಂಜಾಬಿನ ಬಹುತೇಕ ಕೃಷಿ ಕೂಲಿ ಕಾರ್ಮಿಕರು ದಲಿತರು.

ಪಂಜಾಬಿನ ಸಮೃದ್ಧ ಸುಗ್ಗಿಗಳ ಹಿಂದೆ ಈ ಶ್ರಮಜೀವಿಗಳು ಬಸಿದ ಬೆವರೇ ಬಂಗಾರ. ರೈತರ ದನಗಳನ್ನು ಮೇಯಿಸುವುದರಿಂದ ಹಿಡಿದು, ಉಳುಮೆ, ಬಿತ್ತನೆ, ಕಟಾವು, ಒಕ್ಕುವುದೇ ಮುಂತಾದ ರೈತ ಕುಟುಂಬವೊಂದರ ಎಲ್ಲ ಕೆಲಸಗಳನ್ನೂ ಮಾಡುವವರು ಇವರು.

ಹರಿಯಾಣ-ದೆಹಲಿ ಗಡಿ ಪ್ರದೇಶದ ರೋಹ್ತಕ್ ಹೆದ್ದಾರಿಯಲ್ಲಿ ಮೈಲುಗಳುದ್ದಕ್ಕೆ ಟ್ರ್ಯಾಕ್ಟರು- ಟ್ರಾಲಿಗಳಲ್ಲಿ ಬೀಡುಬಿಟ್ಟಿರುವ ತಮ್ಮ ರೈತ ಧಣಿಗಳ ಜೊತೆಗೆ ಕೃಷಿ ಕೂಲಿಕಾರರೂ ದೊಡ್ಡ ಸಂಖ್ಯೆಯಲ್ಲಿ ಕೈಜೋಡಿಸಿ ನೆರವಾಗಿದ್ದಾರೆ.

ಕೂಲಿ ಮಾಡಿ ನಾಲ್ವರು ಸದಸ್ಯರ ಕುಟುಂಬವನ್ನು ಸಲಹುವ ಹೆಣ್ಣುಮಗಳು ತಾಝಾ ಬೇಗಮ್. ಲಕ್ವಾ ಬಡಿದು 14 ವರ್ಷಗಳ ಹಿಂದೆ ಕಾಲು ಕಳೆದುಕೊಂಡ ಗಂಡ. ಜಡ್ಡು ಜಾಪತ್ತು ಮದುವೆ ಮುಂಜಿಗಳಿಗೆ ದುಡ್ಡು ಬೇಕೆಂದರೆ ಧಣಿಯ ಮುಂದೆ ಕೈ ಚಾಚಬೇಕು. ಕೊಟ್ಟರೆ ಉಂಟು, ಕೊಡದಿದ್ದರೆ ಇಲ್ಲ. ಬೇಗಮ್‌ಳ ಪತಿ ತೋತಾ ಖಾನ್ ಲಕ್ವ ಹೊಡೆವ ಮುನ್ನ ಜಮೀನುದಾರನೊಬ್ಬನ ಬಳಿ 32 ವರ್ಷಗಳ ಕಾಲ ದುಡಿದಿದ್ದ. ಮುಲಾಜಿಲ್ಲದೆ ಆತನನ್ನು ಹೊರದಬ್ಬಿದ್ದ ಧಣಿ. ಬರಬೇಕಿದ್ದ ಹಳೆಯ ಬಾಕಿಯನ್ನೂ ಕೊಡಲಿಲ್ಲ.

ಈ ಕೂಲಿ ಕಾರ್ಮಿಕರಲ್ಲಿ ಬಹುತೇಕರು ಅಂದು ದುಡಿದು ಅಂದು ಉಣ್ಣಬೇಕಿರುವ ದುರ್ಗತಿಯಲ್ಲಿ ಬದುಕುತ್ತಿರುವವರು. ಅವರ ಜೀವನೋಪಾಯಕ್ಕೆ ಸಂಚಕಾರ ಬಂದಿದೆಯೆಂದು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಭೂಮಿಗಾಗಿ ದಲಿತರು ನಡೆಸಿರುವ ಹೋರಾಟದಲ್ಲಿ ಜಮೀನುದಾರರೊಂದಿಗೆ ಮುಖಾಮುಖಿಯಾಗಿರುವುದು ಹೌದು. ಈ ಮುಖಾಮುಖಿಗಳು ಹಿಂಸೆಗೆ ತಿರುಗಿರುವುದೂ ಉಂಟು. ಸಾಮಾಜಿಕ ಬಹಿಷ್ಕಾರವನ್ನೂ ದಲಿತ ಕೂಲಿಕಾರರು ಎದುರಿಸಿರುವುದೂ ನಿಜ. ದಲಿತ ಕೂಲಿಕಾರ ಸಂಘಗಳು ಭೂಮಿಹೀನ ದಲಿತರ ಬೆನ್ನಿಗೆ ನಿಂತಿವೆ. ಆದರೆ ಹೊಸ ಕೃಷಿ ಕಾನೂನುಗಳನ್ನು ಒಗ್ಗಟ್ಟಿನಿಂದ ಎದುರಿಸುವ ಅಗತ್ಯವನ್ನು ಈ ಸಂಘಗಳು ಮನಗಂಡಿವೆ. ಹೀಗಾಗಿ ಅವರೆಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿವೆ ಎನ್ನುತ್ತಾರೆ ಸಾಕ್ಷ್ಯಚಿತ್ರ ನಿರ್ಮಾಪಕ ರಣದೀಪ್ ಮದ್ದೊಕೆ. ಮದ್ದೊಕೆ ಖುದ್ದು ಭೂಮಿಹೀನ ದಲಿತ ಕುಟುಂಬದಿಂದ ಬಂದವರು.

PC : OpIndia

ಪಂಜಾಬಿನ ಭೂಮಿಹೀನ ಬಡವರ ಕಷ್ಟ ಕಣ್ಣೀರುಗಳ ಕುರಿತು ಮದ್ದೊಕೆ ನಿರ್ಮಿಸಿರುವ ಸಾಕ್ಷ್ಯಚಿತ್ರ ‘Landle’ ಧಗಧಗಿಸುವ ಸತ್ಯವನ್ನು ಅನಾವರಣಗೊಳಿಸುತ್ತದೆ.

ದೇಶದಲ್ಲಿ ಅತಿಹೆಚ್ಚು ಶೇಕಡವಾರು ದಲಿತರನ್ನು ಹೊಂದಿರುವ ರಾಜ್ಯ ಪಂಜಾಬ್ ಎಂಬ ಸಂಗತಿ ಬಹಳ ಮಂದಿಗೆ ತಿಳಿದಿರಲಾರದು. 2011ನೆಯ ಜನಗಣತಿ ಪ್ರಕಾರ ಈ ರಾಜ್ಯದ ಜನರ ಪೈಕಿ ದಲಿತರ ಪ್ರಮಾಣ ಶೇ.31.94ರಷ್ಟು. ಕಳೆದ ಒಂಭತ್ತು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಿದ್ದೀತೇ ವಿನಾ ಕಮ್ಮಿಯಾಗಿರುವುದಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿದ್ದರೂ ರಾಜ್ಯಾಧಿಕಾರ ಇವರಿಗೆ ದಕ್ಕಿಲ್ಲ. ನಾನಾ ಜಾತಿಗಳು ಮತ್ತು ಒಳಪಂಗಡಗಳಲ್ಲಿ ಹಂಚಿಹೋಗಿರುವ ದಲಿತರಿಗೆ ಅಧಿಕಾರ ಹಗಲುಗನಸು. ಮುಖ್ಯಮಂತ್ರಿ ಹುದ್ದೆ ಎಂದಿದ್ದರೂ ಶೇ.20ರಷ್ಟಿರುವ ಜಾಟ್ ಸಿಖ್ಖರ ಪಾಲು.

ಮುಕ್ಕಾಲು ಪಾಲು ದಲಿತರು ಗ್ರಾಮೀಣವಾಸಿಗಳು. ಜಾಟ್ ಸಿಖ್ಖರ ಹೊಲಗದ್ದೆಗಳಲ್ಲಿ ಕೂಲಿ ಮಾಡಿ ಅನ್ನ ಸಂಪಾದಿಸುವವರು. ಕೃಷಿಗೆ ಯಂತ್ರಗಳು ಕಾಲಿಟ್ಟ ನಂತರ ಈ ಕೂಲಿ ಕೆಲಸವೂ ಕೈತಪ್ಪಿದೆ. ಜಮೀನಿನ ಒಡೆತನ ಇವರ ಪಾಲಿಗೆ ಗಗನಕುಸುಮ. ಮಲ ಬಳಿವ ದಲಿತರ ಸಂಖ್ಯೆಯಲ್ಲಿ ದೇಶದಲ್ಲೇ ಐದನೆಯ ಸ್ಥಾನ ಪಂಜಾಬಿನದು. ದಲಿತರ ಮೇಲೆ ದಮನ ದೌರ್ಜನ್ಯಗಳು ನಿರಂತರ.

ಪಂಜಾಬಿನಲ್ಲಿ ಕೂಡ ದಲಿತರ ಕೇರಿಗಳು ಊರಿನ ಅಂಚಿಗಿರುತ್ತವೆ. ಪಶ್ಚಿಮ ದಿಕ್ಕಿಗಿರುವುದು ವಾಡಿಕೆ. ಮುಂಜಾನೆಯ ಸೂರ್ಯನ ಕಿರಣಗಳು ಮೇಲ್ಜಾತಿಗಳ ಕೇರಿಗಳ ಮೇಲೆ ಬೀಳುವ ಮುನ್ನ ಅಸ್ಪೃಶ್ಯರ ಹಟ್ಟಿಗಳನ್ನು ತಾಕಿ ಮೈಲಿಗೆ ಆಗದಂತೆ ವಹಿಸಿರುವ ಎಚ್ಚರಿಕೆ. ಚರಂಡಿಯ ರೊಜ್ಜು ಕೂಡ ಪೂರ್ವದ ಎತ್ತರದಿಂದ ಪಶ್ಚಿಮದ ತಗ್ಗಿನುದ್ದಕ್ಕೆ ಚಾಚಿ ಹರಿಯಬೇಕು.

ಇಂತಹ ಅಸೀಮ ತಾರತಮ್ಯದ ಬಲಿಪಶುಗಳು ತಮ್ಮ ಶೋಷಕನನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಬಗೆಯನ್ನು ಏನೆಂದು ಬಣ್ಣಿಸಲು ಬಂದೀತು?


ಇದನ್ನೂ ಓದಿ: ರೈತರ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ: ಭಾವನಾತ್ಮಕ ಟ್ವೀಟ್ ಮಾಡಿದ ರೈತ ಒಕ್ಕೂಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...