Homeಅಂಕಣಗಳು“ಯುವಜನರ ನಿಜವಾದ ನಾಯಕ “ಭಗತ್ ಸಿಂಗ್”

“ಯುವಜನರ ನಿಜವಾದ ನಾಯಕ “ಭಗತ್ ಸಿಂಗ್”

- Advertisement -
- Advertisement -

| ಸಂತೋಷ.ಎಚ್.ಎಂ, ಕನ್ನಡ ವಿ.ವಿ ಹಂಪಿ |

ದೇಶದ ಜನರ ವಿಮೋಚನೆಗಾಗಿ ನಗುನಗುತಲೇ ನೇಣುಗಂಬ ಏರಿದ ಧೀರೋದಾತ್ತ ನಾಯಕ, ದೇಶದ ಹಿತವೇ ತನ್ನ ಹಿತ, ಒಡೆದಾಳುವ ನೀತಿ, ಅಸಮಾನತೆ, ಸಾಮಜ್ಯವಾದವೇ ತನ್ನ ಪರಮ ಶತೃಗಳು ಎಂದು ಸಿಡಿಲಗುಂಡಿನಂತೆ ಮಿಂಚಿ ಮರೆಯಾದ ಭಗತ್‍ಸಿಂಗ್ ಅಕ್ಷರಶಃ ಯುವ ಸಮುದಾಯದ ದೃವತಾರೆ.

“ನನ್ನಲ್ಲೂ ಆಕಾಂಕ್ಷೆ, ಭರವಸೆ, ಬದುಕಿನ ಸೌಂದರ್ಯಗಳೆಲ್ಲ ತುಂಬಿದೆ ಎಂದು ಒತ್ತಿಹೇಳುತ್ತೇನೆ. ಆದರೆ ಅಗತ್ಯ ಬಿದ್ದಾಗ ಅದೆಲ್ಲವನ್ನೂ ತೊರೆಯಬಲ್ಲೆ. ಅದೇ ನಿಜವಾದ ತ್ಯಾಗ” “ನಾವು ಬದುಕನ್ನು ಪ್ರೀತಿಸುತ್ತೇವೆ, ಅದರ ಸೌಂದರ್ಯ ಕಾಪಾಡಲು ಹೋರಾಡುತ್ತೇವೆ’’ ಎನ್ನುವ ಮೂಲಕ ದೇಶದ ಯುವಜನರಿಗೆ ಅಗ್ರಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಭಗತ್‍ಸಿಂಗ್ ಮತ್ತು ಸ್ನೇಹಿತರ ಸಮರಶೀಲ ಹೋರಾಟ ಎಂತವರಲ್ಲೂ ರೋಮಾಂಚನ ಉಂಟುಮಾಡುತ್ತದೆ. ಕೇವಲ 23 ವಯಸ್ಸಿನಲ್ಲೇ ಅದಮ್ಯ ಚೈತನ್ಯದೊಂದಿಗೆ ಇಡೀ ಸ್ವಾತಂತ್ರ್ಯ ಚಳವಳಿಗೆ ಹೊಸದಿಕ್ಕು ಕೊಡುವ ಮೂಲಕ ಭಾರತೀಯರ ಹೃದಗಳಲ್ಲಿ ಎಂದಿಗೂ ಅಳಿಸಲಾಗದ ಮುದ್ರೆಯನ್ನೊತ್ತಿದ್ದಾರೆ.

*ಭಗತ್‍ಸಿಂಗ್‍ರನ್ನು ಪ್ರಭಾವಿಸಿದ ಆ ಘಟನೆ:*

ಯಾರನ್ನಾದರೂ ವಿಚಾರಣೆಯಿಲ್ಲದೇ ಬಂಧಿಸುವ ಅಧಿಕಾರ ನೀಡಿದ ಬ್ರಿಟಿಷರ ರೌಲಟ್ ಕಾಯಿದೆಯನ್ನು ವಿರೋಧಿಸಿ 1919 ಏಪ್ರಿಲ್ 13ರಂದು ಪಂಜಾಬಿನ ಅಮೃತಸರದ ಉದ್ಯಾನದಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಇದರಿಂದ ವಿಚಲಿತಗೊಂಡ ಬ್ರಿಗೇಡಿಯರ್ ಜನರಲ್ ರೇಜಿನಾಲ್ಡ್ ಡಯರ್ ತನ್ನ ಸೈನ್ಯವನ್ನು ಸುತ್ತುವರಿಸಿ ಯಾವುದೇ ಸೂಚನೆ ನೀಡದೇ ಗುಂಡಿನ ಮಳೆಗರಿಸಿದ. ಇದರಿಂದಾಗಿ ಮಾರಣಹೋಮವೇ ನಡೆಯಿತು. ಉದ್ಯಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಕೋಡಿಯೇ ಹರಿಯಿತು. ಈ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿ, ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತು.

ಈ ಘಟನೆಯಿಂದ ಬಾಲಕನೊಬ್ಬನಿಗೆ ಸಿಡಿಲಪ್ಪಳಿಸಿದ ಅನುಭವವಾಯಿತು. ಮಾರನೇ ದಿನವೇ ಆ ಬಾಲಕ ಶಾಲೆ ಮುಗಿದ ನಂತರ ಘಟನಾ ಸ್ಥಳಕ್ಕೆ ಹೋಗಿ, ದಿಟ್ಟತನ ಮೆರೆದು ಪ್ರಾಣಾರ್ಪಣೆಗೈದವರ ರಕ್ತದ ಕೋಡಿಯನ್ನು ಕಂಡು ಮಮ್ಮಲ ಮರಗಿದ. ಆ ಕ್ಷಣವೇ ಹೋರಾಟದ ಕಿಚ್ಚು ಆತನಲ್ಲಿ ಜಾಗೃತವಾಯಿತು. ಅಲ್ಲಿಗೆ ಸುಮ್ಮನಿರದ ಆ ಬಾಲಕ, ತಾನು ತಂದಿದ್ದ ಬುತ್ತಿಡಬ್ಬಿಯನ್ನು ತೆಗೆದು  ಹೋರಾಟಗಾರರ ರಕ್ತದಲ್ಲಿ ತೊಯ್ದ ಮಣ್ಣನ್ನು ಅದರಲ್ಲಿ ಸಂಗ್ರಹಿಸಿಟ್ಟುಕೊಂಡು ಮನೆ ಕಡೆ ಹೆಜ್ಜೆ ಇಟ್ಟ.

ಮನೆಯಲ್ಲಿ ಇಡೀ ಘಟನೆಯನ್ನು ತಿಳಿಸಿದ ಆತ ತಾನು ತಂದಿದ್ದ ಮಣ್ಣನ್ನು ತನ್ನ ತಾಯಿಗೆ ತೋರಿಸಿ “ನೋಡಿಲ್ಲಿ ಬ್ರಿಟೀಷರು ನಮ್ಮ ಜನರನ್ನು ಹತ್ಯೆಮಾಡಿದ ರಕ್ತಸಿಕ್ತ ಮಣ್ಣಿದು. ಇದಕ್ಕೆ ನಮಸ್ಕಾರ ಮಾಡು’’ ಎಂದು ಹೇಳುವ ಮೂಲಕ, ಅದನ್ನು ಒಂದೆಡೆಯಿಟ್ಟು ಪೂಜಿಸಿದ. ಈ ಘಟನೆ ಭಗತ್‍ಸಿಂಗ್‍ರನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಕೊನೆವರೆಗೂ ಹೋರಾಟ ನಡೆಸಲು ಹುರಿಗೊಳಿಸಿತು.

*ಭಗತ್‍ಸಿಂಗ್‍ರ ಹಿನ್ನೆಲೆ*

ಭಗತ್‍ಸಿಂಗ್ ಸೆಪ್ಟೆಂಬರ್ 28, 1907ರಲ್ಲಿ ಕಿಷನ್‍ಸಿಂಗ್ ಮತ್ತು ವಿದ್ಯಾವತಿ ಕೌರ್ ದಂಪತಿಗಳ ಮಗನಾಗಿ ಜನಿಸಿದರು. ಅವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ಚಿಕ್ಕಪ್ಪನ ಮಾತುಗಳು ಸ್ಫೂತಿರ್ಯ ಸೆಲೆಯಾದವು. ಇದರಿಂದ ಭಗತ್‍ಸಿಂಗ್ ಚಿಕ್ಕವಯಸ್ಸಿನಲ್ಲೇ ಮಹಾತ್ಮಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ತದನಂತರ ಸ್ಟಷ್ಟ ರಾಜಕೀಯ ಕಣ್ಣೋಟಕ್ಕಾಗಿ ಜಗತ್ತಿನಲ್ಲಿ ಘಟಿಸಿದ ಹಲವು ಕ್ರಾಂತಿಕಾರಿ ಹೋರಾಟಗಳ ಬಗ್ಗೆ ಓದಲು ಶುರುಮಾಡಿದರು. ಮಾರ್ಕ್ಸ್ ವಾದ, ಲೆನಿನ್ ಅವರ ಬರವಣಿಗೆ, ಕಮ್ಯುನಿಸ್ಟ್ ಚಳವಳಿಗಳು ಮತ್ತು ಅದರ ಜನವಿಮೋಚನೆಯ ಆಶಯಗಳು ಅವರನ್ನು ಬಹಳಷ್ಟು ಪ್ರಭಾವಗೊಳಿಸಿದವು.

ಸ್ವಾತಂತ್ರ್ಯಕ್ಕಾಗಿ ಚಳವಳಿಯನ್ನು ನಡೆಸಿ ಯುವಜನರ ಪ್ರೀತಿಗೆ ಪಾತ್ರರಾಗಿದ್ದ ಭಗತ್ ಸಿಂಗ್ ತನ್ನ 23ನೇ ವರ್ಷಕ್ಕೆ ದೇಶಕ್ಕಾಗಿ ಪ್ರಾಣಕೊಟ್ಟ ಮಹಾನ್ ಕ್ರಾಂತಿಕಾರಿ. ಇಂದಿಗೂ ಎಂದಿಗೂ ಯುವಜನರು ಮರೆಯಲಾಗದ ಚೈತನ್ಯ ಎಂದರೂ ತಪ್ಪಾಗಲಾರದು.

ಬ್ರಿಟಿಷರ ವಿರುದ್ಧ ಹೋರಾಟ ಹುರಿಗೊಳಿಸಿದ ಪರಿಣಾಮ ಭಗತ್‍ಸಿಂಗ್ ಮತ್ತು ಆತನ ಸ್ನೇಹಿತರು ಜೈಲಿನಲ್ಲಿ ಬಂಧಿಯಾಗುತ್ತಾರೆ. ಇದ್ಯಾವುದಕ್ಕೂ ಹೆದರದ ಅವರು ಮತ್ತಷ್ಟು ದಿಟ್ಟತನ ಪ್ರದರ್ಶಿಸುತ್ತಾರೆ. ಜೈಲಿನಲ್ಲಿದ್ದಾಗ ತಾಯಿಗೆ ಬರೆದ ಪತ್ರದಲ್ಲಿ ‘ ಅಮ್ಮಾ ನನ್ನ ದೇಶ ಒಂದಲ್ಲಾ ಒಂದು ದಿನ ಸ್ವಾತಂತ್ರ್ಯ ಪಡೆಯಲಿದೆ ಎಂಬ ಬಗ್ಗೆ ನನಗೆ ಸಂಶಯವೇ ಇಲ್ಲ. ಆದರೆ ಬಿಳಿಯ ಸಾಹೇಬರು ಖಾಲಿ ಮಾಡಿದ ಕುರ್ಚಿಯಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುತ್ತಾರೆಂಬ’ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಇದು ಅವರ ಸ್ಪಷ್ಟ ರಾಜಕೀಯ ತಿಳಿವಳಿಕೆ ಮತ್ತು ಸಮಾನತೆಯ ಆಶಯದ ಬಗ್ಗೆ ಇದ್ದ ಕಳಕಳಿಯ ಬಗ್ಗೆ ತೋರಿಸುತ್ತದೆ.

“ದೇಶದ ಇತಿಹಾಸದ ಸಂಕಷ್ಟಮಯ ಸನ್ನಿವೇಶದಲ್ಲಿ ಯುವಕರು ಒಂದು ಮಹಾನ್ ಜವಾಬ್ದಾರಿಯನ್ನು ಹೊರಬೇಕಾಗಿದೆ. ದೇಶದ ಮೂಲೆ ಮೂಲೆಗಳಿಗೆ ವಿದ್ಯಾರ್ಥಿಗಳು ಈ ಕ್ರಾಂತಿಕಾರಿ ಸಂದೇಶವನ್ನು ಕೊಂಡೊಯ್ಯಬೇಕು. ಕೈಗಾರಿಕಾ ಪ್ರದೇಶಗಳಲ್ಲಿರುವ ಕೋಟ್ಯಂತರ ಕೊಳಚೆ ಪ್ರದೇಶಗಳ ನಿವಾಸಿಗಳನ್ನು, ಮುರುಕು ಗುಡಿಸಲುಗಳಲ್ಲಿನ ಗ್ರಾಮೀಣ ಜನತೆಯನ್ನು ಅವರು ಬಡಿದೆಬ್ಬಿಸಬೇಕು. ಕೆಲವರು ಮನುಷ್ಯರು ಉಳಿದ ಜನಸಾಮಾನ್ಯರನ್ನು ಶೋಷಿಸುವಂಥ ಪರಿಸ್ಥಿತಿ ಅಸಾಧ್ಯವಾಗಬೇಕು’’ಎಂದು ಹೇಳುವ ಮೂಲಕ ಯುವಜನರನ್ನು ಎಚ್ಚರಿಸಿದ್ದಾರೆ.

ಬ್ರಿಟಿಷ್ ಸರಕಾರಕ್ಕೆ ಸಿಂಹಸ್ವಪ್ನವಾಗಿದ ಭಗತ್‍ಸಿಂಗ್‍ರನ್ನು ಹೇಗಾದರೂ ನಿವಾರಿಸಿಕೊಳ್ಳಲು, 1931ಮಾರ್ಚ್ 23ರಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಈ ಮೂವರು ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಭಗತ್‍ಸಿಂಗ್ ಅವರು ಒಂದು ಕಡೆ ಹೇಳಿದಂತೆ “ಅವರು ವ್ಯಕ್ತಿಗಳನ್ನು ಕೊಲ್ಲಬಹುದು ಅದರೆ ಅವರ ಆಲೋಚನೆಗಳನ್ನೂ ಕೊಲ್ಲಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ ಇಂದಿಗೂ ನಿಜವಾಗಿದೆ. ಬ್ರಿಟಿಷರು ಭಗತ್‍ಸಿಂಗ್ ಅವರನ್ನು ಭೌತಿಕವಾಗಿ ಇಲ್ಲವಾಗಿಸಿದರು. ಆದರೆ ಅವರಿಂದ ಪ್ರೇರಣೆಗೊಂಡ ಯುವಕರು ಕೋಟ್ಯಂತರ.

ಅಂದು ಭಗತ್ ಸಿಂಗ್ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದರು ಅಂದೇ ಅಸಮಾನತೆ, ಸಾಮ್ರಾಜ್ಯಶಾಹಿ ನೀತಿ ವಿರುದ್ದ ಹೋರಾಡಿದರು. ಅದರೆ ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳು ದೇಶದಲ್ಲಿ ಅಗುತ್ತಿರುವ ಸಾಲು ಸಾಲು ಅತ್ಯಾಚಾರ. ಮಹಿಳೆಯರ ಮೇಲಿನ ದೌರ್ಜನ್ಯ, ಅಸಮಾನತೆ, ರೈತರ ಆತ್ಮಹತ್ಯೆ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ಸಂವಿಧಾನದ ಮೇಲಿನ ನಿರಂತರ ದಾಳಿಗೆ ಪ್ರಬಲ ಧ್ವನಿ ಎತ್ತದಿರುವುದು ವಿಪರ್ಯಾಸವೇ ಸರಿ. ಬಡತನ, ನಿರುದ್ಯೋಗ, ಅನಾರೋಗ್ಯ, ಮೂಲ ಸೌಕರ್ಯ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳು ಇಡೀ ದೇಶವನ್ನು ಕಾಡುತ್ತಿರುವಾಗ ಯುವಜನತೆ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಆಶಯಗಳ ಉಳಿವಿಗಾಗಿ ಧ್ವನಿ ಎತ್ತಬೇಕಿದೆ. ಅಂದಾಗ ಮಾತ್ರ ಭಗತ್‍ಸಿಂಗ್ ಅವರಿಗೆ ನಾವು ನಿಜವಾದ ಗೌರವ ಕೊಟ್ಟಂತಾಗುತ್ತದೆ.

ಸಂತೋಷ.ಎಚ್.ಎಂ

ಕನ್ನಡ ವಿ.ವಿ ಹಂಪಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಕ್ರೈಸ್ತ ಧರ್ಮದವರಲ್ಲ

0
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೇಮಕಗೊಂಡಿದ್ದಾರೆ. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ...