Homeಅಂಕಣಗಳುಹುನಗುಂದ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ಗ್ರಾನೈಟ್ ನಾಡಿನ ಪಾರುಪತ್ಯಕ್ಕೆ ಕಾಶಪ್ಪನವರ-ದೊಡ್ಡನಗೌಡ ನಡುವೆ ಬಿಗ್ ಫೈಟ್

ಹುನಗುಂದ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ಗ್ರಾನೈಟ್ ನಾಡಿನ ಪಾರುಪತ್ಯಕ್ಕೆ ಕಾಶಪ್ಪನವರ-ದೊಡ್ಡನಗೌಡ ನಡುವೆ ಬಿಗ್ ಫೈಟ್

- Advertisement -
- Advertisement -

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲ ಸಂಗಮವು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು, ಲಿಂಗಾಯತ ಸಮುದಾಯಕ್ಕೆ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿಯೇ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ ಜಾತವೇದಮುನಿಗಳಿಂದ ಶಿಕ್ಷಣ ಮತ್ತು ಮಾರ್ಗದರ್ಶನ ಪಡೆದ ಐತಿಹ್ಯವಿದೆ. ಇಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿ ವಿಲೀನವಾಗಿ ಹರಿಯುವುದರಿಂದ ಮತ್ತು ಆಲಮಟ್ಟಿ ಅಣೆಕಟ್ಟಿನಿಂದ ಕಾಲುವೆಯಿದ್ದು ಕ್ಷೇತ್ರದ ಅನೇಕ ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ. ಕ್ಷೇತ್ರದಲ್ಲಿ ಸುಮಾರು 70% ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ನೇಕಾರ ಸಮುದಾಯದ ಜನಸಂಖ್ಯೆಯು ಹೆಚ್ಚಾಗಿದ್ದು, ಕ್ಷೇತ್ರದ ಪ್ರಮುಖ ನಗರ ಇಳಕಲ್ ಸೀರೆಗಳಿಗೆ ಪ್ರಖ್ಯಾತಿ ಗಳಿಸಿದೆ.

ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಬಾರಿಯ ಚುನಾವಣೆಯಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುತ್ತದೆ. ಇದು ರಾಜ್ಯಕ್ಕೆ ಅಲ್ಪಕಾಲದವರೆಗೆ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರವೂ ಆಗಿದೆ. ಎಸ್.ಆರ್ ಕಂಠಿ ಅವರು ಹುನಗುಂದ ವಿಧಾನಸಭಾ ಕ್ಷೇತ್ರದಿಂದ ಗೆದ್ದು 1962ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಹುನಗುಂದ ಮತಕ್ಷೇತ್ರದಲ್ಲಿ ನಡೆದ ಬಹುತೇಕ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಪಾರುಪತ್ಯ ಸ್ಥಾಪಿಸಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಜೋರಾಗಿತ್ತು. ಆದರೆ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯಿಂದ ಮತವಿಂಗಡಣೆಯಾಯಿತೆಂದು ಹೇಳಲಾಗುವ ಕಾರಣಕ್ಕೆ ಕಾಂಗ್ರೆಸ್‌ಗೆ ಕೊಂಚ ಹಿನ್ನಡೆಯಾಗಿ ಸೋಲಬೇಕಾಯಿತು.

ಕಾಂಗ್ರೆಸ್‌ನಿಂದ ಕಾಶಪ್ಪನವರ ಕುಟುಂಬ ಅತಿ ಹೆಚ್ಚು ಬಾರಿ ಸ್ಪರ್ಧೆ

ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ ಉಪಚುನಾವಣೆಗಳನ್ನೂ ಸೇರಿದಂತೆ ಒಟ್ಟು 15 ಬಾರಿ ಚುನಾವಣೆಗಳು ನಡೆದಿದೆ. ಇದರಲ್ಲಿ 9 ಚುನಾವಣೆಗಳಲ್ಲಿ ಕಾಶಪ್ಪನವರ ಕುಟುಂಬದ ಮೂವರು ಸ್ಪರ್ಧೆ ಮಾಡಿದ್ದಾರೆ. ಮೂವರೂ ಶಾಸಕರಾಗಿ ಆಯ್ಕೆಯಾಗಿದ್ದಾರೆ.

1985ರಲ್ಲಿ ಎಸ್.ಆರ್ ಕಾಶಪ್ಪನವರ (ವಿಜಯಾನಂದ ಕಾಶಪ್ಪನವರ ತಂದೆ) ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಮೊದಲ ಬಾರಿಗೆ ಸೋಲು ಅನುಭವಿಸಿದರು. ಆದರೆ ಆ ಬಳಿಕ 1989, 94, 99ರ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ವಿಜಯ ಸಾಧಿಸಿದರು. ಅವರು ಶಾಸಕರಾಗಿದ್ದಷ್ಟು ದಿನ ವರ್ಣರಂಜಿತ ಬದುಕು ನಡೆಸಿದರು.

ಎಸ್.ಆರ್ ಕಂಠಿ

ಎಸ್.ಆರ್ ಕಾಶಪ್ಪನವರ ಅವರು ಶಾಸಕರಾಗಿರುವಾಗಲೇ 2003ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗುತ್ತಾರೆ. ಅವರ ನಿಧನದ ಬಳಿಕ ಖಾಲಿಯಾದ ಶಾಸಕ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತದೆ. ಆಗ ಕಾಂಗ್ರೆಸ್ ಪಕ್ಷ ಎಸ್.ಆರ್ ಕಾಶಪ್ಪನವರ ಅವರ ಪತ್ನಿ ಗೌರಮ್ಮ ಅವರಿಗೆ ಟಿಕೆಟ್ ನೀಡುತ್ತದೆ. ಅನುಕಂಪದ ಅಲೆಯಲ್ಲಿ ಅಂದು ಗೌರಮ್ಮನವರು ಗೆಲುವು ಸಾಧಿಸಿ ಶಾಸಕರಾಗುತ್ತಾರೆ.

ಎಸ್.ಆರ್ ಕಾಶಪ್ಪನವರ ನಿಧನದ ಬಳಿಕ ಕ್ಷೇತ್ರದಲ್ಲಿ ಚಿಗುರಿಕೊಂಡ ಬಿಜೆಪಿಯು, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತದೆ. ಆ ಬಾರಿಯು ಕಾಂಗ್ರೆಸ್ ಪಕ್ಷ ಗೌರಮ್ಮನವರಿಗೆ ಟಿಕೆಟ್ ನೀಡಿತಾದರೂ, ಆ ವೇಳೆಗೆ ಅನುಕಂಪದ ಅಲೆಯು ಮರೆಯಾಗಿತ್ತಾದ್ದರಿಂದ ಬಿಜೆಪಿಯ ದೊಡ್ಡನಗೌಡ ಪಾಟೀಲ್‌ಗೆ ಜನರ ಒಲವು ತೋರಿಸುತ್ತಾರೆ. ಆನಂತರ 2008ರಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಗೆಲುವು ಸಾಧಿಸುತ್ತಾರೆ. ಆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ವಿಜಯಾನಂದ ಕಾಶಪ್ಪನವರ ಸೋಲಿನ ಕಹಿ ಅನುಭವಿಸುತ್ತಾರೆ. ಆ ಬಳಿಕ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದ ವಿಜಯಾನಂದ ಕಾಶಪ್ಪನವರ 2013ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲವಿನ ನಗೆ ಬೀರುತ್ತಾರೆ. ಆದರೆ 2018ರಲ್ಲಿ ಕಾಶಪ್ಪನವರ ಸೋಲುಣ್ಣುತ್ತಾರೆ. ಹೀಗೆ ಹುನಗುಂದ ಕ್ಷೇತ್ರದಲ್ಲಿ ನಡೆದ 15 ಚುನಾವಣೆಗಳ ಪೈಕಿ 9 ಚುನಾವಣೆಗಳಲ್ಲಿ ಕಾಶಪ್ಪನವರ ಕುಟುಂಬದ ಮೂವರು ಸ್ಪರ್ಧೆ ಮಾಡಿ, ಕುಟುಂಬದ ಮೂವರು ಐದು ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹುನಗುಂದ ಕ್ಷೇತ್ರದ ಚುನಾವಣಾ ಇತಿಹಾಸ

1957ರಿಂದ ಈವರೆಗೆ ಒಟ್ಟು 15 ವಿಧಾನಸಭಾ ಚುನಾವಣೆಗಳು ನಡೆದಿವೆ. ಈ ಪೈಕಿ ಕಾಂಗ್ರೆಸ್ ಪಕ್ಷ 9 ಬಾರಿ ಗೆಲುವು ಕಂಡಿದ್ದರೆ, ಬಿಜೆಪಿ 3 ಬಾರಿ, ಜನತಾ ಪರಿವಾರ 2 ಬಾರಿ ಗೆದ್ದಿದೆ. ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಶಪ್ಪನವರ ಕುಟುಂಬ ಐದು ಬಾರಿ ಗೆಲುವು ಸಾಧಿಸಿದ್ದರೆ, ದೊಡ್ಡನಗೌಡ ಪಾಟೀಲ ಅವರು 3 ಬಾರಿ ಗೆಲುವು ದಾಖಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಸಹ 3 ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಮೂರು ಬಾರಿ ಗೆಲುವು ಕಂಡಿರುವುದು ವಿಶೇಷ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗದಗ: ಸಮಬಲದ ಹೋರಾಟದಲ್ಲಿ ಎಚ್ಕೆ ಪಾಟೀಲ್ ಪ್ರತಿಷ್ಠೆ ಪಣಕ್ಕೆ?!

1957ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗಡಿಗೆಯಪ್ಪರಾಯ ನಂಜಯ್ಯನಮಠ ವಿರುದ್ಧ ಗೆಲುವು ಆರಂಭಿಸಿದ ಎಸ್‌ಆರ್ ಕಂಠಿ ಅವರು ಮುಂದೆ 1962 ಮತ್ತು 67ರ ಚುನಾವಣೆಯಲ್ಲೂ ಗೆಲುವು ಸಾಧಿಸಿದರು. 1968ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಗಪ್ಪ ಬಾಳಪ್ಪ ನಾಗರಾಳ ಅವರು ಗೆಲುವು ಸಾಧಿಸುತ್ತಾರೆ. ಆನಂತರ 1978ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಶಂಕರಪ್ಪ ಸುಗುಣಪ್ಪ ಕವಶೆಟ್ಟಿ ಅವರು ಮುಂದೆ ಜನತಾ ಪರಿವಾರ ಸೇರಿ, 1983 ಮತ್ತು 85ರಲ್ಲೂ ಗೆದ್ದು ಶಾಸಕರಾಗುತ್ತಾರೆ.

ಎಸ್.ಆರ್ ಕಾಶಪ್ಪನವರ

1989ರಿಂದ ಆರಂಭವಾದ ಎಸ್.ಆರ್ ಕಾಶಪ್ಪನವರ ಅವರ ಗೆಲುವಿನ ಓಟ 2003ವರೆಗೂ ಮುಂದುವರಿಯುತ್ತದೆ. ಸತತ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಒಳ್ಳೆಯ ಹಿಡಿತ ಸಾಧಿಸುತ್ತಾರೆ. ಅವರು ಶಾಸಕರಾಗಿರುವಾಗಲೇ ನಿಧನ ಹೊಂದಿದ್ದರಿಂದ ಉಪಚುನಾವಣೆ ನಡೆಯುತ್ತದೆ. ಅವರ ಪತ್ನಿ ಗೆಲುವು ಸಾಧಿಸುತ್ತಾರೆ. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ 2004ರಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. 2008ರಲ್ಲೂ ಬಿಜೆಪಿ ಅಭ್ಯರ್ಥಿಯ ಗೆಲುವು ಮುಂದುವರಿಯುತ್ತದೆ. 2014ರಲ್ಲಿ ವಿಜಯಾನಂದ ಕಾಶಪ್ಪನವರ ಗೆಲುವು ಸಾಧಿಸಿದರು. ಆದರೆ 2018ರ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರದಲ್ಲಿ ಮತವಿಂಗಡಣೆಯಾಗದ ಹಿನ್ನೆಲೆಯಲ್ಲಿ ಕಾಶಪ್ಪನವರ ಅವರು ಸೋಲಿಗೆ ತಲೆಬಾಗಬೇಕಾಯಿತು.

ಕ್ಷೇತ್ರದ ಜಾತಿ ಲೆಕ್ಕಾಚಾರ ಹೇಗಿದೆ?

ಹುನಗುಂದ ಕ್ಷೇತ್ರದಲ್ಲಿ ಅಂದಾಜು 2,14,145 ಮತದಾರರಿದ್ದಾರೆ. ಲಿಂಗಾಯತ ಸಮುದಾಯದ ಸುಮಾರು 50,000 ಮತದಾರರು ಇದ್ದು, ಈ ಸಮುದಾಯವೇ ನಿರ್ಣಾಯಕ ಪಾತ್ರ ವಹಿಸುತ್ತದೆ. ಕುರುಬ ಸಮಾಜದವರು 30,000, ನೇಕಾರ 20,000, ಅಲ್ಪಸಂಖ್ಯಾತರು 15,000 ದಲಿತ ಸಮುದಾಯದವರು 50,000 ಮತದಾರರಿದ್ದಾರೆ. ಇನ್ನು ರೆಡ್ಡಿ ಸಮುದಾಯ, ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದು, ಅವರಲ್ಲಿ ಬಹುಸಂಖ್ಯಾತ ಮತಗಳು ಬಿಜೆಪಿಗೆ ಸಾಂಪ್ರದಾಯಿಕವಾಗಿ ಬೀಳುತ್ತವೆ ಎನ್ನಲಾಗುತ್ತದೆ.

ಕ್ಷೇತ್ರದಲ್ಲಿ ’ಕೈ’ ಅಭ್ಯರ್ಥಿ ಕಾಶಪ್ಪನವರ ಬಗ್ಗೆ ಒಲವು-ನಿಲುವು ಹೇಗಿದೆ?

ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಕಳೆದ ಬಾರಿ ಕಾಶಪ್ಪನವರ ಸೋಲಿಗೆ ಪ್ರಮುಖ ಕಾರಣವೆಂದರೆ, ಅವರ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಕುರುಬ ಸಮುದಾಯದ ಮುಖಂಡನ ಸಾವಿಗೆ ಕಾರಣ ಅವರು ಎನ್ನುವ ಆರೋಪ. ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ಜನರು ಒಗ್ಗಟ್ಟಾಗಿ ಕಾಶಪ್ಪನವರ ಮೇಲೆ ಸಿಟ್ಟಿಗೆದ್ದು ಅವರ ವಿರುದ್ಧ ಮತ ಚಲಾಯಿಸಿದ್ದರು ಎನ್ನಲಾಗುತ್ತದೆ. ಆದರೆ ಈ ಬಾರಿ ಕುರುಬ ಸಮುದಾಯ ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ ಎನ್ನುತ್ತಾರೆ ಚುನಾವಣಾ ವಿಶ್ಲೇಷಕರು.

ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಿದ ಕಾರಣಕ್ಕೆ ಲಿಂಗಾಯತ ಬಹುಸಂಖ್ಯಾತ ಮತಗಳು ಕಾಶಪ್ಪನವರ ಪರವಾಗಿ ವಾಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಮೀಸಲಾತಿ ವಿಚಾರದಲ್ಲಿ ಸರ್ಕಾರ ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತುಕೊಂಡು ಲಿಂಗಾಯತ ಹಾಗೂ ಒಕ್ಕಲಿಗರಿಗೆ ನೀಡಿದಾಗ, ಕಾಶಪ್ಪನವರ ಅವರು ಅದನ್ನು ವಿರೋಧ ಮಾಡಿದ್ದರು. “ಒಂದು ಸಮುದಾಯಕ್ಕೆ ಅನ್ಯಾಯ ಮಾಡಿ ಮೀಸಲಾತಿ ಪಡೆಯುವಷ್ಟು ಕೆಟ್ಟವರಲ್ಲ ಈ ಲಿಂಗಾಯತ ಸಮುದಾಯದವರು” ಎಂದು ಹೇಳಿಕೆ ನೀಡಿದ್ದರು. ಇದು ಕೂಡ ಕಾಶಪ್ಪನವರ ಅವರಿಗೆ ಅಲ್ಪಸಂಖ್ಯಾತ ಮತದಾರರಿಂದ ಸಣ್ಣ ಮಟ್ಟದ ನೆರವು ತರಬಹುದು. ಇನ್ನು ಕಳೆದ ಚುನಾವಣೆಯಲ್ಲಿ ಸೋತರೂ ಅವರು ಕ್ಷೇತ್ರದ ಜನರಿಂದ ದೂರ ಸರಿದಿಲ್ಲ ಎನ್ನುವುದು ಅವರಿಗೆ ಪ್ಲಸ್ ಪಾಯಿಂಟ್.

ಬಿಜೆಪಿ ಅಭ್ಯರ್ಥಿಯಾಗಲಿರುವ ದೊಡ್ಡನಗೌಡ ಪಾಟೀಲ್?

ಬಿಜೆಪಿಯಿಂದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ್ ಅವರೇ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯೊಡ್ಡಿ 25 ಸಾವಿರ ಮತಗಳನ್ನು ಪಡೆದಿದ್ದ ನವಲಿ ಹಿರೇಮಠ ಅವರು ಈ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಅವರು ಈ ಹಿಂದೆಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಬಾರಿಯೂ ಬಿಜೆಪಿಯ ಕೆಲವು ಸ್ಥಳೀಯ ನಾಯಕರು ಹಿರೇಮಠ ಅವರಿಗೆ ಟಿಕೇಟ್ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ನಾಯಕರು ಮತ್ತೆ ಪಾಟೀಲ್‌ಗೆ ಮಣೆ ಹಾಕುವ ಸಾಧ್ಯತೆ ಇದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನರಗುಂದ: ಬಂಡಾಯದ ನೆಲದಲ್ಲಿ ’ನೀರಾವರಿ’ ರಾಜಕೀಯ!

ದೊಡ್ಡನಗೌಡ ಪಾಟೀಲ್ ಅವರು ಶಾಸಕರಾದ ಮೇಲೆ ಜನಸಂಪರ್ಕದಿಂದ ದೂರವೇ ಉಳಿದಿದ್ದಾರೆ ಎನ್ನುವ ಅಭಿಪ್ರಾಯ ಇದೆ. ಇನ್ನು ಈ ಕ್ಷೇತ್ರದಲ್ಲಿ ದೊಡ್ಡನಗೌಡ ಪಾಟೀಲ್ ನಾಮಕಾವಸ್ತೆ ಶಾಸಕ, ಅಧಿಕಾರವೆಲ್ಲಾ ಅವರ ಮಕ್ಕಳೇ ನಡೆಸುತ್ತಾರೆ ಮತ್ತು ಗೂಂಡಾಗಿರಿಯ ಗಂಭೀರ ಆರೋಪಗಳು ಇವರ ಮೇಲಿವೆ. ಅದೇ ರೀತಿ ಕೂಡಲಸಂಗಮದ ಅಭಿವೃದ್ದಿ ಹೆಸರಿನಲ್ಲಿ ನೂರಾರು ಕೋಟಿ ಹಗರಣದ ಆರೋಪವೂ ಶಾಸಕ ಪಾಟೀಲ್ ಮೇಲಿದೆ. ಕ್ಷೇತ್ರದಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಇದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಕಲ್ಯಾಣ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ನವಲಿಹಿರೇಮಠ ಕಣಕ್ಕೆ

ನವಲಿಹಿರೇಮಠ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಕೋಟ್ಯಂತರ ರೂ ಆಸ್ತಿ ಹೊಂದಿರುವ ಇವರು, ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಅದೇ ರೀತಿ ಚುನಾವಣೆ ಗುರಿಯಾಗಿಸಿಕೊಂಡು ಕ್ಷೇತ್ರದ ಪ್ರತಿ ಊರುಗಳಿಗೂ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ಇವರ ಮೇಲೆ ಜನರ ಒಲವು ತುಸು ಹೆಚ್ಚಿದೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ಅವರು ಗಾಲಿ ಜನಾರ್ಧನ ಅವರು ಕಲ್ಯಾಣ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿರುವುದು ಸ್ವಲ್ಪ ಮಟ್ಟಿನ ಹಿನ್ನಡೆಗೂ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ನವಲಿಹಿರೇಮಠ, ಟಿಕೆಟ್ ಸಿಗದೇ ಪಕ್ಷೇತರರಾಗಿ ಎರಡೂ ಪಕ್ಷಗಳಿಗೆ ಸವಾಲು ಒಡ್ಡಿದ್ದರು. ಈ ಬಾರಿಯೂ ಪಕ್ಷೇತರರಾಗಿ ಕಣಕ್ಕಿಳಿದಿದ್ದರೆ ಗೆಲುವಿನ ದಡಕ್ಕೆ ಹತ್ತಿರವಾಗುತ್ತಿದ್ದರು. ಕ್ಷೇತ್ರದಲ್ಲಿ ಒಳ್ಳೆಯ ಹಿಡಿತ ಸಾಧಿಸಿರುವ ಇವರು ಬಿಜೆಪಿ-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸೋಲುಣಿಸಿ ಗೆಲುವು ಸಾಧಿಸಿದರೂ ಅಚ್ಚರಿ ಪಡಬೇಕಿರಲಿಲ್ಲ. ಆದರೆ ನಾಮಪತ್ರ ಸಲ್ಲಿಕೆಯ ಅಂತಿಮ ಕ್ಷಣದಲ್ಲಿ ಅವರು ಗಾಲಿ ಜನಾರ್ಧನ ರೆಡ್ಡಿ ಪಕ್ಷ ಸೇರಿದ್ದಾರೆ.

ಈ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಹೆಚ್ಚಿದ್ದು, ವಿಜಯಾನಂದ ಕಾಶಪ್ಪನವರ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೂ ವಿಜಯಾನಂದರಿಗೆ ಅಷ್ಟು ಸುಲಭಕ್ಕೆ ವಿಜಯದ ಮಾಲೆ ದಕ್ಕುವುದಿಲ್ಲ. ಏಕೆಂದರೆ, ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವಲಿ ಹಿರೇಮಠ ಕೂಡ ಲಿಂಗಾಯತ ಸಮುದಾಯದವರಾಗಿರುವುದರಿಂದ, ಅವರು ಕಳೆದ ಬಾರಿ 25000 ಮತಗಳನ್ನು ಪಡೆಯುವ ಮೂಲಕ ಕಾಶಪ್ಪನವರ ಗೆಲುವಿಗೆ ಮುಳ್ಳಾದರು. 2023ರ ಈ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕೈ-ಕಮಲ ನಾಯಕರ ನಡುವೆ ಪ್ರಬಲ ಸ್ಪರ್ಧೆ ಏರ್ಪಡಲಿದ್ದು, ಈ ಇಬ್ಬರಲ್ಲಿ ನವಲಿಹಿರೇಮಠ ಯಾರಿಗೆ ಮುಳುವಾಗುತ್ತಾರೋ ಕಾದುನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...