Homeಅಂತರಾಷ್ಟ್ರೀಯಮತ್ತೊಂದು ಧೋಕ್‍ಲಾಂ ಆಗಲಿದೆಯೇ ಲಡಾಖ್‍ನ ಗಾಲ್ವನ್ ಕಣಿವೆ?

ಮತ್ತೊಂದು ಧೋಕ್‍ಲಾಂ ಆಗಲಿದೆಯೇ ಲಡಾಖ್‍ನ ಗಾಲ್ವನ್ ಕಣಿವೆ?

ಪಾಕಿಸ್ತಾನದ ವಿರುದ್ದ ಯುದ್ದಕ್ಕೆ ಚೀರಾಡುವ, ಪ್ರಚೋದಿಸುವ ಸುದ್ದಿ ವಾಹಿನಿಗಳಿಗೂ ಚೀನಾದ ನುಸುಳುವಿಕೆ ಮತ್ತು ಜಾಗದ ಒತ್ತುವರಿಯು ಪ್ರತಿನಿತ್ಯದ ಪ್ರೈಮ್‍ಟೈಮ್ ಚರ್ಚೆಯ ವಿಚಾರ ಆಗಲಿಲ್ಲ. ಪಾಕಿಸ್ತಾನದ ಮೇಲೆ ಬಳಸುವ ಪ್ರಚೋದನಾ ಭಾಷೆಯನ್ನು ಚೀನಾದ ಮೇಲೆ ಬಳಸುತ್ತಿಲ್ಲ. ರಾಷ್ಟ್ರವಾದವು ಎದುರಾಳಿಯ ಸಾಮಥ್ರ್ಯದ ಮೇಲೂ ಅವಲಂಬಿತವಾಗಿರುತ್ತದೆಯೇ ಎಂಬ ಪ್ರಶ್ನೆಯು ಇಲ್ಲಿ ಏಳುವಂತಾಗಿದೆ.

- Advertisement -
- Advertisement -

ವಸಾಹತುಶಾಹಿ ಆಳ್ವಿಕೆಗೂ ಹಿಂದೆ ಜಾಗತಿಕ ವಾಣಿಜ್ಯದಲ್ಲಿ ಮುಂಚೂಣಿಯಲ್ಲಿದ್ದ ಚೀನಾ ಮತ್ತು ಭಾರತಗಳು ವಸಾಹತು ಆಳ್ವಿಕೆಯಿಂದ ಕ್ರಮೇಣ ತಮ್ಮ ಸ್ವಾಯತ್ತತೆ ಸ್ವಾತಂತ್ರ ಕಳೆದುಕೊಂಡು ಮತ್ತೆ ಅದನ್ನು ಪಡೆಯಲು ಹರಸಾಹಸ ಮಾಡಬೇಕಾಗಿ ಬಂತು. ಕೋಟ್ಯಂತರ ಜನರ ತ್ಯಾಗ ಬಲಿದಾನಗಳಿಂದ ಎರಡೂ ರಾಷ್ಟ್ರಗಳು ಸ್ವಾತಂತ್ರ್ಯ ಪಡೆಯುವಂತಾಯಿತು. ಆ ಸ್ವಾತಂತ್ರ್ಯದ ಜೊತೆಗೆ ಭಾರತದ ವಿಭಜನೆಯೂ ಆಯಿತು. ನಂತರದ ಗಡಿವಿವಾದಗಳು ವಸಾಹತು ಗಡಿರೇಖೆಗಳಿಗೂ ಹೊಸದಾಗಿ ಸೃಷ್ಟಿಯಾಗಿದ್ದ ರಾಷ್ಟ್ರಗಳ ಕಾಲ್ಪನಿಕ ಅಖಂಡ ಸಾಮ್ರಾಜ್ಯದ ದೃಷ್ಟಿಕೋನದ ಗಡಿರೇಖೆಗಳಿಗೂ ಇರುವ ಸಂಘರ್ಷವೆಂದರೆ ತಪ್ಪಾಗಲಾರದು. ವಿಭಜನೆಯ ವೇಳೆಯಲ್ಲಿ ಧಾರ್ಮಿಕ ಅಡಿಪಾಯಕ್ಕೆ ಒತ್ತುಕೊಟ್ಟು ಸೃಷ್ಟಿಯಾದ ಪಾಕಿಸ್ತಾನ ಅವನತಿಯ ಹಾದಿ ಹಿಡಿದು ಜಾಗತಿಕ ಅಪಮಾನಕ್ಕೆ ಗುರಿಯಾದರೆ, ಜಾತ್ಯತೀತತೆಯ ಅಡಿಪಾಯಕ್ಕೆ ಒತ್ತು ಕೊಟ್ಟ ಭಾರತ ಎಪ್ಪತ್ತು ವರ್ಷಗಳಿಂದ ಪ್ರಪಂಚದಲ್ಲಿ ತನ್ನದೇ ರೀತಿಯ ಅಭಿವೃದ್ದಿ ಮಾದರಿಯಿಂದ ಜಾಗತೀಕ ಮಟ್ಟದಲ್ಲಿ ಯಾವುದೇ ವಿಷಯದಲ್ಲಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ಪೈಪೋಟಿ ಕೊಡುವಷ್ಟು ಬೆಳೆದು ನಿಂತಿದೆ. ಭಾರತ ಪಾಕಿಸ್ತಾನ ಸೃಷ್ಟಿಯ ಸಮಯದಲ್ಲೇ ಚೀನಾ ಸಮಾಜವಾದಿ ಕ್ರಾಂತಿಯನ್ನು ಸಾಧಿಸಿತ್ತಾದರೂ ಈಗ ಬೃಹತ್ ಗಾತ್ರದ ಬಂಡವಾಳಶಾಹಿರಾಷ್ಟ್ರವಾಗಿ ಅಮೆರಿಕ ವಿರುದ್ದ ಪೈಪೋಟಿಗೆ ನಿಂತಿದೆ. ಮೂರು ರಾಷ್ಟ್ರಗಳಿಗೆ ತನ್ನದೇ ಆದ ಮಹತ್ವಾಕಾಂಕ್ಷೆಗಳು ಮತ್ತು ಸಮಸ್ಯೆಗಳು ಇದ್ದೇ ಇದೆ. ಚೀನಾ ಮತ್ತು ಪಾಕಿಸ್ತಾನದೊಂದಿಗೆ ಭಾರತ ದೊಡ್ಡ ಗಡಿ ಪ್ರದೇಶ ಹೊಂದಿದ್ದು, ಅದರಿಂದ ಬಗೆಹರಿಯದ ಗಡಿ ವಿವಾದದಿಂದಾಗಿ ಐದು ಬಾರಿ ಯುದ್ದಕ್ಕೂ ಹೋಗಿದೆ (ನಾಲ್ಕು ಬಾರಿ ಪಾಕಿಸ್ತಾನದ ವಿರುದ್ದ, ಒಂದು ಬಾರಿ ಚೀನಾ ವಿರುದ್ದ).

ಈಗ ಮತ್ತೆ ಅದೇ ಗಡಿ ವಿವಾದ ಭುಗಿಲೆದ್ದಿದೆ. ಚೀನಾ ಒಟ್ಟೂ ಮೂರು ಪ್ರದೇಶಗಳಲ್ಲಿ ಗಡಿ ನಿಯಂತ್ರಣ ರೇಖೆಗೂ ಮುಂದೆ ಬಂದು ತನ್ನ ಐದು ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿ ರಸ್ತೆ ಮತ್ತು ಬಂಕರ್‍ಗಳನ್ನು ನಿರ್ಮಿಸುತ್ತಿದೆ. ಉತ್ತರ ಲಡಾಖಿನ ಗಾಲ್ವನ್ ಕಣಿವೆ ಪ್ರದೇಶದಲ್ಲಿ 4 ಕಿಲೋ ಮೀಟರ್, ಮಧ್ಯ ಲಡಾಖಿನ ಪೊಗೊಂಗ್ ತ್ಸೋ ಕೆರೆಯ 3ರಿಂದ 5 ಕಿಲೋಮೀಟರ್ ದೂರದವರೆಗೂ ಆಕ್ರಮಿಸಿಕೊಂಡಿದೆ. ಸಿಕ್ಕಿಂ ಗಡಿ ಪ್ರದೇಶದ ನಕುಲದಲ್ಲೂ ಇದೆ ವರದಿಯಾಗಿದೆ. ಸ್ವತಃ ರಕ್ಷಣಾ ಮಂತ್ರಿಯಾಗಿರುವ ರಾಜ್‍ನಾಥ್ ಸಿಂಗ್ ಅವರು ವಾಸ್ತವ ಗಡಿಪ್ರದೇಶದಿಂದ ಚೀನಾ ಸೈನಿಕರು ಒಳಬಂದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಮತ್ತು ಅದನ್ನು ಮುಂದೆ ಮಾತುಕತೆಯ ಮೂಲಕ ಇತ್ಯರ್ಥ ಮಾಡಲಾಗುತ್ತದೆ ಎಂದಿದ್ದಾರೆ.

ಹಾಗಿದ್ದರೆ ಅಧಿಕಾರಕ್ಕೆ ಬರುವ ಮುಂಚೆ ಚೀನಾವನ್ನು ಹಿಂದಿನ ಸರ್ಕಾರದ ಸಂತೃಪ್ತತೆ ಭಾವನೆಯ ದೃಷ್ಟಿಕೋನವನ್ನು ಬಿಟ್ಟು, ಕೆಂಗಣ್ಣಿನಿಂದ ನೋಡಬೇಕು ಎಂದು ಹೇಳಲಾಗಿದ್ದು ಏನಾಯಿತು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ. ‘ರಾಷ್ಟ್ರವಾದಿ’ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದರ ಬಗ್ಗೆ ಇದುವರೆಗೆ ಏನೂ ಮಾತಾಡಿಲ್ಲ. ಪಾಕಿಸ್ತಾನದ ವಿರುದ್ದ ‘ನಡೆಸಲಾದ’ ಕ್ಷಿಪ್ರ ಕಾರ್ಯಾಚರಣೆ -ಸರ್ಜಿಕಲ್ ಸ್ಟ್ರೈಕ್- ಮಾಡಿ ಚೀನಾ ಸೈನಿಕರನ್ನು ಹಿಂದಕ್ಕೆ ಕಳಿಸುವ ರೀತಿಯ ಮಾತುಗಳೇ ಕೇಳಿಬರಲಿಲ್ಲ. ಇದು ಆಶ್ಚರ್ಯಕರವೇ ಅಥವಾ ಇದರ ಹಿಂದೆ ಬೇರೆ ಕಾರಣಗಳಿವೆಯೇ ಎಂಬುದನ್ನೂ ಚರ್ಚಿಸಬೇಕಿದೆ. ಏಕೆಂದರೆ ವಾಸ್ತವ ಗಡಿ ರೇಖೆಗಿಂತ ಪಾಕಿಸ್ತಾನದ ಸೈನಿಕರು ಬಂದಿದ್ದರು ಎಂಬ ಕಾರಣಕ್ಕೇ ಕಾರ್ಗಿಲ್ ಯುದ್ಧವಾಗಿತ್ತು. ಈಗ ಚೀನಾದ ವಿಚಾರದಲ್ಲಿ ಮಾತ್ರ – ಅದರಲ್ಲೂ ಚೀನಾವನ್ನು ಬಾಯ್ಕಾಟ್ ಮಾಡಿ ಎಂದು ದೇಶದೊಳಗೆ ನಡೆಸಲಾಗುತ್ತಿರುವ ಆನ್‍ಲೈನ್ ಪ್ರಚಾರದಲ್ಲಿ ಸರ್ಕಾರದ ಬೆಂಬಲಿಗರೇ ಹೆಚ್ಚಾಗಿರುವಾಗ – ಆಫ್‍ಲೈನ್ ಸಂಘರ್ಷಕ್ಕೆ ಮುಂದಾಗುತ್ತಿಲ್ಲ.

ಪಾಕಿಸ್ತಾನದ ವಿರುದ್ದ ಯುದ್ದಕ್ಕೆ ಚೀರಾಡುವ, ಪ್ರಚೋದಿಸುವ ಸುದ್ದಿ ವಾಹಿನಿಗಳಿಗೂ ಚೀನಾದ ನುಸುಳುವಿಕೆ ಮತ್ತು ಜಾಗದ ಒತ್ತುವರಿಯು ಪ್ರತಿನಿತ್ಯದ ಪ್ರೈಮ್‍ಟೈಮ್ ಚರ್ಚೆಯ ವಿಚಾರ ಆಗಲಿಲ್ಲ. ಪಾಕಿಸ್ತಾನದ ಮೇಲೆ ಬಳಸುವ ಪ್ರಚೋದನಾ ಭಾಷೆಯನ್ನು ಚೀನಾದ ಮೇಲೆ ಬಳಸುತ್ತಿಲ್ಲ. ರಾಷ್ಟ್ರವಾದವು ಎದುರಾಳಿಯ ಸಾಮಥ್ರ್ಯದ ಮೇಲೂ ಅವಲಂಬಿತವಾಗಿರುತ್ತದೆಯೇ ಎಂಬ ಪ್ರಶ್ನೆಯು ಇಲ್ಲಿ ಏಳುವಂತಾಗಿದೆ.

ಚೀನಾವು ತನ್ನದೊಂದು ಹೆದ್ದಾರಿ ಯೋಜನೆಯನ್ನೂ ಕೈಗೊಂಡಿರುವುದು ಎಲ್ಲರಿಗೂ ಗೊತ್ತಿದೆ. ಟಿಬೆಟ್ ಪ್ರದೇಶವನ್ನು ಲಡಾಕ್ ಮೂಲಕ ಕಾಶ್ಮೀರದ ಮೇಲ್ಬಾಗದ ಕಷ್ಗರ್ ಪ್ರದೇಶಕ್ಕೆ ಸಂಪರ್ಕ ಒದಗಿಸುವ ಹೆದ್ದಾರಿ ಮತ್ತು ಮೂಲಸಂಪರ್ಕ ಒದಗಿಸುವ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಹೆದ್ದಾರಿಯೇ ಪಾಕಿಸ್ತಾನದ ಮೂಲಕ ಹೋಗುವ 46 ಬಿಲಿಯನ್ ಡಾಲರ್ ಮೊತ್ತದ ಚೀನಾ-ಪಾಕಿಸ್ತಾನ ವಾಣಿಜ್ಯ ಓಣಿ ಎಂದು ಬಿಂಬಿಸಲಾಗುತ್ತಿದೆ. ಮೋದಿ ಸರ್ಕಾರವು ಈ ಹೊತ್ತಿನಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನಗಳಿಗೆ ವಿಶೇಷ ಮಹತ್ವವಿದೆ. ಏಕೆಂದರೆ ಈ ಪ್ರಾಂತದಲ್ಲಿ ಮಾತ್ರವಲ್ಲದೇ ಪ್ರಪಂಚದಲ್ಲೇ ಅತೀ ದೊಡ್ಡ ಶಕ್ತಿಯಾಗುವ ಚೀನಾದ ಮಹತ್ವಾಕಾಂಕ್ಷೆಯ ಭಾಗವಾಗಿಯೂ ಈ ಕಾರಿಡಾರ್ ನಿರ್ಮಾಣ ಸಾಗಿದೆ. ಹೀಗಿರುವಾಗ ತಮ್ಮ ಯೋಜನೆಯೇನು ಎಂದು ಸಹಜವಾಗಿಯೇ ಏಳುವ ಯಾವುದಕ್ಕೂ ನೇರ ಉತ್ತರ ನೀಡದೆ ಒಂದು ರೀತಿಯ ಉಡಾಫೆ ಹೇಳಿಕೆಗಳು ಹೊರಬಿದ್ದಿವೆ. ಇದೇ ಸಂದರ್ಭದಲ್ಲಿ ನೇಪಾಳ ಕೂಡ ಭಾರತದ ಉತ್ತರಾಖಂಡ್ ಗಡಿಭಾಗದ ಲಿಪುಲೆಖ್ ಪಾಸ್ ಬಳಿ ಭಾರತದ ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡಿದೆ.

ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗಳು, ರಸ್ತೆ ಸಂಪರ್ಕಗಳನ್ನು ಮಾಡುವುದರ ಬದಲಿಗೆ ನಮ್ಮ ಸೈನಿಕರಿಗೆ ಚೀನಾದಿಂದ ಆಮದು ಮಾಡಿಕೊಂಡ ಬುಲೆಟ್ ಪ್ರೂಫ್ ಕವಚಗಳನ್ನು ಕೊಡುತ್ತಿರುವ ಆರೋಪವನ್ನು ಎದುರಿಸುತ್ತಿದೆ. ಸರ್ದಾರ್ ಪಟೇಲರ ಏಕತೆ ಪ್ರತಿಮೆಗೂ ಚೀನಾಗೆ 3000 ಕೋಟಿ ಕೊಟ್ಟು ಕಚ್ಚಾವಸ್ತು ಆಮದು ಮಾಡಿಕೊಂಡಿದೆ. ಅದೇ ಹೊತ್ತಿನಲ್ಲಿ ಚೀನಾದ ಟಿಕ್‍ಟಾಕ್ ಮತ್ತಿತರ ಮೊಬೈಲ್ ಅಪ್ಲಿಕೇಶನ್ಸ್‍ಗಳನ್ನು ಕಿತ್ತುಹಾಕಲು ಸರ್ಕಾರವನ್ನು ನಡೆಸುತ್ತಿರುವ ಪಕ್ಷದ ವಿವಿಧ ಐಟಿಸೆಲ್‍ಗಳೇ ಹೇಳುತ್ತಿವೆ. ಇದೊಂಥರಾ ಅಪಹಾಸ್ಯದ ಸನ್ನಿವೇಶವನ್ನು ಸೃಷ್ಟಿಸಿದೆ.

ಹಿಂದೆ ಡೋಕ್ಲಾಮ್ ಪ್ರದೇಶದಲ್ಲಿ ಬಂದಿಳಿದ ಚೀನಾದ ಸೈನಿಕರು ಮತ್ತೆ ವಾಪಸ್ಸು ಹೋಗಲಿಲ್ಲ. ಭಾರತವೇ ಮಣಿಯಿತು ಎಂಬ ವರದಿಗಳು ಆಗಲೇ ಬಂದವು. ವಿರೋಧಪಕ್ಷದವರೂ ಈ ಕುರಿತು ಸರ್ಕಾರವನ್ನು ಚುಚ್ಚಿ ಪ್ರಶ್ನೆ ಕೇಳಿದರು. ದೇಶದೊಳಗೆ ಈ ಎಲ್ಲಾ ಪ್ರಶ್ನೆಗಳನ್ನು ಎತ್ತದಂತೆ ಮಾಧ್ಯಮಗಳನ್ನು ಬಾಯಿಮುಚ್ಚಿಸುವ ಅಗತ್ಯವೂ ಇಲ್ಲದಂತೆ ಬಹುತೇಕ ಮಾಧ್ಯಮಗಳು ಸರ್ಕಾರದ ಸಾಧನೆಗಳನ್ನು ಮಾತ್ರ ಹೇಳುವ ಸಾಧನಗಳಾಗಿಬಿಟ್ಟಿದ್ದರೆ, ಉಳಿದ ಮಾಧ್ಯಮಗಳು ರಾಷ್ಟ್ರವಾದದ ಹೆಸರಿನಲ್ಲಿ ಬರುವ ಬಾಣಗಳಿಗೆ ಹೆದರಿ ಕುಳಿತಿರಬೇಕಿದೆ. ಆದರೆ ಸಾಮಾನ್ಯವಾಗಿ ಗಡಿ ವಿಚಾರದಲ್ಲೇ ಕೆರಳುವ ರಾಷ್ಟ್ರವಾದವು ಇಲ್ಲಿ ಗಡಿಯನ್ನೇ ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕ ಕಾಡುತ್ತಿದೆ. ಅಂದರೆ ರಾಷ್ಟ್ರವಾದದ ಹೆಸರಿನಲ್ಲಿ ಆಳ್ವಿಕೆ ನಡೆಸುವ ಸರ್ಕಾರವೇ ದುರ್ಬಲ ಸ್ಥಿತಿಯಲ್ಲಿ ನಿಂತಿದೆಯೇ ಎಂಬ ಪ್ರಶ್ನೆಗಳಿಗೆ ಕೇಂದ್ರವು ಉತ್ತರ ನೀಡುವುದೊಳ್ಳೆಯದು. ಇಲ್ಲದಿದ್ದರೆ ವಿಶ್ವದ ಸೂಪರ್‍ಪವರ್ ಆಗುವ ಹೆಗ್ಗಳಿಕೆಯ ಕನಸು ಕಾಣುತ್ತಿರುವ ಭಾರತದ ಜನರಿಗೆ ಮುಂದೊಂದು ದಿನ ತಾವು ದೈನೇಸಿ ಸ್ಥಿತಿಯಲ್ಲಿದ್ದೇವೆ ಎಂಬ ಭೀಕರ ಪಾತಾಳಕ್ಕಿಳಿಯುವ ದುಸ್ಥಿತಿ ಬರಬಾರದು.


ಇದನ್ನು ಓದಿ: ನೇಪಾಳ ಪೊಲೀಸರ ಗುಂಡಿನ ದಾಳಿ; ಬಿಹಾರ ಗಡಿಯಲ್ಲಿ ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದೊಂದು ಚೀನಾ ಪರವಾದ ಲೇಖನ. ಇಲ್ಲಿ ಪ್ರಧಾನ ಮಂತ್ರಿ ಅವರನ್ನು ಟೀಕಿಸುವ ಏಕಮಾತ್ರ ಉದ್ದೇಶದಿಂದ ಬರೆದಿದ್ದಾರೆ. ಇಲ್ಲಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಲೇಖನ ಬರೆಯಲಾಗಿದೆ. ಇದೊಂದು ಅಪಹಾಸ್ಯ ಕುಚೋದ್ಯ..

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...