Homeನ್ಯಾಯ ಪಥತಳಸಮುದಾಯಗಳ ಕಥನವನ್ನು ಮರೆಮಾಚುವುದು ಭಾರತದ ಮಟ್ಟಿಗೆ ಆತ್ಮವಂಚನೆಯೇ ಸರಿ

ತಳಸಮುದಾಯಗಳ ಕಥನವನ್ನು ಮರೆಮಾಚುವುದು ಭಾರತದ ಮಟ್ಟಿಗೆ ಆತ್ಮವಂಚನೆಯೇ ಸರಿ

- Advertisement -
- Advertisement -

| ಸಂಪಾದಕೀಯ |

ಕೇಂದ್ರ ಸರ್ಕಾರ ತಾನು ಆಡಳಿತ ನಡೆಸಿದ 5 ವರ್ಷಗಳಲ್ಲಿ ಸುಪ್ರೀಂ ಕೋರ್ಟ್, ಆರ್‍ಬಿಐ, ಸಿ.ಬಿ.ಐ, ದತ್ತಾಂಶ ಸಂಸ್ಥೆಗಳು ಸೇರಿದಂತೆ ಆಡಳಿತದ ಎಲ್ಲಾ ಸಾಂಸ್ಥಿಕ ಆಯಾಮಗಳನ್ನು ಹದಗೆಡಿಸಿರುವುದು ಪ್ರಜ್ಞಾವಂತರಿಗೆ ಗೊತ್ತೇ ಇದೆ. ಸರ್ಕಾರದ ಅನಧಿಕೃತ ಸಂಸ್ಥೆಗಳ ಮೂಲಕ ದೇಶದ ಜನ ಏನು ತಿನ್ನಬೇಕು, ಯಾವ ರೀತಿಯ ಬಟ್ಟೆ ಹಾಕಬೇಕು ಎನ್ನುವ ಫರ್ಮಾನು ಸಹ ಹೊರಡಿಸಲಾಯಿತು. ಈಗ ಅದೇ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ದೇಶದ ಮಕ್ಕಳು ಏನು ಕಲಿಯಬೇಕು ಏನು ಬಿಡಬೇಕು ಎಂದು ನಿರ್ಧರಿಸಲು ಮುಂದಾಗಿರುವುದು ಪ್ರಜಾಪ್ರಭುತ್ವ ಘೋರ ಅಣಕವಾಗಿದೆ.

ಭಾರತ ಬಹುತ್ವ ದೇಶ. ಈ ವೈವಿಧ್ಯತೆಯೇ ಅದರ ಜೀವಾಳ. ಈ ವೈವಿಧ್ಯತೆಯೂ ದೇಶದ ಎಲ್ಲಾ ರಂಗಗಳಲ್ಲೂ ಕಂಡಿಬಂದಿದ್ದು ಸಹಜವಾಗಿಯೇ ಮಕ್ಕಳ ಕಲಿಕೆಯಲ್ಲಿಯೂ ಸೇರಿಕೊಂಡಿದೆ. ಭಾರತದ ಪಠ್ಯಪುಸ್ತಕಗಳು ಸಮಗ್ರತೆಯಿಂದ ಕೂಡಿದ್ದು ಇಡೀ ದೇಶದ ಸಂಸ್ಕೃತಿ ಆಚಾರ ವಿಚಾರ ಜನಾಂಗಗಳ ಕುರಿತ ಮಾಹಿತಿಗಳನ್ನು ಒಳಗೊಂಡಿರಬೇಕೆನ್ನುವುದು ಸಂವಿಧಾನದ ಆಶಯ ಮಾತ್ರವಲ್ಲ ಮಕ್ಕಳ ಕಲಿಕೆಯ ದೃಷ್ಟಿಯಿಂದ, ಅವರ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಅನಿವಾರ್ಯವೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ನಾವಿನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಒಳಗೊಳ್ಳಬೇಕಿರುವ ಸಾವಿರಾರು ಅಂಶಗಳಿದ್ದರೂ ಆ ಕಡೆ ಹೆಜ್ಜೆ ಇಟ್ಟೆದ್ದೆವು. ಆದರೆ ಈ ಸರ್ಕಾರ ಅದರಿಂದ ಹಿಂದೆ ಬರುವ ಸೂಚನೆಗಳನ್ನು ನೀಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಮೂರು ದಿನ ಹಿಂದೆಯಷ್ಟೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಪ್ರಕಾಶ್ ಜಾವೇಡ್‍ಕರ್‍ ರವರ ನಿರ್ದೇಶನದ ಮೇರೆಗೆ ಮಕ್ಕಳ ಕಲಿಕೆಯ ಹೊರೆ ಕಡಿಮೆ ಮಾಡುವ ನೆಪಹೊಡ್ಡಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಭೇತಿ ಮಂಡಳಿಯು 9ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಭಾರೀ ಬದಲಾವಣೆಗಳನ್ನು ತಂದಿದೆ. ಭಾರತ ಮತ್ತು ಸಮಕಾಲೀನ ಜಗತ್ತು-1 ಎಂಬ ಪಠ್ಯಪುಸ್ತಕದಲ್ಲಿ 70 ಪುಟಗಳನ್ನು ಕೈಬಿಟ್ಟಿದೆ. ಆದರೆ ಅದರಲ್ಲಿ ಕೇರಳದ ಟ್ರಾವೆಂಕೂರ್‍ನಲ್ಲಿ ಕೆಳ ಜಾತಿಯವರಾಗಿ ಪರಿಗಣಿಸುವ ನಾಡಾರ್ ಮಹಿಳೆಯರು ಎದೆಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟದ ಕಥನ ಸೇರಿದಂತೆ ಮಹತ್ವದ ಮೂರು ಪಾಠಗಳನ್ನು ತೆಗೆದಿರುವುದು ಕೇವಲ ಹೊರೆ ಕಡಿಮೆ ಮಾಡುವುದಕ್ಕಾಗಿ ಎಂದರೆ ನಂಬಲು ಸಾಧ್ಯವೇ?

ಮುಂದುವರಿದು ಇತಿಹಾಸ ಮತ್ತು ಕ್ರೀಡೆ ಎಂಬ ಅಧ್ಯಾಯದಲ್ಲಿ ಭಾರತದಲ್ಲಿ ಕ್ರಿಕೆಟ್ ಆಟವೆಂಬುದು ಕೆಲವೇ ಜಾತಿ, ಪ್ರದೇಶ ಮತ್ತು ಸಮುದಾಯದೊಂದಿಗೆ ಮಾತ್ರ ಬೆಸೆದುಕೊಂಡಿದೆ ಎಂಬುದರ ವಿಮರ್ಶಾತ್ಮಕ ಪಠ್ಯವನ್ನು ಸಹ ಕೈಬಿಡಲಾಗಿದೆ. ಹಾಗಯೇ ಗ್ರಾಮೀಣ ಜನರು ಮತ್ತು ರೈತರು ಎಂಬ ಅಧ್ಯಾಯದಡಿ ಬಂಡವಾಳಶಾಹಿ ಮತ್ತು ವಸಾಹತುಶಾಹಿ ಆಳ್ವಿಕೆಗಳು ಗ್ರಾಮೀಣ ಜನರ ಮೇಲೆ ಅದರಲ್ಲೂ ರೈತರ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಇದ್ದ ಅಧ್ಯಾಯವೂ ಹೊರೆಯ ಕಾರಣಕ್ಕೆ ಕಾಣೆಯಾಗಿದೆ. ಕೈಬಿಟ್ಟಿರುವ ಮೂರು ಪಠ್ಯಗಳು ಸಹ ದೇಶದ ತಳಸಮುದಾಯಗಳ ಕಥನವಾಗಿದ್ದು ಅವರಿಗಾಗುತ್ತಿರುವ ಅನ್ಯಾಯ ಮತ್ತು ಸಮಾಜವನ್ನು ವಿಮರ್ಶಾತ್ಮಕ ನೋಡಲು ಸಾಧ್ಯವಾಗುವಂತವೇ ಆಗಿರುವುದರಿಂದ ಇದು ಉದ್ದೇಶಪೂರ್ವಕ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ.

ಈ ಪ್ರಕ್ರಿಯೆ 2016ರಿಂದಲೂ ಚಾಲ್ತಿಯಲ್ಲಿದ್ದು ಈ ಪಠ್ಯಗಳ ಕುರಿತು ಪರೀಕ್ಷೆಗಳಲ್ಲಿ ಪ್ರಶ್ನೆ ಕೇಳಬಾರದೆಂದು ಆಗಲೇ ಸುತ್ತೋಲೆ ಹೊರಡಿಸಿತ್ತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡದೇ ಕೇವಲ ಇತಿಹಾಸ (ಸಾಮಾಜಿಕ ವಿಜ್ಞಾನ)ದ ಪಠ್ಯಪುಸ್ತಕಗಳಲ್ಲಿ ಮಾತ್ರ ಪಠ್ಯಗಳನ್ನು ಕಡಿತ ಮಾಡಿದೆ ಎಂದರೆ ಆಳುವ ಸರ್ಕಾರದ ಹುನ್ನಾರ ಅರ್ಥವಾಗದೇ ಇರುವುದಿಲ್ಲ. ಇದೇ ಸಂದರ್ಭದಲ್ಲಿ ಹೊರೆ ಕಡಿಮೆ ಮಾಡುವ ಉದ್ದೇಶ ಅಂತ ಬಾಯಲ್ಲಿ ಹೇಳುತ್ತಿದ್ದು ಇತ್ತೀಚೆಗೆ ನಿಧನರಾದ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಹಿಂದಿ ಕವನವನ್ನು ಇದೇ ಎನ್‍ಸಿಇಆರ್‍ಟಿ ಪಠ್ಯದಲ್ಲಿ ಸೇರ್ಪಡೆ ಮಾಡಿದೆ.

ಮಕ್ಕಳು ಏನನ್ನು ಕಲಿಯಬೇಕು, ಪಠ್ಯ ಯಾವುದಿರಬೇಕೆಂಬುದನ್ನು ಹಾಗೂ ಎಷ್ಟಿರಬೇಕೆಂಬುದನ್ನು ನಿರ್ಧರಿಸಬೇಕಿರುವುದು ಶಿಕ್ಷಣ ತಜ್ಞರು, ಮಕ್ಕಳ ತಜ್ಞರು. ಆಳುವ ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಮೂಗು ತೂರಿಸುವುದು ಪ್ರಜಾತಂತ್ರ ವಿರೋಧಿಯಾದುದು. ಆದರೆ ಬಲಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಂತೆಲ್ಲಾ ಶಿಕ್ಷಣದ ಕೇಸರಿಕರಣಕ್ಕೆ ನೇರವಾಗಿ ಕೈಹಾಕುತ್ತಾ ಎಳೆಯ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬುವ ಪ್ರಯತ್ನ ಮಾಡುತ್ತಿವೆ. ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ತಮಗೆ ಮನಸ್ಸಿಗೆ ಬಂದುದ್ದನ್ನು ಪಠ್ಯಪುಸ್ತಕಗಳಲ್ಲಿ ತರಲು ಹೊರಟರೆ ಶಿಕ್ಷಣದ ಉದ್ದೇಶವೇ ಬೀದಿಪಾಲಾಗುತ್ತದೆ.

ಈ ಹಿಂದೆಯೂ 2009ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯ ಮಾಡಬೇಕು ಎಂಬ ಸುತ್ತೋಲೆ ಹೊರಡಿಸಿತ್ತು. ಆಗ ಕರ್ನಾಟಕದ ಪ್ರಜ್ಞಾವಂತರಿಂದ ವ್ಯಾಪಕ ವಿರೋಧ ಬಂದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು. ತದನಂತರ ಸಂಸ್ಕøತ ಭಾಷೆಯನ್ನು ಕಡ್ಡಾಯ ಮಾಡುತ್ತೇವೆಂದು ಒಂದಷ್ಟು ದಿನ ಪ್ರಚಾರ ಮಾಡಿದರು. ಈಗ ವೇದ ಶಿಕ್ಷಣವನ್ನು ಕಡ್ಡಾಯಗೊಳಿಸುತ್ತೇವೆಂದು ಗುಲ್ಲೆಬ್ಬಿಸುತ್ತಿದ್ದಾರೆ. ಇಡೀ ಪ್ರಪಂಚವೇ ಆಧುನಿಕ, ವೈಜ್ಞಾನಿಕ ಶಿಕ್ಷಣ ಪಡೆದು ಅಭಿವೃದ್ದಿ ಪಥದಲ್ಲಿ ಮುನ್ನುಗ್ಗುತ್ತಿದ್ದರೆ ಭಾರತ ಮಾತ್ರ ಮತಾಂಧರ ಕೈಗೆ ಸಿಕ್ಕಿ ಹಿಮ್ಮುಖವಾಗಿ ಚಲಿಸುವ ದುಸ್ಥಿಗೆ ತಲುಪಿದೆ.

ಶಿಕ್ಷಣದ ಮೂಲಭೂತ ಉದ್ದೇಶ ಮಾನವೀಯವಾದ, ಪ್ರಜಾತಾಂತ್ರಿಕವಾದ, ಎಲ್ಲಾ ಜನರೂ ಸಮಾನರಾದ, ಬಹು ವೈವಿಧ್ಯತೆಯನ್ನು ಗೌರವಿಸುವ, ಸೃಜನಶೀಲತೆ, ಜ್ಞಾನ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತಾ ಹೋಗುವ ಸಮಾಜವನ್ನು ನಿರ್ಮಿಸುವುದಾಗಿದೆ. ಅದರ ಈಡೇರಿಕೆಗೆ ಎಲ್ಲಾ ಜಾತಿ ಧರ್ಮದ ಮಕ್ಕಳು ಸಹ ಒಂದೇ ಶಾಲೆಯಲ್ಲಿ ಕಲಿಯುವ ಸಮಾನ ಶಾಲಾ ವ್ಯವಸ್ಥೆಯ ಅಗತ್ಯವಿದೆ. ಆಗ ಮಾತ್ರ ಭಾರತದ ಮಕ್ಕಳು ಯಾವುದೇ ಹೇರಿಕೆ ಇಲ್ಲದೇ ಮುಕ್ತವಾಗಿ ಕಲಿಯುವ ವಾತವರಣ ನಿರ್ಮಾಣವಾಗುತ್ತದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಲಪಂಥೀಯ ಸರ್ಕಾರದ ಅರ್ಥಹೀನ ಕ್ರಮಗಳನ್ನು ವಿರೊಧಿಸುತ್ತಲೇ ಜನಪರ ಕಲಿಕಾ ವಿಧನಕ್ಕಾಗಿ ಒತ್ತಾಯಿಸಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...