Homeನ್ಯಾಯ ಪಥಎಚ್.ಎಸ್ ದೊರೆಸ್ವಾಮಿ: ಆದರ್ಶ ನಾಗರಿಕನೊಬ್ಬನ ರೂಪಕ ಮತ್ತು ಪ್ರೀತಿಯ ಬೆಂಗಳೂರಿಗ

ಎಚ್.ಎಸ್ ದೊರೆಸ್ವಾಮಿ: ಆದರ್ಶ ನಾಗರಿಕನೊಬ್ಬನ ರೂಪಕ ಮತ್ತು ಪ್ರೀತಿಯ ಬೆಂಗಳೂರಿಗ

- Advertisement -
- Advertisement -

ಮೇ2017ರ ಅವಧಿಯಲ್ಲಿ, ಬೆಂಗಳೂರಿನ ಕೆರೆಗಳನ್ನು ಉಳಿಸಲು ’ನಮ್ಮ ಬೆಂಗಳೂರು’ ಪ್ರತಿಷ್ಠಾನದ ಪ್ರಯತ್ನಗಳಿಗೆ ಎಚ್.ಎಸ್ ದೊರೆಸ್ವಾಮಿ ಸೇರಿಕೊಂಡರು. ಫೌಂಡೇಶನ್ ಬಿಜೆಪಿಯ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರ ಉಪಕ್ರಮ ಎಂದು ಅವರಿಗೆ ಗೊತ್ತಿತ್ತು. ರಾಜೀವ್ ಚಂದ್ರಶೇಖರ್ ಅವರ ಬಿಜೆಪಿ ಪಕ್ಷದ ಸಿದ್ಧಾಂತವನ್ನು ಅವರು ತೀವ್ರವಾಗಿ ವಿರೋಧಿಸುತ್ತ ಬಂದಿದ್ದರು. ಆದರೆ, ಜನ ಸಮುದಾಯದ ಸಾಮೂಹಿಕ ಆಸ್ತಿಪಾಸ್ತಿ ಮತ್ತು ಮುಂದಿನ ಪೀಳಿಗೆಗೆ ಸಿಗಬೇಕಾದ ಸಾಮುದಾಯಿಕ ಆಸ್ತಿಗಳ ಹಕ್ಕುಗಳನ್ನು ಹಾಗೂ ಜನರನ್ನು ಕಾಪಾಡಲು ಜೀವನವನ್ನು ಸವೆಸಿದ್ದ ದೊರೆಸ್ವಾಮಿ ಅವರಿಗೆ, ಬೆಂಗಳೂರಿನ ಕೆರೆಗಳ ದುಸ್ಥಿತಿಯನ್ನು ಕಂಡು ಅವುಗಳ ರಕ್ಷಣೆಗಾಗಿ ರಾಜೀವ್ ಚಂದ್ರಶೇಖರ್ ಅವರೊಂದಿಗೂ ಜತೆಗೂಡಿ ಕೆಲಸ ಮಾಡುವಂತೆ ಮಾಡಿತ್ತು. ಆದರೆ ಅವರು ಉಳಿದೆಲ್ಲಾ ವೇದಿಕೆಯಲ್ಲಿ ಬಿಜೆಪಿಗಳ ಧರ್ಮಾಂಧತೆಯನ್ನು ಬಹಿರಂಗಗೊಳಿಸುವ ಮತ್ತು ಆ ಸಿದ್ಧಾಂತದ ಮೇಲೆ ಆಕ್ರಮಣ ಮಾಡುವುದನ್ನು ಬಿಡಲಿಲ್ಲ.

ಉಭಯಪಕ್ಷೀಯತೆಯು ಪ್ರಜಾಪ್ರಭುತ್ವದ ಸುದೀರ್ಘ ನಡಿಗೆಯಲ್ಲಿ ಮಧ್ಯಮದ ಹೆಜ್ಜೆಯಾಗಿದೆ ಎಂದು ದೊರೆಸ್ವಾಮಿಯವರು ನಂಬಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಹೋರಾಟ ಮಾಡುವ ತಮ್ಮ ಸಾಮರ್ಥ್ಯದ ಹೊರತಾಗಿಯೂ, ಅವರು ತಮ್ಮ ರಾಜಕೀಯ ಧೋರಣೆಯನ್ನು ಸಂವಹನ ಮಾಡುವ ಸ್ಪಷ್ಟತೆಯು ಅವರ ವಿಶೇಷವಾಗಿತ್ತು.

ಅದು ಅಕ್ಯಾಡೆಮಿಕ್ ಬುದ್ಧಿವಂತಿಕೆಯ ಪ್ರದರ್ಶನವಾಗಿರಲಿಲ್ಲ. ಅವರು ತುಂಬಾ ಅಪರೂಪದ ಸರಳತೆಯೊಂದಿಗೆ ಸಂವಹನ ನಡೆಸುವವರಾಗಿದ್ದರು ಹಾಗೂ ಸಂಕೀರ್ಣ ವಿಷಯಗಳು ಕೂಡ ಎಲ್ಲರಿಗೂ
ಅರ್ಥವಾಗುವಂತೆ ತಿಳಿಸುತ್ತಿದ್ದರು. ಈ ರೀತಿಯಾಗಿ ಅವರ ಸಂದೇಶದ ಸ್ಪಷ್ಟತೆ ಮತ್ತು ಆಳವು ಯುವಕರು, ಹಿರಿಯರು, ಸರಳ ಚಿಂತಕರು ಮತ್ತು ಬುದ್ಧಿಜೀವಿಗಳ ಮನಸ್ಸಿನಲ್ಲಿ ಒಂದೇ ರೀತಿಯಲ್ಲಿ ಉಳಿದುಕೊಳ್ಳುತ್ತಿತ್ತು.

ದೊರೆಸ್ವಾಮಿಯವರು ಬೆಂಬಲಿಸದ ಬೆಂಗಳೂರಿನ ಯಾವುದೇ ನ್ಯಾಯ ಮತ್ತು ಪರಿಸರ ಹೋರಾಟ ಇಲ್ಲ. ಅದು ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯಾಗಿರಲಿ, ಕೆರೆಗಳನ್ನು ರಕ್ಷಿಸುವ ಹೋರಾಟವಿರಲಿ, ಸಾಮೂಹಿಕ ಒಡೆತನದ ಭೂಮಿಯ ಒತ್ತುವರಿ ವಿರುದ್ಧದ ಪ್ರತಿಭಟನೆಯಿರಲಿ, ನಗರದ ಬಡವರ ಸ್ಥಳಾಂತರದ ವಿರುದ್ಧದ ಹೋರಾಟವಾಗಿರಲಿ, ಅನುಪಯುಕ್ತ ಮೂಲಸೌಕರ್ಯಗಳನ್ನು ಒತ್ತಾಯಪೂರ್ವಕವಾಗಿ ಹೇರುವುದನ್ನು ಪ್ರಶ್ನಿಸುವ ಸಂದರ್ಭವಿರಲಿ (ಎಲಿವೇಟೆಡ್ ಕಾರಿಡಾರ್‌ಗಳನ್ನು ನೆನಪಿಸಿಕೊಳ್ಳಿ) ಅಲ್ಲೆಲ್ಲ ದೊರೆಸ್ವಾಮಿ ಮುಂಚೂಣಿಯಲ್ಲಿ ಇರುತ್ತಿದ್ದರು. ಅನಿಯಂತ್ರಿತ ಮತ್ತು ಪ್ರಜಾಸತ್ತಾತ್ಮಕವಲ್ಲದ ಅಭಿವೃದ್ಧಿಗೆ ಅವರ ಪ್ರತಿರೋಧ ಸ್ಪಷ್ಟವಾಗಿತ್ತು. ಎಲ್ಲರಿಗೂ ಮೂಲಭೂತ ಸ್ವಾತಂತ್ರ್ಯಗಳ ಭರವಸೆಯು ಸಂವಿಧಾನದಿಂದಲೇ ಶುರುವಾಗುತ್ತದೆ ಮತ್ತು ಅಂತಹ ಸ್ವಾತಂತ್ರ್ಯಗಳನ್ನು ನಾಗರಿಕರ, ನಾಗರಿಕರಿಂದ ನಡೆಯುವ ನಿರಂತರ ಹೋರಾಟಗಳಿಂದ ಮಾತ್ರ ಸಾಕಾರಗೊಳಿಸಬಹುದು ಎಂದು ಅವರು ಪ್ರತಿಪಾದಿಸುತ್ತಿದ್ದರು. ಆದ್ದರಿಂದ, ಎಲ್ಲ ಜನರನ್ನು ಒಳಗೊಳ್ಳುವ ಆಕಾಂಕ್ಷೆಗಳನ್ನು ಹೊಂದಿರದ ಮತ್ತು ಆಳವಾದ ಪ್ರಜಾಸತ್ತಾತ್ಮಕ ನಿರ್ಧಾರ ಪ್ರಕ್ರಿಯೆಯ ಮೂಲಕ ವಿಕಸನಗೊಂಡಿರದ ಯಾವುದೇ ಅಭಿವೃದ್ಧಿ ಸಮಸ್ಯಾತ್ಮಕವಾಗಿರುತ್ತದೆ ಎಂದು ಅವರು ತಿಳಿದಿದ್ದರು.

ಭಾರತದ ಅಭಿವೃದ್ಧಿಯ ಹಾದಿಯು ಸಂವಿಧಾನದ 39ನೇ ಪರಿಚ್ಛೇದದಲ್ಲಿ ಬಯಸಿದಂತೆ ನಡೆಯುತ್ತಿಲ್ಲ ಎಂಬ ವಿಷಯದಲ್ಲಿ ದೊರೆಸ್ವಾಮಿಯವರು ಸ್ಪಷ್ಟವಾಗಿದ್ದರು. ಅಂಬೇಡ್ಕರ್ ವಾದಿಸಿದಂತೆ, ದೊರೆಸ್ವಾಮಿ ಕೂಡ, ಬಹುಸಂಖ್ಯಾತರ ಶ್ರಮ ಮತ್ತು ಕಷ್ಟಗಳನ್ನು ಬಳಸಿಕೊಂಡು ಕೆಲವರಷ್ಟೇ ಸಂಪತ್ತನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸುವುದಕ್ಕೆ ಅವಕಾಶ ಕಲ್ಪಿಸುವ ಭಾರತ ಸರ್ಕಾರದ ನಡೆಗಳು ರಾಷ್ಟ್ರ ವಿರೋಧಿ ಕಾರ್ಯಸೂಚಿ ಎಂದು ವ್ಯಾಖ್ಯಾನಿಸುತ್ತಿದ್ದರು. ಆ ಅರ್ಥದಲ್ಲಿ ಯುಪಿಎ ಅಥವಾ ಎನ್‌ಡಿಎ ವಿರುದ್ಧ ಅವರ ವಾದವೆಂದರೆ ಆ ಸರ್ಕಾರಗಳ ನೀತಿಗಳು ಸಾಂವಿಧಾನಿಕ ಆದೇಶಕ್ಕೆ ವಿರುದ್ಧವಾಗಿವೆಯೆಂದು.

ಈ ರೀತಿಯ ಚಿಂತನೆಯೇ ದೊರೆಸ್ವಾಮಿಯವರನ್ನು ಕಾಲಕ್ರಮೇಣ ಅನೇಕ ಹೋರಾಟಗಳಿಗೆ ಕರೆತಂದಿತು. ಅವರು ದೊಡ್ಡ ಅಣೆಕಟ್ಟುಗಳನ್ನು ವಿರೋಧಿಸಿದರು, ಹಾಗೆಯೇ ಬಳ್ಳಾರಿಯಲ್ಲಿ ನಡೆಯುತ್ತಿದ್ದ ಸಮಸ್ಯಾತ್ಮಕ ಗಣಿಗಾರಿಕೆ ಮತ್ತು ಲೂಟಿಗೆ ವಿರುದ್ಧವಾಗಿದ್ದರು. ಕೈಗಾದಲ್ಲಿನ ಪರಮಾಣು ವಿದ್ಯುತ್ ಸ್ಥಾವರ ವಿರುದ್ಧದ ಹೋರಾಟದಲ್ಲಿ ಅವರು ಶಿವರಾಮ ಕಾರಂತರೊಂದಿಗೆ ಭಾಗವಹಿಸಿದರು.

ಯಾವುದೇ ವಿಷಯವಿರಲಿ ಪ್ರಭುತ್ವದ ಯಜಮಾನಿಕೆಯನ್ನು ಅವರು ಪ್ರಶ್ನಿಸಿದರು. 2012ರಲ್ಲಿ ಮಹಿಳಾ ಸಮಖ್ಯಾ ಪ್ರಾರಂಭಿಸಿದ ಪಂಚಾಯತ್ ರಾಜ್ ಹೋರಾಟಕ್ಕೆ ಸೇರ್ಪಡೆಗೊಂಡ ದೊರೆಸ್ವಾಮಿ ಅವರು ಆ ಕಾಲದ ಸರ್ಕಾರವನ್ನು ಟೀಕಿಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನಾವು ಅಸೆಂಬ್ಲಿಯಲ್ಲಿ ಪ್ರತಿನಿಧಿಗಳನ್ನು ಸುಮ್ಮನೆ ಲಾಕ್ ಮಾಡಬಹುದು. ಅವರು ಅಲ್ಲಿ ಪರಸ್ಪರ ಕೆಸೆರೆರೆಚಾಟದಲ್ಲಿ ತೊಡಗಿಕೊಂಡಿದ್ದಾರೆ ಅಷ್ಟೇ, ಬೇರೇನು ಮಾಡುತ್ತಿಲ್ಲ” ಎಂಬುದು ಆ ಸಂದರ್ಭದಲ್ಲಿ ಅವರ ಅಭಿಪ್ರಾಯವಾಗಿತ್ತು.

ಗೌರಿ ಲಂಕೇಶ್ ಅವರ ಹತ್ಯೆ ದೊರೆಸ್ವಾಮಿಯನ್ನು ದಿಗ್ಭ್ರಮೆಗೊಳಿಸಿತು ಮತ್ತು ಆಘಾತಗೊಳಿಸಿತು. ಆಕೆಗೆ ಗೌರವ ಸಲ್ಲಿಸಲು ಮುಂದಾದ ಅಪಾರ ಸಂಖ್ಯೆಯ ಜನರನ್ನು ನೋಡಿದಾಗ, ಗೌರಿ ಅವರಲ್ಲಿದ್ದ ಹೋರಾಟದ ಮನೋಭಾವದಿಂದ ನೀವೆಲ್ಲ ಜೀವನವನ್ನು ನಡೆಸಲು ಸಂಕಲ್ಪಿಸಬೇಕೆಂದು ಅವರು ಜನರನ್ನು ಕೋರಿದರು ಮತ್ತು ಗೌರಿಯ ನ್ಯಾಯಯುತ ಮಾರ್ಗವನ್ನು ಅನುಸರಿಸಿ ಎಂದು ಮನವಿ ಮಾಡಿದರು.

ದೊರೆಸ್ವಾಮಿ 103 ವರ್ಷಗಳ ಕಾಲ ಉತ್ಸಾಹ ಮತ್ತು ಪರಿವರ್ತನೆಯ ಬಯಕೆಯೊಂದಿಗೆ ಬದುಕಿದ್ದರು. ಸಿನಿಕತೆ ಮತ್ತು ಅನುಮಾನಗಳಿಂದ ತುಂಬಿದ ಜಗತ್ತಿನಲ್ಲಿ ಇದು ಅಪರೂಪ. ಅವರ ತಿಳಿವಳಿಕೆ ಮತ್ತು ಮನಸ್ಸು ಸ್ಪಷ್ಟವಾಗಿತ್ತು ಹಾಗು ಅವರು ತಾವೇ ಕಡೆದ ಹಾದಿಯಲ್ಲಿ ತಲೆ ಎತ್ತಿ ನಡೆದರು. ಅವರ ನಿರೀಕ್ಷೆಗಳಿಗೆ ಯಾರೂ ಸಮನಾಗದಿರುವುದು ಇದಕ್ಕೆ ಕಾರಣವೇ? ಅವರು ಮಹಾತ್ಮ ಗಾಂಧಿಯವರ ಕಾಲದಿಂದ ಹಿಡಿದು ನರೇಂದ್ರ ಮೋದಿಯವರ ಪ್ರಾಬಲ್ಯದವರೆಗೆ ಬದುಕಿದ್ದರು. ದೇಶವನ್ನು ಒಗ್ಗೂಡಿಸುವ ವಲ್ಲಭಾಯ್ ಪಟೇಲ್ ಅವರ ಧೀಮಂತಿಕೆಯನ್ನೂ, ಒಡೆದು ಆಳುವ ತಂತ್ರದ ಮುಂದಾಳು ಅಮಿತ್ ಷಾರನ್ನೂ ಅವರು ನೋಡಿದ್ದರು. ಈ ಗ್ರಹದ ಯಾವುದೇ ವ್ಯಕ್ತಿಯು ದೊರೆಸ್ವಾಮಿಯಂತಹ ಅನುಭವ ಮತ್ತು ಗ್ರಹಿಕೆಯ ಆಳವನ್ನು ಪಡೆಯಲು ಸಾಧ್ಯವಿಲ್ಲ. ಮತ್ತದು ನಿಷ್ಕ್ರಿಯತೆಯದ್ದಲ್ಲ, ಬದುಕಿನುದ್ದಕ್ಕೂ ನಿರಂತರ ಭಾಗವಹಿಸುವಿಕೆಯಿಂದ, ಸಕ್ರಿಯ ಹೋರಾಟದಿಂದ ಕೂಡಿದ್ದು.

ವೈಯಕ್ತಿಕವಾಗಿ ನನಗೆ ಹೆಚ್ಚು ಕಾಡಿದ್ದು, ಸ್ಥಳೀಯ ಕಾಳಜಿಗಾಗಿ ಕೆರೆಗಳ ಉಳಿವಿಗೆ ಹೋರಾಟ ಮಾಡಬಲ್ಲವರಾಗಿದ್ದ ಅವರು, ’ಮೋದಿ ವರ್ಸಸ್ ಕರ್ನಾಟಕ’ದಂತಹ, ಧರ್ಮಾಂಧತೆಯ ವಿರುದ್ಧದ ವಿಶಾಲ ಅಭಿಯಾನವನ್ನೂ ಅಷ್ಟೇ ಉತ್ಸಾಹದಿಂದ ನಡೆಸಬಲ್ಲವರಾಗಿದ್ದರು ಎಂಬುದು. ಇದು ಅವರ ರಾಜಕೀಯ ಅಧ್ಯಯನವನ್ನು ನಿರೂಪಿಸುತ್ತದೆ. ಅವರ ದೃಷ್ಟಿಯಲ್ಲಿ ಇವೆಲ್ಲಾ ವಿನಾಶದ ವಿಭಿನ್ನ ಛಾಯೆಗಳಾಗಿದ್ದು, ಅವು ಪರಿಸರ ಸಮತೋಲನ ಮತ್ತು ಮಾನವೀಯತೆಯ ಎಳೆಗಳೊಂದಿಗೆ ಹೆಣೆದುಕೊಂಡಿರುವ ಏಕತೆಯ ಬಟ್ಟೆಯನ್ನು ಹರಿದವು ಎಂದು ಅವರು ನಂಬಿದ್ದರು. ಅವರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ದ್ವೇಷಕ್ಕೆ ಸ್ಥಳವಿರಲಿಲ್ಲ; ದ್ವೇಷದ ರಾಜಕೀಯವನ್ನು ಮಾಡುವವರಿಗೆ ಅವರು ಖಂಡತುಂಡವಾಗಿದ್ದರು. ಅದಕ್ಕಾಗಿಯೇ ಬಿಜೆಪಿಯ ಬಸನಗೌಡ ಯತ್ನಾಳ್ ವಿಷವನ್ನು ಹೊರಹಾಕಿದಾಗ ಮತ್ತು ಸ್ವಾತಂತ್ರ್ಯ ಹೋರಾಟಗಾರನಾಗಿ ದೊರೆಸ್ವಾಮಿಯವರ ರುಜುವಾತುಗಳನ್ನು ಪ್ರಶ್ನಿಸಿದಾಗ, ಯಾವುದೇ ಪ್ರತಿಕ್ರಿಯೆ ಸಿಕ್ಕಲಿಲ್ಲ. ಬಿಜೆಪಿಯ ಹಿರಿಯ ಮುಖಂಡ ಯಡಿಯೂರಪ್ಪ ಅವರು ತಮ್ಮ ಕಿರಿಯ ಸಹೋದ್ಯೋಗಿಗೆ ಸೂಕ್ತವಾದ ಸಾಮಾಜಿಕ ನಡವಳಿಕೆಯನ್ನು ರೂಪಿಸಿಕೊಳ್ಳುವ ಬಗ್ಗೆ ಸಲಹೆ ನೀಡುತ್ತಾರೆ ಎಂದು ದೊರೆಸ್ವಾಮಿ ನಂಬಿದ್ದರು. ಅವರು ಯತ್ನಾಳರ ಮೂರ್ಖತನವನ್ನು ನೋಡಿ ಮುಗುಳ್ನಕ್ಕರು ಎಂದು ನನಗೆ ಖಾತ್ರಿಯಿದೆ.

ಈ ಮಹಾನ್ ವ್ಯಕ್ತಿಯನ್ನು ತಿಳಿದುಕೊಳ್ಳುವ ಭಾಗ್ಯವನ್ನು ಹೊಂದಿರುವ ನಾವು, ಅವರ ಸರಳತೆಯನ್ನು ಯಾವಾಗಲೂ ನೆನಪಿನಲ್ಲಿಡಬೇಕು. ಅದು, ಎಲ್ಲರಿಗೂ ಮೂಲಭೂತವಾದ ಸ್ವಾತಂತ್ರ್ಯ ಸಿಗಬೇಕು, ಆಳವಾದ ಪ್ರಜಾಸತ್ತಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ನೆಲಸಬೇಕು, ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಕಾಪಾಡಲು, ಆಡಳಿತದಲ್ಲಿ ಪಾರದರ್ಶಕತೆಯನ್ನು ಒತ್ತಾಯಿಸಲು ಮತ್ತು ಪ್ರಗತಿಪರ ಮಾನವೀಯ ಮೌಲ್ಯಗಳಿಗೆ ಪ್ರಭುತ್ವ ಯಾವಾಗಲು ತಲೆಬಾಗುವಂತೆ ನೋಡಿಕೊಳ್ಳಲು ನಾಗರಿಕರು ಸದಾ ಎಚ್ಚರಿಕೆಯಿಂದಿರಬೇಕು ಎಂಬ ದೊರೆಸ್ವಾಮಿ ಅವರ ಸಂದೇಶಗಳನ್ನು ನೆನಪಿಸುತ್ತಿರುತ್ತದೆ.

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಪರಿಸರ ಸಂರಕ್ಷಕ ಕಾರ್ಯಕರ್ತರು ಹಾಗೂ ’ಭಾರತದಲ್ಲಿ ಪರಿಸರಕ್ಕಾಗಿ ನ್ಯಾಯ’ ಮೈತ್ರಿ ಬಳಗದ ಭಾಗವಾಗಿದ್ದಾರೆ.


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...