Homeಮುಖಪುಟವಿದ್ಯಾರ್ಥಿ ಮಾರ್ಗದರ್ಶಿ: ಪಿಯುಸಿ ನಂತರ ಮುಂದೇನು?: ಆಯ್ಕೆಗಳ ಬಗ್ಗೆ ಸ್ಪಷ್ಟತೆ ಇರಲಿ; ಗೊಂದಲ ಬೇಡ

ವಿದ್ಯಾರ್ಥಿ ಮಾರ್ಗದರ್ಶಿ: ಪಿಯುಸಿ ನಂತರ ಮುಂದೇನು?: ಆಯ್ಕೆಗಳ ಬಗ್ಗೆ ಸ್ಪಷ್ಟತೆ ಇರಲಿ; ಗೊಂದಲ ಬೇಡ

- Advertisement -
- Advertisement -

ಹುಟ್ಟಿನಿಂದ ಸಾಯುವವರೆಗೂ ನಾವು ಕಲಿಯುತ್ತಲೇ ಇರುತ್ತೇವೆ. ಜೀವನದ ಪ್ರತಿ ಕ್ಷಣ ನಮಗೆ ಹೊಸ ವಿಷಯಗಳನ್ನು ಕಲಿಸುತ್ತಾ ಹೋಗುತ್ತದೆ. ಇದು ಜೀವನದ ಪಾಠವಾದರೆ, ಜೀವನ ಮಾಡಲು ಕಲಿಯುವ ಪಾಠಗಳೇ ಬೇರೆ ನಮೂನೆಯದ್ದು. ಅದು ಸುಮ್ಮನೆ ಕಲಿಯುವುದಲ್ಲ, ಕಲಿತ್ತದ್ದೆಷ್ಟು ಎಂಬುದನ್ನು ತಿಳಿಯಲು ಪರೀಕ್ಷೆ ಬರೆದು ಅದರಲ್ಲಿ ಬರುವ ಅಂಕಗಳ ಮೇಲೆ ತೀರ್ಮಾನವಾಗುತ್ತದೆ. ಅಂಕಗಳು ನಮ್ಮ ಬುದ್ಧಿಮತ್ತೆಯನ್ನು ಅಳೆಯುವ ಸಾಧನವಲ್ಲ ಎನ್ನುವುದು ಚರ್ಚೆಯ ವಿಷಯವಾದರೂ, ಎಲ್ಲದಕ್ಕೂ ಅದು ಅವಶ್ಯಕವಾಗಿದೆ. ಇಂದಿನ ಜಗತ್ತಿನಲ್ಲಿ ಮಗು ಮೂರು ವರ್ಷವಾದಾಗಲೇ ತಂದೆ-ತಾಯಿಯರು ಮಗುವನ್ನು ಪ್ಲೇ ಗ್ರೂಪ್ ಅನ್ನೋ ತರಗತಿ ಸೇರಿಸಿ ಅದರ ಶಿಕ್ಷಣಕ್ಕೆ ಮುನ್ನುಡಿ ಬರೆಯುತ್ತಾರೆ. ಹಾಗೆ ಆ ಮಗು ಬೆಳೆಯುತ್ತ ನಂತರದ ತರಗತಿಗಳಿಗೆ ಮುನ್ನುಗ್ಗುತ್ತಿರುತ್ತದೆ.

ಯಾವುದೇ ಮಗುವಿನ ಜೀವನದಲ್ಲಿ ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿ (ಪಿಯುಸಿ) ಪರೀಕ್ಷೆಗಳು
ಮಗುವಿನ ಭವಿಷ್ಯವನ್ನು ತೀರ್ಮಾನ ಮಾಡುವ ಪರೀಕ್ಷೆಗಳು. ಪಿಯುಸಿ ಮುಗಿಸಿದ ವಿದ್ಯಾರ್ಥಿಗೆ ಹಲವು ಅವಕಾಶಗಳಿರುತ್ತವೆ. ಆದರೆ ಮಾಹಿತಿಯ ಕೊರತೆಯಿಂದಲೋ, ಆತುರತೆಯಿಂದಲೋ ಅಥವಾ ಯಾರದೋ ಮಾತು ಕೇಳಿಯೋ ಎಷ್ಟೋ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಭವಿಷ್ಯದ ಬಗ್ಗೆ ಗೊಂದಲದಿಂದ ಇರುತ್ತಾರೆ. ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವೇ ಈ ಲೇಖನ.

ಸಾಮಾನ್ಯವಾಗಿ ಹತ್ತನೇ ತರಗತಿ ಮುಗಿದ ನಂತರ ವಿಜ್ಞಾನ, ವಾಣಿಜ್ಯ ಅಥವಾ ಕಲೆ ವಿಭಾಗಳಲ್ಲಿ ಪಿಯುಸಿ ಶುರು ಮಾಡಿರುತ್ತಾರೆ. ಅದಕ್ಕೆ ಅನುಗುಣವಾಗಿ ತಮ್ಮ ಶಿಕ್ಷಣವನ್ನು ಮುಂದುವರೆಸಬಹುದು. ಒಂದೊಂದಾಗಿ ಇದನ್ನು ತಿಳಿಯುತ್ತ ಹೋಗೋಣ.

ಎರಡನೇ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರು ಯೋಚಿಸಿ ಯೋಜಿಸುವುದು ಎಂಎಂಬಿಎಸ್ ಮತ್ತಿತರ ವೈಕೀಯ ಸಂಬಂಧಿತ ಕೋರ್ಸುಗಳ ಬಗ್ಗೆ. ಇದಕ್ಕೆ ಅವರು ರಾಷ್ಟ್ರೀಯ ಮಟ್ಟದ ಪರೀಕ್ಷೆ ನೀಟ್ (NEET) ಬರೆಯಬೇಕು. ದೇಶದಾದ್ಯಂತವಿರುವ ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಇದರ ಅಂಕಗಳೇ ಮಾನದಂಡ. ಅಂಕಗಳ ಆಧಾರದ ಮೇಲೆ ಕೌನ್ಸೆಲ್ಲಿಂಗ್ ನಡೆದು ಪ್ರವೇಶಾತಿ ಪಡೆದುಕೊಳ್ಳಬಹುದು. ಎಂಬಿಬಿಎಸ್ ಅಲ್ಲದೆ ಬಿಡಿಎಸ್, ಬಿಎಎಂಎಸ್, ಆಯುರ್ವೇದಿಕ್, ಯುನಾನಿ, ಯೋಗ, ನ್ಯಾಚುರೋಪತಿ ವಿಧಾನಗಳಲ್ಲಿ ವೈದ್ಯರಾಗಬೇಕೆಂಬುವವರು ಇದರ ಮೂಲಕವೇ ಪ್ರವೇಶ ಪಡೆಯಬೇಕು. ಬ್ಯಾಚುಲರ್ ಡಿಗ್ರಿ ಮುಗಿದ ನಂತರ ಸ್ನಾತಕೋತ್ತರ ಪದವಿಯನ್ನು ಅದೇ ಕ್ಷೇತ್ರದಲ್ಲಿ ಮಾಡಬಹುದು. ವೈದ್ಯರಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಲ್ಯಾಬ್ ಟೆಕ್ನಿಷಿಯನ್, ನರ್ಸ್ ಸೇರಿದಂತೆ ಹಲವಾರು ಹುದ್ದೆಗಳಿವೆ. ಇವೆಕ್ಕೆಲ್ಲಾ ವಿಜ್ಞಾನದಲ್ಲಿ ಪಿಯುಸಿ ಮಾಡಿದ ನಂತರ ಅದಕ್ಕೆ ಸಂಬಂಧಿಸಿದ ಕೋರ್ಸ್ ಮಾಡಬೇಕು. ಲ್ಯಾಬ್ ಟೆಕ್ನಿಷಿಯನ್ ಗಳು ಮುಖ್ಯವಾಗಿ ಬಿ.ಎಸ್ಸಿ ಎಂ.ಎಲ್.ಟಿ (ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ) ಅಥವಾ ಬಿ.ಎಂ.ಎಲ್.ಟಿ ಡಿಗ್ರಿ ಹೊಂದಿರಬೇಕು. ಬಿ.ಎಸ್ಸಿ ಅಥವಾ ಎಂ.ಎಸ್ಸಿ ನರ್ಸಿಂಗ್ ಮಾಡಿದರೆ, ಆಸ್ಪತ್ರೆಗಳಲ್ಲಿ ನರ್ಸ್ ಗಳಾಗಿ ಕೆಲಸ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಪಶು ವೈದ್ಯರಿಗೆ ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಹಲವು ಉದ್ಯೋಗಕಾವಕಾಶಗಳಿವೆ. ಬಿ.ವಿ.ಎಸ್ಸಿ.ಸಿ ಅಂಡ್ ಎ.ಎಚ್ (ಬ್ಯಾಚುಲರ್ ಆಫ್ ವೆಟೆನರಿ ಸೈನ್ಸ್ ಮತ್ತು ಅನಿಮಲ್ ಹಸಬಂಡ್ರಿ) ಡಿಗ್ರಿ ಅಥವಾ ಸ್ನಾತಕೋತ್ತರ ಪದವಿ ಪಡೆದರೆ ಪಶು ವೈದ್ಯರಾಗಿ ಸೇವೆ ಸಲ್ಲಿಸಬಹುದು.

ಇದರ ಹೊರತಾಗಿ ಬಿ.ಫಾರ್ಮ ಅಥವಾ ಎಂ.ಫಾರ್ಮ ಮಾಡಿದವರಿಗೆ ಫಾರ್ಮಸಿಟಿಕಲ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ ಅಥವಾ ತಮ್ಮದೇ ಮೆಡಿಕಲ್ ಅಂಗಡಿ ತೆರೆಯಬಹುದು. ಕೃಷಿ ಕ್ಷೇತ್ರದಲ್ಲಿ ಆಗಬೇಕಾಗಿರುವ ಸಂಶೋಧನೆಗಳು ಸಾಕಷ್ಟಿವೆ. ಇದಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಕೃಷಿ, ಪ್ರಾಣಿವಿಜ್ಞಾನ, ಸಸ್ಯವಿಜ್ಞಾನ, ಮಣ್ಣು ವಿಜ್ಞಾನಗಳಂತಹ ವಿಷಯಗಳಲ್ಲಿ ಬಿ.ಎಸ್ಸಿ ಅಥವಾ ಕೃಷಿ ಇಂಜಿನಿಯರಿಂಗ್ ಪದವಿ ಮತ್ತು ತೋಟಗಾರಿಕೆ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ, ಹಸಿರು ಮನೆ ನಿರ್ವಹಣೆಯಂತಹ ವಿಷಯಗಳಲ್ಲಿ ಬಿ.ಎಸ್ಸಿ ಪದವಿ ಪಡೆದರೆ ಆಯಾಯ ರಂಗದಲ್ಲಿ ಕೆಲಸದ ಅವಕಾಶಗಳು ಹೆಚ್ಚುತ್ತದೆ. ಜೊತೆಗೆ ಇದೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರೆ ಸಂಶೋಧನೆಗಳಿಗೆ ಇನ್ನು ಹೆಚ್ಚಿನ ಸಹಾಯವಾಗುತ್ತದೆ. ಇದಕ್ಕಾಗಿ ದೇಶದ ವಿವಿಧ ವಿಶ್ವವಿದ್ಯಾಲಯಗಳು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಅರಣ್ಯ ಶಾಸ್ತ್ರದಲ್ಲಿ ಬಿ.ಎಸ್ಸಿ ಮಾಡಿದರೆ ಅರಣ್ಯ ಇಲಾಖೆಯಲ್ಲಿ ಮತ್ತು ಅದಕ್ಕೆ ಸಂಬಂದಿಸಿದ ಕ್ಷೇತ್ರದಲ್ಲಿ ಕೆಲಸ ಹುಡುಕಬಹುದು.

ದೇಶದ ಪ್ರಗತಿಗೆ ಇಂಜಿನಿಯರಿಂಗ್ ಪದವೀಧರರ ಪಾಲು ಬಹುದೊಡ್ಡದು. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಓದಿದವರು ನಾಲ್ಕು ವರ್ಷದ ಇಂಜಿನಿಯರಿಂಗ್ ಪದವಿ ಮಾಡಿದರೆ ಆಯಾಯ
ಕ್ಷೇತ್ರದಲ್ಲಿ ಕೆಲಸ ಪಡೆಯಬಹುದು. ಎಂಜಿನೀಯರಿಂಗಿನಲ್ಲಿ ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಟೆಲಿಕಮ್ಯುನಿಕೇಷನ್, ಮೆಕ್ಯಾನಿಕಲ್, ಸಿವಿಲ್, ಇನ್ಸ್ಟ್ರುಮೆಂಟೇಷನ್, ಕನ್ಸ್ಟ್ರಕ್ಷನ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಇಂಡಸ್ಟ್ರಿಯಲ್ ಪ್ರೊಡಕ್ಷನ್, ರೊಬೊಟಿಕ್ಸ್ ಅಂಡ್ ಆಟೋಮೇಷನ್, ಮರೀನ್, ಮೈನಿಂಗ್, ಕೆಮಿಕಲ್, ಪಾಲಿಮರ್ ಸೈನ್ಸ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆಯಬಹುದು. ವಿದ್ಯಾರ್ಥಿಯು ತನಗೆ ಆಸಕ್ತಿಯಿರುವ ವಿಷಯದಲ್ಲಿ ಪದವಿಯನ್ನು ಒಳ್ಳೆ ಅಂಕಗಳೊಂದಿಗೆ ಪಡೆದರೆ ಹೆಚ್ಚಿನ ಕೆಲಸದ ಅವಕಾಶಗಳಿವೆ.

ನಾಲ್ಕು ವರ್ಷದ ಪದವಿಯ ಬಿ.ಇ/ಬಿ.ಟೆಕ್ ಪದವಿಯ ನಂತರ ಎರಡು ವರ್ಷದ ಎಂ.ಟೆಕ್ (ಮಾಸ್ಟರ್ ಆಫ್ ಟೆಕ್ನಾಲಜಿ) ಪದವಿ ನೂರಕ್ಕೂ ಹೆಚ್ಚು ವಿಷಯಗಳಲ್ಲಿ ಲಭ್ಯವಿದ್ದು ವಿದ್ಯಾರ್ಥಿಯು ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ಜ್ಞಾನ ಪಡೆಯಬಹುದು. ಇಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯಲು ದೇಶದ ಜೆಇಇ ಪರೀಕ್ಷೆಯನ್ನೋ, ಆಯಾಯ ರಾಜ್ಯಗಳಲ್ಲಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗಳೋ ಕಾಮೆಡ್-ಕೆ ಯಂತಹ ಖಾಸಗಿ ಕಾಲೇಜುಗಳು ನಡೆಸುವ ಪರೀಕ್ಷೆಗಳೋ ಅಥವಾ ಖಾಸಗಿ ವಿಶ್ವವಿದ್ಯಾಲಯಗಳು ನಡೆಸುವ ಪ್ರವೇಶ ಪರೀಕ್ಷೆ ಬರೆದು ಪ್ರವೇಶ ಪಡೆಯಬಹುದು. ವಿಜ್ಞಾನದ ವಿದ್ಯಾರ್ಥಿಯಾಗಿ ವಿನ್ಯಾಸದಲ್ಲಿ ಆಸಕ್ತಿಯಿದ್ದರೆ ಐದು ವರ್ಷಗಳ ಬಿ.ಆರ್ಕ್ (ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್) ಪದವಿ ನಿಮಗೆ ವರದಾನವಿದ್ದಂತೆ. ಹಲವಾರು ಕ್ಷೇತ್ರಗಳಲ್ಲಿ ಆರ್ಕಿಟೆಕ್ಚರ್ ಸಂಬಂದಿಸಿದ ಹಲವು ಕೆಲಸಗಳು ಖಾಲಿಯಿವೆ. ವಿದ್ಯಾರ್ಥಿಯು ಇನ್ನು ಹೆಚ್ಚು ತಿಳಿಯಬೇಕಿದ್ದರೆ, ಎಂ.ಆರ್ಕ್ (ಮಾಸ್ಟರ್ ಆಫ್ ಆರ್ಕಿಟೆಕ್ಚರ್) ಸಹ ಮಾಡಬಹುದು.

ಇಂಜಿನಿಯರಿಂಗ್ ಮತ್ತು ವೈದ್ಯಕೀಯದ ಬಗೆಗೆ ಆಸಕ್ತಿಯಿಲ್ಲವೆಂದಾದರೆ ವಿವಿಧ ವಿಷಯಗಳಲ್ಲಿ ಮೂರು ವರ್ಷಗಳ ಬಿ.ಎಸ್ಸಿ ಕೋರ್ಸ್ ಮಾಡಿ ಕೆಲಸ ಹುಡುಕಬಹುದು. ಬಿ.ಎಸ್ಸಿಯ ನಂತರ ಫಿಸಿಕ್ಸ್ (ಭೌತಶಾಸ್ತ್ರ), ಕೆಮಿಸ್ಟ್ರಿ (ರಸಾಯನಶಾಸ್ತ್ರ), ಬಯಾಲಜಿ (ಜೀವಶಾಸ್ತ್ರ), ಝುವಾಲಜಿ (ಪ್ರಾಣಿಶಾಸ್ತ್ರ), ಬಾಟನಿ (ಸಸ್ಯಶಾಸ್ತ್ರ), ಮೈಕ್ರೋಬಯಾಲಜಿ, ಬಯೋ ಟೆಕ್ನಾಲಜಿ, ಹೋಂ ಸೈನ್ಸ್ ಮತ್ತಿತರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದು. ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಪ್ಲಿಕೆಶನ್ಸ್) ಮತ್ತು ಎಂಸಿಎ (ಮಾಸ್ಟರ್ಸ್ ಆಫ್ ಕಂಪ್ಯೂಟರ್ ಅಪ್ಪ್ಲಿಕೆಶನ್ಸ್) ಕೋರ್ಸ್ ಮಾಡಿದರೆ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಸಿಗುತ್ತದೆ.

ವಾಣಿಜ್ಯ (ಕಾಮರ್ಸ್) ವಿಷಯದಲ್ಲಿ ಪಿಯುಸಿ ಮುಗಿಸಿದವರಿಗೆ ಶೈಕ್ಷಣಿಕ ವಲಯದಲ್ಲಿ ಮತ್ತು ಔದ್ಯೋಕಿಕ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಬಿ.ಕಾಂ, ಬಿಬಿಎಂ, ಬಿಬಿಎ, ಬಿಎಚ್ಎಂ, ಬಿಟಿಟಿಎ ಮತ್ತಿತರ ಕೋರ್ಸುಗಳನ್ನು ಮಾಡಬಹುದು. ಬಿ.ಕಾಂ ಮೂರು ವರ್ಷದ ಸಾಮಾನ್ಯ ವಾಣಿಜ್ಯ ಪದವಿ. ಇದರ ನಂತರ ಎಂ.ಕಾಂ ಮಾಡಿದರೆ ಹಲವಾರು ಕಂಪೆನಿಗಳಲ್ಲಿ ಅಕೌಂಟ್ಸ್ ಮತ್ತು ಕಾಮರ್ಸ್ ಕ್ಷೇತ್ರಗಳಲ್ಲಿ ಕೆಲಸ ಸಿಗುತ್ತದೆ. ಬಿ.ಕಾಂ ಮಾಡುವಾಗಲೇ ICW ಅಥವಾ CA ಕೋರ್ಸ್ ಸೇರಿದರೆ ಮುಂದೆ ಲೆಕ್ಕ ಪತ್ರ
ವಿಶ್ಲೇಷಕರಾಗಬಹುದು ಅಥವಾ ಹಣಕಾಸು ಮತ್ತು ಲೆಕ್ಕಪತ್ರ ಕ್ಷೇತ್ರದಲ್ಲಿ ವಿವಿಧ ಕೆಲಸಗಳು ದೊರೆಯುತ್ತವೆ. ಆಸಕ್ತಿಯಿರುವವರು ಕಂಪನಿ ಸೆಕ್ರೆಟರಿ ಕೋರ್ಸ್ ಮಾಡಿದರೆ, ಸಂಬಂದಿಸಿದ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಾಗುತ್ತವೆ. ಬಿಬಿಎ (ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್) ಅಥವಾ ಬಿಬಿಎಂ (ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್) ಪದವಿಗಳು ಮುಖ್ಯವಾಗಿ ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ್ದು. ಹಲವು ಕಂಪನಿಗಳು ತಮ್ಮ ವಸ್ತುಗಳ ಅಥವಾ ಸೇವೆಗಳ ಪ್ರಚಾರಕ್ಕೆ ಇದೆ ಪದವಿ ಹೊಂದಿದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು. ಹಲವು ಪಂಚತಾರಾ ಮತ್ತು ಅಂತರರಾಷ್ಟ್ರೀಯ ಹೊಟೇಲುಗಳಲ್ಲಿ ಕೆಲಸಕ್ಕೆ ಸೇರಬೇಕೆನಿಸಿದರೆ ಬಿಎಚ್ಎಂ (ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್) ಪದವಿ ಪಡೆಯುವುದು ಅತ್ಯವಶ್ಯಕ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ಇತರ ಪ್ರೇಕ್ಷಣೀಯ ಜಾಗಗಳಲ್ಲಿನ ಹೊಟೇಲುಗಳಲ್ಲಿ ಕೆಲಸ ಪಡೆಯುವುದು ಸುಲಭ. ಬಿಟಿಟಿಎ (ಬ್ಯಾಚುಲರ್ ಆಫ್ ಟ್ರಾವೆಲ್ ಅಂಡ್ ಟೂರಿಸಂ ಅಡ್ಮಿನಿಸ್ಟ್ರೇಷನ್) ಪದವಿ ಪಡೆದವರು ವಿದೇಶದ ವ್ಯಕ್ತಿಗಳು ಭಾರತಕ್ಕೆ ಬಂದಾಗ ವಿವಿಧ ಪ್ರೇಕ್ಷಣೀಯ ಜಾಗಗಳ ಪ್ರವಾಸದ ಯೋಜನೆಯನ್ನು ಹಾಕಿಕೊಡಬಹುದು ಮತ್ತು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹಲವು ಕೆಲಸಗಳನ್ನು ಪಡೆಯಬಹುದು. ವಿದ್ಯಾರ್ಥಿಗಳು ಮೇಲೆ ತಿಳಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಮಾಡಬಹುದು.

ಇಂಜಿನಿಯರಿಂಗ್ ಅಥವಾ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದವರು ಎರಡು ವರ್ಷಗಳ ಎಂಬಿಎ (ಮಾಸ್ಟರ್ಸ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್) ಸ್ನಾತಕೋತ್ತರ ಪದವಿಯನ್ನು ಫೈನಾನ್ಸ್, ಮಾರ್ಕೆಟಿಂಗ್, ಲೀಡ್ಸ್ ಮತ್ತು ಒಪೆರಷನ್ಸ್, ಎಚ್ ಆರ್, ಡೇಟಾ ಅನಲಿಟಿಕ್ಸ್ ನಂತಹ ವಿಷಯಗಳಲ್ಲಿ ಪಡೆದು ಕೆಲಸ ಹುಡುಕಬಹುದು.

ಇನ್ನು ಕಲಾ ವಿಭಾಗಕ್ಕೆ ಹೊರಳಿದರೆ, ಮೊಗೆದಷ್ಟು ಅವಕಾಶಗಳು ಸಿಗುತ್ತವೆ. ಸೈನ್ಸ್ ತಗೊಂಡು ಸಾಯಬೇಡ, ಕಾಮರ್ಸ್ ತಗೊಂಡು ಕೊಳೆಯಬೇಡ, ಆರ್ಟ್ಸ್ ತಗೊಂಡು ಆರಾಮಾಗಿರು ಎಂದು ಹಲವಾರು ಕಲಾ ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರಶಂಶಿಸಿಕೊಳ್ಳುತ್ತಾರೆ. ಬಿಎ ಪದವಿಯಲ್ಲೇ ಸಾಕಷ್ಟು ಅವಕಾಶಗಳಿದ್ದು ವಿದ್ಯಾರ್ಥಿಗಳು ತಾಳ್ಮೆಯಿಂದ ಕೆಲಸಗಳನ್ನು ಹುಡುಕಬೇಕು. ಮೂರು ವರ್ಷದ ಬಿಎ ನಂತರ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮುಂತಾದ ನುಡಿಗಳಲ್ಲಿ, ಇತಿಹಾಸ,
ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಮಾನವಶಾಸ್ತ್ರ ಭೂಗರ್ಭಶಾಸ್ತ್ರ, ಮನಃ ಶಾಸ್ತ್ರ ಸೇರಿದಂತೆ ಹಲವು ವಿಷಯಗಳಲ್ಲಿ ಎಂಎ ಪದವಿ ಪಡೆದರೆ ಕೆಲಸ ಸಿಕ್ಕುವ ಸಾಧ್ಯತೆ ಹೆಚ್ಚಾಗುತ್ತದೆ. ಕಲಾ ವಿಭಾಗದ ವಿದ್ಯಾರ್ಥಿಗಳ ಬಹು ಮುಖ್ಯ ತಾಕತ್ತು ಅವರ ವಿವರಣಾ ಶೈಲಿ ಮತ್ತು ಬರವಣಿಗೆ. ಇದರ ಆಧಾರದಲ್ಲೇ ಸಾಫ್ಟ್ವೇರ್, ಹಾರ್ಡ್ವೇರ್, ಸೇವಾ ವಲಯ, ಉತ್ಪಾದಕ ವಲಯ ಮತ್ತಿತರ ಕ್ಷೇತ್ರಗಳಲ್ಲಿ
‘ಕಂಟೆಂಟ್ ರೈಟಿಂಗ್’ ಎಂಬ ಹುದ್ದೆಗೆ ಅವಕಾಶವಿರುವುದು ಕಲಾ ವಿದ್ಯಾರ್ಥಿಗಳಿಗೇ. ಭಾಷೆಗಳ ಮೇಲೆ ಎಂಎ ಮಾಡುತ್ತಿರುವವರಾದರೆ ತಮ್ಮ ನುಡಿಯ ಜೊತೆಗೆ ಮತ್ತೊಂದು ವಿದೇಶಿ ಭಾಷೆ ಕಲಿತರೆ ಅನುವಾದದಲ್ಲಿ ಅವಕಾಶಗಳ ಮಳೆಯೇ ಸುರಿಯುತ್ತದೆ.

ಮನಃಶಾಸ್ತ್ರದಲ್ಲಿ ಪರಿಣಿತಿ ಪಡೆದವರು ಶಾಲಾ, ಕಾಲೇಜು, ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಆಪ್ತಸಮಾಲೋಚಕರಾಗಿ ಕೆಲಸ ಮಾಡಬಹುದು. ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿ ಮಾಡಲು ಬಯಸುವವರು ಆಯಾ ಕಾಲೇಜನ್ನು ನೇರವಾಗಿ ಸಂಪರ್ಕಿಸಿ ಅರ್ಜಿಯನ್ನು
ಸಲ್ಲಿಸಬಹುದು. ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಪ್ರವೇಶ ಪರೀಕ್ಷೆಯನ್ನು ಸಹ ನಡೆಸುತ್ತವೆ.

ವಿದ್ಯಾರ್ಥಿಗಳಲ್ಲಿ ವಿಚಾರ ಮಂಡಿಸುವ ಕೌಶಲ್ಯ ಚೆನ್ನಾಗಿದ್ದರೆ, ವಕೀಲಿಕೆ ಹೇಳಿ ಮಾಡಿಸಿದ ಕೆಲಸ. ಯಾವುದೇ ವಿಭಾಗದಲ್ಲಿ ಪಿಯುಸಿ ಮಾಡಿದವರು ಕಾನೂನು ಪದವಿ ಪಡೆದು ವಕೀಲಿಕೆ ಆರಂಭಿಸಬಹುದು ಅಥವಾ ಸರಕಾರಿ ಮಟ್ಟದಲ್ಲಿ ಅಥವಾ ಯಾವುದೇ ಕಂಪೆನಿಗಳಲ್ಲಿ ಲೀಗಲ್ ಅಡ್ವೈಸರ್ ಕೆಲಸಕ್ಕೂ ಸಹ ಸೇರಬಹುದು. ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡವರು ಮುಂದೆ ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ, ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಮುಗಿಸಿದವರು ಕಲಾ ವಿಭಾಗದಲ್ಲಿ ಪದವಿ ಮುಗಿಸಿ ಒಳ್ಳೆಯ ಹುದ್ದೆಗಳಲ್ಲಿರುವುದನ್ನು ಗಮನಿಸಬಹುದು. ಆದರೆ ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿದವರು ಇತರ ವಿಭಾಗಗಳಲ್ಲಿ ಪದವಿ ಮಾಡಲಾಗುವುದಿಲ್ಲ. ಬಿ.ಎಸ್ಸಿ ಅಥವಾ ಬಿಎ ಮಾಡಿದವರು ಬಿ.ಎಡ್ ಮಾಡಿ ಶಾಲಾ ಶಿಕ್ಷಕರಾಗಬಹುದು ಮುಂದೆ ಎಂ.ಎಡ್ ಸಹ ಮಾಡಬಹುದು.

ಯಾವುದೇ ವಿಷಯದಲ್ಲಿ ಪದವಿ ಹೊಂದಿದವರು ಕೇಂದ್ರ ಅಥವಾ ರಾಜ್ಯದ ನಾಗರೀಕ ಸೇವಾ ಪರೀಕ್ಷೆಗಳನ್ನು, ರೈಲ್ವೆ ಇಲಾಖೆಗೆ ಸಂಬಂಧಿಸಿದ ಪರೀಕ್ಷೆಗಳನ್ನು, ಪೊಲೀಸ್ ಇಲಾಖಾ ಪರೀಕ್ಷೆಗಳನ್ನು, ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ನಡೆಸುವ ಪರೀಕ್ಷೆಗಳನ್ನು ಎಸ್ಎಸ್ ಬಿ ಪರೀಕ್ಷೆಗಳನ್ನು ಅಥವಾ ಐಬಿಪಿಎಸ್ ನಡೆಸುವ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಬಹುದುದಾರೂ, ಸಂಬಂಧಿಸಿದ ಸಂಸ್ಥೆಗಳು ಅಥವಾ ಇಲಾಖೆಗಳು ಹೊರಡಿಸುವ ಅಧಿಸೂಚನೆಗಳನ್ನು ಗಮನಿಸಿ ಅದರಂತೆ ಪಾಲಿಸಬೇಕು.
ಪಿಯುಸಿಯಲ್ಲಿ ಅನುತ್ತೀರ್ಣರಾದವರು ಹತ್ತನೇ ತರಗತಿಯ ಅಂಕಗಳ ಆಧಾರದ ಮೇಲೆ ಕಂಪ್ಯೂಟರ್ಸ್, ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಾನಿಕ್ಸ್ ನಂತಹ ತಾಂತ್ರಿಕ ವಿಷಯಗಳಲ್ಲಿ ಮೂರು ವರ್ಷಗಳ ಡಿಪ್ಲೋಮ ಪಡೆದು ಮುಂದೆ ಇಂಜಿನಿಯರಿಂಗ್ ಸೇರಬಹುದು ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಡಿಪ್ಲೋಮ ಮುಗಿಸಿ ಬಿ.ಕಾಮ್ ಸೇರಬಹುದು ಅಥವಾ ಫ್ಯಾಷನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಅನಿಮೇಷನ್, ಗ್ರಾಫಿಕ್ಸ್, ವಿಡಿಯೋ ಎಡಿಟಿಂಗ್ ಮತ್ತಿತರ ವಿಷಯಗಳಲ್ಲಿ ಡಿಪ್ಲೊಮ ಪಡೆದು ತಮ್ಮ
ಬದುಕನ್ನು ರೂಪಿಸಿಕೊಳ್ಳಬಹುದು.

ಇದಲ್ಲದೆ ಸರಕಾರದ ಯೋಜನೆಗಳನ್ನು ಬಳಸಿಕೊಂಡು ತಮಗಿರುವ ಜ್ಞಾನದ ಆಧಾರದ ಮೇಲೆ ಸಣ್ಣ ಅಥವಾ ಅತಿ ಸಣ್ಣ ಉದ್ಯಮಗಳನ್ನು ಶುರು ಮಾಡಿ ಉದ್ಯಮಿಯಾಗಿ ಇತರರಿಗೆ ಕೆಲಸ ಕೊಡಬಹುದು.

ಒಟ್ಟಿನಲ್ಲಿ ಪದವಿ ಅಥವಾ ಕೆಲಸ ಯಾವುದಾದರು ಕಷ್ಟಪಟ್ಟು ಮಾಡದೇ ಇಷ್ಟಪಟ್ಟು, ಗಮನವಿಟ್ಟು ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಮಿಥುನ್ ಬಿ ಎನ್,  ಲೇಖಕರು ಕ್ರೈಸ್ಟ್ (ಡೀಮ್ಡ್ ಟು ಬಿ) ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಿಡಿಪಿ

ತುರ್ತುಪರಿಸ್ಥಿತಿಯನ್ನು ಇಂದಿರಾ ಗಾಂಧಿ ತಪ್ಪು ಎಂದು ಒಪ್ಪಿಕೊಂಡಿದ್ದರು, ಬಿಜೆಪಿ ಹಿಂದಿನದನ್ನು ಮರೆಯಬೇಕು: ಪಿ. ಚಿದಂಬರಂ

0
ತುರ್ತು ಪರಿಸ್ಥಿತಿ ಕಹಿ ನೆನಪಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನೇತೃತ್ವದ ಕೇಂದ್ರವು ಜೂನ್ 25 (ಗುರುವಾರ) ಆಚರಿಸುವುದಾಗಿ ಘೋಷಿಸಿದ ನಂತರ, ತಮ್ಮ ನಿರ್ಧಾರ ತಪ್ಪು ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ...