Homeಮುಖಪುಟಗೌಪ್ಯತೆಯ ಬದ್ಧತೆ ಮುರಿಯಲು ಒತ್ತಾಯಿಸಿದರೆ ಭಾರತ ತೊರೆಯುತ್ತೇವೆ: ನ್ಯಾಯಾಲಯಕ್ಕೆ ತಿಳಿಸಿದ ವಾಟ್ಸಾಪ್

ಗೌಪ್ಯತೆಯ ಬದ್ಧತೆ ಮುರಿಯಲು ಒತ್ತಾಯಿಸಿದರೆ ಭಾರತ ತೊರೆಯುತ್ತೇವೆ: ನ್ಯಾಯಾಲಯಕ್ಕೆ ತಿಳಿಸಿದ ವಾಟ್ಸಾಪ್

- Advertisement -
- Advertisement -

ವಾಟ್ಸಾಪ್‌ನಲ್ಲಿ ಸಂದೇಶಗಳ ಖಾಸಗಿತನ/ಗೌಪ್ಯತೆ (ಎಂಡ್‌-ಟು-ಎಂಡ್ ಎನ್‌ಕ್ರಿಪ್ಶನ್‌) ಯಿಂದ ಸಂದೇಶ ಕಳಿಸಿದವರು, ಸ್ವೀಕರಿಸಿದವರಲ್ಲದೆ ಮೂರನೇ ವ್ಯಕ್ತಿ ಆ ಸಂದೇಶ ನೋಡಲಾಗದು. ಈ ನಿಯಮವನ್ನು ಉಲ್ಲಂಘಿಸಲು ಒತ್ತಾಯಿಸಿದರೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ರದ್ದುಗೊಳಿಸುವುದಾಗಿ ಮೆಟಾ ಒಡೆತನದ ವಾಟ್ಸಾಪ್‌ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯಂತ್ರಿಸುವ ‘ಮಾಹಿತಿ ತಂತ್ರಜ್ಞಾನ ನಿಯಮ ನಿಯಮಗಳು-2021’ ಅನ್ನು ಪ್ರಶ್ನಿಸಿ 2021ರಲ್ಲಿ ವಾಟ್ಸಾಪ್‌ ನ್ಯಾಯಾಲಯದ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ನಡೆಸುತ್ತಿದೆ. “ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುವಂತೆ ಒತ್ತಾಯಿಸಿದರೆ ಭಾರತ ತೊರೆಯುತ್ತೇವೆ” ಎಂದು ವಾಟ್ಸಾಪ್‌ ಕಂಪನಿಯ ವಕೀಲ ತೇಜಸ್‌ ಕರಿಯಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ 400 ಮಿಲಿಯನ್‌ಗೂ ಹೆಚ್ಚು ಬಳಕೆದಾರರನ್ನು ವಾಟ್ಸಾಪ್ ಹೊಂದಿದೆ. ವಾಟ್ಸಾಪ್ ಒದಗಿಸುವ ಗೌಪ್ಯತೆ ವೈಶಿಷ್ಟ್ಯಗಳ ಕಾರಣದಿಂದಾಗಿಯೇ ಜನರು ಅದನ್ನು ಹೆಚ್ಚಾಗಿ ನಂಬಿದ್ದಾರೆ ಮತ್ತು ಬಳಸುತ್ತಿದ್ದಾರೆ.
ಬಳಕೆದಾರರ ಗೌಪ್ಯತೆಯನ್ನು ದುರ್ಬಲಗೊಳಿಸುವ ಯಾವುದೇ ನಿಯಮಗಳು ಭಾರತದ ಸಂವಿಧಾನದ 14, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾಟ್ಸಾಪ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.

ಗೌಪ್ಯತೆಯನ್ನು ಉಲ್ಲಂಘಿಸುವ ನಿಯಮಗಳು ಜಗತ್ತಿನಲ್ಲಿ ಎಲ್ಲೂ ಇಲ್ಲ. ಬ್ರೆಝಿಲ್‌ನಲ್ಲಿಯೂ ಇಂತಹ ನಿಯಮಗಳಿಲ್ಲ. ಹೊಸ ನಿಯಮದ ಪ್ರಕಾರ ನಾವು ಎಲ್ಲಾ ಸಂದೇಶಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಸರ್ಕಾರ ಯಾವ ಸಂದೇಶವನ್ನು ಡೀಕ್ರಿಪ್ಟ್ ಮಾಡಲು ಹೇಳುತ್ತದೆ ಎಂದು ನಮಗೆ ಗೊತ್ತಿಲ್ಲ. ಸರ್ಕಾರದ ನಿಯಮ ಪಾಲಿಸುವುದಾದರೆ, ನಾವು ಹಲವಾರು ವರ್ಷಗಳವರೆಗೆ ಲಕ್ಷಾಂತರ ಸಂದೇಶಗಳನ್ನು ಸಂಗ್ರಹಿಸಿಡಬೇಕಾಗುತ್ತದೆ ಎಂದು ವಾಟ್ಸಾಪ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

“ಇಲ್ಲಿ ಎರಡು ವಿಚಾರಗಳಿವೆ. ಒಂದು, ಬಳಕೆದಾರರ ಖಾಸಗಿತನ, ಗೌಪ್ಯತೆ. ಎರಡು, ಸರ್ಕಾರವು ಬಳಕೆದಾರರ ಸಂದೇಶಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕನ್ನು ಹೊಂದಿದೆ. ಉದಾಹರಣೆಗೆ, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದಾನೆಂಬ ಆರೋಪದ ಮೇಲೆ ಆತನನ್ನು ಹಿಡಿಯಲು, ಆತ ಕಳುಹಿಸುವ ಸಂದೇಶಗಳಿಗಾಗಿ ಸರ್ಕಾರವು ನಮ್ಮ ಮೇಲೆ ಒತ್ತಡ ಹೇರುತ್ತದೆ. ನಾವು ಬಳಕೆದಾರ ಮತ್ತು ಸರ್ಕಾರಗಳ ನಡುವೆ ಸಿಲುಕಿದ್ದೇವೆ. ಒಂದು ಸೂಚನೆಗಾಗಿ ನಾವು ನಮ್ಮ ಗೌಪ್ಯತೆಯ ನಿಲುವನ್ನು ಮುರಿಯಬೇಕೆ? ಈ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯವು ಪರಿಶೀಲಿಸಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಈ ನಿಯಮ ರೂಪಿಸಲು ಸರ್ಕಾರಕ್ಕೆ ಅವಕಾಶವಿಲ್ಲ” ಎಂದು ವಕೀಲರು ವಾದಿಸಿದ್ದಾರೆ.

ಇದನ್ನೂ ಓದಿ : ‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಲ್‌ ಜಝೀರಾ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಅಧಿಕಾರಿಗಳು

0
ಗಾಝಾದಲ್ಲಿ ಇಸ್ರೇಲ್ ನಡೆಸಿದ ಕ್ರೌರ್ಯವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದ ಅಲ್‌ ಜಝೀರಾ ಸುದ್ದಿವಾಹಿನಿಯನ್ನು ಇಸ್ರೇಲ್‌ ಈ ಹಿಂದೆ ದೇಶದಲ್ಲಿ ನಿರ್ಬಂಧ ವಿಧಿಸಿತ್ತು. ಇದೀಗ ಇಸ್ರೇಲ್‌ನಲ್ಲಿನ ಅಲ್‌ಜಝೀರಾ ಕಚೇರಿಗೆ ಇಸ್ರೇಲ್‌ ಅಧಿಕಾರಿಗಳು ದಾಳಿ ನಡೆಸಿದ್ದು,...