“ನನ್ನ ಕುಟುಂಬದಲ್ಲಿ 15-20 ಜನರಿದ್ದಾರೆ. ಆದರೆ ಚುನಾವಣೆಯಲ್ಲಿ ನನಗೆ ಕೇವಲ 9 ಮತಗಳು ಮಾತ್ರ ಸಿಕ್ಕಿವೆ”- ಇದು ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಅಭ್ಯರ್ಥಿ ಕಿರಣ್ ಕೌರ್ ಅವರ ಅಳಲು.
ಪಂಜಾಬ್‌ನಲ್ಲಿ ಫೆಬ್ರವರಿ 14 ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ನಡೆದಿತ್ತು. ಇದರ ಫಲಿತಾಂಶ ನಿನ್ನೆ (ಫೆ. 17) ಹೊರಬಿದ್ದಿತ್ತು. ಈ ಫಲಿತಾಂಶದಿಂದ ಗುರುದಾಸ್‌ಪುರ ಮುನ್ಸಿಪಲ್ ಕೌನ್ಸಿಲ್‌ನ 12 ನೇ ವಾರ್ಡ್‌ನ ಬಿಜೆಪಿ ಕಿರಣ್ ಕೌರ್ ಆಘಾತಕ್ಕೊಳಗಾಗಿದ್ದು, ಚುನಾವಣೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
“ನನ್ನ ಕುಟುಂಬದ 15-20 ಜನರು ನನಗೆ ಮತ ಚಲಾಯಿಸಿದ್ದಾರೆ. ಆದರೆ ನನಗೆ ಕೇವಲ 9 ಮತಗಳು ಮಾತ್ರ ಬಿದ್ದಿವೆ. ಮತ ಚಲಾವಣೆಯ ನಂತರ ಕಾಂಗ್ರೆಸ್ ಕಾರ್ಯಕರ್ತರು ಇವಿಎಂ ಅನ್ನು ಬದಲಾಯಿಸಿದ್ದಾರೆ. ನನ್ನ ಏರಿಯಾದ ಜನರೆಲ್ಲಾ ನನಗೆ ಭರವಸೆ ನೀಡಿದ್ದರು. ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ. ಆದರೆ ಅವರ ಮತಗಳು ನನಗೆ ಬಿದ್ದಿಲ್ಲ. ಕಾಂಗ್ರೆಸ್ ನನಗೆ ದ್ರೋಹ ಬಗೆದಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಆಕ್ರೋಶ: ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ
Watch | BJP candidate Kiran Kaur from ward number 12 of Gurdaspur municipal council alleges she received only 9 votes when around 20 family members voted for her #PunjabMunicipalPolls2021 pic.twitter.com/pHpNmw8cPF
— NDTV (@ndtv) February 17, 2021
ಈ ಕುರಿತು ಕಿರಣ್ ಕೌರ್ ಮಾತನಾಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ, “ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಜಾಣತನದಿಂದ ಕೆಲಸ ಮಾಡಿದೆ. ಇತರೆ ಅಭ್ಯರ್ಥಿಗಳಿಗೆ ಕಿರುಕುಳ ನೀಡುತ್ತಿದೆ. ಇವಿಎಂ ಯಂತ್ರಗಳನ್ನು ಬದಲಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮದುವೆಗಳಲ್ಲಿಯೂ ರೈತ ಹೋರಾಟಕ್ಕೆ ಬೆಂಬಲ!: ಹರಿಯಾಣ-ಪಂಜಾಬ್‌ನಲ್ಲಿ ವಿಭಿನ್ನ ಪ್ರತಿರೋಧ
“ಈ ಹಿಂದೆ ಹಲವು ಬಾರಿ 12 ನೇ ವಾರ್ಡ್‌ನಿಂದ ಗೆದ್ದಿದ್ದರೂ ಸಹ, ಈ ಬಾರಿ ಕೇವಲ ಒಂಬತ್ತು ಮತಗಳನ್ನು ಪಡೆದಿದ್ದೇನೆ. ಇದನ್ನು ನಂಬಲು ಸಾಧ್ಯವಿಲ್ಲ. ನಮಗೆ ಕಾಂಗ್ರೆಸ್ ಸಾಕಷ್ಟು ಕಿರುಕುಳ ನೀಡಿದೆ. ನಾನು ಪಾಠ ಮಾಡುತ್ತಿದ್ದ ಶಾಲೆ ನನ್ನನ್ನು ಕೆಲಸದಿಂದ ತೆಗೆದಿದೆ” ಎಂದು ಮುಂತಾದ ಆರೋಪಗಳನ್ನು ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇವರ ಆರೋಪವನ್ನು ಕೆಲವರು ಅಲ್ಲಗಳೆದಿದ್ದಾರೆ. “ಇದು ಕೃಷಿ ಕಾನೂನುಗಳ ಪರಿಣಾಮ. ಹಾಗಾಗಿ ಯಾವೊಬ್ಬ ವ್ಯಕ್ತಿಯೂ ಬಿಜೆಪಿಯ ಪರವಾಗಿದ್ದರೆ, ಆ ವ್ಯಕ್ತಿಯ ಕುಟುಂಬಸ್ಥರೇ ಅವರನ್ನು ನಿರಾಕರಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆ” ಎಂದಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಇವರಲ್ಲಿ ಬಹುಪಾಲು ರೈತರು ಪಂಜಾಬ್ ಮತ್ತು ಹರಿಯಾಣದವರಾಗಿದ್ದಾರೆ. ಹಾಗಾಗಿ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದರ ನಡುವೆಯೇ ಪಂಜಾಬ್ ನಲ್ಲಿ ಸ್ಥಳೀಯ ಚುನಾವಣೆ ನಡೆದಿದೆ. 8 ಕ್ಕೆ 8 ಮುನಿಸಿಪಲ್ ಕಾರ್ಪೋರೇಷನ್‌ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅಲ್ಲದೆ 109 ಮುನಿಸಿಪಲ್ ಕೌನ್ಸಿಲ್‌ಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಬಿಜೆಪಿಗೆ ಹೀನಾಯ ಸೋಲುಂಟಾಗಿದೆ. ಇದು ರೈತರ ಆಕ್ರೋಶಕ್ಕೆ ಸ್ಪಷ್ಟ ಉದಾಹರಣೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್: ರೈತಹೋರಾಟದ ತವರು ಪಂಜಾಬ್‌ನಲ್ಲಿ ತೀವ್ರಗೊಳ್ಳುತ್ತಿರುವ ಚಳವಳಿ


