Homeಮುಖಪುಟಗ್ರೌಂಡ್ ರಿಪೋರ್ಟ್: ರೈತಹೋರಾಟದ ತವರು ಪಂಜಾಬ್‌ನಲ್ಲಿ ತೀವ್ರಗೊಳ್ಳುತ್ತಿರುವ ಚಳವಳಿ

ಗ್ರೌಂಡ್ ರಿಪೋರ್ಟ್: ರೈತಹೋರಾಟದ ತವರು ಪಂಜಾಬ್‌ನಲ್ಲಿ ತೀವ್ರಗೊಳ್ಳುತ್ತಿರುವ ಚಳವಳಿ

ಶಗೂನ್ ಹೆಸರಲ್ಲಿ ಬೇರೆ ಕಡೆಯಿಂದ ಬಂದ ಹೆಣ್ಣುಮಕ್ಕಳಿಗೆ ಶುಭ ಹಾರೈಸಿ, ಆಶೀರ್ವಾದದ ನೆಪದಲ್ಲಿ 75 ವರ್ಷದ ಅಜ್ಜಿ ಹಣವನ್ನು ಕೈಗಿಟ್ಟ ಪರಿ ನಮ್ಮ ಕಣ್ಣಲ್ಲಿ ನೀರು ತರಿಸಿತು.

- Advertisement -
- Advertisement -

ಐತಿಹಾಸಿಕ ರೈತ ಹೋರಾಟಕ್ಕೆ ಕಾರಣವಾಗಿರುವ ವಿವಾದಿತ ಕೃಷಿ ಕಾನೂನುಗಳನ್ನು ಒಕ್ಕೂಟ ಸರ್ಕಾರ ಸೆಪ್ಟಂಬರ್ ತಿಂಗಳಿನಲ್ಲಿ ಜಾರಿಗೊಳಿಸಿತು. ಈ ಕಾನೂನುಗಳ ವಿರುದ್ಧ ಪಂಜಾಬ್ ರಾಜ್ಯದ ರೈತರು ಮೊದಲು ದನಿ ಎತ್ತಿದ್ದರು. ಅದು ಅಕ್ಟೋಬರ್ ಒಂದರಿಂದ ಇಡೀ ರಾಜ್ಯದಲ್ಲಿ ಹರಡಿ ದೊಡ್ಡ ಪ್ರತಿಭಟನೆಗೆ ಕಾರಣವಾಯಿತು.

ರೈತ ಪ್ರತಿಭಟನೆಯ ನಾಯಕತ್ವ ವಹಿಸಿದ್ದ ಪಂಜಾಬಿನ ರೈತರಿಗೆ ದೇಶದ ಹಲವು ರಾಜ್ಯಗಳು ಬೆಂಬಲ ನೀಡಿದವು. ಪಂಜಾಬಿನ ರಸ್ತೆಗಳಲ್ಲಿ ರೈತರು ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ, ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. ನೂತನ ಕೃಷಿ ಕಾನೂನುಗಳು ಕಾರ್ಪೋರೇಟ್‌ಗಳಿಗೆ ವರದಾನವಾಗಲಿವೆ ಎಂದು ರಿಲಾಯನ್ಸ್ ಕಂಪನಿಯ ಪೆಟ್ರೋಲ್ ಬಂಕ್, ಮಾಲ್‌ಗಳಿಗೆ ಮುತ್ತಿಗೆ ಹಾಕಿದರು. ರೈಲ್ ರೋಖೋ ಚಳುವಳಿ ಮೂಲಕ ರೈಲು ಹಳಿಗಳನ್ನೇ ಮನೆಗಳನ್ನಾಗಿಸಿಕೊಂಡು. ಆದರೆ, ಒಕ್ಕೂಟ ಸರ್ಕಾರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಇದ್ದಾಗ. ಪಂಜಾಬಿನ ರೈತರು ನವೆಂಬರ್ ತಿಂಗಳ 26,27 ರಂದು ದೆಹಲಿ ಚಲೋಗೆ ಕರೆ ನೀಡಿದರು.

ಅಷ್ಟರಲ್ಲಾಗಲೇ ಹರಿಯಾಣ, ಉತ್ತರಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಆರಂಭವಾಗಿತ್ತು. ದೆಹಲಿ ಚಲೋಗೆ ಇಡೀ ದೇಶ ಬೆಂಬಲ ನೀಡಿತ್ತು. ದೆಹಲಿಗೆ ಹೊರಟ ಪಂಜಾಬ್ ಮತ್ತು ಹರಿಯಾಣದ ರೈತರನ್ನು ದೆಹಲಿಯ ಗಡಿಗಳಲ್ಲಿ ತಡೆಯಲಾಯಿತು. ಪೊಲೀಸರು ಲಾಠಿ ಚಾರ್ಜ್ ಮಾಡಿದರು, ಜಲಫಿರಂಗಿ, ಅಶ್ರುವಾಯು ಸಿಡಿಸಿದರು. ಇದರಿಂದ ರೈತರು ದೆಹಲಿಯ ಸಿಂಘು, ಟಿಕ್ರಿ, ಶಹಜಾನ್ಪುರ್, ಗಾಝಿಪುರ್, ಚಿಲ್ಲಾ, ಪುಲ್ವಲಾ ಸೇರಿದಂತೆ ಅನೇಕ ಗಡಿಗಳಲ್ಲಿಯೇ ಧರಣಿ ಕುಳಿತರು.

ಕಳೆದ 79 ದಿನಗಳಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಚಳಿಯ ನಡುವೆ ಕುಳಿತಿದ್ದಾರೆ. 200ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯ ಗಡಿಗಳಲ್ಲಿ ರೈತರು ತಮ್ಮ ಹೊಸ ಗ್ರಾಮಗಳನ್ನು ಸೃಷ್ಟಿಸಿದ್ದಾರೆ. ಇಂತಹ ಹೋರಾಟದ ನಾಯಕತ್ವ ವಹಿಸಿರುವ ಪಂಜಾಬಿನಲ್ಲಿ ಹೋರಾಟ ಹೇಗಿದೆ ಎಂಬುದನ್ನು ತಿಳಿಯಲು ನಾನುಗೌರಿ.ಕಾಂ ತಂಡ ಪಂಜಾಬಿಗೆ ಭೇಟಿ ನೀಡಿತು.

ಒಕ್ಕೂಟ ಸರ್ಕಾರ ಮತ್ತು ಸರ್ಕಾರದ ಬೆಂಬಲಿಗರು ಇದು ಪಂಜಾಬ್ ರೈತರ ಹೋರಾಟ ಎಂದು ಬಿಂಬಿಸುತ್ತಿದ್ದರಿಂದ, ದೆಹಲಿಯ ಗಡಿಗಳಲ್ಲಿ ಅವರು ಮಾತ್ರ ಕುಳಿತಿದ್ದಾರೆ ಎಂದು ಆರೋಪಿಸಿದ್ದರಿಂದ ನಾವು ಸತ್ಯಾಸತ್ಯತೆ ತಿಳಿಯಲು ಫೆಬ್ರವರಿ 5 ರಂದು ಪಂಜಾಬ್‌ಗೆ ತಲುಪಿದೆವು. ಪಂಜಾಬಿನಲ್ಲಿ ಕಳೆದ 5 ತಿಂಗಳಿನಿಂದಲೂ ಒಂದು ದಿನವೂ ತಪ್ಪದೇ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ರೈಲ್ವೇ ಸ್ಟೇಷನ್, ಮಾಲ್, ಟೋಲ್ ಪ್ಲಾಜಾಗಳ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಪ್ರತಿಭಟನೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸುತ್ತಾರೆ. 3 ಗಂಟೆ ಬಳಿಕ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಕೆಲ ರೈತರು ಇಲ್ಲೇ ಟ್ರ್ಯಾಲಿಗಳಲ್ಲಿ, ಟೆಂಟ್‌ಗಳಲ್ಲಿ ಉಳಿದುಕೊಂಡಿದ್ದಾರೆ.

ಚಕ್ಕಾ ಜಾಂ

ನಾಲ್ಕು ದಿನಗಳ ಪಂಜಾಬ್ ಪ್ರವಾಸದಲ್ಲಿ ನಮಗೆ ಮನದಟ್ಟಾಗಿದ್ದು, ರಾಜ್ಯದಲ್ಲಿ ಇಷ್ಟು ತಿಂಗಳಾದರೂ ಪ್ರತಿಭಟನೆಯ ಕಾವು ಕೊಂಚವೂ ಕಡಿಮೆಯಾಗಿಲ್ಲ, ಬದಲಿಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೈಕ್, ಆಟೋ, ಕಾರುಗಳು, ಟ್ರ್ಯಾಕ್ಟರ್ ಮತ್ತು ಕೆಲ ಬಸ್‌ಗಳ ಮೇಲೆ ಕಿಸಾನ್ ಧ್ವಜ ಹಾರಾಡುತ್ತಿತ್ತು. ಎಲ್ಲಾ ಅಂಗಡಿಗಳ ಮೇಲೆ, ಮನೆಗಳ ಮೇಲೆ, ಗುರುದ್ವಾರಗಳ ಮೇಲೆ ರೈತ ಹೋರಾಟ ಬೆಂಬಲಿಸುವ ಧ್ವಜಗಳು, ಸ್ಟಿಕ್ಕರ್‌ಗಳು ಇದ್ದವು. ರೈತರಿಗೆ ಕಾನೂನುಗಳ ಬಗ್ಗೆ ಸಭೆಗಳನ್ನು ಮಾಡಿ ವಿವರಣೆ ನೀಡಿ ಜಾಗೃತಗೊಳಿಸುವ ಕೆಲಸವನ್ನು ಇಲ್ಲಿನ ಸಂಘಟನೆಗಳು ಮಾಡುತ್ತಿವೆ.

ಫೆಬ್ರವರಿ 6 ರಂದು ಬರ್ನಾಲಾ ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಜಾಬಿನ ರೈತ ಹೋರಾಟವನ್ನು ಕಣ್ಣಾರೆ ಕಂಡೆವು. ಅಂದು ದೇಶಾದ್ಯಂತ ಚಕ್ಕಾ ಜಾಮ್ (ಸಂಚಾರ ಸ್ಥಗಿತ) ಚಳವಳಿ ಇದ್ದಿದ್ದರಿಂದ ಅಂದಿನ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತ್ತು. ಬರ್ನಾಲಾ ಜಿಲ್ಲೆಯಲ್ಲಿ ರೈಲು ನಿಲ್ದಾಣದ ಬಳಿ ಜಮಾವಣೆಯಾಗಿದ್ದ ಮಹಿಳೆಯರು ಘೋಷಣೆಗಳ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದರು.

ಬರ್ನಾಲಾದ ರೈಲು ನಿಲ್ದಾಣದಲ್ಲಿ ಸೇರುತ್ತಿದ್ದ ಪ್ರತಿಭಟನಾಕಾರರು ಚಕ್ಕಾ ಜಾಮ್‌ಗಾಗಿ ಫೆಬ್ರವರಿ 6 ರಂದು 5 ಭಾಗಗಳಾಗಿ ವಿಭಜನೆಗೊಂಡಿದ್ದರು. ಬರ್ನಾಲಾ ಮತ್ತು ಲೂದಿಯಾನ ಹೆದ್ದಾರಿಯಲ್ಲಿ 5 ಕಡೆ ಹೆದ್ದಾರಿ ತಡೆ ನಡೆಸಲಾಗಿತ್ತು. ಟೋಲ್ ಬಂದ್‌ ಮಾಡಿರುವ ಮೆಹಾಲ್ ಕಲಾನ್ ಟೋಲ್ ಪ್ಲಾಜಾ ಬಳಿ ಸಾವಿರಾರು ಮಂದಿ ಸೇರಿದ್ದರು. ಹೆದ್ದಾರಿಯಲ್ಲರುವ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಂದ್ ಮಾಡಿರುವುದನ್ನು ನಾವು ಗಮನಿಸಿದೆವು. ಇದು ಪ್ರತಿದಿನವು ನಡೆಯುವ ದಿನಚರಿ ಎಂದು ಇಂಕ್ವಿಲಾಬ್ ಸಂಘನೆಯ ಮುಖಂಡ ನಾರಾಯಣ್ ದತ್ ತಿಳಿಸಿದರು.

ಬರ್ನಾಲಾದಿಂದ ಲೂದಿಯಾನ ಜಿಲ್ಲೆಯ ಜಗ್ರಾವ್ ನಗರದಲ್ಲಿ ನೂರಾರು ಪ್ರತಿಭಟನಾಕಾರರು ಹಾಡುಗಳನ್ನು ಹಾಡುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಸಮಯ 3.30 ಆಗಿದ್ದರಿಂದ ಅಲ್ಲಿಂದ ರೈತರು ತಮ್ಮ ಗ್ರಾಮಗಳಿಗೆ ವಾಪಸ್ ತೆರಳುತ್ತಿದ್ದರು. ಉಳಿದ ಕೆಲವರು ತಮ್ಮ ಟ್ರ್ಯಾಲಿಗಳಲ್ಲಿ ಉಳಿದುಕೊಂಡು ಪ್ರತಿಭಟನೆ ಮುಂದುವರೆಸುತ್ತಿದ್ದರು.

ಜಗ್ರಾವ್ ರೈಲು ನಿಲ್ದಾಣದಲ್ಲಿ 12 ಗಂಟೆಗೆ ಸರಿಯಾಗಿ ಪ್ರತಿಭಟನೆ ಆರಂಭವಾಗಿತ್ತು. ಹಳ್ಳಿಗಳಿಂದ ಮಹಿಳಾ ರೈತರು ತಮ್ಮ ಟ್ರ್ಯಾಲಿಗಳೊಂದಿಗೆ ಬಂದು ಸೇರಿದ್ದರು. ಒಂದೆರಡು ಕ್ರಾಂತಿಕಾರಿ ಗೀತೆಗಳು, ಕವನಗಳ ವಾಚನದ ನಂತರ ಕೃಷಿ ಕಾನೂನುಗಳ ಬಗ್ಗೆ ಮಾತು ಆರಂಭವಾಗಿತ್ತು. ಸರ್ಕಾರ ಕಾಯ್ದೆ ವಾಪಸ್ ತೆಗೆದುಕೊಳ್ಳುವವರೆಗೆ ನಾವು ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿರುವವರಿಗೆ ಬೆಂಬಲಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ರಂಗಕರ್ಮಿ, ಹೋರಾಟಗಾರ ಕಮಲ್ಜಿತ್ ಖನ್ನಾ ಹೇಳಿದರು.

ಲೂಧಿಯಾನದಿಂದ ನಾವು ಮೊಗ್ಗ ಜಿಲ್ಲೆಗೆ ಭೇಟಿ ನೀಡಿದೆವು. ಸಿಂಘುಗಡಿಯಲ್ಲಿ ಪ್ರತಿಭಟನಾನಿರತ ರೈತ ಗುರ್ತೇಜ್ ಸಿಂಗ್ ನೀಡಿದ್ದ ಮಾಹಿತಿ ಆಧಾರದಲ್ಲಿ ಈ ಜಿಲ್ಲೆಯ ಡಗ್ರು ಗ್ರಾಮದ ಬಳಿಯಿರುವ ಅದಾನಿ ಕಂಪನಿಯ ಸೈಲೋ(ಸಂಗ್ರಹಾಲಯ) ಗೋಡೌನ್ ನೋಡಲು ಹೋದೆವು. ಅಕ್ಟೋಬರ್ 1 ರಿಂದ ಇದನ್ನು ರೈತರು ಘೇರಾವ್ ಹಾಕಿದ್ದಾರೆ. ಡಗ್ರುನಲ್ಲಿರುವ ಅದಾನಿ ಅಗ್ರಿ ಲಾಜೆಸ್ಟಿಕ್ ಲಿಮಿಟೆಡ್ (AALL) ಸಂಗ್ರಹಾಲಯ ಕಳೆದ 13 ವರ್ಷಗಳಿಂದ ಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. 700 ಕೋಟಿ ರೂಪಾಯಿ ಖರ್ಚು ಮಾಡಿ ಈ ಸೈಲೋ ನಿರ್ಮಿಸಲಾಗಿದೆ ಎಂದು ಅದಾನಿ ಸಮೂಹ ಸಂಸ್ಥೆಗಳ ವೆಬ್ಸೈಟ್ ಹೇಳುತ್ತದೆ.

ಫುಡ್ ಕಾರ್ಫೋರೇಷನ್ ಆಫ್ ಇಂಡಿಯಾ ಸಹಯೋಗದೊಂದಿಗೆ ಈ ಸಂಸ್ಥೆ 2007 ರಿಂದ ಮೊಗ್ಗ ಜಿಲ್ಲೆಯಲ್ಲಿ ಗೋಧಿ ಖರೀದಿ ಮಾಡುತ್ತಿದೆ. 41 ಎಕರೆ ವಿಸ್ತಿರ್ಣ ಹೊಂದಿರುವ ಇದರಲ್ಲಿ 20 ಲಕ್ಷ ಟನ್ ಗೋದಿ ಸಂಗ್ರಹಿಸಬಹುದು. ಆದರೆ ಇಲ್ಲಿ ಕೆಲಸ ನಿರ್ವಹಿಸುವವರು ಕೇವಲ 13 ಮಂದಿ ಮಾತ್ರ. ಯಂತ್ರಗಳ ಬಳಕೆ ಹೆಚ್ಚಾಗಿದ್ದು, ರೈತರನ್ನೂ ಕೂಡ ಕಾರ್ಖಾನೆಯ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ರೈತರು ಆರೋಪಿಸಿದ್ದಾರೆ. ರೈತ ಹೋರಾಟ ಆರಂಭವಾದ ನಂತರ ರೈತರು ಇಲ್ಲಿಗೆ ಗೋಧಿ ಮಾರುವುದನ್ನು ನಿಲ್ಲಿಸಿ, ಅದನ್ನೆ ವಶಕ್ಕೆ ಪಡೆದಿದ್ದಾರೆ.

ಇಲ್ಲಿಂದ ಬಟಿಂಡಾ, ಮೊಗ್ಗ ಮತ್ತು ಲೂದಿಯಾನ ಜಿಲ್ಲೆಗಳ ಹೆದ್ದಾರಿ ಲೆಹರಾ ಬೇಲಾ ಟೋಲ್ ಪ್ಲಾಜಾಗೆ ಭೇಟಿ ನೀಡಿದೆವು. ಈ ಟೋಲ್ ಪ್ಲಾಜಾ ಪ್ರತಿಭಟನೆಯ ಮುಂದಾಳತ್ವವನ್ನು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ನ ಉಗ್ರಾನ್ ಸಂಘಟನೆ ವಹಿಸಿಕೊಂಡಿದೆ. ಅತಿಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿರುವ ಈ ಸಂಘಟನೆ ಶಿಸ್ತು ಬದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಇದು ಹೊಂದಿದ್ದು, ಅದರಲ್ಲಿ ಮಹಿಳಾ ರೈತರು ಮೆಲುಗೈ ಸಾಧಿಸಿದ್ದಾರೆ. ಆ ರೈತರು ರಾಜ್ಯದ ಕಾಂಗ್ರೆಸ್ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳಿಗೆ ಛೀಮಾರಿ ಹಾಕಿ ಘೋಷಣೆಗಳನ್ನು ಕೂಗುತ್ತಿದ್ದರು.

ಬಟಿಂಡಾ ಜಿಲ್ಲೆಯ ರಾಮಪುರ್ ಫುಲ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಮಹಿಳೆಯರು ಒಕ್ಕೂಟ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಧಿಕ್ಕಾರ ಕೂಗುತ್ತಿದ್ದುದ್ದು ಸಾಮಾನ್ಯವಾಗಿತ್ತು. ವಯಸ್ಸಾದ ಅಜ್ಜಿಯಂದಿರು ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ರೈತ ಹೋರಾಟವನ್ನು ಬೆಂಬಲಿಸುತ್ತಾ ಸರ್ಕಲ್‌ಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸುವ ಯುವಜನರು, ವಾಹನಗಳ ಮೇಲೆ ಕಿಸಾನ್ ಧ್ವಜಗಳನ್ನು ಹಾಕಿಕೊಂಡು ಓಡಾಡುವ ಜನರು, ನಳ ನಳಿಸುತ್ತಿರುವ ಗೋಧಿಯ ನಡುವೆ ರೈತ ಪ್ರತಿಭಟನೆಯ ಧ್ವಜಗಳು, ಹಳ್ಳಿ, ನಗರವೆನ್ನುವ ವ್ಯತ್ಯಾಸವಿಲ್ಲದೆ ಎಲ್ಲರ ಮನೆಗಳ ಮೇಲೂ ಈ ಧ್ವಜಗಳ ಹಾರಾಟ ನಮ್ಮ ಕಣ್ಣುಕುಕ್ಕದೆ ಇರಲಿಲ್ಲ.

ಪ್ರತಿಭಟನಾ ಸ್ಥಳಗಳಲ್ಲಿ ವಿಡಿಯೋ, ಲೈವ್ ಮಾಡುತ್ತಿದ್ದ ನಮ್ಮನ್ನು ಸಂಶಯದ ಕಣ್ಣಿನಿಂದ ನೋಡುತ್ತಿದ್ದ ರೈತರು, ನಂತರ ನಮ್ಮ ಸುದ್ದಿಗಳನ್ನು ತೋರಿಸಿದ ಬಳಿಕ ಅವರ ನಡೆ ನಿಜಕ್ಕೂ ಆಶ್ಚರ್ಯ ತರಿಸುವಂತಹವು. ಪಂಜಾಬ್ ಜನರ ಪ್ರೀತಿ ದೆಹಲಿಯ ಗಡಿಗಳಲ್ಲಿ ಈಗಾಗಲೇ ಕಂಡಿದ್ದಾಗಿತ್ತು. ಆದರೆ ಅವರದ್ದೇ ರಾಜ್ಯದಲ್ಲಿಯೂ ಅವರ ಪ್ರೀತಿ, ಆದರತೆಯಲ್ಲಿ ಕೊಂಚವು ವ್ಯತ್ಯಾಸವಿರಲಿಲ್ಲ. ಶಗೂನ್ ಹೆಸರಲ್ಲಿ ಬೇರೆ ಕಡೆಯಿಂದ ಬಂದ ಹೆಣ್ಣುಮಕ್ಕಳಿಗೆ ಶುಭ ಹಾರೈಸಿ, ಆಶೀರ್ವಾದದ ನೆಪದಲ್ಲಿ 75 ವರ್ಷದ ಅಜ್ಜಿ ಹಣವನ್ನು ಕೈಗಿಟ್ಟ ಪರಿ ನಮ್ಮ ಕಣ್ಣಲ್ಲಿ ನೀರು ತರಿಸಿತು.

ನಮ್ಮನ್ನು ಪತ್ರಕರ್ತರಂತೆ ನೋಡದೆ ಕರ್ನಾಟಕದ ಪ್ರತಿನಿಧಿಗಳಾಗಿ ನೋಡಲಾಗುತ್ತಿತ್ತು. ಕರ್ನಾಟಕದಲ್ಲಿ ಬೆಳೆಯಲಾಗುವ ಬೆಳೆಗಳ ಬಗ್ಗೆ, ಎಂಎಸ್ಪಿ ಬಗ್ಗೆ, ರೈತರ ಪರಿಸ್ಥಿತಿ ಬಗ್ಗೆ ತಿಳಿಯುವ ಕುತೂಹಲ ಅವರಲ್ಲಿತ್ತು. ವಿವಾದಿತ ಕಾನೂನುಗಳ ವಿರುದ್ದ ಕರ್ನಾಟಕದಲ್ಲಿ ನಡೆಯುತ್ತಿರುವ ರೈತ ಹೋರಾಟದ ಸುದ್ದಿಗಳನ್ನು ನಾವು ಹೇಳುತ್ತಿದ್ದರೇ ನಿಶಬ್ಧವಾಗಿ ಕೇಳುತ್ತಿದ್ದರು.

ಪಂಜಾಬಿನಿಂದ ಪ್ರತಿದಿನ ಜನ ದೆಹಲಿಯ ಗಡಿಗಳಿಗೆ ತೆರಳುತ್ತಿದ್ದಾರೆ. ಅಲ್ಲಿಂದ ವಾಪಸ್ ಆಗುತ್ತಿದ್ದಾರೆ. ಪಂಜಾಬಿನ ಯಾವ ಹೊಲಗಳು ಬರಡಾಗಿ ಬಿದ್ದಿಲ್ಲ. ಎಲ್ಲೆಡೆ ಹಸಿರು ಆವರಿಸಿದೆ. ರೈತರು ತಮ್ಮ ಪ್ರತಿಭಟನೆ ಜೊತೆಗೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಗೋಧಿ, ಸಾಸಿವೆ, ಚಳಿಗಾಲದ ತರಕಾರಿಗಳು ಬೆಳೆಯಲಾಗುತ್ತಿದೆ.

ಈ ಮನೆಯವರು ಪ್ರತಿಭಟನೆಗೆ ಹೊಗಿದ್ದರೇ, ಪಕ್ಕದ ಮನೆಯವರು ಆ ಮನೆಯವರ ಕೃಷಿ ಕೆಲಸ ಮಾಡುತ್ತಿದ್ದಾರೆ. ಸಮುದಾಯದ ಸಹಾಯ ಇವರಿಗಿದೆ. ಗುರುದ್ವಾರಗಳು ಪ್ರಮುಖ ಕೆಲಸ ಮಾಡುತ್ತಿವೆ. ನಗರ ಪ್ರದೇಶದಲ್ಲಿ ಇರುವವರು, ಕೃಷಿ ಕೆಲಸ ಮಾಡದೇ ಇದ್ದವರೂ ಕೂಡ ರೈತರ ಬೆಂಬಲಕ್ಕಿದ್ದಾರೆ. ಲಂಗರ್‌ಗಳು ನಿಶ್ಚಿಂತೆಯಿಂದ ಹೋರಾಟ ನಡೆಯಲು ನೆರವು ನೀಡುತ್ತಿದ್ದಾರೆ.

ದೆಹಲಿಯ ಗಡಿಗಳಲ್ಲಿ ಜನವರಿ 5 ರಿಂದ ಇರುವ ಗೌರಿ ಮಿಡಿಯಾ ತಂಡಕ್ಕೆ ಪಂಜಾಬ್ ಕೂಡ ಸಿಂಘು, ಟಿಕ್ರಿ ಗಡಿ ಭಾಗಗಳಲ್ಲಿ ಇರುವ ಅನುಭವ ನೀಡಿತು. ರೈತರ ಮಾತುಗಳಲ್ಲಿ ಯಾವುದೇ ವ್ಯತ್ಯಾಸ ನಮಗೆ ಕಾಣಲಿಲ್ಲ. ಕಾನೂನುಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ನಡೆಸುವ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಒಂದು ರೀತಿಯಲ್ಲಿ ಪ್ರತಿಭಟನೆಯ ಹುಮ್ಮಸ್ಸು ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ.

  • ಮಮತ. ಎಂ

ಇದನ್ನೂ ಓದಿ: ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಮೋದಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿ

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...