Homeಮುಖಪುಟಭಾರತದ ಮೂರು ಬಣ್ಣಗಳು; ತ್ರಿವರ್ಣ ಧ್ವಜ ತಯಾರಕರ ನಲಿವು-ನೋವುಗಳು: ಪ್ರೊ. ಜಿ ಎನ್ ದೇವಿ

ಭಾರತದ ಮೂರು ಬಣ್ಣಗಳು; ತ್ರಿವರ್ಣ ಧ್ವಜ ತಯಾರಕರ ನಲಿವು-ನೋವುಗಳು: ಪ್ರೊ. ಜಿ ಎನ್ ದೇವಿ

- Advertisement -
- Advertisement -

ಮಾನವ ಇತಿಹಾಸದ ಅಧ್ಯಯನ ಮಾಡಿದಾಗ, ಬಟ್ಟೆಯ ತುಣುಕೊಂದನ್ನು ಜನರು ಗೌರವದ ಮತ್ತು ಅತ್ಯಂತ ಪ್ರಮುಖ ಲಾಂಛನವಾಗಿ ನೋಡಲು ಶುರು ಮಾಡಿದ್ದು ಯಾವಾಗ ಎಂದು ಹೇಳುವುದು ಕಷ್ಟ. ಮಾನವ ಜೀವಿಗಳು ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಮುಂಚೆ ಎಲೆಗಳು ಅಥವಾ ಪ್ರಾಣಿಗಳ ಚರ್ಮದಿಂದ ಮಾಡಿದ ಬಟ್ಟೆಗಳನ್ನು ಬಳಸುತ್ತಿದ್ದರು. ಅವರು ಯುದ್ಧಗಳನ್ನು ಮಾಡಿ, ವರ್ಣರಂಜಿತ ವಸ್ತುಗಳನ್ನು ಯುದ್ಧ ಕುಲಚಿಹ್ನೆಗಳನ್ನಾಗಿ ಇತಿಹಾಸಪೂರ್ವದಿಂದಲೂ ಬಳಸುತ್ತಿದ್ದಾರೆ. ಪ್ರಾಚೀನ ಭಾರತದ ಪದವಾದ ’ಧ್ವಜ’ ಮತ್ತು ಓಲ್ಡ್‌ನಾರ್ಸ್ ಭಾಷೆಯ ಪದವಾದ ’ಫ್ಲಾಕಾ’ (ಮಿನುಗುವುದು ಅಥವಾ ಪಟಪಟ ಹಾರಾಡುವುದು ಎಂದರ್ಥ) ಅತ್ಯಂತ ಹಳೆಯ ಕಾಲದಿಂದ ಚಾಲ್ತಿಯಲ್ಲಿವೆ.

ಡೆನ್ಮಾರ್ಕ್‌ನ ’ಡೆನ್ನೆಬ್ರಾಗ್ ಎಂಬುದು ಆಕಾಶದಿಂದ ಕೆಳಬಿದ್ದಿದ್ದು ಎಂದು ಹೇಳಲಾಗುತ್ತದೆ ಹಾಗೂ ಆ ಪ್ರತೀತಿ ಕಳೆದ ಎಂಟು ಶತಕಗಳಿಂದ ಚಾಲ್ತಿಯಲ್ಲಿದೆ. ಆದಾಗ್ಯೂ, ರಾಷ್ಟ್ರಧ್ವಜ ಎಂಬುದು ಜನರ ಸಾಂಕೇತಿಕ ಸಹಿಯಾಗುವ ವಿದ್ಯಮಾನವು ’ರಾಷ್ಟ್ರಗಳ ಸಮುದಾಯ’ ಎಂಬ ಪರಿಕಲ್ಪನೆಯೊಂದಿಗೆ ತಳುಕುಹಾಕಿಕೊಂಡಿದೆ; ಅದರಲ್ಲಿ ಪ್ರತಿಯೊಂದು ರಾಷ್ಟ್ರವನ್ನೂ ಹೆಮ್ಮೆಯಿಂದ ಪಟಪಟ ಹಾರಾಡುತ್ತಿರುವ ಬಟ್ಟೆಯ ತುಣುಕಿನಿಂದ, ಅದರ ರಾಷ್ಟ್ರಧ್ವಜದಿಂದ ಪ್ರತಿನಿಧಿಸಲಾಗುತ್ತದೆ. ಕಳೆದ ಎರಡು ಶತಕಗಳಲ್ಲಿ ಒಂದಾದಮೇಲೆಒಂದರಂತೆ ಆಧುನಿಕ ದೇಶಗಳು ಜನ್ಮ ತಳೆದ ಮೇಲೆ, ಆ ಎಲ್ಲ ದೇಶಗಳು ತನ್ನ ಅಸ್ತಿತ್ವವನ್ನು ಸಾಂಕೇತಿಕಗೊಳಿಸಲು ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡವು.

ಭಾರತದ ತ್ರಿವರ್ಣಧ್ವಜವು ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ವಿಕಸನಗೊಂಡಿತು ಹಾಗೂ 1947ರ ಜುಲೈ 22ರಂದು ಸಂವಿಧಾನ ಸಭೆಯು ಔಪಚಾರಿಕವಾಗಿ ಅದನ್ನು ಅಂಗೀಕರಿಸಿತು. ಭಾರತೀಯ ತ್ರಿವರ್ಣ ಧ್ವಜದ ಒಂದು ಆವೃತ್ತಿಯಲ್ಲಿ ಮಧ್ಯದಲ್ಲಿ ನೂಲುವ ಚರಕ ಇತ್ತು. ಆ ಸಮಯದಲ್ಲಿ ಚರಕ ಮತ್ತು ಖಾದಿ ನಮ್ಮ ಸ್ವಾತಂತ್ರ ಸಂಗ್ರಾಮದ ಪ್ರಮುಖ ಆಯುಧಗಳಾಗಿದ್ದವು. ಈ ಐತಿಹಾಸಿಕ ಮೂಲಕ್ಕೆ ಬದ್ಧತೆಯನ್ನು ಪ್ರದರ್ಶಿಸುತ್ತ ದೇಶದ ಅಧಿಕೃತ ಧ್ವಜಗಳನ್ನು ಇಂದಿಗೂ ಖಾದಿ ಬಟ್ಟೆಯಲ್ಲಿಯೇ ಮಾಡಲಾಗುತ್ತದೆ. ಇಂಡಿಯನ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್ಸ್ ಎಂಬ ಸಂಸ್ಥೆ ಅದರ ಖಚಿತ ಉದ್ದಳತೆ, ನೇಯ್ಗೆ ಮತ್ತು ಅದರ ತುದಿಗಳ ಹೊಲಿಗೆ ಮತ್ತು ಮಡಚುವಿಕೆಯನ್ನು ನಿಯಂತ್ರಿಸುತ್ತದೆ.

ಅನೇಕ ಭಾರತೀಯರಿಗೆ ಇದು ಗೊತ್ತಿಲ್ಲದೇ ಇರಬಹುದು, ಈ ಧ್ವಜಗಳನ್ನು ಉತ್ತರ ಕರ್ನಾಟಕದಲ್ಲಿಯೇ ನಿರ್ಮಿಸಲಾಗುತ್ತದೆ. ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿ ಸಾವಿರಾರು ನೂಲುವ ಚರಕಾಗಳಲ್ಲಿ ನೇಯ್ದ ಖಾದಿಯನ್ನು ಹುಬ್ಬಳ್ಳಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ರಾಷ್ಟ್ರಧ್ವಜಗಳನ್ನು ಮಾಡಲು ಬಳಸುತ್ತದೆ. ಈ ರಾಷ್ಟ್ರಧ್ವಜ ನಿರ್ಮಾಣದ ಕೇಂದ್ರವು ಹಲವಾರು ಉದ್ದಳತೆಯ ಧ್ವಜಗಳನ್ನು ತಯಾರಿಸುತ್ತದೆ; ಅದರಲ್ಲಿ ಗರಿಷ್ಠ 21*14 ಅಡಿಗಳ ಉದ್ದಳತೆಯದ್ದಾಗಿದ್ದರೆ, ಕನಿಷ್ಠ 6*4 ಅಡಿಗಳ ಉದ್ದಳತೆ ಹೊಂದಿರುತ್ತವೆ. ಕೆಂಪು ಕೋಟೆಯ ಮೇಲೆ ಹೆಮ್ಮೆಯಿಂದ ಪಟಪಟ ಹಾರಾಡುವ ಧ್ವಜ ಇಲ್ಲಿ ಹುಬ್ಬಳ್ಳಿಯಲ್ಲಿಯೇ ರಚಿಸಲಾಗಿದ್ದು.

ಈ ಧ್ವಜ ತಯಾರಿಸುವ ಘಟಕವು ಹಲವಾರು ರೀತಿಯಲ್ಲಿ ಸ್ವತಂತ್ರ ಭಾರತದ ಚೈತನ್ಯದ ಸೂಕ್ಷ್ಮರೂಪವಾಗಿದೆ ಎನ್ನಬಹುದು. ಇದರ ಸಂಸ್ಥಾಪಕ ವೆಂಕಟೇಶ ಮಾಡಗಿ ಅವರು 1903 ಜನವರಿ 26ರಂದು ಜನಿಸಿದ್ದರು, ಭಾರತ ಗಣರಾಜ್ಯವಾಗುವುದಕ್ಕಿಂತ 47 ವರ್ಷ ಮುಂಚೆ. ಈ ಘಟಕದಲ್ಲಿ ಕೆಲಸ ಮಾಡುವವರಲ್ಲಿ ಅತ್ಯಂತ ಹಿರಿಯರಾದವರು ನೂರಣ್ಣ, ಅವರು 1947ರಲ್ಲಿ ಜನಿಸಿದ್ದರು. ಇಲ್ಲಿ ಕೆಲಸ ಮಾಡುವ ಅನೇಕರಲ್ಲಿ ಅವರೂ ಒಬ್ಬರು. ಈ ಘಟಕದಲ್ಲಿ ಕೆಲಸ ಮಾಡುವವರಲ್ಲಿ ಒಂದಿಬ್ಬರನ್ನು ಬಿಟ್ಟರೆ ಎಲ್ಲರೂ ಮಹಿಳೆಯರು; ಭಾರತದ ನಿಜವಾದ ಸೃಷ್ಟಿಕರ್ತರು. ಈ ದೇಶದ ಮಿಶ್ರ ಸಾಮಾಜಿಕ ನೇಯ್ಗೆಯ ಬಗ್ಗೆ ಹೆಮ್ಮೆ ಇಟ್ಟುಕೊಂಡವರೆಲ್ಲ ಸಂತಸ ಪಡುವ ವಿಷಯವೆಂದರೆ, ಈ ಘಟಕದಲ್ಲಿ ಎಲ್ಲಾ ಸಮುದಾಯದ ಅಂದರೆ ಮುಸ್ಲಿಮರು, ಜೈನರು, ಕ್ರಿಶ್ಚಿಯನ್ನರು, ದಲಿತರು, ಆದಿವಾಸಿಯರು, ಲಿಂಗಾಯತರು, ಬುದ್ಧಿಸ್ಟರು ಮತ್ತು ಹಿಂದೂ ಸಮುದಾಯಗಳ ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಾರೆ.

ಮುಸ್ಲಿಮ್ ಮಹಿಳೆಯಾದ ನೂರ್‌ಜಹಾನ್ ಅವರು ಪರಿಶಿಷ್ಟ ಜಾತಿಯ ನಯನ ಅವರೊಂದಿಗೆ ಕೆಲಸ ಮಾಡುವುದು ಹಾಗೂ ಕ್ರಿಶ್ಚಿಯನ್ನರಾದ ಜಾನೆಟ್ ಅವರು ಲಿಂಗಾಯತರಾದ ಅಕ್ಕಮ್ಮ ಅವರೊಂದಿಗೆ ಕೆಲಸ ಮಾಡುವುದು ಭಾರತದ ರಾಷ್ಟ್ರಧ್ವಜದ ತಯಾರಕರ ಬಹುತ್ವ ಜ್ಞಾನದ ಚಿತ್ರಣವನ್ನು ನೀಡುತ್ತದೆ. ಭಾರತದ ನಿರ್ಮಾತೃಗಳು ಕಲ್ಪಿಸಿಕೊಂಡಿದ್ದ ’ಭಾರತದ ಕಲ್ಪನೆ’ಯನ್ನು ಈ ಕೇಂದ್ರದಲ್ಲಿ ವಿಶದವಾಗಿ ಕಾಣಬಹುದಾಗಿರುವಂತೆ ಬೇರೆಲ್ಲೂ ಕಾಣಸಿಗುವುದು ಕಷ್ಟ.

ನಾನು ಈ ಮಹಿಳೆಯರ ಜೊತೆಗೆ ಮಾತನಾಡುತ್ತಿದ್ದಾಗ, ಡಬ್ಲು ಬಿ ಯೀಟ್ಸ್‌ನ ಕವಿತೆಯೊಂದು ನೆನಪಾಯಿತು; ’ನೃತ್ಯಗಾರ್ತಿ ಮತ್ತು ನೃತ್ಯವನ್ನು ಬೇರ್ಪಡಿಸಿ ನೋಡುವುದು ಹೇಗೆ?’. ಆಗ ಅವರೊಂದಿಗೆ ಮಾತನಾಡುತ್ತ ನಾನು ಹೇಳಿದೆ, “ನಾವೆಲ್ಲರೂ ನಮ್ಮ ರಾಷ್ಟ್ರಧ್ವಜಕ್ಕೆ ನಮಸ್ಕರಿಸುತ್ತೇವೆ, ಆ ನಮಸ್ಕಾರ ನಿಮಗೂ ಸಲ್ಲುತ್ತದೆ”. ಆದರೆ, ಅದನ್ನು ಹೇಳುತ್ತಿರುವಾಗಲೇ ಇನ್ನೊಂದು ಮಾತನ್ನು ಹೇಳಲೇಬೇಕಿದೆ; ಅವರನ್ನು ನೋಡಿ ನನ್ನ ತಲೆಯನ್ನು ಎತ್ತಿ ನಿಲ್ಲಲು ಸಾಧ್ಯವಾಗುತ್ತಿದ್ದಿಲ್ಲ, ಏಕೆಂದರೆ ಅವರ ಪರಿಸ್ಥಿತಿ. ಭಾರತದಲ್ಲಿ ಅತ್ಯಂತ ಪೀಡಿತ, ಅತ್ಯಂತ ವಂಚಿತ ಜನರ ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿಯಲ್ಲಿ ಅವರಿದ್ದಾರೆ. ಅವರು ಮಾತುಗಳನ್ನು ಕೇಳುತ್ತಿದ್ದಾಗ, ಅನೇಕರಿಗೆ ತಮ್ಮ ಕಣ್ಣೀರನ್ನು ತಡೆಯಲಾಗಲಿಲ್ಲ.

ಅವರುಗಳು ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ಕೆಲಸ ಮಾಡಿ, ಸುಮಾರು ನೂರೈವತ್ತು ರೂಪಾಯಿಗಳ ಸಂಪಾದನೆ ಮಾಡುತ್ತಾರೆ ಎಂದು ಹೇಳಿದರು. ದಶಕಗಳಿಂದ ದೇಶಕ್ಕಾಗಿ ಧ್ವಜಗಳನ್ನು ನಿರ್ಮಿಸುತ್ತಿದ್ದರೂ, ಅವರ ತಿಂಗಳ ಆದಾಯದಲ್ಲಿ ಹೆಚ್ಚು ಏರಿಕೆ ಆಗಿಲ್ಲ; ಅಲ್ಲಿ ಕೆಲಸ ಮಾಡುವ ಹೆಚ್ಚಿನವರು ತಿಂಗಳಿಗೆ ಮೂರು ಸಾವಿರಕ್ಕಿಂತಲೂ ಕಡಿಮೆ ಸಂಪಾದನೆ ಮಾಡುತ್ತಾರೆ. ಅವರಿಗೆ ವೇತನದಲ್ಲಿ ವಾರ್ಷಿಕ ಏರಿಕೆ ಎಂಬುದಿಲ್ಲ ಹಾಗೂ ಪಿಂಚಣಿ ಪಡೆಯುವ ಯಾವ ಸಾಧ್ಯತೆಯೂ ಇಲ್ಲ. ವೇತನ ಸವಲತ್ತಿನ ಜೊತೆಗಿನ ಹೆರಿಗೆ ರಜೆ ಮತ್ತು ಪ್ರಯಾಣ ಭತ್ತೆ ಎಂಬ ಪದಗಳನ್ನು ಅವರು ಜೀವನದಲ್ಲೇ ಕೇಳಿಲ್ಲ.

ಈ ಘಟಕದಲ್ಲಿ ಒಂದು ವರ್ಷಕ್ಕೆ ಸುಮಾರು ಮೂರರಿಂದ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಧ್ವಜಗಳನ್ನು ತಯಾರಿಸಲಾಗುತ್ತದೆ. ಕೋವಿಡ್ ಕಾರಣದಿಂದ ಈ ವರ್ಷದ ಮಾರಾಟದಲ್ಲಿ 30% ಕುಸಿತ ಕಂಡುಬಂದಿದೆ. ಅದರ ಪರಿಣಾಮವಾಗಿ ಇಲ್ಲಿ ಕೆಲಸ ಮಾಡುವವರಿಗೆ ಕೆಲಸ ಕಡಿಮೆಯಾಗಿ, ಅವರ ಆದಾಯದಲ್ಲಿಯೂ ಕುಸಿತ ಕಂಡುಬಂದಿದೆ. ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಯಾವುದೇ ಪರಿಹಾರ ಇವರಿಗೆ ತಲುಪಿಲ್ಲ. ಈ ಘಟಕದ ಸಂಯೋಜಕರು ನನಗೆ ಹೇಳಿದ್ದೇನೆಂದರೆ, ಸರಕಾರವು ಈ ಘಟಕಕ್ಕೆ ಪಾವತಿ ಮಾಡಬೇಕಾದ ಹಣವನ್ನು ಇನ್ನೂ ಸಂದಾಯ ಮಾಡಿಲ್ಲ ಎಂದು. ಸಂದಾಯವಾಗಬೇಕಾದ ಹಣದ ಮೊತ್ತ ಕೋಟಿಗಳಷ್ಟಿದೆ. ಅಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬೇರೆ ಕೆಲಸ ಏಕೆ ಹುಡುಕುತ್ತಿಲ್ಲ ಎಂದು ನಾನು ಕೇಳಿದಾಗ ಅವನು ನೀಡಿದ ಉತ್ತರ ಹೃದಯ ತಟ್ಟುವಂತಿತ್ತು. “ನಾವು ಭಾರತವನ್ನು ಪ್ರೀತಿಸುತ್ತೇವೆ. ಈ ರಾಷ್ಟ್ರಕ್ಕೆ ನಾವು ಸಲ್ಲಿಸುವ ಸೇವೆ ಇದು. ಹಾಗೂ ಗಾಂಧೀಜಿಯವರು ದಬ್ಬಾಳಿಕೆಯ ವಿರುದ್ಧ ಖಾದಿಯನ್ನು ಒಂದು ಅಸ್ತ್ರವಾಗಿ ಬಳಸಿದ್ದರು. ಅದನ್ನೇ ನಾವು ಜೀವಂತವಾಗಿಡುತ್ತಿದ್ದೇವೆ. ಮತ್ತು, ನೀವೇ ಹೇಳಿ ಸರ್, ನಮಗಾಗಿ ಬೇರೆ ಯಾವುದಾದರೂ ಉದ್ಯೋಗಗಳಾದರೂ ಇವೆಯಾ?”

ಈ ವರ್ಷ ಜನವರಿ 26ರಂದು ಆಕಾಶದಲ್ಲಿ ಹಾರಾಡಿದ ಧ್ವಜವನ್ನು ತಯಾರಿಸಿದ್ದು ನಮ್ಮ ನಾಡಿನ ನೂರ್‌ಜಹಾನ್‌ರು, ಜಾನೆಟ್‌ರು ಹಾಗೂ ಅಕ್ಕಮ್ಮರು, ಈ ಎಲ್ಲರೂ ಸೇರಿ ತಮ್ಮ ಅತ್ಯಲ್ಪ ವೇತನಕ್ಕೆ ಕೆಲಸ ಮಾಡಿ ತಯಾರಿಸಿದ್ದು. ಅವರಲ್ಲಿ ಕೆಲವರ ಸಹೋದರರು, ಮಕ್ಕಳು ಧಾರವಾಡದಲ್ಲಿ ನಡೆದ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಜನವರಿ 26ರಂದು ದೆಹಲಿ ಗಡಿಯಲ್ಲಿ ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಲು ಧಾರವಾಡದಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಅದೇ 26ನೇ ಜನವರಿಯಂದು, ನಮ್ಮ ಮಾಧ್ಯಮಗಳು ಕೆಂಪು ಕೋಟೆಯ ಮೇಲೆ ಯಾವ ರೀತಿಯಲ್ಲಿ ರಾಷ್ಟ್ರಧ್ವಜವನ್ನು ಅವಮಾನಿಸಲಾಗಿದೆ ಎಂಬ ಸುದ್ದಿಯನ್ನು ದೇಶಕ್ಕೆ ಬಿತ್ತರಿಸುವಲ್ಲಿ ನಿರತರಾಗಿದ್ದವು. ಸುದ್ದಿ ವಾಹಿನಿಗಳಲ್ಲಿ ಬಂದ ಆ ಸುದ್ದಿಗಳ ಸತ್ಯಾಸತ್ಯತೆಯ ಪ್ರಶ್ನೆ ಬೇರೆ ವಿಷಯ ಆದರೆ ಈ ರಾಷ್ಟ್ರಧ್ವಜವನ್ನು ನಿರ್ಮಿಸುವ ನಿಜವಾದ ಕರ್ತೃಗಳನ್ನು ನೆನೆಯಲು ಯಾರ ಬಳಿಯೂ ಸಮಯವಿರಲಿಲ್ಲ.

ಭಾರತವನ್ನು ಒಂದು ರಾಷ್ಟ್ರವನ್ನಾಗಿಸುವ ಕಾರ್ಮಿಕರನ್ನು ಯಾವ ರೀತಿಯಲ್ಲಿ ನಿರ್ಲಕ್ಷಿಸಲಾಗಿದೆ ಎಂಬುದನ್ನು ನೋಡಿದಾಗ ರಾಷ್ಟ್ರೀಯತೆಯ ಸಾರ್ವಜನಿಕ ಕಿರುಚಾಟವು ಟೊಳ್ಳಾಗಿ ಕೇಳಿಸುತ್ತದೆ. ಈಗ ಸದ್ಯಕ್ಕೆ ಚಾಲ್ತಿಯಲ್ಲಿರುವ ರಾಷ್ಟ್ರೀಯತೆಯ ಬ್ರ್ಯಾಂಡ್‌ಗೆ ದೇಶವೆಂದರೆ ಆ ದೇಶದ ಪ್ರಜೆಗಳು, ಅದರ ಸಮ್ಮಿಶ್ರ ಸಮಾಜ, ಪ್ರೀತಿ ಮತ್ತು ತ್ಯಾಗದ ಸಾಮರ್ಥ್ಯವುಳ್ಳ ವಿಶಾಲ ಜನತೆ ಎಂಬುದನ್ನು ಹಾಗೂ ದೇಶವೆಂದರೆ ಕೇವಲ ಕೆಲವು ಪ್ರಬಲ ಮತ್ತು ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲ ಎಂಬುದನ್ನು ಅರ್ಥ ಮಾಡಿಸಬೇಕಿದೆ. ತ್ರಿವರ್ಣ ಧ್ವಜ ನಮ್ಮ ಅತ್ಯಂತ ಪವಿತ್ರ ಲಾಂಛನ. ನಾನು ತ್ರಿವರ್ಣಕ್ಕೆ ಪ್ರತಿ ಬಾರಿ ನಮಸ್ಕರಿಸುವಾಗ ನನ್ನ ಭಾರತದ ಬಗ್ಗೆ ಹೃದಯದಲ್ಲಿ ಹೆಮ್ಮೆ ಮೂಡುತ್ತದೆ. ಆದರೆ, ಇಡೀ ದೇಶಕ್ಕಾಗಿ ಆ ಸಾಂಕೇತಕತೆಯನ್ನು ಜೀವಂತವಾಗಿಡಲು ದುಡಿಯವ ಜನರ ನೋವು, ಹಸಿವು, ಸಂಕಟ ಮತ್ತು ಯಾತನೆಗಳನ್ನು ಮರೆಮಾಚಲು ಈ ಹೆಮ್ಮೆಯಷ್ಟೇ ಸಾಕೇ?

26ರ ಜನವರಿಯ ನಂತರ ಒಂದು ವಾರದೊಳಗೆ ರಾಷ್ಟ್ರೀಯ ಬಜೆಟ್‌ಅನ್ನು ಮಂಡಿಸಲಾಯಿತು. ಈ ದುಡಿಯುವ ಕೈಗಳಿಗೆ ಯಾವುದೇ ಪರಿಹಾರ ಅಥವಾ ಭರವಸೆ ಈ ಬಜೆಟ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ. ಭಾರತಕ್ಕೆ ಜಯವಾಗಲಿ, ಭಾರತ ಮಾತೆಗೆ ಜಯವಾಗಲಿ, ನೇಯ್ಗೆ ಮಾಡುತ್ತ ಎಂದೂ ದಣಿಯದ ಕೈಗಳ ಭಾರತ ಮಾತೆ, ಬಾಬಿನ್‌ಳ ಮೇಲೆ ಕೆಲಸ ಮಾಡುತ್ತ ಎಂದೂ ತನ್ನ ದೃಷ್ಟಿ ತಪ್ಪಿಸದ ಹಾಗೂ ತಾನು ಮಾಡಿದ ರಾಷ್ಟ್ರಧ್ವಜಗಳನ್ನು ಇಸ್ತ್ರಿ ಮಾಡಿ ಮಡಚುವಲ್ಲಿ ಎಂದೂ ದಣಿಯದ ಕೈಗಳನ್ನು ಹೊಂದಿರುವ ಭಾರತಮಾತೆಗೆ ಜಯವಾಗಲಿ. ಬನ್ನಿ ಇವರಿಗೆ ನಮಸ್ಕರಿಸೋಣ, ಏಕಂದರೆ ಬಜೆಟ್ ಅವರದ್ದಾಗಿರದಿದ್ದರೂ ಧ್ವಜ ಅವರದ್ದೇ ಆಗಿದೆ.

ಅನುವಾದ : ರಾಜಶೇಖರ ಅಕ್ಕಿ

ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಟೀಕೆಗೆ ಭಯಪಡಬಾರದು, ಇದು ಪಾಕಿಸ್ತಾನ, ಭಾರತವಲ್ಲ!: ಪಾಕ್ ನ್ಯಾಯಾಧೀಶನ ಹೇಳಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...