ಬಂಗಾಳದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಅವರ ಪರ್ಸ್‌ನಲ್ಲಿ ಮತ್ತು ಅವರು ಇದ್ದ ಕಾರಿನ ಸೀಟಿನಲ್ಲಿ ಕೆಲವು ಲಕ್ಷ ಮೌಲ್ಯದ ಕೊಕೇನ್ ಸಿಕ್ಕಿದ್ದಕ್ಕಾಗಿ ಬಂಧಿಸಲಾಗಿದೆ. ಕಾರಿನಲ್ಲಿದ್ದ ಅವರ ಸ್ನೇಹಿತ ಮತ್ತು ಯುವ ಮೋರ್ಚಾದ ಸಹೋದ್ಯೋಗಿ ಪ್ರಬೀರ್ ಕುಮಾರ್ ಡೇಯನ್ನು ಕೂಡ ಬಂಧಿಸಲಾಗಿದೆ.
ಈ ಘಟನೆ ಶುಕ್ರವಾರ ಮುಂಜಾನೆ ನ್ಯೂ ಅಲಿಪೋರ್ ಪ್ರದೇಶದಲ್ಲಿ ನಡೆದಿದೆ. ಪಮೇಲಾ ಗೋಸ್ವಾಮಿ ಮತ್ತು ಅವರ ಸಹವರ್ತಿ ಎನ್.ಆರ್ ಅವೆನ್ಯೂದ ಕೆಫೆಯೊಂದಕ್ಕೆ ತೆರಳಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಪಮೇಲಾ ಗೋಸ್ವಾಮಿಯ ಪರ್ಸ್ ಮತ್ತು ಕಾರ್ ಸೀಟಿನ ಕೆಳಗಿರುವ ಚೀಲಗಳಲ್ಲಿ ತ್ವರಿತ ಶೋಧ ನಡೆಸಿದಾಗ ಸುಮಾರು 100 ಗ್ರಾಂ ಕೊಕೇನ್ ಕಂಡುಬಂದಿದೆ. ಕೂಡಲೇ ಅವರನ್ನು ಪೊಲೀಸರು ಕರೆದೊಯ್ದರು. ಪೊಲೀಸರು ಕರೆದೊಯ್ಯುತ್ತಿದ್ದಂತೆ ಪಮೇಲಾ ಗೋಸ್ವಾಮಿ ಅರಚಾಡಿದ್ದಾರೆ. ಪಮೇಲಾ ಗೋಸ್ವಾಮಿಗೆ ನಿಯೋಜಿಸಲಾದ ಸೆಕ್ಯುರಿಟಿ ಗಾರ್ಡ್ ಸಹ ಬಂಧಿಸಲ್ಪಟ್ಟಿದ್ದಾನೆ, ಏಕೆಂದರೆ ಅವನು ಸಹ ಕಾರಿನಲ್ಲಿದ್ದ ಎಂದು ವರದಿಯಾಗಿದೆ.
ಬಿಜೆಪಿಯ ಸಮಿಕ್ ಭಟ್ಟಾಚಾರ್ಯ ಪ್ರತಿಕ್ರಿಯಿಸಿ, “ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಕೊಕೇನ್ ಅನ್ನು ಯಾರೋ ಕಾರಿನಲ್ಲಿ ಹಾಕಿದ್ದಾರೆಯೇ? ಮಾದರಿ ನೀತಿ ಸಂಹಿತೆಯನ್ನು ಇನ್ನೂ ಪ್ರಾರಂಭಿಸಿಲ್ಲ. ಮತ್ತು ಪೊಲೀಸರು ರಾಜ್ಯ ನಿಯಂತ್ರಣದಲ್ಲಿದ್ದಾರೆ. ಏನಾದರೂ ಆಗಿರಲು ಸಾಧ್ಯ” ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಅವರು, “ಬಂಗಾಳದಲ್ಲಿ ಈ ರೀತಿಯ ಏನಾದರೂ ಸಂಭವಿಸಬಹುದು ಎಂದು ನನಗೆ ನಾಚಿಕೆಯಾಗಿದೆ. ಇದು ಬಂಗಾಳದಲ್ಲಿ ಬಿಜೆಪಿಯಿಂದ ಹೊರಹೊಮ್ಮುತ್ತಿರುವ ನಿಜವಾದ ಚಿತ್ರ. ಈ ಹಿಂದೆ ಕೆಲವು ಬಿಜೆಪಿ ನಾಯಕರನ್ನು ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಹೆಸರಿಸಲಾಗಿದೆ” ಎಂದು ಹೇಳಿದರು.
ಪೊಲೀಸ್ ಮೂಲಗಳ ಪ್ರಕಾರ, ಪಮೇಲಾ ಗೋಸ್ವಾಮಿ ಮತ್ತು ಪ್ರಬೀರ್ ಅವರು ನಿರ್ದಿಷ್ಟ ಕೆಫೆಗೆ ಪದೇ ಪದೇ ಭೇಟಿ ನೀಡುತ್ತಿರುವುದು, ನಿಲುಗಡೆ ಮಾಡಿದ ಕಾರಿನಲ್ಲಿ ಕುಳಿತುಕೊಳ್ಳುವುದು, ಮೋಟಾರ್ ಸೈಕಲ್‌ಗಳಲ್ಲಿ ಕಾರಿನತ್ತ ಬರುವ ಯುವಕರೊಂದಿಗೆ ವಹಿವಾಟು ನಡೆಸುತ್ತಿರುವುದು ಕಂಡುಬಂದ ನಂತರ ಅವರ ಮೇಲೆ ನಿಗಾ ಇಡಲಾಯಿತು ಎನ್ನಲಾಗಿದೆ.
ಮಾದಕವಸ್ತು ವ್ಯವಹಾರವನ್ನು ಅನುಮಾನಿಸಿದ ಪೊಲೀಸರು, ಶುಕ್ರವಾರ ಪಮೇಲಾರನ್ನು ರೆಡ್ ಹ್ಯಾಂಡ್ ಹಿಡಿಯಲು ಕಾಯುತ್ತಿದ್ದರು ಎಂದು ತಿಳಿಸಿದ್ದಾರೆ.
ಪಮೇಲಾ ಗೋಸ್ವಾಮಿ ಅವರು 2019 ರಲ್ಲಿ ಬಿಜೆಪಿಗೆ ಸೇರುವ ಮೊದಲು ಏರ್ ಹೊಸ್ಟೆಸ್, ಮಾಡೆಲ್ ಮತ್ತು ಟಿವಿ ಧಾರಾವಾಹಿ ನಟಿಯಾಗಿ ಕೆಲಸ ಮಾಡಿದ್ದಾರೆಂದು ಹೇಳಲಾಗಿದೆ. ನಂತರ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಹೂಗ್ಲಿ ಜಿಲ್ಲೆಯ ಯುವ ಮೋರ್ಚಾ ವೀಕ್ಷಕರಾಗಿ ನೇಮಿಸಲಾಯಿತು.
ಬಂಧನದ ನಂತರ ವಿವಿಧ ಬಿಜೆಪಿ ನಾಯಕರೊಂದಿಗೆ ಇರುವ ಪಮೇಲಾರ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ರಭಸವಾಗಿ ಹರಿದಾಡಿದವು. 24 ಗಂಟೆಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅವರ ಕೊನೆಯ ಪೋಸ್ಟ್‌ನಲ್ಲಿ ಅವರ ಫೋಟೋ ಮತ್ತು ಒಂದು ಉಲ್ಲೇಖವಿದೆ, “ನೀವು ಬಲಶಾಲಿಯಾಗಿರುವಾಗ ದುರ್ಬಲರಾಗಿ, ಮತ್ತು ನೀವು ದುರ್ಬಲವಾಗಿದ್ದಾಗ ಬಲವಾಗಿ ಕಾಣಿಸಿಕೊಳ್ಳಿ. – ಸನ್ ಟ್ಸು, ದಿ ಆರ್ಟ್ ಆಫ್ ವಾರ್ !” ಎಂದು ಬರೆಯಲಾಗಿದೆ.
ಇದನ್ನೂ ಓದಿ: ಮತ್ತೆ ಮುಖಭಂಗ – ಆಂಧ್ರದ 3,221 ಪಂಚಾಯತ್‌ಗಳಲ್ಲಿ BJP ಗೆ ಕೇವಲ 13 ಸ್ಥಾನ!


