ಉತ್ತರ ಪ್ರದೇಶದ ಮಥುರಾದಲ್ಲಿ ರೈತ ಸಮಾವೇಶವನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮಂಗಳವಾರ ಭಾಷಣ ಮಾಡುತ್ತಿದ್ದರು. ಇದರ ನಡುವೆಯೆ ಅತ್ಯಾಚಾರಕ್ಕೊಳಗಾದ ರಾಜಸ್ಥಾನದ ಯುವತಿಯ ತಾಯಿಯೊಬ್ಬರು ನ್ಯಾಯ ಕೋರಿ ಘೋಷಣೆ ಕೂಗಿದ್ದಾರೆ. ಈ ವೇಳೆ ಪ್ರಿಯಾಂಕ ಗಾಂಧಿ ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ.
ಉತ್ತರ ಪ್ರದೇಶ-ರಾಜಸ್ಥಾನದ ಗಡಿಯಾದ ಭಾರತ್‌ಪುಟ್‌ನಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆಯು ಆರೋಪಿಸಿದ್ದಾರೆ. ಮಹಿಳೆಯು ಮಥುರಾದಲ್ಲಿ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದು, ಪ್ರಿಯಾಂಕ ಗಾಂಧಿ ಇಲ್ಲಿಗೆ ಆಗಮಿಸುತ್ತಾರೆ ಎಂದು ತಿಳಿದ ನಂತರ ಅವರು ಕಾಂಗ್ರೆಸ್‌ನ ರೈತ ರ್‍ಯಾಲಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮಾವಿನ ಸೊಪ್ಪು ಕಿತ್ತ ದಲಿತ ಯುವಕನ ಮೇಲೆ ಹಲ್ಲೆ: ಅಸಹಜ ಸಾವು
ಮಹಿಳೆಯು ಘೋಷಣೆ ಕೂಗಿದ ಸಂದರ್ಭ ವೇದಿಕೆಯಲ್ಲಿ ಪ್ರಿಯಾಂಕ ಗಾಂಧಿ ಉದ್ದೇಶಿಸಿ ಮಾತನಾಡುತ್ತಿದ್ದರು. ಇದರ ನಂತರ ಭಾಷಣ ನಿಲ್ಲಿಸಿ, ಆ ಮಹಿಳೆಯನ್ನು ಪಕ್ಕಕ್ಕೆ ಕರೆದು ಪ್ರಿಯಾಂಕ ಗಾಂಧಿ ಮಾತನಾಡಿಸಿದ್ದಾರೆ. ವಿಷಯ ತಿಳಿದಾಗ ಸ್ಥಳದಲ್ಲೇ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಕರೆ ಮಾಡಿ ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ಸಿಗಲು ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ. ಅಶೋಕ್ ಗೆಹ್ಲೋಟ್ ತಕ್ಷಣವೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಟ್ವೀಟ್ ಮಾಡಿದ್ದು, ಪ್ರಿಯಾಂಕಾ ಗಾಂಧಿ ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ ಎಂದು ಆರೋಪಿಸಿದ್ದಾರೆ.
“ಈ ಕಣ್ಣೀರು ಮಾಧ್ಯಮಗಳು ಅಥವಾ ಪ್ರಿಯಾಂಕಾ ಅವರಿಗೆ ಕಾಣುವುದಿಲ್ಲ. ಇದಕ್ಕಾಗಿ ಈ ತಾಯಿಯ ಮುಗ್ಧ ಮಗು ರಾಜಸ್ಥಾನದಲ್ಲಿ ಅತ್ಯಾಚಾರಕ್ಕೊಳಗಾಗಿದ್ದು, ದೂರು ನೀಡಲು ಅವರು ಉತ್ತರ ಪ್ರದೇಶದ ಪ್ರಿಯಾಂಕಾ ಗಾಂಧಿಯವರ ರ್‍ಯಾಲಿಗೆ ಬರಬೇಕಾಯಿತು. ರಾಜಸ್ಥಾನದಲ್ಲಿ ಗರಿಷ್ಠ ಅತ್ಯಾಚಾರಗಳಾಗುತ್ತಿದೆ ಆದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನ್ಯಾಯಕ್ಕಾಗಿ ಅಲ್ಲಿಗೆ ಹೋಗುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ये आंसू ना तो मीडिया को दिखेंगे ना ही प्रियंका जी को,इसलिए क्यूँकि इस मां की मासूम बच्ची के साथ राजस्थान में रेप हुआ और उसे गुहार लगाने प्रियंका की रैली में Up आना पड़ा
राजस्थान,जहां सबसे ज्यादा रेप होता है, पर राहुल प्रियंका वहां कभी नहीं जाते,ना मुद्दा बनाने,ना इंसाफ दिलाने। pic.twitter.com/osqlsKlGB6
— Shalabh Mani Tripathi (@shalabhmani) February 23, 2021
ಉತ್ತರ ಪ್ರದೇಶದ ಉಸ್ತುವಾರಿಯು ಆಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗಾಗ್ಗೆ ಯುಪಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚಿನ ವಾರಗಳಲ್ಲಿ ಅಲ್ಲಿ ಹಲವು ರೈತ ಮಹಾಪಂಚಾಯತ್‌ಗಳನ್ನು ಸಂಘಟಿಸುತ್ತಿದ್ದಾರೆ.
ಅವರು ಯುಪಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಬಗ್ಗೆ ಆದಿತ್ಯನಾಥ್ ಸರ್ಕಾರದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ಧಾಳಿ ನಡೆಸುತ್ತಲೆ ಇದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಈ ಗ್ರಾಮಕ್ಕೆ ರೈತ ಹೋರಾಟ ಬೆಂಬಲಿಸದ ರಾಜಕಾರಣಿಗಳಿಗೆ ಪ್ರವೇಶವಿಲ್ಲ!


