ಪಾಂಡಿಚೇರಿ ಸರ್ಕಾರ ಪತನದ ನಂತರ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನ ಮಾಡಲು ಬಿಜೆಪಿಯು ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದೆ ಎಂದು ಶಿವಸೇನೆ ಪಕ್ಷ ಆರೋಪಿಸಿದೆ.
ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ “ಪಾಂಡಿಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯು ಗವರ್ನರ್ ಆಗಿದ್ದ ಕಿರಣ್ ಬೇಡಿಯನ್ನು ಬಳಸಿಕೊಂಡಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿಯೂ ಸರ್ಕಾರ ಬೀಳಿಸುವ ಕನಸು ಕಾಣುತ್ತಿದೆ. ಆದರೆ ಅದು ಎಂದಿಗೂ ಸಾಧ್ಯವಾಗುವುದಿಲ್ಲ” ಎಂದು ಬರೆಯಲಾಗಿದೆ.
ಇನ್ನು ನಾಲ್ಕು ತಿಂಗಳಲ್ಲಿ ಪಾಂಡಿಚೇರಿಯಲ್ಲಿ ಅಸೆಂಬ್ಲಿ ಚುನಾವಣೆಗಳಿದ್ದವು. ಅಲ್ಲಿಯವರೆಗೂ ಬಿಜೆಪಿ ಕಾಯಬಹುದಿತ್ತು. ಆದರೆ ಅವರ ಅಧಿಕಾರ ಕಸಿದುಕೊಳ್ಳುವ ಹೆಗ್ಗಳಿಕೆಗಾಗಿ ಸರ್ಕಾರ ಉರುಳಿಸಿದರು ಎಂದು ಸಾಮ್ನಾದಲ್ಲಿ ಆರೋಪಿಸಲಾಗಿದೆ.
ಈಗ ಪಾಂಡಿಚೇರಿ ಸರ್ಕಾರ ಪತನವಾಗಿದೆ. ಮುಂದಿನ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಆರಂಭಿಸುವ ಯತ್ನದಲ್ಲಿದ್ದಾರೆ ಎಂದು ಬಿಜೆಪಿಯೊಳಗಿನ ಮೂಲಗಳು ತಿಳಿಸಿವೆ. ಮಧ್ಯಪ್ರದೇಶ ಸರ್ಕಾರ ಪತನಗೊಂಡ ನಂತರ ಸಹ ಇದೇ ರೀತಿಯ ಪ್ರಯತ್ನಗಳನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಮಾಡಿತ್ತು. ಆನಂತರ ಬಿಹಾರ ಚುನಾವಣೆ ನಂತರವೂ ಈ ಕುರಿತು ಮಾತುಕತೆಗಳು ನಡೆಯುತ್ತಿದ್ದವು. ಈಗ ಪಾಂಡಿಚೇರಿ ಹಿನ್ನೆಲೆಯಲ್ಲಿ ಅದೇ ಮಾತುಗಳನ್ನಾಡುತ್ತಿದ್ದಾರೆ. ಆದರೆ ದೆಹಲಿ ಬಹಳ ದೂರದಲ್ಲಿದೆ ಎಂಬ ಮಾತಿನ ರೀತಿ ಮಹಾರಾಷ್ಟ್ರವು ಅವರಿಗೆ ಬಹಳ ದೂರದಲ್ಲಿದೆ ಎಂಬುದು ಅರ್ಥವಾಗಲಿ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಮಧ್ಯಪ್ರದೇಶ ಮತ್ತು ಪಾಂಡಿಚೇರಿಯಲ್ಲಿ ಕೇವಲ ಕಾಂಗ್ರೆಸ್ ಆಳ್ವಿಕೆಯಲ್ಲಿತ್ತು. ಆದರೆ ಮಹಾರಾಷ್ಟ್ರದಲ್ಲಿ ಅದಕ್ಕೆ ಶಿವಸೇನೆಯ ರಕ್ಷಣೆಯಿದೆ ಎಂಬುದನ್ನು ಬಿಜೆಪಿ ಮರೆಯಬಾರದು ಎಂದು ಶಿವಸೇನೆ ಎಚ್ಚರಿಕೆ ನೀಡಿದೆ.
ಪಾಂಡಿಚೇರಿಯಲ್ಲಿ ಕಿರಣ್ ಬೇಡಿಯವರನ್ನು ಬಳಸಿಕೊಂಡ ನಂತರ ಬೀಸಾಡಲಾಗಿದೆ. ಅಂದರೆ ಒಗ್ಗರಣೆಗೆ ಹಾಕಿದ ನಂತರ ಕರಿಬೇವನ್ನು ಬೀಸಾಡಿದ ಹಾಗೆ. ಅದು ತನ್ನ ಆಹಾರಕ್ಕೆ ತನ್ನ ಪರಿಮಳ ಕೊಟ್ಟ ನಂತರ ಏನು ಉಪಯೋಗ ಎಂಬ ರೀತಿಯಲ್ಲಿ. ಇದನ್ನು ಮಹಾರಾಷ್ಟ್ರ ರಾಜ್ಯಪಾಲರು ಸಹ ಆದಷ್ಟು ಬೇಗ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಶಿವಸೇನೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಪ್ರಿಯಾಂಕ ಗಾಂಧಿ ಭಾಷಣದ ನಡುವೆ ಅತ್ಯಾಚಾರ ಸಂತ್ರಸ್ತೆಯ ತಾಯಿಯ ಘೋಷಣೆ: ಮುಂದೇನಾಯಿತು?


