ಮೊಮ್ಮಗಳ ಶಿಕ್ಷಣಕ್ಕಾಗಿ ತನ್ನ ಮನೆಯನ್ನು ಮಾರಾಟ ಮಾಡಿರುವ ಮುಂಬೈನ ಆಟೋ ಡ್ರೈವರ್ ದೇಸ್‌ರಾಜ್ ಅವರ ಹೃದಯಸ್ಪರ್ಶಿ ಕತೆಗೆ ದೇಶದಾದ್ಯಂತ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕ್ರೌಡ್‌ಫಂಡಿಂಗ್ ಮೂಲಕ ಸುಮಾರು 24 ಲಕ್ಷ ಹಣ ಸಂಗ್ರಹವಾಗಿದೆ.
ಹ್ಯೂಮನ್ಸ್ ಆಫ್ ಬಾಂಬೆ ದೇಸ್‌ರಾಜ್ ಅವರ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತ್ತು. ನಂತರ ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.
ಈ ವೀಡಿಯೋದಲ್ಲಿ ದೇಸ್‌ರಾಜ್, “ತನ್ನ ಇಬ್ಬರು ಪುತ್ರರ ಮರಣದ ನಂತರ ಕುಟುಂಬದ ಜವಾಬ್ದಾರಿ ತನ್ನ ಮೇಲಿದೆ. ನನ್ನ ಸೊಸೆಯರು ಮತ್ತು ಅವರ 4 ಜನ ಮಕ್ಕಳ ಜವಾಬ್ದಾರಿಯನ್ನು ನಾನೇ ಹೊತ್ತುಕೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೇರಳ: ಶಬರಿಮಲೆ ಮತ್ತು ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲಿನ ಪ್ರಕರಣ ರದ್ದು
“ಕುಟುಂಬ ನಿರ್ವಹಣೆಗಾಗಿ ಹೆಚ್ಚುವರಿಯಾಗಿ ಆಟೋರಿಕ್ಷಾ ಓಡಿಸಲು ಆರಂಭಿಸಿದೆ. ಆದರೆ ಆ ಗಳಿಕೆ ಕೇವಲ ಶಾಲಾ ಶುಲ್ಕಕ್ಕೆ ಸಾಕಾಗುತ್ತಿರಲಿಲ್ಲ. ನಂತರ ನನ್ನ ಮೊಮ್ಮಗಳು 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ. 80 ಅಂಕ ಗಳಿಸಿದಳು. ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಹೋಗಲು ಅವಳಿಗೆ ಆಸಕ್ತಿಯಿತ್ತು. ಇದಕ್ಕೆ ಸಾಕಷ್ಟು ಹಣ ಬೇಕಾಗಿತ್ತು. ಆದರೆ ನಾನು ಅವಳ ಕನಸನ್ನು ನನಸಾಗಿಸಬೇಕಾಗಿತ್ತು. ಹಾಗಾಗಿ ನನ್ನ ಮನೆಯನ್ನು ಮಾರಿ ಅವಳ ಶುಲ್ಕವನ್ನು ಪಾವತಿಸಿದ್ದೇನೆ” ಎಂದು ದೇಸ್‌ರಾಜ್ ಹೇಳಿದ್ದಾರೆ.
ಈ ಕಥೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಹಲವು ಗಣ್ಯರು, ರಾಜಕೀಯ ವ್ಯಕ್ತಿಗಳು ಕೂಡ ಇದನ್ನು ರೀಟ್ವೀಟ್ ಮಾಡಿ, ಆಟೋ ಡ್ರೈವರ್‌ಗೆ ಸಹಾಯ ಮಾಡುವಂತೆ ಕೋರಿದ್ದರು. ನಂತರ ಗುಂಜನ್ ರಟ್ಟಿ ಎಂಬ ಫೇಸ್‌ಬುಕ್ ಬಳಕೆದಾರರು ದೇಸ್ರಾಜ್‌ಗಾಗಿ ನಿಧಿಸಂಗ್ರಹವನ್ನು ಪ್ರಾರಂಭಿಸಿದರು. ಈಗ ಈ ಸಂಗ್ರಹ 20 ಲಕ್ಷದ ಗುರಿಯನ್ನು ಮೀರಿದೆ.
“ಕ್ರೌಡ್ ಫಂಡಿಂಗ್ ಪ್ರಕ್ರಿಯೆಗೆ ಸಹಕರಿಸಿದ್ದಕ್ಕೆ ಧನ್ಯವಾದಗಳು. ದೇಸ್ರಾಜ್ ₹ 24 ಲಕ್ಷದ ಚೆಕ್ ಸ್ವೀಕರಿಸಿದ್ದಾರೆ” ಎಂದು ಹ್ಯೂಮನ್ಸ್ ಆಫ್ ಬಾಂಬೆ ಹೇಳಿದೆ.
ಇದನ್ನೂ ಓದಿ: ದಿಶಾಗೆ ಜಾಮೀನು: ವ್ಯವಸ್ಥೆಯ ಮೇಲಿನ ನಮ್ಮ ನಂಬಿಕೆ ಬಲಗೊಂಡಿದೆ ಎಂದ ಪೋಷಕರು
The support Deshraj ji has received is immense! Because you all went out of your way to help him, he now has a roof over his head, and will be able to educate his grand daughter! Thank you so much ?#Love #Inspiration #Gratitude #PawriHoRahiHai pic.twitter.com/aYjBR3OG1J
— Humans Of Bombay (@HumansOfBombay) February 23, 2021
“ದೇಸರಾಜ್ ಅವರಿಗೆ ಅಪಾರ ಬೆಂಬಲ ದೊರೆತಿದೆ. ನೀವೆಲ್ಲರೂ ಅವರಿಗೆ ಸಹಾಯ ಮಾಡಿದ್ದರಿಂದ, ಅವರ ತಲೆಯ ಮೇಲೆ ಈಗ ಒಂದು ಸೂರು ನಿರ್ಮಾಣವಾಗಿದೆ. ಜೊತೆಗೆ ಅವರ ಮೊಮ್ಮಗಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ” ಎಂದು ಹ್ಯೂಮನ್ಸ್ ಆಫ್ ಬಾಂಬೆ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರಿಟ್ಟ ಸರ್ಕಾರ!


