ಗುಜರಾತ್‌ನ ಅರವಲ್ಲಿ ಜಿಲ್ಲೆಯ ದಲಿತ ಕುಟುಂಬವೊಂದರ ಮದುವೆ ಮೆರವಣಿಗೆಯ ವೇಳೆ ಮೇಲ್ಜಾತಿ ಸಮುದಾಯದ ಜನರು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಮದುಮಗ ತಲೆಗೆ ಪೇಟ ಧರಿಸಿರುವುದಕ್ಕೆ ಮತ್ತು ಮೆರವಣಿಗೆಯಲ್ಲಿ ಡಿಜೆ ಬಳಸಿರುವುದಕ್ಕೆ ಆಕ್ರೋಶಗೊಂಡ ಮೇಲ್ಜಾತಿಯ ಗುಂಪು ದಲಿತರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದೆ.
ದಲಿತರು ‘ಸಫಾ’ (ಸಾಂಪ್ರದಾಯಿಕ ಪೇಟ) ಮತ್ತು ಡಿಜೆ ಬಳಸುವುದನ್ನ ಅಲ್ಲಿನ ಮೇಲ್ಜಾತಿಗಳು ಆಕ್ಷೇಪಿಸಿವೆ. ಇದನ್ನು ಮೀರಿದ ಕಾರಣಕ್ಕೆ ದಲಿತ ಕುಟುಂಬದ ಮದುವೆ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ಸಂಜೆ ಬಯಾದ್ ಪಟ್ಟಣದ ಲಿಂಚ್ ಗ್ರಾಮದಲ್ಲಿ ಮೆರವಣಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ರಜಪೂತ ಸಮುದಾಯದ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಂಬಲಿಯರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್ ಎಂ ದಾಮರ್ ತಿಳಿಸಿದ್ದಾರೆ.
ಇದನ್ನೂ ಓದಿ: ’ಪ್ರಧಾನಿ ಒಬ್ಬ ದಂಗಾಬಾಜ್ ಮತ್ತು ರಾಕ್ಷಸ’: ಬಿಜೆಪಿ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ
ಮದುವೆ ಮೆರವಣಿಗೆ ಹಳ್ಳಿಗೆ ಪ್ರವೇಶಿಸಿದಾಗ ಲಿಂಚ್ ಗ್ರಾಮದ ಕೆಲವರು ಕಲ್ಲು ಎಸೆದಿದ್ದಾರೆ. ನಂತರ ಜಾತಿ ನಿಂದನೆ ಮಾಡಿದ್ದಾರೆ ಎಂದು ವಧುವಿನ ಸೋದರ ಸಂಬಂಧಿ ನೀಡಿದ ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ದೂರುದಾರ ಮತ್ತು ಕುಟುಂಬದ ಇತರ ಸದಸ್ಯರು ಆರೋಪಿಗಳೊಂದಿಗೆ ವಾದಿಸಲು ಪ್ರಯತ್ನಿಸಿದರು. ಜೊತೆಗೆ ಕಲ್ಲು ತೂರಾಟವನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಆದರೆ ಆರೋಪಿಗಳಲ್ಲಿ ಒಬ್ಬ ವಧುವಿನ ಸಂಬಂಧಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ.
“ಮದುವೆ ಮೆರವಣಿಗೆಯ ಸಮಯದಲ್ಲಿ ಪೇಟ ಧರಿಸಬಾರದು ಮತ್ತು ಡಿಜೆ ಸಂಗೀತವನ್ನು ಬಳಸದಂತೆ ವರನ ಕುಟುಂಬ ಮತ್ತು ಇತರರಿಗೆ ಆರೋಪಿಗಳು ಎಚ್ಚರಿಕೆ ನೀಡಿದ್ದರು. ಜೊತೆಗೆ ಜೀವ ಬೆದರಿಕೆಗಳನ್ನೂ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಐಪಿಸಿ ಅಡಿಯಲ್ಲಿ ಗಲಭೆ, ಹಲ್ಲೆ, ಕ್ರಿಮಿನಲ್ ಬೆದರಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ ಕಾಯ್ದೆ) ಸೆಕ್ಷನ್‌ಗಳ ಮೇಲೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ.
ಇದನ್ನೂ ಓದಿ: ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?


