ಗುಜರಾತ್‌ನ ಕ್ರೀಡಾಂಗಣವೊಂದಕ್ಕೆ ನರೇಂದ್ರ ಮೋದಿಯವರ ಹೆಸರನ್ನು ಮರುನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ. “ನಾವಿಬ್ಬರು ನಮಗಿಬ್ಬರು ಎನ್ನುವ ಸತ್ಯ ಹೇಗೆ ಕಳಚಿಕೊಳ್ಳುತ್ತಿದೆ ನೋಡಿ” ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಅದ್ಭುತ! ಸತ್ಯ ತಾನಾಗಿಯೇ ಬಹಿರಂಗಗೊಳ್ಳುತ್ತಿದೆ. ನರೇಂದ್ರ ಮೋದಿ ಕ್ರೀಡಾಂಗಣ, ಅದಾನಿ ಎಂಡ್ ಮತ್ತು ರಿಲಯನ್ಸ್ ಎಂಡ್. ಜೇ ಶಾ ಅವರ ಅಧ್ಯಕ್ಷತೆಯಲ್ಲಿ. #HumDoHumareDo” ಎಂದು ಮೋದಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
Beautiful how the truth reveals itself.
Narendra Modi stadium
– Adani end
– Reliance endWith Jay Shah presiding.#HumDoHumareDo
— Rahul Gandhi (@RahulGandhi) February 24, 2021
ಇದನ್ನೂ ಓದಿ: ನರೇಂದ್ರ ಮೋದಿ ಸ್ಟೇಡಿಯಂ ಟ್ರೋಲ್: ಸರ್ದಾರ್ ಪಟೇಲ್‌ಗೆ ಅವಮಾನ ಎಂದ ನೆಟ್ಟಿಗರು!
ನರೇಂದ್ರ ಮೋದಿಯವರ ಸರ್ಕಾರವು ನಾವಿಬ್ಬರು ನಮಗಿಬ್ಬರು ಎನ್ನುವಂತೆ ವರ್ತಿಸುತ್ತಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದರು. ಮೋದಿ-ಶಾ ಎನ್ನುವ ಇಬ್ಬರಿಗೆ ಅಂಬಾನಿ-ಅದಾನಿ ಎನ್ನುವ ಇಬ್ಬರಿದ್ದಾರೆ ಎಂದು ಹೇಳಿದ್ದರು. ಅಂದರೆ ಕೇಂದ್ರ ಸರ್ಕಾರವು ತನ್ನ ಎಲ್ಲಾ ಕ್ರಮಗಳನ್ನೂ ಸಹ ಕಾರ್ಪೋರೇಟ್‌ಗಳ ಪರವಾಗಿಯೇ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಈಗ ಗುಜರಾತ್ ನ ಅಹ್ಮದಾಬಾದ್ ನಲ್ಲಿನ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಹೆಸರಿಡಲಾಗಿದೆ. ಕೊನೆಯ ಕ್ಷಣದವರೆಗೂ ಈ ಕುರಿತಾದಂತೆ ಯಾವುದೇ ಮಾಹಿತಿಯೂ ಹೊರ ಬಿದ್ದಿರಲಿಲ್ಲ. ಇದೀಗ ʼನರೇಂದ್ರ ಮೋದಿʼ ಸ್ಟೇಡಿಯಂನಲ್ಲಿ ʼಅದಾನಿ ಪೆವಿಲಿಯನ್ʼ ಮತ್ತು ʼರಿಲಯನ್ಸ್ ಎಂಡ್ʼ ಇರುವುದು ಬೆಳಕಿಗೆ ಬಂದಿದೆ.
ರಾಹುಲ್ ಗಾಂಧಿ ಪಾರ್ಲಿಮೆಂಟ್ ನಲ್ಲಿ ಹೇಳಿದ್ದ ʼಹಮ್ ದೋ ಹಮಾರೆ ದೋʼ ಎಂಬ ಹೇಳಿಕೆಯು ಇಲ್ಲಿ ಅನ್ವರ್ಥವಾಗಿದೆ ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ. “ಎಲ್ಲವೂ ಆಯಿತು, ಇನ್ನು ಗುಜರಾತ್ ಅನ್ನು ಮೋದಿಸ್ತಾನ್ ಎಂದೂ ರಾಜ್ ಕೋಟ್ ಅನ್ನು ರಿಲಯನ್ಸ್ ಕೋಟ್ ಎಂದು ಮರುನಾಮಕರಣ ಮಾಡಲಿಕ್ಕಿದೆಯೇ?”, ಇಬ್ಬರು ಬಂಡವಾಳಶಾಹಿಗಳ ಹೆಸರಿರುವ ಸ್ಟೇಡಿಯಂಗೆ ಮೋದಿ ಹೆಸರಿಟ್ಟದ್ದು ಒಳ್ಳೆಯದಾಯಿತು, ಇಲ್ಲವಾದಲ್ಲಿ ಸರ್ದಾರ್ ಪಟೇಲರಿಗೆ ಅವಮಾನವಾಗುತ್ತಿತ್ತು” ಎಂದು ಟ್ವಿಟರ್ ಬಳಕೆದಾರರು ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ರಾಹುಲ್ ಗಾಂಧಿ ಮಾಡಿರುವ ಆರೋಪ ಈ ಮೂಲಕ ಬಹಿರಂಗಗೊಳ್ಳುತ್ತಿದೆ.
ಇದನ್ನೂ ಓದಿ: ದಲಿತ ಮದುಮಗ ಪೇಟ ಧರಿಸಿದರೆ ಸಹಿಸಲ್ಲ: ಮದುವೆ ಮೆರವಣಿಗೆಯಲ್ಲಿ ಕಲ್ಲು ತೂರಿದ ಮೇಲ್ಜಾತಿ ಜನರು