’ಕಾವೇರಿ ಕಾಲಿಂಗ್’ ಕರ್ನಾಟಕ ಸರ್ಕಾರದ ಯೋಜನೆಯೇ?: ತನಿಖೆಯ ಅಗತ್ಯವಿದೆ ಎಂದ ಹೈಕೋರ್ಟ್

ಇಶಾ ಫೌಂಡೇಶನ್ ತನ್ನ ’ಕಾವೇರಿ ಕಾಲಿಂಗ್’ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಯೋಜನೆ ಎಂದು ಬಿಂಬಿಸಿ ಜನರಿಂದ ಹಣವನ್ನು ಒಟ್ಟುಗೂಡಿಸುವ ಉದ್ದೇಶ ಹೊಂದಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತಿಳಿಯಲು ತನಿಖೆ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಕಾವೇರಿ ಕಾಲಿಂಗ್ ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡುವ ಪ್ರತಿಷ್ಠಾನದ ಒಂದು ವಿಭಾಗವಾದ ಇಶಾ ಔಟ್‌ರೀಚ್, ಈ ಕಾರ್ಯಕ್ರಮವು ತನ್ನದೇ ಎಂದು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದು, ಇದನ್ನು ಕರ್ನಾಟಕ ಸರ್ಕಾರದ ಯೋಜನೆಯೆಂದು ನಿರೂಪಿಸುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಮೂಲದ ವಕೀಲರೊಬ್ಬರು, “ಇಮೇಲ್‌ನಲ್ಲಿ ತನ್ನ ಅರ್ಜಿ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿ ಇರುವುದರಿಂದ, ’ಕಾವೇರಿ ಕಾಲಿಂಗ್’ ಯೋಜನೆಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದರೆ, ಅದು ’ಕಂಟೆಂಪ್ಟ್ ಆಫ್ ಕೋರ್ಟ್’ ಆಗುತ್ತದೆ” ಎಂದು ಡಿಸ್ಕವರಿ ಟಿವಿ ಚಾನೆಲ್‌ಗೆ ಎಚ್ಚರಿಕೆ ನೀಡಿದ್ದರು. ನಂತರ ಅರ್ಜಿದಾರರನ್ನು ತೆಗೆದುಹಾಕುವ ಮೂಲಕ ನ್ಯಾಯಾಲಯವು ಈ ವಿಷಯವನ್ನು ಸು-ಮೋಟು ರೀತಿಯಲ್ಲಿ ಕೈಗೆತ್ತಿಕೊಂಡಿದೆ. ನ್ಯಾಯಾಲಯದ ಮುಂದೆ ತೀರ್ಪು ಬಾಕಿ ಉಳಿದಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಇದನ್ನೂ ಓದಿ: ದಲಿತ ಮದುಮಗ ಪೇಟ ಧರಿಸಿದರೆ ಸಹಿಸಲ್ಲ: ಮದುವೆ ಮೆರವಣಿಗೆಯಲ್ಲಿ ಕಲ್ಲು ತೂರಿದ ಮೇಲ್ಜಾತಿ ಜನರು

ಇದು ಕರ್ನಾಟಕ ಸರ್ಕಾರದ ಉಪಕ್ರಮವಲ್ಲ ಎಂದು ತನ್ನ ವೆಬ್‌ಸೈಟ್‌ನಲ್ಲಿ ಸ್ಪಷ್ಟೀಕರಣವನ್ನು ನೀಡಲಾಗಿದೆ ಎಂದು ಇಶಾ ಔಟ್‌ರೀಚ್ ಅನ್ನು ಪ್ರತಿನಿಧಿಸುವ ವಕೀಲರು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದರು. ಬಾರ್ & ಬೆಂಚ್ ಉಲ್ಲೇಖಿಸಿದಂತೆ ಸ್ಪಷ್ಟೀಕರಣವನ್ನು ಈ ಕೆಳಗೆ ನೀಡಲಾಗಿದೆ. ಓದಿ;

“ಕಾವೇರಿ ಕಾಲಿಂಗ್ ಯೋಜನೆಯು ಇಶಾ ಔಟ್‌ರೀಚ್‌ನ ಒಂದು ಕಾರ್ಯಕ್ರಮವಾಗಿದೆ. ಇದು ಕರ್ನಾಟಕ ಸರ್ಕಾರದ ಯೋಜನೆಯಲ್ಲ. ಕಾವೇರಿ ಕಾಲಿಂಗ್ ಯೋಜನೆಯ ಭಾಗವಾಗಿ ನೆಟ್ಟಿರುವ ಸಸಿಗಳನ್ನು ರೈತರಿಗೆ ಸೇರಿದ ಜಮೀನುಗಳಲ್ಲಿ ನೆಡಲಾಗುತ್ತದೆ, ಸರ್ಕಾರಿ ಜಮೀನುಗಳಲ್ಲಿ ಅಲ್ಲ” ಎಂದು ಸ್ಪಷ್ಟಪಡಿಸಲಾಗಿದೆ.

ಆದರೆ, ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್.ಎಸ್.ಮಗದುಮ್ ಅವರ ವಿಭಾಗೀಯ ಪೀಠವು, “ನ್ಯಾಯಾಲಯವು ಈ ಸ್ಪಷ್ಟೀಕರಣದ ಬಗ್ಗೆ ತೃಪ್ತಿ ಹೊಂದಿಲ್ಲ, ಏಕೆಂದರೆ ಇದು ವೆಬ್‌ಸೈಟಿನಲ್ಲಿ ನೇರವಾಗಿ ಗೋಚರಿಸಬೇಕು. ಅದನ್ನು ವೆಬ್‌ಸೈಟ್‌ನಲ್ಲಿ ಹೇಗೆ ಪ್ರಕಟಿಸಲಾಗಿದೆ ಎಂಬುದನ್ನು ನೋಡಿ. ಇದು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರಬೇಕು” ಎಂದು ವಿಭಾಗೀಯ ಪೀಠ ಸೂಚಿಸಿದೆ.

ಖಾಸಗಿ ಯೋಜನೆಯೊಂದರ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡದೆ ಕರ್ನಾಟಕ ಸರ್ಕಾರ ಇಶಾ ಫೌಂಡೇಶನ್‌ಗೆ ಸರ್ಕಾರಿ ಜಮೀನುಗಳಲ್ಲಿ ಸಸಿಗಳನ್ನು ನೆಡಲು ಅವಕಾಶ ನೀಡುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇದಕ್ಕೆ ಇಶಾ ಔಟ್‌ರೀಚ್ ವಕೀಲರು ಪ್ರತಿಕ್ರಿಯಿಸಿದ ಪ್ರಕಾರ ಸಸಿಗಳನ್ನು ರೈತರಿಗೆ ಸೇರಿದ ಜಮೀನುಗಳಲ್ಲಿ ಮಾತ್ರ ನೆಡಲಾಗುತ್ತಿದೆ, ಆದರೆ ಸರ್ಕಾರಿ ಜಮೀನುಗಳಲ್ಲಿ ಅಲ್ಲ ಎಂದು ವಾದಿಸಲಾಗಿದೆ.

ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಕಾರ್ಯವನ್ನು “ಗೊಂದಲದ ಕ್ರಮ” ಎಂದು ವಿವರಿಸಿದ ಅರ್ಜಿಯಲ್ಲಿ, ಪ್ರತಿಷ್ಠಾನವು 10,626 ಕೋಟಿ ರೂ.ಗಳನ್ನು ದೇಣಿಗೆಯಾಗಿ ಸಂಗ್ರಹಿಸುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ನರೇಂದ್ರ ಮೋದಿ ಸ್ಟೇಡಿಯಂ ಟ್ರೋಲ್: ಸರ್ದಾರ್‌ ಪಟೇಲ್‌ಗೆ ಅವಮಾನ ಎಂದ ನೆಟ್ಟಿಗರು!

ಇದು ಸರ್ಕಾರದ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಲು ಪತ್ರಿಕೆಗಳಲ್ಲಿ ಸಾರ್ವಜನಿಕ ನೋಟಿಸ್ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಪರ ಹಾಜರಾದ ವಕೀಲರು ತಿಳಿಸಿದ್ದಾರೆ. ಕಾವೇರಿ ಕಾಲಿಂಗ್ ಯೋಜನೆಗೆ ಸಂಬಂಧಿಸಿದಂತೆ ತನ್ನ ನಿಲುವನ್ನು ದಾಖಲಿಸಲು ಸರ್ಕಾರದ ವಕೀಲರು ಸಮಯವನ್ನು ಕೋರಿದರು. ಮುಂದಿನ ವಿಚಾರಣೆಯನ್ನು ಮಾರ್ಚ್ 8 ಕ್ಕೆ ನಿಗದಿಪಡಿಸಲಾಗಿದೆ.

ಹಿಂದಿನ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಸರ್ಕಾರದ ಹೇಳಿಕೆಯಲ್ಲಿನ ಅಸಂಗತತೆಯನ್ನು ಗಮನಿಸಿತ್ತು ಮತ್ತು ಸರ್ಕಾರದ ಹೆಚ್ಚುವರಿ ವಕೀಲರಿಗೆ ರಾಜ್ಯ ಸರ್ಕಾರವು ಈ ಯೋಜನೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿದೆಯೆ ಎಂಬ ಬಗ್ಗೆ ಸ್ಪಷ್ಟೀಕರಣವನ್ನು ನೀಡುವಂತೆ ಸೂಚಿಸಿತ್ತು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಫೌಂಡೇಶನ್ ಕಾವೇರಿ ಜನ್ಮಸ್ಥಳವಾದ ತಲಕಾವೇರಿಯಿಂದ ತಿರುವಾರೂರಿನವರೆಗೆ ಕಾವೇರಿ ನದಿ ತೀರದ 639 ಕಿಲೋಮೀಟರ್ ವಿಸ್ತೀರ್ಣದಲ್ಲಿ 253 ಕೋಟಿ ಸಸಿಗಳನ್ನು ನೆಡಲು ಯೋಜಿಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪ್ರತಿಷ್ಠಾನವು ಪ್ರತಿ ಸಸಿಗೆ 42 ರೂಗಳನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತಿದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ, ಫೌಂಡೇಶನ್ 10,626 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಿದೆ. ಇದನ್ನು ಅರ್ಜಿಯಲ್ಲಿ “ದೊಡ್ಡ ಹಗರಣ” ಎಂದು ವಿವರಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.


ಇದನ್ನೂ ಓದಿ: ನಾವಿಬ್ಬರು ನಮಗಿಬ್ಬರು ಎನ್ನುವ ಸತ್ಯ ಬಹಿರಂಗಗೊಳ್ಳುತ್ತಿದೆ: ಮೋದಿ ಕ್ರೀಡಾಂಗಣದ ಬಗ್ಗೆ ರಾಹುಲ್ ವ್ಯಂಗ್ಯ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here