ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಎತ್ತಿದ ಆಕ್ಷೇಪಣೆಯನ್ನು ಅನುಸರಿಸಿ, ಸರ್ಕಾರವು 2020 ರ ‘ಅಂತಾರಾಷ್ಟ್ರೀಯ ವೆಬಿನಾರ್ ನಡೆಸಲು ಪೂರ್ವಾನುಮತಿ ಅಗತ್ಯ’ ಎಂಬ ನವೆಂಬರ್ ಆದೇಶವನ್ನು ಹಿಂತೆಗೆದುಕೊಂಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆ ಆದೇಶವು, ಆನ್‌ಲೈನ್ ಸಮಾವೇಶಗಳು ಅಥವಾ ಸೆಮಿನಾರ್‌ಗಳನ್ನು “ಅಂತರರಾಷ್ಟ್ರೀಯ” ಭಾಗವಹಿಸುವಿಕೆಯೊಂದಿಗೆ ಆಯೋಜಿಸಲು ಪೂರ್ವ ರಾಜಕೀಯ ಅನುಮತಿಯನ್ನು ಕಡ್ಡಾಯಗೊಳಿಸಿತ್ತು.
ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಅಸ್ತಿತ್ವದಲ್ಲಿದ್ದ ನಿಯಮಗಳು ಮತ್ತೆ ಅನ್ವಯವಾಗುತ್ತವೆ ಎಂದು ಹೊಸ ಆದೇಶ ಹೇಳಿದೆ.
‘ಅಂತಹ ಎಲ್ಲಾ ವೆಬಿನಾರ್ ಇವೆಂಟ್‌ಗಳು ಕೋವಿಡ್ -19 ಸಾಂಕ್ರಾಮಿಕಕ್ಕೆ ಮುಂಚಿತವಾಗಿ ರಾಜಕೀಯ ಅನುಮತಿಗಳಿಗೆ ಅನ್ವಯವಾಗುವ ಅದೇ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿವೆ”ಎಂದು ಅದು ಹೇಳಿದೆ.
ಈ ನವೆಂಬರ್ 25, 2020ರ ವಿದೇಶಾಂಗ ಇಲಾಖೆಯ ಆದೇಶವನ್ನು ಶಿಕ್ಷಣ ಸಚಿವಾಲಯವು ಈ ವರ್ಷದ ಜನವರಿ 15 ರಂದು ಪುನರುಚ್ಚರಿಸಿತು. ಸಾರ್ವಜನಿಕವಾಗಿ ಧನಸಹಾಯ ಪಡೆದ ಸಂಸ್ಥೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳು ಆನ್‌ಲೈನ್ ಈವೆಂಟ್‌ಗಳನ್ನು ನಡೆಸಲು “ಆಡಳಿತ ಕಾರ್ಯದರ್ಶಿ” ಯಿಂದ ಪೂರ್ವಾನುಮತಿ ಪಡೆಯುವಂತೆ ಇಲಾಖೆ ತಿಳಿಸಿತ್ತು.
ನವೆಂಬರ್ 2020 ರ ಆದೇಶದಲ್ಲಿ, ಈ ವೆಬಿನಾರ್ ಇವೆಂಟ್‌ಗಳ ವಿಷಯವು “ರಾಜ್ಯ, ಗಡಿ, ಈಶಾನ್ಯ ರಾಜ್ಯಗಳ ಸುರಕ್ಷತೆ, ಜಮ್ಮು-ಕಾಶ್ಮೀರದ ಲಡಾಖ್‌ದೊಂದಿಗೆ ಸಂಬಂಧ ಹೊಂದಿಲ್ಲ ಮತ್ತು ಭಾರತದ ಇತರ ಆಂತರಿಕ ವಿಷಯಗಳಿಗೆ ಸಂಬಂಧಿಸಿಲ್ಲ ಎಂದು ಖಚಿತಪಡಿಸಲು ಅನುಮತಿ ಅಗತ್ಯ ಎಂದು ಹೇಳಿತ್ತು.
1,500 ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರನ್ನು ಪ್ರತಿನಿಧಿಸುವ ದೇಶದ ಎರಡು ಉನ್ನತ ವಿಜ್ಞಾನ ಅಕಾಡೆಮಿಗಳು ಈ ನಿರ್ದೇಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು ಮತ್ತು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ಅಂತಹ ನಿರ್ದೇಶನದಿಂದ ಯಾವುದೇ ಮುಕ್ತ ವೈಜ್ಞಾನಿಕ ಚರ್ಚೆಯನ್ನು ನಡೆಸುವುದು ಕಷ್ಟಕರವಾಗಲಿದೆ. ಈ ಆದೇಶವು “ಭಾರತದಲ್ಲಿ ವಿಜ್ಞಾನದ ಪ್ರಗತಿಯನ್ನು ನಿರ್ಬಂಧಿಸುತ್ತದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು.
ವಿಜ್ಞಾನಿಗಳು ಗಮನಿಸಿದಂತೆ, ಪೂರ್ವಾನುಮತಿ ಪಡೆಯುವ ಅವಶ್ಯಕತೆಯು, ಅನುಮತಿಗಳಲ್ಲಿನ ವಿಳಂಬದ ಕಾರಣಕ್ಕೆ ಇವೆಂಟ್‌ಗಳನ್ನು ಆಯೋಜಿಸುವಲ್ಲಿ ಅನಿಶ್ಚಿತತೆಗಳಿಗೆ ದಾರಿ ಮಾಡುತ್ತದೆ. ಸರ್ಕಾರಕ್ಕೆ, ಎಲ್ಲಾ ವರ್ಚುವಲ್ ಸೆಮಿನಾರ್‌ಗಳು ಮತ್ತು ಸಮ್ಮೇಳನಗಳ ವಿಚಾರಣೆಯನ್ನು ಮೇಲ್ವಿಚಾರಣೆ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ.
ಇದನ್ನೂ ಓದಿ; ಟ್ರಂಪ್ ವೀಸಾ ನಿಷೇಧ ಆದೇಶ ರದ್ದು ಮಾಡಿದ ನೂತನ ಅಧ್ಯಕ್ಷ ಜೋ ಬೈಡನ್


