| ಸತ್ಯಾ ಎಸ್ |

ಪತ್ರಕರ್ತೆಯಾಗಿ, ಮಾನವ ಹಕ್ಕು ಹೋರಾಟಗಾರರಾಗಿ ತೀಸ್ತಾ ಸೆತಲ್ವಾಡ್ ಚಿರಪರಿಚಿತ ಹೆಸರು. ಮೂರು ತಲೆಮಾರಿನ ಕಾನೂನು ತಜ್ಞರ ಕುಟುಂಬದಲ್ಲಿ ಜನಿಸಿದ ತೀಸ್ತಾ, ನ್ಯಾಯದಾನಕ್ಕಾಗಿ ಆರಿಸಿಕೊಂಡಿದ್ದು ಪತ್ರಿಕೋದ್ಯಮ ಮತ್ತು ಆ್ಯಕ್ಟಿವಿಸಂ ಅನ್ನು. ಮುಖ್ಯವಾಹಿನಿ ಮಾಧ್ಯಮಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆಯು ಕುಸಿದಂತೆಲ್ಲ ತೀಸ್ತಾ ಅವರ ಆ್ಯಕ್ಟಿವಿಸಂ ತೀವ್ರತೆಯನ್ನು ಪಡೆದುಕೊಂಡಿತು. ಮುಖ್ಯವಾಹಿನಿ ಪತ್ರಿಕೋದ್ಯಮ ತೊರೆದು ಪರ್ಯಾಯ ಮಾಧ್ಯಮ ಕಟ್ಟಿದರು. 1984ರ ಭಿವಂಡಿ ಗಲಭೆಗಳಿಂದ ಆರಂಭಿಸಿ 2002ರ ಗುಜರಾತ್ ನರಮೇಧದವರೆಗೆ ಕೋಮುವಾದದ ವಿರುದ್ದ ಅವರದು ಅನವರತ ಹೋರಾಟ. ಇದಕ್ಕಾಗಿ ಪತ್ರಿಕೋದ್ಯಮ, ಕಾನೂನು ಹೋರಾಟ, ಜನರ ಅರಿವು ಹೆಚ್ಚಿಸುವುದು, ಸಂತ್ರಸ್ಥರ ಬಲವರ್ಧನೆ, ನೊಂದವರಿಗೆ ಸಾಂತ್ವನ ನೀಡುವುದು, ಜನರನ್ನು ಸಂಘಟಿಸುವುದು ಮೊದಲಾದವುಗಳನ್ನು ಅಸ್ತ್ರಗಳಂತೆ ಬಳಸುತ್ತಾ ಬಂದಿದ್ದಾರೆ. ಇವರ ಛಲ ಬಿಡದ ಸತ್ಯದ ಹೋರಾಟವು ಒಂದು ಕಡೆ ಗುಜರಾತ್ ರಾಜ್ಯ ಸರ್ಕಾರಕ್ಕೆ ಹಾಗೂ ಬಿಜೆಪಿ ನಾಯಕರಿಗೆ ದುಸ್ವಪ್ನವಾಗಿ ಕಾಡುತ್ತಿದ್ದರೆ, ಮತ್ತೊಂದು ಕಡೆ ಸಾವಿರಾರು ಸಂತ್ರಸ್ತರಿಗೆ, ಲಕ್ಷಾಂತರ ಮನವ ಪ್ರೇಮಿಗಳಿಗೆ ಭರವಸೆಯ ಬೆಳಕಾಗಿದೆ. ಸರ್ಕಾರವೇ ತಮ್ಮ ಮೇಲೆ ಬ್ರಹ್ಮಾಸ್ತ್ರ ಬೀಸಿದ್ದರೂ, ಅದನ್ನು ಎದುರಿಸಿಕೊಂಡೇ ಮಾನವ ಜೀವಿಯ ಘನತೆಯ ಬದುಕಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ‘ಸಂವಿಧಾನದ ಕಾಲಾಳು’ ಎಂಬ ಈ ಪುಸ್ತಕವು ತೀಸ್ತಾ ಅವರ ಈ ಎಲ್ಲ ಹೋರಾಟಗಳ ಮೂಲಕ ನಾವು ಬದುಕುತ್ತಿರುವ ಸಮಾಜ ಕೊಳಕನ್ನು ಅನಾವರಣ ಮಾಡುತ್ತದೆ. ಬಹುತ್ವ ಮತ್ತು ಪ್ರಜಾಪ್ರಭುತ್ವ ಎಂಬ ಎರಡು ತತ್ವಗಳ ಹೆಮ್ಮೆಯ ಭಾರತಕ್ಕಾಗಿ ನಾವು ಏನು ಮಾಡುತ್ತಿದ್ದೇವೆ ಎಂಬ ಪ್ರಶ್ನೆಯನ್ನೂ ಎತ್ತುತ್ತದೆ.
ಈ ಪುಸ್ತಕವನ್ನು ಮೂಲ ಇಂಗ್ಲೀಷಿನಲ್ಲಿ ಫುಟ್ ಸೋಲ್ಜರ್ ಆಫ್ ದಿ ಕಾನ್ಸ್ಟಿಟ್ಯೂಷನ್ ಎಂಬ ಹೆಸರಿನಲ್ಲಿ ದೆಹಲಿ ಮೂಲದ ಲೆಫ್ಟ್ ವಡ್ರ್ಸ್ ಪ್ರಕಾಶನವು ಪ್ರಕಟಿಸಿದೆ. ಇದನ್ನು ಸತ್ಯಾ ಎಸ್. ಕನ್ನಡಕ್ಕೆ ಭಾಷಾಂತರ ಮಾಡಿದ್ದು, ಕ್ರಿಯಾ ಮಾಧ್ಯಮ ಪ್ರಕಟಿಸುತ್ತಿದೆ.
ಸಂವಿಧಾನದ ಕಾಲಾಳು ಪುಸ್ತಕದ ಆಯ್ದ ಒಂದು ಭಾಗ.
ಮಾರ್ಚ್ 4ರಂದು ನಾನು ಅಹ್ಮದಾಬಾದ್‍ನ ಷಾ ಆಲಂ ಪರಿಹಾರ ಶಿಬಿರದಲ್ಲಿದ್ದೆ. ಅಂದು ನರೋಡ ಪಟಿಯಾದ ಹೆಣ್ಣು ಮಕ್ಕಳನ್ನು ಭೇಟಿಯಾಗಿದ್ದೆ. ದರ್ಗಾದಲ್ಲಿದ್ದ ಪರಿಹಾರ ಶಿಬಿರವನ್ನು ತಲುಪಲು ತಾವು ಪಟ್ಟ ಪಾಡನ್ನು ಅವರು ವಿವರಿಸಿದರು. ಅವರನ್ನು ರಕ್ಷಿಸಿದಾಗ ಅವರ ಮೈಮೇಲೆ ಒಂದು ತುಂಡು ಬಟ್ಟೆ ಇರಲಿಲ್ಲ ಎಂದರು. ಈ ಅವಮಾನವನ್ನು ನೆನಪಿನ ಭಿತ್ತಿಯಿಂದ ಹೆಕ್ಕಿ ತೆಗೆದು ಹೇಳಬಹುದು, ಆದರೆ ಆ ನೆನಪಿನೊಂದಿಗೆ ಬದುಕುವುದು ದುಸ್ಸಾಧ್ಯ. ಆ ಮಹಿಳೆಯರನ್ನು ವಿವಸ್ತ್ರಗೊಳಿಸಿ, ಸುಮಾರು 12-13 ಗಂಟೆಗಳ ಕಾಲ ದೈಹಿಕ ಕಿರುಕುಳ ನೀಡಲಾಗಿತ್ತು. ಅವರು ಅದೇ ವಿವಸ್ತ್ರ ಸ್ಥಿತಿಯಲ್ಲಿ ಪೊಲೀಸ್ ಸ್ಟೇಷನ್‍ನಲ್ಲಿ ಕುಳಿತಿದ್ದರು. ಹಾಗೂ ಅವರನ್ನು ಅದೇ ರೀತಿ- ರಕ್ತ ಸಿಕ್ತವಾಗಿ, ಗಾಯಗಳೊಂದಿಗೆ, ಬೆತ್ತಲೆಯಾಗಿಯೇ – ಈ ಪರಿಹಾರ ಶಿಬಿರಕ್ಕೆ ಕರೆದು ತರಲಾಗಿತ್ತು.
ಆರೆಸ್ಸೆಸ್-ವಿಹಿಂಪ-ಬಿಜೆಪಿಯ ಈ ಧಾರ್ಮಿಕ ಯುದ್ಧವನ್ನು ಗಂಗೋತ್ರಿ ಮತ್ತು ಗೋಮ್ತಿ ಹೌಸಿಂಗ್ ಸೊಸೈಟಿಯಲ್ಲೂ ಹರಿಯಬಿಡಲಾಗಿತ್ತು. ಈ ವಸತಿ ಪ್ರದೇಶಗಳು ಸನಾತನ ಹಿಂದೂಗಳಿಗೆ ಪವಿತ್ರವಾದ, ತಾಯಿ ಗಂಗಾ ಮಾತೆಯ ಹೆಸರನ್ನು ಹೊಂದಿದ್ದವು; ಆದರೂ ಅವುಗಳ ಮೇಲೆ ದಾಳಿ ಮಾಡುವುದನ್ನು ಬಿಡಲಿಲ್ಲ. ಫೆಬ್ರವರಿ 28ರಂದು ದಿನಗೂಲಿ ಕಾರ್ಮಿಕ ಮಹಿಳೆಯರು, ಅವರ ಹೆಣ್ಣು ಮಕ್ಕಳು ಮತ್ತು ತಾಯಂದಿರ ಮೇಲೆ ಆಕ್ರಮಣ ಮಾಡಲಾಯಿತು. ಗಂಡಸರನ್ನು ಬರ್ಬರವಾಗಿ ಹೊಡೆದುಹಾಕಲು ಹಾಗೂ ಮುಸ್ಲಿಂ ಮಹಿಳೆಯರನ್ನು ಪ್ರತ್ಯೇಕಗೊಳಿಸಲು ಬಳಸಿದ ಕಬ್ಬಿಣದ ಸರಳುಗಳ ಬೀಸು ದೃಶ್ಯವನ್ನು ನೆರೆಹೊರೆಯ ಹಿಂದೂ ಹೆಂಗಸರು ಮತ್ತು ಗಂಡಸರು ಪ್ರೇಕ್ಷಕರಂತೆ ನೋಡಿದ್ದರು. ಹಿಂದೂ ಧರ್ಮದ ಘನಘೋರವಾದ, ತಣ್ಣನೆಯ, ಅಸಹ್ಯಕರ ಕೌರ್ಯ ರುದ್ರ ನರ್ತನಮಾಡಿತ್ತು. 1992-93ರಲ್ಲಿ ಬಾಂಬೆಯಲ್ಲಿ ನಾನು ನೋಡಿದ್ದ ಕೌರ್ಯಕ್ಕಿಂತಲೂ ಇದು ಘೋರವಾಗಿತ್ತು. ಇಂತಹ ವ್ಯವಸ್ಥಿತ, ಭಯಂಕರ ಅವಮಾನ ಮತ್ತು ಕೌರ್ಯಗಳು ಹರಡಿದಂತೆಲ್ಲಾ ಹಿಂದೂ ರಾಷ್ಟ್ರದ ಅವರ ನಕ್ಷೆ ಮತ್ತಷ್ಟು ನಿಖರವಾಗಿ ರೂಪುಗೊಳ್ಳುತ್ತಾ ಇತ್ತು. ನನ್ನ ಬಳಿ ಕೇಸರಿ ಬಣ್ಣದ, ಸುರುಳಿ ಕಟ್ಟಿನ ಒಂದು ನೋಟ್ ಪುಸ್ತಕ ಮತ್ತು ಒಂದು ಪುಟ್ಟ ಟೇಪ್ ರೆಕಾರ್ಡರ್ ಇತ್ತು. ತಂತ್ರಜ್ಞಾನ ಕೆಲವೊಮ್ಮೆ ಕೈಕೊಟ್ಟು ಆಗುವ ಫಜೀತಿಗಳ ಅನುಭವದಿಂದಾಗಿ ನಾನು ಹೆಚ್ಚಾಗಿ ನಂಬುವುದು ನನ್ನ ನೋಟ್ ಪುಸ್ತಕ ಮತ್ತು ನನ್ನ ನೆನಪಿನ ಕೋಶಗಳನ್ನು.
ಒಬ್ಬ ಕಿರಾಣಿ ಅಂಗಡಿಯಾತನನ್ನು ಭೇಟಿ ಮಾಡಿದ ಅನುಭವ ನನಗೆ ಚೆನ್ನಾಗಿ ನೆನಪಿದೆ. ತನ್ನ ಹೆಂಡತಿಯ ಮೇಲೆ ದುರುಳರು ನಡೆಸಿದ ಅತ್ಯಾಚಾರವನ್ನು ಕಣ್ಣಾರೆ ಕಂಡಿದ್ದ ಆತ, ಈಗ ಹೆಂಡತಿಯ ಪಕ್ಕ, ಆಕೆಯನ್ನು ಸಂತೈಸುತ್ತಾ ಕುಳಿತಿದ್ದ.
ಲೈಂಗಿಕ ಅತ್ಯಾಚಾರಕ್ಕೆ ಗುರಿಯಾಗಿ ಬದುಕುಳಿದಿದ್ದ ಕೆಲವೇ ಮಹಿಳೆಯರಲ್ಲಿ ಆಕೆ ಒಬ್ಬರಾಗಿದ್ದರು. ಹೆಚ್ಚಿನವರನ್ನು ಅತ್ಯಾಚಾರದ ನಂತರ ಕೊಂದು ಹಾಕಿದ್ದರು. ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವಾಗ ಆಕೆಯ ಮಾತು ಕೇಳಿದ್ದೆ. ಈಕೆ ಚಿಕ್ಕ ಯುವತಿಯರ ಮೇಲೆ ನಡೆದ ಅತ್ಯಾಚಾರಕ್ಕೆ ಸಾಕ್ಷಿಯಾಗಿದ್ದರು. ಅದರ ವಿವರಣೆ- ಆ ಶಬ್ದಗಳು, ಆ ಘಟನೆಗಳು, ಒಂದೇ ಬಗೆಯ ವಿವರಗಳು- ಭಯಾನಕವಾಗಿತ್ತು. ಒಬ್ಬ ಸಂತ್ರಸ್ಥೆಗೆ ಇದನ್ನೆಲ್ಲ ಮೇಲಿಂದ ಮೇಲೆ, ಮೇಲಿಂದ ಮೇಲೆ ಪುನರುಚ್ಛರಿಸುವುದು ಎಷ್ಟು ಕಷ್ಟಕರವಾಗಿದ್ದೀತು?
ಸಂತ್ರಸ್ತರನ್ನು ತಂಡಗಳಲ್ಲಿ ಭೇಟಿ ಮಾಡುತ್ತಿದ್ದೆ. ಈಗಾಗಲೇ ಅವರಿಗೆ ನಾನು ಸಾಕಷ್ಟು ಪರಿಚಿತಳಾಗಿದ್ದೆ ಹಾಗೂ ಕೆಲವರು ಬಹಳ ಆಪ್ತರಾಗಿದ್ದರು. ಗುಲ್ಬರ್ಗ್ ಸೊಸೈಟಿಯ ಸಂತ್ರಸ್ತರನ್ನು ದರಿಯಾಖಾನ್ ಗುಂಬತ್ ಶಿಬಿರದಲ್ಲಿ ಭೇಟಿ ಮಾಡಿದೆ. ಈ ಶಿಬಿರವನ್ನು ನಡೆಸುತ್ತಿದ್ದುದು ಬಿಜೆಪಿ ಬೆಂಬಲಿಗ ಎಂದು ಹೆಸರಾಗಿದ್ದ ಓರ್ವ ಮುಸ್ಲಿಂ ವ್ಯಕ್ತಿ ಹಾಗೂ ಅವರು ಶಿಬಿರವನ್ನು ಚೆನ್ನಾಗಿ ನಡೆಸುತ್ತಿದ್ದರು.
ಇಡೀ ಒಂದು ಪ್ರದೇಶದ ಜನರು, ಸುಮಾರು ಏಳೆಂಟು ಗಂಟೆಗಳ ಕಾಲ ನಡೆದ ನರಹತ್ಯೆಯನ್ನು ಖುಷಿಯಿಂದ ವೀಕ್ಷಿಸುತ್ತಿದ್ದರು ಎನ್ನುವ ವಿಷಯ ಮೆದುಳನ್ನು ಮರಗಟ್ಟಿಸುತ್ತದೆ. ತಾಸುಗಟ್ಟಲೆ ನಡೆಯುತ್ತಿರುವ ಹಿಂಸೆ, ಕೊಲೆ, ಅತ್ಯಾಚಾರಗಳನ್ನು ನೋಡಿಕೊಂಡು, ಅದನ್ನು ಸಂಭ್ರಮಿಸುತ್ತಿರುವ ಜನರಿದ್ದಾರೆ ಎಂದರೆ, ಈ ಅಸಹ್ಯಕರ ಹಿಂಸೆಗೆ ಮೊದಲು ಈ ಸಮಾಜವನ್ನು ಹೇಗೆ ಸಜ್ಜುಗೊಳಿಸಲಾಗಿತ್ತು ಮತ್ತು ಮುಂದಿನ ದಿನಗಳಲ್ಲಿ ಈ ಸಮಾಜ ಹೇಗಿರುತ್ತದೆ ಎನ್ನುವುದನ್ನು ನಾವು ಊಹೆ ಮಾಡಿಕೊಳ್ಳಬೇಕು. ಈ ಭಯಾನಕ ಹಿಂಸೆಯು ಮುಂದೆ ಆ ಜನರ ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರಿಯಬೇಕು. ಈ ಮಾರಣಹೋಮದಲ್ಲಿ ತಮ್ಮ ಒಬ್ಬೊಬ್ಬ ಮಗನನ್ನು ಕಳೆದುಕೊಂಡಿದ್ದ ರೂಪಾಬೆನ್ ಮೋದಿ ಮತ್ತು ಸಾಯಿರಾ ಬೆನ್ ಅವರುಗಳಿಗೆ ತಮ್ಮ ಮಗನ ಸಾವಿನಂತೆಯೇ, ತಾವು ಬದುಕು ಕಟ್ಟಿಕೊಂಡಿದ್ದ ಗುಲ್ಬರ್ಗ್ ಸೊಸೈಟಿಯ ಮೇಲೆ ನಡೆದ ಆಕ್ರಮಣ, ಲೂಟಿ ಮತ್ತು ಹಾಡು ಹಗಲಲ್ಲೇ ನಡೆದ ಹೆಣ್ಣುಮಕ್ಕಳ ಅತ್ಯಾಚಾರಗಳೂ ಕಾಡುತ್ತವೆ. ಇದರ ಬಗ್ಗೆ ಮಾತನಾಡುವುದಾಗಲಿ ಅಥವಾ ಬರೆಯುವುದಾಗಲಿ ಅತ್ಯಂತ ನೋವಿನ ಸಂಗತಿ. ನರೋಡ ಪಟಿಯಾದಲ್ಲಿ ಫೆಬ್ರವರಿ 28ರಂದು ಒಂದೇ ದಿನ 126 ಜನರನ್ನು ಕೊಲೆ ಮಾಡಲಾಯಿತು. ಆದರೆ ಅಧಿಕೃತ ಆರೋಪ ಪಟ್ಟಿಯಲ್ಲಿ ಇರುವುದು 96 ಜನರ ಹೆಸರು ಮಾತ್ರ. ಅನೇಕ ತಿಂಗಳುಗಳ ಕಾಲ ಹತ್ತಿರದ ಹೊಲದಲ್ಲಿದ್ದ ಬಾವಿಯೇ ಎಲ್ಲ ಜೀವಗಳ ಸಮಾಧಿಯಾಗಿತ್ತು.
ಅಹ್ಮದಾಬಾದ್‍ನ ಈ ಘಟನೆಗಳು ಅನೇಕ ಸಾಮಾಜಿಕ ಕಾರ್ಯಕರ್ತರನ್ನು ದಿಗ್ಬ್ರಮೆಗೆ ದೂಡಿದ್ದವು. ಆತಂಕದಿಂದ ನಲುಗಿಹೋಗಿದ್ದ ಅವರುಗಳನ್ನು ಒಂದು ರೀತಿಯ ದುರ್ಬಲತೆ ಆವರಿಸಿತ್ತು. ವಡೋದರಾದಲ್ಲಿ ತೃಪ್ತಿ ಶಾ ಮತ್ತು ರೋಹಿತ್ ಪ್ರಜಾಪತಿ ಅವರುಗಳ ನೇತೃತ್ವದಲ್ಲಿ ಒಂದಿಷ್ಟು ಜನರು ನೆರವು ನೀಡುತ್ತಿದ್ದರು, ಆದರೆ ಅವರಿಗೆ ಜಿಲ್ಲೆಯ ಹೊರಗೆ ಹೋಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಹೀಗೆ ಕೆಲಸ ಮಾಡುತ್ತಿದ್ದ ನಾವೆಲ್ಲರೂ ಪ್ರತಿದಿನ ಆಗಿಂದಾಗ್ಗೆ ಪರಸ್ಪರ ಫೋನ್ ಮಾಡಿ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೆವು. ಮುಖ್ಯವಾಹಿನಿಯ ಸಮೂಹ ಮಾಧ್ಯಮಗಳ ವರದಿಗಳು ತಾರತಮ್ಯದಿಂದ ಹಾಗೂ ದೋಷಗಳಿಂದ ಕೂಡಿತ್ತು. 2002ರ ಎಡಿಟರ್ಸ್ ಗಿಲ್ಡ್ ವರದಿಯಲ್ಲಿ ಇದನ್ನು ದಾಖಲಿಸಲಾಗಿದೆ. ಸ್ಥಳೀಯ ಭಾಷೆಯ ಪತ್ರಿಕೆಗಳ ಪೈಕಿ ಜನಸತ್ತಾ, ಕಛ್ ಮಿತ್ರ ಮತ್ತು ಗುಜರಾತ್ ಟುಡೆ (ಮುಸ್ಲಿಂ ಒಡೆತನದ ಗುಜರಾತಿ ಪತ್ರಿಕೆ) ಮಾತ್ರ ಜವಾಬ್ದಾರಿಯುತ ವರದಿಗಾರಿಕೆಯನ್ನು ಮಾಡಿದವು. ಸಂದೇಶ್ ಮತ್ತು ಗುಜರಾತ್ ಸಮಾಚಾರ್ ಪತ್ರಿಕೆಗಳು ಸರಕಾರದ ತುತ್ತೂರಿ ಊದಿದವು. ಗುಜರಾತಿನ ಶೇ.70 ಜನರು ಇವೇ ಪಕ್ಷಪಾತಿ ಮಾಧ್ಯಮಗಳಿಂದ ಸುದ್ದಿಗಳನ್ನು ಪಡೆಯುತ್ತಿದ್ದುದರಿಂದ, ಈ ಪತ್ರಿಕೆಗಳು ಗೋಧ್ರಾ ಘಟನೆಯ ಬಗ್ಗೆ ಕಟ್ಟಿಕೊಡುತ್ತಿದ್ದ ಸುಳ್ಳು ಪರಿಕಲ್ಪನೆಗಳು ಭೀತಿ ಹುಟ್ಟಿಸುತ್ತಿದ್ದವು.
ಪರಿಹಾರ ಶಿಬಿರಗಳಲ್ಲಿ ಡಜನ್ ಗಟ್ಟಲೆ ಯುವಕ ಯುವತಿಯರು ಕೋಪ ಮತ್ತು ಕಹಿ ಭಾವನೆಗಳಿಂದ ನನ್ನ ಬಳಿ ಬರುತ್ತಿದ್ದರು. ಈ ದೇಶದ ಬಗ್ಗೆ, ಜನರ ಬಗ್ಗೆ, ಅವರ ನೆರೆಹೊರೆಯವರ ಬಗ್ಗೆ ಅವರಲ್ಲಿ ವಿಶ್ವಾಸ ಮೂಡಿಸುವುದು ಹೇಗೆ ಎನ್ನುವುದು ದೊಡ್ಡ ಸವಾಲಾಗಿತ್ತು. ಮನಸ್ಸು ತುಂಬಾ ಕಹಿಯಾಗಿದ್ದ ಒಬ್ಬ ಯುವಕನಿಗೆ ಒಂದು ಪುಟ್ಟ ಟೇಪ್ ರೆಕಾರ್ಡರ್ ಕೊಟ್ಟು ಏನೆಲ್ಲ ಆಯಿತೊ ಅದನ್ನು ರೆಕಾರ್ಡ್ ಮಾಡಲು ಹೇಳಿದೆ. ಅಂತಹ ದಾಖಲಾತಿಗಳಿಂದಲೇ ನ್ಯಾಯಕ್ಕಾಗಿ ಹೋರಾಟ ರೂಪಿಸಬೇಕಿತ್ತು.
**
2015ರಲ್ಲಿ ಮೋದಿ ಸರಕಾರದ ಆದೇಶದ ಮೇರೆಗೆ ನನ್ನ ಮನೆಯ ಮೇಲೆ ಸಿಬಿಐ ದಾಳಿ ನಡೆದ ಒಂದು ವಾರದ ನಂತರ ನಾನು ಮತ್ತೆ ಶಾ-ಎ-ಆಲಂ ದರ್ಗಾಗೆ ಭೇಟಿ ನೀಡಿದೆ. ಅಲ್ಲಿಗೆ ಭೇಟಿ ನೀಡಿ ಬಹಳ ವರ್ಷಗಳು ಕಳೆದಿದ್ದವು. ಗುಜರಾತ್ ಹೈಕೋರ್ಟಿನಲ್ಲಿ ಝಕ್ರಿಯ ಜಾಫ್ರಿ ಪ್ರಕರಣದ ಆ ದಿನದ ವಿಚಾರಣೆ ಮುಗಿದಿತ್ತು. ಒಳ್ಳೆಯ ಬೆಳದಿಂಗಳಿತ್ತು. ನನ್ನ ಕಾರಿನ ಚಾಲಕ ಅಯ್ಯೂಬ್ ತಾನು ಆ ದರ್ಗಾದಲ್ಲಿ ಒಬ್ಬ ನಿರಾಶ್ರಿತನಾಗಿ ಕಳೆದ ದಿನಗಳನ್ನು ನೆನಪು ಮಾಡಿಕೊಂಡ. ಆ ದಿನ ಆ ವಾತಾವರಣದಲ್ಲಿ ಏನೋ ವಿಶೇಷವಿತ್ತು. ಚಂದ್ರನ ಬೆಳಕು, ತಣ್ಣಗೆ ಉರಿಯುತ್ತಿದ್ದ ಕ್ಯಾಂಡಲ್‍ಗಳು, ಆವರಣದಲ್ಲಿ ಹೊಳೆಯುತ್ತಿದ್ದ ನೀರಿನ ಕೊಳ, ದರ್ಗಾದ ವಿಶಾಲ ಅಂಗಳ… ಆಳವಾಗಿ ಉಸಿರು ಎಳೆದುಕೊಂಡು ಈ ಎಲ್ಲವನ್ನು ಮತ್ತೆ ಮತ್ತೆ ನೋಡಿದೆ. ನನ್ನೊಳಕ್ಕೆ ಇಳಿಸಿಕೊಂಡೆ. ಈ ಜಾಗ ಎಷ್ಟೊಂದು ವಿಶಾಲವಾಗಿದೆ ಎನ್ನಿಸಿತು. 2002ರಲ್ಲಿ 12,500 ಜನರನ್ನು ಒಡಲೊಳಗೆ ಬಸಿದುಕೊಂಡಿದ್ದ ದರ್ಗಾ ಆಗ ಬಹಳ ಚಿಕ್ಕದಾಗಿ ಕಂಡಿತ್ತು. ಗಿಜಿ ಗಿಜಿ ಜನರಿಂದ ತುಂಬಿದ್ದ ದರ್ಗಾದಲ್ಲಿ ಅಂದು ಕೇಳುತ್ತಿದ್ದುದು ಮಹಿಳೆಯರು ಮತ್ತು ಮಕ್ಕಳ ಆಕ್ರಂದನ ಹಾಗೂ ಗಂಡಸರ ಅಸಹಾಯಕ ಮೌನ. ಆ ನೆನಪುಗಳು ನನ್ನ ಇಂದಿನ ಅನುಭವಗಳನ್ನು ತುಂಡರಿಸಿದವು.
**


