“ಮಕ್ಕಳ್ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ” ಎಂದು ಎಐಎಸ್‌ಎಂಕೆ ಪಕ್ಷದ ಮುಖ್ಯಸ್ಥ ಮತ್ತು ನಟ ಆರ್.ಶರತ್ ಕುಮಾರ್ ಘೋಷಿಸಿದ್ದಾರೆ. ತಮಿಳುನಾಡು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಕಮಲ್ ಹಾಸನ್, “ಸಮಾನ ಯೋಚನೆಗಳಿರುವ ಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿದೆ” ಎಂದಿದ್ದಾರೆ.
ಈಗಾಗಲೇ ಎಐಎಸ್‌ಎಂಕೆ ಮತ್ತು ಎಂಎನ್‌ಎಂ ಪಕ್ಷಗಳ ಮೈತ್ರಿ ಖಚಿತಪಟ್ಟಿದ್ದು, “ತೃತೀಯ ರಂಗಕ್ಕೆ ಕಮಲ್ ಹಾಸನ್ ನೇತೃತ್ವ ಇರಲಿದೆ. ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆ” ಎಂದು ಶರತ್ ಕುಮಾರ್ ಹೇಳಿದ್ದಾರೆ. ಎಐಎಡಿಎಂಕೆ ಜೊತೆಗೆ ಕಳೆದ 10 ವರ್ಷಗಳಿಂದ ಎಐಎಸ್‌ಎಂಕೆ ಪಕ್ಷವು ಮೈತ್ರಿ ಮಾಡಿಕೊಂಡಿತ್ತು.
ಶರತ್ ಕುಮಾರ್ ಅವರ ಪತ್ನಿ, ಎಐಎಸ್‌ಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ರಾಧಿಕಾ ಶರತ್‌ಕುಮಾರ್ ಕೋವಿಲ್‌ಪಟ್ಟಿ ಅಥವಾ ವೇಲಚೇರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಪಕ್ಷದ ಉಪಾಧ್ಯಕ್ಷನಾಗಿ APJ ಅಬ್ದುಲ್ ಕಲಾಂ ಅವರ ಸಲಹೆಗಾರ!
ಒಳ್ಳೆಯವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಹಂಬಲ ವ್ಯಕ್ತಪಡಿಸಿರುವ ಕಮಲ್ ಹಾಸನ್, “ಹಲವು ಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿದೆ, ಸೀಟು ಹಂಚಿಕೆ ನಿರ್ಧಾರಗಳಿಗೂ ಮುನ್ನ ಮೈತ್ರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ” ಎಂದಿದ್ದಾರೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವೈಜ್ಞಾನಿಕ ಸಲಹೆಗಾರರಾಗಿದ್ದ ವಿ.ಪೊನರಾಜ್ ಅವರು ಎಂಎನ್‌ಎಂ ಪಕ್ಷದ ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಲಿದ್ದಾರೆ ಎಂದು ಕಮಲ್ ಹಾಸನ್ ಪ್ರಕಟಿಸಿದ್ದಾರೆ.
ಗೃಹಿಣಿಯರನ್ನು ಮುನ್ನೆಲೆಗೆ ತರುವ ಕಾರ್ಯವನ್ನು ಪಕ್ಷ ಮಾಡಲಿದೆ. ಮಹಿಳೆಯರಿಗೆ ಶೇ 50 ಮೀಸಲಾತಿ, ಪ್ರತಿ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಉಳಿದುಕೊಳ್ಳಲು ಅನುಕೂಲವಾಗಲು ಹಾಸ್ಟೆಲ್‌ಗಳ ವ್ಯವಸ್ಥೆ, ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ಬ್ಯಾಂಕ್ ಸ್ಥಾಪನೆ ಮತ್ತು 50 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಭರವಸೆಯನ್ನು ಪಕ್ಷದ ಕಾರ್ಯಸೂಚಿಯಲ್ಲಿ ನೀಡಲಾಗಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ: ಪಕ್ಷದ ಅಭ್ಯರ್ಥಿಗಳಾಗಲು ಬಯಸುವವರು ₹ 25 ಸಾವಿರ ಪಾವತಿಸಿ: ಕಮಲ್ ಹಾಸನ್
“ತಮಿಳರು ಮಾರಾಟಕ್ಕಿಲ್ಲ, ಅವರ ಮತಗಳು ಸಹ ಮಾರಾಟಕ್ಕಿಲ್ಲ” ಎಂದು ಘೋಷಿಸಿರುವ ಕಮಲ್ ಹಾಸನ್, ಭ್ರಷ್ಟಾಚಾರ ಮುಕ್ತ ಸರ್ಕಾರ ಸ್ಥಾಪನೆಗಾಗಿ ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಪಂಚರಾಜ್ಯಗಳ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದೆ. ಅದರಲ್ಲೂ ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆ ವಿಶೇಷವಾಗಿ ಗಮನ ಸೆಳೆದಿದೆ. ರಾಷ್ಟ್ರೀಯ ಪಕ್ಷಗಳ ಜೊತೆಗೆ ನಟ ಕಮಲ್ ಹಾಸನ್ ಅವರ ನೂತನ ಪಕ್ಷ ಮಕ್ಕಳ್ ನೀಧಿ ಮಯ್ಯಂ ಸಹ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ತಮಿಳುನಾಡಿನಲ್ಲಿ ಈ ಬಾರಿ ಘಟಾನುಘಟಿಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ. ನಟಿ ಖುಷ್ಬೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದು, ಇತ್ತ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ನಟ ಕಮಲ್ ಹಾಸನ್, ರಜನಿಕಾಂತ್ ಮತ್ತು ಶರತ್ ಕುಮಾರ್ ಬೆಂಬಲ ಕೇಳಿದ್ದು, ಚುನಾವಣೆಗೆ ಬಣ್ಣದ ಲೋಕದ ಟಚ್ ನೀಡುತ್ತಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ನಡೆಸುವವರಿಗೆ ರಾಜಕೀಯದ ಬಗ್ಗೆ ಏನು ಗೊತ್ತು – ತಮಿಳುನಾಡು ಸಿಎಂ: ತಿರುಗೇಟು ನೀಡಿದ ಕಮಲ್


