ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದೆ. ಹಲ್ಲೆ, ಕೊಲೆ, ಅತ್ಯಾಚಾರದಂತಹ ಘಟನೆಗಳು ಪ್ರತಿದಿನ ಸಾಮಾನ್ಯವಾಗಿವೆ. ನಿನ್ನೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದ್ದು, ವ್ಯಕ್ತಿಯೊಬ್ಬ ತನ್ನ ಮಗಳ ತಲೆ ಕಡಿದು ರಸ್ತೆಯಲ್ಲಿ ಪ್ರದರ್ಶನ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ.
ಪಂಡೆತರ ಗ್ರಾಮದಲ್ಲಿ ಕ್ರೂರ ತಂದೆಯೊಬ್ಬ ತನ್ನ 17 ವರ್ಷದ ಅಪ್ರಾಪ್ತ ಮಗಳ ತಲೆ ಕಡಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಪ್ರಶ್ನಿಸಿದ್ದಾರೆ. ಆತ ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಮಗಳು ವ್ಯಕ್ತಿಯೊಬ್ಬನೊಂದಿಗೆ ಸಂಬಂಧ ಇಟ್ಟುಕೊಂಡಿರುವುದನ್ನು ಸಹಿಸಲಾರದೇ ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ.
“ನಾನೇ ಕೊಂದಿದ್ದೇನೆ. ಬೇರೆ ಯಾರೂ ಇರಲಿಲ್ಲ. ಮನೆಯಲ್ಲಿ ಬಾಗಿಲು ಹಾಕಿ ಚೂಪಾದ ಚಾಕುವಿನಿಂದ ತಲೆ ಕತ್ತರಿಸಿದ್ದೇನೆ. ನನ್ನ ಮಗಳ ದೇಹ ಮನೆಯಲ್ಲಿದೆ” ಎಂದು ಸಾವಾಧಾನವಾಗಿ ಹೇಳಿದ್ದಾನೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
“ಸರ್ವೇಶ್ ಎಂಬ ವ್ಯಕ್ತಿಯು ತನ್ನ ಮಗಳನ್ನು ಕೊಂದು, ತಲೆಕಡಿದು ರಸ್ತೆಯಲ್ಲಿ ಹೋಗುತ್ತಿದ್ದಾಗ ಬಂಧಿಸಿದ್ದೇವೆ. ಅಲ್ಲದೇ ಮೃತಳ ತಲೆಯನ್ನು ಸಮರ್ಪಕವಾಗಿ ಸಾಗಿಸದ ಕಾರಣಕ್ಕೆ ಪೊಲೀಸ್ ಪೇದಯೊಬ್ಬನನ್ನು ಸಹ ಅಮಾನತ್ತು ಮಾಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಕಪಿಲ್ ದಿಯೊ ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ವರದಿ ಬ್ಯೂರೋ ಪ್ರಕಾರ 2019ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಕ್ಕಳ ಮೇಲಿನ ಪೋಕ್ಸೋ ಪ್ರಕರಣಗಳಲ್ಲಿಯೂ ಸಹ ಉತ್ತರ ಪ್ರದೇಶವೇ (7,444) ಮುಂದಿದೆ.
ಇತ್ತೀಚಿಗೆ ಹತ್ರಾಸ್ ನಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಆರೋಪಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದ. ಒಟ್ಟಾರೆಯಾಗಿ ಉತ್ತರ ಪ್ರದೇಶ ರಾಜ್ಯವು ಅಪರಾಧ ಪ್ರಕರಣಗಳಿಗೆ ದಿನೇ ದಿನೇ ಕುಖ್ಯಾತಿಯಾಗುತ್ತಿದೆ.
ಇದನ್ನೂ ಓದಿ: ಹತ್ರಾಸ್: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ತಂದೆಯನ್ನು ಹತೈಗೈದ ಆರೋಪಿ


