ಭಾರೀ ಕುತೂಹಲ ಹುಟ್ಟಿಸಿರುವ ಪಶ್ಛಿಮ ಬಂಗಾಳ ಚುನಾವಣೆಯಲ್ಲಿ ಸ್ವಕ್ಷೇತ್ರ ಬಿಟ್ಟು ನಂದಿಗ್ರಾಮದಲ್ಲಿ ಕಣಕ್ಕಿಳಿಯುವುದಾಗಿ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಒಟ್ಟು 294 ಕ್ಷೇತ್ರಗಳಲ್ಲಿ 291 ಕ್ಷೇತ್ರಗಳಿಗೆ ಟಿಎಂಸಿ ಅಭ್ಯರ್ಥಿಗಳನ್ನು ಇಂದು ಅವರು ಘೋಷಿಸಿದ್ದಾರೆ.
ನಂದಿಗ್ರಾಮವು ಈ ಹಿಂದೆ ಟಿಎಂಸಿಯ ಪ್ರಭಾವಿ ನಾಯಕನಾಗಿದ್ದ ಮತ್ತು ಈಗ ಬಿಜೆಪಿಗೆ ಪಕ್ಷಾಂತರ ಮಾಡಿರುವ ಸುವೇಂಧು ಅಧಿಕಾರಿಯ ಪ್ರಬಲ ನೆಲೆಯಾಗಿದೆ. ಸದ್ಯ ಕೋಲ್ಕತ್ತಾದ ಭವಾನಿಪೋರ್ ಪ್ರತಿನಿಧಿಸುತ್ತಿರುವ ಮಮತಾ ಬ್ಯಾನರ್ಜಿಯವರು ತಮ್ಮ ಸುರಕ್ಷಿತ ಸ್ಥಾನವನ್ನು ತೆರವುಗೊಳಿಸಿ ಕಠಿಣ ನಂದಿಗ್ರಾಮದಲ್ಲಿ ಸ್ಪರ್ಧಿಸುವುದಾಗಿ ಮತ್ತು ಅದೊಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ತೀರ್ಮಾನಿಸಿದ್ದಾರೆ.
ಟಿಎಂಸಿಯ ಅಭ್ಯರ್ಥಿಗಳಲ್ಲಿ ಮಹಿಳೆಯರಿಗೆ, ದಲಿತರಿಗೆ ಮತ್ತು ಮುಸ್ಲಿಮರಿಗೆ ಹೆಚ್ಚಿನ ಸೀಟುಗಳನ್ನು ನೀಡಲಾಗಿದೆ. 291 ಕ್ಷೇತ್ರಗಳಲ್ಲಿ 50 ಮಹಿಳೆಯರಿಗೆ, 42 ಮುಸ್ಲಿಮರಿಗೆ, 79 ಪರಿಶಿಷ್ಟ ಜಾತಿ ಮತ್ತು 17 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡಿಲ್ಲ.
ನಂದಿಗ್ರಾಮ ಸುವೇಂಧು ಅಧಿಕಾರಿಯವರ ಪ್ರಬಲ ನೆಲೆಯಾದ್ದರಿಂದ ಮಮತಾ ಬ್ಯಾನರ್ಜಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಅದಕ್ಕೆ ತೆರೆ ಎಳೆದಿರುವ ಮಮತಾ ಬ್ಯಾನರ್ಜಿ ತಾವು ತೆರವುಗೊಳಿಸುವ ಭವಾನಿಪೋರ್ ಕ್ಷೇತ್ರದಿಂದ ಅವರ ಸಂಪುಟದ ವಿದ್ಯುತ್ ಸಚಿವ ಸೋವಾಂಡೇಬ್ ಚಟ್ಟೋಪಾಧ್ಯಾಯರು ಸ್ಪರ್ಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.
ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿರುವ ಸುವೇಂಧು ಅಧಿಕಾರಿ ನಂದಿಗ್ರಾಮದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. ಅವರನ್ನು ಮಮತಾ ಬ್ಯಾನರ್ಜಿಯವರ ಬಲಗೈ ಎಂದು ಕರೆಯಲಾಗುತ್ತಿತ್ತು. ನಂದಿಗ್ರಾಮದಲ್ಲಿ ಟಾಟಾ ಕಂಪನಿಯ ಕಾರು ತಯಾರಿಕ ಘಟಕಕ್ಕಾಗಿ ರೈತರಿಂದ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದಾಗ ಅದನ್ನು ವಿರೋಧಿಸಿ ಸುವೇಂಧು ಅಧಿಕಾರಿ ಟಿಎಂಸಿ ಅಭಿಯಾನದ ನೇತೃತ್ವ ವಹಿಸಿದ್ದರು. ಅವರು ನಿನ್ನೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿ ಇಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದರೆ ಅವರನ್ನು 50,000 ಮತಗಳ ಅಂತರದಿಂದ ಸೋಲಿಸುತ್ತೇನೆ ಎಂದಿದ್ದರು. ಆ ಸವಾಲು ಸ್ವೀಕರಿಸಿರುವ ಮಮತಾ ಬ್ಯಾನರ್ಜಿ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಸುವೇಂಧು ಬಿಜೆಪಿ ಅಭ್ಯರ್ಥಿಯೇ ಎಂಬುದನ್ನು ಪ್ರಧಾನಿ ನಿರ್ಧರಿಸಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ನಂದಿಗ್ರಾಮ ನನ್ನ ಅದೃಷ್ಟದ ಕ್ಷೇತ್ರ. ಅದು ನನ್ನ ಹಿರಿಯ ಸಹೋದರಿಯಂತೆ. ನಾನು ಪ್ರತಿನಿಧಿಸುತ್ತಿರುವ ಭವಾನಿಪೋರ್ ಕಿರಿಯ ಸಹೋದರಿಯಿದ್ದಂತೆ. ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು. ಅಥವಾ ನಂದಿಗ್ರಾಮವೊಂದರಲ್ಲೇ ಸ್ಪರ್ಧಿಸಲಿದ್ದು, ಭವಾನಿಪೋರ್‌ನಲ್ಲಿ ನಮ್ಮ ಪಕ್ಷದ ಇತರ ನಾಯಕರು ಸ್ಪರ್ಧಿಸಬಹುದು” ಎಂದು ಈ ಹಿಂದೆ ಮಮತಾ ಬ್ಯಾನರ್ಜಿ ಹೇಳಿದ್ದರು.
ಮೂರು ಕ್ಷೇತ್ರಗಳಿಲ್ಲಿ ಟಿಎಂಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಅವುಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ದೀದಿ ನಿಜವಾದ ಬಂಗಾಳಿ ಟೈಗರ್: ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿದ ಶಿವಸೇನೆ


