Homeಮುಖಪುಟಕೇರಳ ಬಿಜೆಪಿ ರೈಲಿನಲ್ಲಿ ಮೆಟ್ರೋಮ್ಯಾನ್: ಪ್ಯಾಸೆಂಜರ್‌ಗಳಿಲ್ಲ, ರೆಡ್ ಸಿಗ್ನಲ್‌ಗಳೇ ಎಲ್ಲ!

ಕೇರಳ ಬಿಜೆಪಿ ರೈಲಿನಲ್ಲಿ ಮೆಟ್ರೋಮ್ಯಾನ್: ಪ್ಯಾಸೆಂಜರ್‌ಗಳಿಲ್ಲ, ರೆಡ್ ಸಿಗ್ನಲ್‌ಗಳೇ ಎಲ್ಲ!

- Advertisement -
- Advertisement -

ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಎಡಪಂಥೀಯರು ನಿರ್ದಯವಾಗಿ ಕೊಲ್ಲುತ್ತಿದ್ದಾರೆ ಎಂಬ ಅರೆಸತ್ಯದ ವಿಷಯವನ್ನು ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಬಳಸುತ್ತ ಬಂದಿತ್ತು. ಊಹೂಂ ಅದಕ್ಕೇನೂ ರಾಜಕೀಯ ಲಾಭವಾಗಲಿಲ್ಲ. ನಂತರ, ಶಬರಿಮಲೆ ಅಯ್ಯಪ್ಪನ ಪಾದಕ್ಕೆ ಬಿದ್ದಿದ್ದ ಆಯ್ತು. ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರಿಗೆ ನಿಷೇಧ ವಿಷಯದ ವಿರುದ್ದ ‘ಹೋರಾಟ’ ಮಾಡಿತ್ತು. ಆಗ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಕಾಡೆ ಮಲಗಿತ್ತು.

ಕಳೆದ ಸಲದಂತೆ ಈ ಸಲವೂ ಅಲ್ಲಿಗೆ ಯೋಗಿ ಆದಿತ್ಯನಾಥರನ್ನು ಪ್ರಚಾರಕ್ಕೆ ಕಳಿಸಿ, ಅಭಿವೃದ್ಧಿಯ ಪಾಠಗಳನ್ನು ಬೋಧಿಸುವ ಮೂಲಕ ಅಪಹಾಸ್ಯಕ್ಕೆ ಬಿಜೆಪಿ ಈಡಾಗಿದೆ.
ಈಗ ಅದು ಮೆಟ್ರೋಮ್ಯಾನ್ ಶ್ರೀಧರನ್ ಎಂಬ 89 ವರ್ಷದ ಮಾಜಿ ಅಧಿಕಾರಿಯ ಹಳಿಯ ಮೇಲೆ ರೈಲು ಓಡಿಸಲು ಹತಾಶ ಪ್ರಯತ್ನ ಮಾಡುತ್ತಿದೆ.

ಮೇಲಿನದು, ಕೇರಳ ಚುನಾವಣೆಗೆ ಸಂಬಂಧಿಸಿದಂತೆ, ಬಿಜೆಪಿಯ ಹೀನಾಯ ಸ್ಥಿತಿ ಅನಿಸಬಹುದು, ಆದರೆ ಅದರ ಪಾಲಿಗೆ ಇದೇ ಅತ್ಯುತ್ತಮ ಗಳಿಗೆ ಅನಿಸಿಬಿಟ್ಟಿದೆ!

ಈಗ ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಒಬ್ಬರು ಶಾಸಕರಿದ್ದಾರೆ. ಕೇರಳ ವಿಧಾನಸಭೆ ಸರ್ವಾನುಮತದಿಮದ ಕೇಂದ್ರದ ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ನಿರ್ಣಯ ಮಂಡಿಸಿತ್ತು. ಸರ್ವಾನುಮತ ಅಂದರೆ ಬಿಜೆಪಿಯ ಶಾಸಕನೂ ಬೆಂಬಲಿಸಿದ್ದರು!

2021: ಮೆಟ್ರೋಮ್ಯಾನ್ ಮತ್ತು ಬಿಜೆಪಿ ‘ರೈಲು’!

ಮೆಟ್ರೋ ರೈಲು ವ್ಯವಸ್ಥೆ, ಕೊಂಕಣ ರೈಲು ವ್ಯವಸ್ಥೆಗಳ ಸಾಧನೆಗಳಿಗಾಗಿ ಶ್ರೀಧರನ್ ಪ್ರಸಿದ್ಧರು. ಆಡಳಿತಾಧಿಕಾರಿಗಳು ರಾಜಕೀಯ ಯಶಸ್ಸು ಪಡೆದ ಇತ್ತೀಚಿನ ಉದಾಹರಣೆ ಎಂದರೆ, ಐಆರ್‌ಎಸ್ ಕೇಡರ್‌ನ ಅರವಿಂದ್ ಕೇಜ್ರಿವಾಲ್. ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಕಟ್ಟುವ ಮುಂಚೆ ಮಾಹಿತಿ ಹಕ್ಕು ಕಾಯ್ದೆಗಾಗಿ ಹೋರಾಟ ನಡೆಸಿದ್ದರು. ಜನ್ ಲೋಕ್ ಮಸೂದೆ ಜಾರಿಗೆ ಒತ್ತಾಯಿಸಿ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಹೋರಾಟ ಮಾಡಿದ್ದರು. ಭ್ರಷ್ಟಾಚಾರವೆಂದರೆ, ರೊಕ್ಕದ ರೂಪದ ಲಂಚವಷ್ಟೇೆಂದು ನಂಬಿದ್ದ ಮಧ್ಯಮವರ್ಗದ ಜನರನ್ನೂ ಕೇಜ್ರಿವಾಲ್ ಸೆಳೆದಿದ್ದರು.

ಮುಂದೆ ಅವರ ಸರ್ಕಾರ ಶಿಕ್ಷಣ, ಆರೋಗ್ಯ, ನೀರು ಪೂರೈಕೆ ಮತ್ತು ವಿದ್ಯುತ್ ವಿಷಯಗಳಲ್ಲಿ ಮಾಡಿದ ಕೆಲಸಗಳು ಅವರನ್ನು ಜನಸ್ನೇಹಿ ಮಾಡಿವೆ.

ಆದರೆ, ಈ ಮೆಟ್ರೋಮ್ಯಾನ್ ಶ್ರೀಧರನ್, ತಮ್ಮ ನೌಕರಿಯ ಕಾರಣದಿಂದಾಗಿ ಬಹುಪಾಲು ಕೇರಳದಿಂದ ಹೊರಗೇ ಇದ್ದವರು. ನಿವೃತ್ತಿಯ ನಂತರವಷ್ಟೇ ಕೇರಳದ ತಮ್ಮ ಊರಿಗೆ ಬಂದವರು. ಈಗ ಏಕಾಏಕಿ ಅವರು ಬಿಜೆಪಿಗೆ ಸೇರುವುದು ಮತ್ತು ಬಿಜೆಪಿ ಈವರೆಗೆ ಕೇರಳದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಹಿಂದಕ್ಕೆ ಸರಿಸಿ, ಶ್ರೀಧರನ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದು- ಇದು ಶ್ರೀಧರನ್ ಅವರ ಅಸಾಧ್ಯ ಆಂಬಿಷನ್ಸ್ ಮತ್ತು ಬಿಜೆಪಿಯ ಹತಾಶೆ ಮತ್ತು ಜೂಜಿನಾಟಕ್ಕೆ ಸಂಕೇತದಂತಿದೆ.

ನಿನ್ನೆಯಷ್ಟೇ ಈ ಶ್ರೀಧರನ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿತು. ಆದರೆ ಸ್ವಲ್ಪ ಹೊತ್ತಿನಲ್ಲೇ ರಾಷ್ಟ್ರೀಯ ಬಿಜೆಪಿ ಸ್ಪಷ್ಟನೆ ನೀಡಿ, ಇನ್ನೂ ಅದರ ಬಗ್ಗೆ ತೀರ್ಮಾನವಾಗಿಲ್ಲ, ಅಂತಹ ಅಧಿಕೃತ ಘೋಷಣೆ ಮಾಡಿಲ್ಲ ಎಂದಿತು. ಇದು ಕೂಡ ಬಿಜೆಪಿಯ ಗೊಂದಲ ಮತ್ತು ಶ್ರೀಧರನ್ ಅವರ ತಳಬುಡವಿಲ್ಲದ ಕನಸುಗಳನ್ನು ತೋರಿಸುತ್ತಿದೆ.

ಬಿಜೆಪಿಯ ಪ್ರಾಥಮಿಕ ಸದ್ಯಸ್ವತ್ವ ಪಡೆದ ಕೂಡಲೇ ಶ್ರೀಧರನ್, ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಗಿ ಘೋಷಣೆ ಮಾಡಲು ಭಿನ್ನವಿಸಿಕೊಂಡರು.
*****

ಮುಂದಿನ ತಿಂಗಳು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಭಾರತದ ‘ಮೆಟ್ರೋ ಮ್ಯಾನ್’ ಇ.ಶ್ರೀಧರನ್ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ ಕೇಂದ್ರ ಸಚಿವ ವಿ ಮುರಳೀಧರನ್ ಗುರುವಾರ ರಾತ್ರಿ ಎಎನ್‌ಐಗೆ ಸ್ಪಷ್ಟೀಕರಣವನ್ನು ನೀಡಿದ್ದು, ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ.

ಹಿಂದಿನ ದಿನ ಮುರಳೀಧರನ್ ಅವರು ಟ್ವೀಟ್ ಮಾಡಿ, “ಕೇರಳ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇ ಶ್ರೀಧರನ್ ಅವರನ್ನು ಘೋಷಿಸಿ, ಅವರೊಂದಿಗೆ ಕೇರಳ ಚುನಾವಣೆಯಲ್ಲಿ ಹೋರಾಡಲಿದೆ. ಕೇರಳದ ಜನರಿಗೆ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ-ಆಧಾರಿತ ಆಡಳಿತವನ್ನು ಒದಗಿಸಲು ನಾವು ಸಿಪಿಎಂ ಮತ್ತು ಕಾಂಗ್ರೆಸ್ ಎರಡನ್ನೂ ಸೋಲಿಸುತ್ತೇವೆ’ ಎಂದಿದ್ದರು. ಈಗ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ,

ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಬಿಜೆಪಿಯ ನಿರ್ಧಾರವು ಪಕ್ಷದಲ್ಲಿನ “ಅನಧಿಕೃತ” ನಿಯಮಕ್ಕೆ ವಿರುದ್ಧವಾಗಿದೆ ಕೂಡ! 75 ವರ್ಷಕ್ಕಿಂತ ಮೇಲ್ಪಟ್ಟ ಯಾರನ್ನೂ ಮಂತ್ರಿ ಸ್ಥಾನ ಅಥವಾ ಇತರ ಸ್ಥಾನಗಳಿಗೆ ಪರಿಗಣಿಸಲಾಗುತ್ತಿಲ್ಲ. ಅದ್ವಾನಿ, ಮುರಳಿ ಮನೋಹರ್ ಜೋಶಿಯವರಿಗೂ ಇದನ್ನು ಅನ್ವಯಿಸಲಾಯಿತ್ತು.

ಶ್ರೀಧರನ್ ಅವರು ಜೂನ್‌ನಲ್ಲಿ 89 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೂ, ಆ ನಿಯಮಕ್ಕೆ ವಿನಾಯಿತಿಗಳಿಗೆ ತಕ್ಷಣದ ಆದ್ಯತೆ ಇದೆ; ಬಿ.ಎಸ್ ಯಡಿಯೂರಪ್ಪ ಅವರು 2019 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ 76 ವರ್ಷವಾಗಿತ್ತಲ್ಲವೆ?

ಶ್ರೀಧರನ್ ಅವರು ಚುನಾವಣೆಯಲ್ಲಿ “ದೊಡ್ಡ” ಗೆಲುವು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಹಳಿಗಳೇ ಇಲ್ಲದೇ ಪ್ಯಾಸೆಂಜರ್ ರೈಲು ಓಡಿಸುವ ಕನಸು ಕಾಣುತ್ತಿದ್ದಾರೆ!
“ನಾನು ರಾಜಕಾರಣಿಯಂತೆ ಕೆಲಸ ಮಾಡುವುದಿಲ್ಲ. .ನಾನು ತಂತ್ರಜ್ಞನಂತೆ ಕೆಲಸ ಮಾಡುತ್ತೇನೆ” ಎಂದು ಶ್ರೀಧರನ್ ಹೇಳುತ್ತಿದ್ದಾರೆ ಬೇರೆ!
ಮೂಲಭೂತ ಸೌಕರ್ಯ ಮತು ಉದ್ಯಮಗಳ ಸ್ಥಾಪನೆ ಬಿಟ್ಟು ಅವರ ತಲೆಯಲ್ಲಿ ಯಾವ ಹೊಸ ಹೊಳಹೂ ಕಾಣುತ್ತಿಲ್ಲ!

ಕೇರಳದಲ್ಲಿ ಬಿಜೆಪಿ ಶ್ರೀಧರನ್ ಅವರ ಮೆಟ್ರೋರೈಲು ಏರಿದೆ. ಆದರೆ ಅದು ಓಡುವುದೇ ಅನುಮಾನ, ಓಡಿದರೂ ಪ್ಯಾಸೆಂಜರ್ ಹತ್ತುವುದಂತೂ ತೀರಾ ಅನುಮಾನ!

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಭಾರತದ ‘ಮೆಟ್ರೋ ಮ್ಯಾನ್’ ಈಗ ಕೇರಳ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...