“ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುವ ಅಶ್ಲೀಲ ವೀಡಿಯೋದಲ್ಲಿರುವ ಸಂತ್ರಸ್ತೆ ತಾನು” ಎಂದು ಹೇಳಿಕೊಂಡಿರುವ ಯುವತಿಯೊಬ್ಬರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಆಕೆ ತನಗೆ ರಕ್ಷಣೆಯಿಲ್ಲವೆಂದೂ, ಈ ಘಟನೆ ನಡೆದಿದೆ ಎಂದೂ ಭಾಗಶಃ ಒಪ್ಪಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ಮಾತನಾಡಿರುವ ಯುವತಿ, “ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನಾನು ಇಷ್ಟೇ ಕೇಳಿಕೊಳ್ಳುವುದು. ಈ ವಿಡಿಯೋ ಹೇಗೆ ಮಾಡಿದ್ರೂ ಎಂಬುದು ನನಗೆ ಗೊತ್ತಿಲ್ಲ. ಈಗಾಗಲೇ ನನ್ನ ಮಾನ ಹರಾಜಾಗಿದೆ. ನಮ್ಮ ಮನೆ ಹತ್ತಿರ ಬಂದು ಜನಗಳು ಕೇಳಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ನಮ್ಮ ಅಪ್ಪ-ಅಮ್ಮ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನಮ್ಮ ಹಿಂದೆ ಯಾರೂ ಇಲ್ಲ. ಪೊಲಿಟಿಕಲ್ ಸಪೋರ್ಟ್ ಅದು ಇದು ಏನೂ ಇಲ್ಲ. ರಮೇಶ್ ಜಾರಕಿಹೊಳಿ ಅವರೇ ನನಗೆ ಕೆಲಸ ಕೊಡಿಸುತ್ತೇನೆ ಅಂತ ಹೇಳಿದ್ರು. ಅದೆಲ್ಲಾ ಮಾಡಿ ಈಗ ವಿಡಿಯೋನು ಈಚೆ ಬಿಡ್ತಾ ಇದ್ದಾರೆ. ಇದೆಲ್ಲಾ ಹೇಗಾಯ್ತು, ಏನು ಅನ್ನೋದು ನನಗೆ ಗೊತ್ತಿಲ್ಲ. ನನಗೆ ಯಾವುದೇ ತರವಾದ ರಕ್ಷಣೆ ಇಲ್ಲ. ನಾನು ಇಷ್ಟೇ ಕೇಳಿಕೊಳ್ಳೋದು ನನಗೆ ರಕ್ಷಣೆ ಕೊಡಿ” ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ್ದ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ “ಇದೊಂದು ನಕಲಿ ಸಿಡಿ, ಬ್ಲಾಕ್ ಮೇಲ್, ರಾಜಕೀಯ ದುರುದ್ದೇಶದಿಂದ ಹೀಗೆ ಮಾಡಿದ್ದಾರೆ” ಎಂದು ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದರು. ಆನಂತರ ರಾಜ್ಯ ಸರ್ಕಾರ ಈ ಪ್ರಕರಣ ತನಿಖೆಗೆ ವಿಶೇಷ ತನಿಖೆ ತಂಡ ರಚನೆ ಮಾಡಿದೆ.
ಆದರೆ ಅಧಿಕೃತವಾಗಿ ಯಾವುದೆ ಎಫ್‌ಐಆರ್ ದಾಖಲಿಸಲಾಗಿರುವುದಿಲ್ಲ. ವೀಡಿಯೋದಲ್ಲಿರುವ ಸಂತ್ರಸ್ತೆ ಬಲಿಪಶುವೇ ಅಥವಾ ಆರೋಪಿಯೇ ಎಂಬುದನ್ನೂ ತನಿಖೆ ಮಾಡಲು ಸರ್ಕಾರ ಆಸ್ಥೆ ವಹಿಸಿರುವುದಿಲ್ಲ. ಬದಲಿಗೆ ದೂರು ದಾಖಲಿಸಿದ ದಿನೇಶ್ ಅವರಿಗೇ ನೋಟಿಸ್ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಸಿಡಿ ಮಾಡಿದವರು ಯಾರು ಎಂಬುದನ್ನು ಹುಡುಕುವುದೇ ಸರ್ಕಾರದ ಉದ್ದೇಶವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ..! “ಸಾಹುಕಾರ್” ಹೊರತುಪಡಿಸಿ..! – ಅನನ್ಯ ಬೆಂಗಳೂರು
ಎಸ್ಐಟಿ ರಚನೆಯಾದ ಬಳಿಕ ರಮೇಶ್ ಜಾರಕಿಹೊಳಿ ತಮ್ಮ ಆಪ್ತರ ಮೂಲಕ ಇಂದು (ಮಾ.13) ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಪರವಾಗಿ ನೆಲಮಂಗಲದ ಮಾಜಿ ಶಾಸಕ ನಾಗರಾಜ್ ಸದಾಶಿವನಗರದಲ್ಲಿ ದೂರು ದಾಖಲಿಸಿದ್ದಾರೆ.
ಸಿಡಿ ಬಿಡುಗಡೆಯಿಂದ ಮಾನಹಾನಿಯಾಗಿದೆ. ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ. ಬ್ಲಾಕ್ ಮೇಲ್ ಮಾಡಲಾಗಿದೆ. ಎಸ್ಐಟಿ ರಚನೆಯಾಗಿದೆ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ರಾಜಕೀಯವಾಗಿ ಮುಗಿಸಲು, ಹಣ ವಸೂಲಿ ಮಾಡಲು, ರಾಜಕೀಯ ತೇಜೊವಧೆ ಮಾಡಲು ಷಡ್ಯಂತ್ರ ರೂಪಿಸಲಾಗಿದೆ. ಸುಮಾರು 3 ತಿಂಗಳಿಂದ ಸದಾಶಿವನಗರದಲ್ಲಿ ನನ್ನ ವಿರುದ್ಧ ಮಸಲತ್ತು ಮತ್ತು ಮೋಸ ಮಾಡಿ ನಕಲಿ ಸಿಡಿ ಸೃಷ್ಟಿಸಲಾಗಿದೆ. ಯಾರ ಹೆಸರಿನಲ್ಲೂ ದೂರು ಕೊಟ್ಟಿಲ್ಲ. ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಲಾಗಿದೆ. ರಮೇಶ್ ಜಾರಕಿಹೊಳಿ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 120B, 385, 465, 469 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದಾದ ಕೆಲವೇ ಗಂಟೆಗಳ ನಂತರ ವೀಡಿಯೋದಲ್ಲಿರುವ ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಈ ಸಿಡಿ ಪ್ರಕರಣದಲ್ಲಿ ಪ್ರಮುಖ ದೂರುದಾರರಾಗಿರುವ ದಿನೇಶ್ ಕಲ್ಲಹಳ್ಳಿಯವರು ದೂರು ನೀಡಿದ ನಂತರ, ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿ ಅದನ್ನು ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವ ಸರ್ಕಾರ ಈಗ ರಮೇಶ್ ಜಾರಕಿಹೊಳಿಯವರ ದೂರಿಗೆ ಎಫ್‌ಐಆರ್ ದಾಖಲಿಸಿದೆ. ಈ ಸಂದರ್ಭದಲ್ಲಿ ಸಂತ್ರಸ್ತ ಯುವತಿಯ ಈ ವೀಡಿಯೋ ವೈರಲ್ ಆಗುತ್ತಿದ್ದು, ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ.
ಇದನ್ನೂ ಓದಿ: ರೈತ ಹೋರಾಟ ಸರ್ಕಾರದ ವಿರುದ್ಧವೂ ಅಲ್ಲ ಕಾಂಗ್ರೆಸ್‌ನ ಪರವೂ ಅಲ್ಲ: ಚುಕ್ಕಿ ನಂಜುಂಡಸ್ವಾಮಿ


