ಕರ್ನಾಟಕ ಸ್ವಯಂಘೋಷಿತ ಸಾಹುಕಾರ್ ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣ ಇಡೀ ರಾಜ್ಯದ ಕಾನೂನನ್ನೇ ಅಣಕಿಸುತ್ತಿದೆ. ಕಾನ್‌ಸ್ಟೇಬಲ್ ಎದುರು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ರಮೇಶ್ ಜಾರಕಿಹೋಳಿ ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ಮನೆ ಆಳಿನಂತೆ ಬಳಕೆ ಮಾಡಿಕೊಳ್ಳುತ್ತಿರೋದು ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತಿದೆ.
ರಮೇಶ್ ಜಾರಕಿಹೋಳಿ ಲೈಂಗಿಕ ಹಗರಣದ ಸಿಡಿಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯವರು ಪೊಲೀಸ್ ಕಮಿಷನರ್ ಗೆ ಮಾಹಿತಿ ನೀಡುತ್ತಾರೆ. ಮಾಹಿತಿಯನ್ನು ಪಡೆದುಕೊಳ್ಳಲು ನಿರಾಕರಿಸುವ ಪೊಲೀಸ್ ಆಯುಕ್ತರು ದಿನೇಶ್ ಕಲ್ಲಹಳ್ಳಿಯವರನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಅರ್ಜಿ ನೀಡುವಂತೆ ಸೂಚಿಸುತ್ತಾರೆ. “ಸಚಿವರೊಬ್ಬರು ಈ ಸಿಡಿಯ ದೃಶ್ಯಾವಳಿಗಳಲ್ಲಿ ಇದ್ದು, ಯುವತಿಯನ್ನು ಬಳಸಿಕೊಳ್ಳಲಾಗಿದೆ. ಈ ಸಿಡಿಯನ್ನು ಮಾಹಿತಿ ಮೂಲಗಳು ನನಗೆ ತಲುಪಿಸಿದ್ದು, ಅದನ್ನು ಬಹಿರಂಗಗೊಳಿಸದೆ ಒರ್ವ ಜವಾಬ್ದಾರಿಯುತ ನಾಗರಿಕನಾಗಿ ಪೊಲೀಸರಿಗೆ ಹಸ್ತಾಂತರಿಸುತ್ತೇನೆ. ಈ ಸಿಡಿಯ ದೃಶ್ಯಾವಳಿಯಲ್ಲಿರುವ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆಯೇ ಎಂದು ತನಿಖೆ ಮಾಡಿ” ಎಂದು ಮಾಹಿತಿ ಅರ್ಜಿಯಲ್ಲಿ ದಿನೇಶ್ ಕಲ್ಲಹಳ್ಳಿ ಕೇಳಿಕೊಂಡಿದ್ದರು.
ಅರ್ಜಿ ಪಡೆದುಕೊಂಡ ಕಬ್ಬನ್ ಪಾರ್ಕ್ ಪೊಲೀಸರು ಆ ದೃಶ್ಯಾವಳಿಯಲ್ಲಿ ಇದ್ದರೆನ್ನಲಾದ ಸಚಿವರನ್ನು ಕರೆಸಿ ವಿಚಾರಣೆ ನಡೆಸುವುದಿಲ್ಲ. ದೃಶ್ಯಾವಳಿಯಲ್ಲಿರುವ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆಯೇ ಎಂಬ ವಿಚಾರಣೆಯನ್ನೂ ನಡೆಸುವುದಿಲ್ಲ. ಬದಲಾಗಿ ಮಾಹಿತಿದಾರ ದಿನೇಶ್ ಕಲ್ಲಹಳ್ಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗುತ್ತದೆ. ಮಾಹಿತಿಯ ಬೆನ್ನು ಹತ್ತಬೇಕಾದ ಪೊಲೀಸರು ಮಾಹಿತಿದಾರನ ಬೆನ್ನು ಬೀಳುತ್ತಾರೆ. ಮಾಹಿತಿಯ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳುವ ಎಲ್ಲಾ ಅವಕಾಶಗಳಿದ್ದರೂ ಎಫ್ಐಆರ್ ಮಾಡದೇ ಮಾಹಿತಿದಾರನಿಗೇ ಕಿರುಕುಳ ಕೊಡಲಾಗುತ್ತದೆ. ಕೊನೆಗೆ ಮಾಹಿತಿದಾರ ಮಾಹಿತಿ ಅರ್ಜಿಯನ್ನೇ ವಾಪಸ್ ಪಡೆಯುತ್ತಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರ-ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸು ಆರೋಪ: ಬಿಜೆಪಿ ವಿರುದ್ಧ ಶಿವಮೊಗ್ಗ ಚಲೋ
ದಿನೇಶ್ ಕಲ್ಲಹಳ್ಳಿ ಮಾಹಿತಿ ಅರ್ಜಿಯನ್ನು ವಾಪಸ್ ಪಡೆಯುತ್ತಿದ್ದಂತೆ ರಮೇಶ್ ಜಾರಕಿಹೋಳಿ ಗೃಹ ಸಚಿವರಿಗೆ ಎರಡ್ಮೂರು ವಾಕ್ಯದ ಪತ್ರ ಬರೆಯುತ್ತಾರೆ. ನನ್ನ ತೇಜೋವಧೆಯಾಗಿದ್ದು ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸುತ್ತಾರೆ. ಈ ಪತ್ರದ ಆಧಾರದ ಮೇಲೆ ವಿಶೇಷ ತನಿಖಾ ತಂಡ(SIT) ರಚನೆ ಮಾಡಲಾಗುತ್ತದೆ. ಯಾವ ಎಫ್ಐಆರ್ ಇಲ್ಲದೆ ಸರ್ಕಾರ ಎಸ್ಐಟಿ ರಚನೆ ಮಾಡಿರುವುದು ಬಹುಶಃ ದೇಶದ ಇತಿಹಾಸದಲ್ಲಿ ಇದೇ ಮೊದಲಿರಬೇಕು.
ಎಸ್ಐಟಿಯೇನೋ ರಚನೆಯಾಯಿತು. ಗೃಹ ಸಚಿವರಿಗೆ ಪತ್ರ ಬರೆದ ಮಾಜಿ ಸಚಿವ ರಮೇಶ್ ಜಾರಕಿಹೋಳಿಯನ್ನು ಎಸ್ಐಟಿ ತಂಡ ಮೊದಲು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬೇಕಿತ್ತು. ಗೃಹಸಚಿವರಿಗೆ ಪತ್ರ ಬರೆಯಲು ಕಾರಣವಾದ ಘಟನೆಯನ್ನು ಸಂಪೂರ್ಣ ದಾಖಲು ಮಾಡಿಕೊಳ್ಳಬೇಕಿತ್ತು. ಆ ಬಳಿಕ ದೃಶ್ಯಾವಳಿಯಲ್ಲಿ ಇದ್ದಳೆನ್ನಲಾದ ಯುವತಿಯ ಬಳಿಗೆ ಪೊಲೀಸರನ್ನು ಕಳುಹಿಸಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿತ್ತು. ಯುವತಿ ಸಂತ್ರಸ್ತಳೇ? ಆಕೆಗೆ ಮಹಿಳಾ ಸಾಂತ್ವನ ಕೇಂದ್ರದ ರಕ್ಷಣೆ ಬೇಕೇ? ಆಕೆ ಇನ್ನೂ ಮಂತ್ರಿಯ ಕಪಿಮುಷ್ಟಿಯಲ್ಲಿ ಇದ್ದಾಳೆಯೇ? ರಕ್ಷಣೆಗೆ ಒಳಗಾಗಬೇಕಾದವಳೇ? ಅಥವಾ ಆಕೆಯೇ ಆರೋಪಿಯೇ? ಎಂಬುದನ್ನು ಮೊದಲು ಖಾತ್ರಿಪಡಿಸಿ ಬಳಿಕ ತನಿಖೆಯ ಕೋನವನ್ನು ನಿರ್ಧರಿಸಬೇಕಿತ್ತು. ಆದರೆ ಇವ್ಯಾವುದನ್ನೂ ಮಾಡದ ಎಸ್ಐಟಿ ನೇರವಾಗಿ ಈ ದೃಶ್ಯಾವಳಿಗಳನ್ನು ಒಟ್ಟು ಸೇರಿಸಿದ್ದು ಯಾರು? ಅದು ಬಹಿರಂಗಗೊಳ್ಳುವಂತೆ ಮಾಡಿದ್ದು ಯಾರು ಎಂಬ ಬಗ್ಗೆ ಆಸಕ್ತಿ ವಹಿಸಿ ಹಲವು ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಿತು.
ಹಲವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಈಗ ರಮೇಶ್ ಜಾರಕಿಹೋಳಿಯಿಂದ ದೂರು ಪಡೆದುಕೊಂಡು ಎಫ್ಐಆರ್ ದಾಖಲಿಸಲಾಗಿದೆ. ಅಂದು ದಿನೇಶ್ ಕಲ್ಲಹಳ್ಳಿ ಮಾಹಿತಿ ನೀಡಿದಾಗ ದೂರು ದಾಖಲಿಸದ ಪೊಲೀಸರು ಈಗ ರಮೇಶ್ ಜಾರಕಿಹೋಳಿ ದೂರು ನೀಡಿದ ತಕ್ಷಣ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇಡೀ ತನಿಖೆಯಲ್ಲಿ ಮಹಿಳಾ ದೌರ್ಜನ್ಯ ತಡೆ ಕಾನೂನನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಯಾರು ಸಂತ್ರಸ್ತರೋ ಅವರನ್ನು ಆರೋಪಿಗಳನ್ನಾಗಿಯೂ, ಯಾರು ಆರೋಪಿಗಳೋ ಅವರನ್ನು ಸಂತ್ರಸ್ತರಾಗಿಯೂ ಬಿಂಬಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. “ಕಾನೂನು ಎಲ್ಲರಿಗೂ ಒಂದೇ, ಆದರೆ ಸಾಹುಕಾರ್ ಹೊರತುಪಡಿಸಿ” ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಇದನ್ನೂ ಓದಿ: ಎಐಎಡಿಎಂಕೆ ಈಗ ಜಯಲಲಿತ ಅವರ ಪಕ್ಷವಲ್ಲ; ಮೋದಿಯ ಗುಲಾಮಿ ಪಕ್ಷ – ಓವೈಸಿ
ಮನುವಾದಿಗಳ ಆಡಳಿತದಲ್ಲಿ ಕಾನೂನು ಕತ್ತೆ ಕಾಯುತ್ತಿದೆ.