ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಭಾನುವಾರ ಮಾತನಾಡಿದ ಅವರು, ರೈತರ ವಿರುದ್ದ ಬಲ ಪ್ರಯೋಗಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ತಮ್ಮ ತವರು ಜಿಲ್ಲೆ ಬಾಘ್ಪತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸತ್ಯ ಪಾಲ್, “ಕೇಂದ್ರ ಸರ್ಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯ ಕಾನೂನು ಖಾತರಿ ನೀಡಿದರೆ, ರೈತರು ತಮ್ಮ ಪಟ್ಟು ಸಡಿಲಿಸಲಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Breaking: ಮಾ. 26ಕ್ಕೆ ಸಂಪೂರ್ಣ ಭಾರತ್ ಬಂದ್ – ಹೋರಾಟನಿರತ ರೈತರ ಕರೆ
ರೈತರ ವಿರುದ್ಧ ಬಲವನ್ನು ಪ್ರಯೋಗಿಸಬೇಡಿ. ಅವರನ್ನು ದೆಹಲಿಯಿಂದ ಖಾಲಿ ಕೈಯಿಂದ ಮನೆಗೆ ಕಳುಹಿಸಬಾರದು ಎಂದು ಪ್ರಧಾನಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಸತ್ಯ ಪಾಲ್ ಹೇಳಿದ್ದಾರೆ.
सुन लीजिए भाजपा के राज्यपाल जी को: "किसानों को दबाना या अपमानित कर के भेजना, गलत रास्ता है। मैंने प्रधानमंत्री को बहुत समझाया; अब आप लोग समझा लीजिए" pic.twitter.com/XI1WxMSByO
— Prashant Bhushan (@pbhushan1) March 15, 2021
“ಯಾವುದೇ ಕಾನೂನುಗಳು ರೈತರ ಪರವಾಗಿಲ್ಲ. ರೈತರು ಮತ್ತು ಸೈನಿಕರು ತೃಪ್ತರಾಗದ ದೇಶವು ಮುಂದೆ ಸಾಗಲು ಸಾಧ್ಯವಿಲ್ಲ, ಜೊತೆಗೆ ಅಂತಹ ದೇಶವನ್ನು ಉಳಿಸಲು ಸಾಧ್ಯವಿಲ್ಲ. ಆದ್ದರಿಂದ ಸೈನ್ಯ ಮತ್ತು ರೈತರನ್ನು ತೃಪ್ತಿಪಡಿಸಬೇಕು” ಎಂದು ಸತ್ಯ ಪಾಲ್ ಹೇಳಿದ್ದಾರೆ.
ರೈತರ ಸ್ಥಿತಿ ಕೆಟ್ಟದ್ದಾಗಿದೆ ಎಂದು ವಿವರಿಸಿದ ಸತ್ಯ ಪಾಲ್, “ರೈತರು ದಿನದಿಂದ ದಿನಕ್ಕೆ ಬಡವರಾಗುತ್ತಿದ್ದಾರೆ, ಆದರೆ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವೇತನವು ಪ್ರತಿ ಮೂರು ವರ್ಷಗಳ ನಂತರ ಹೆಚ್ಚಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರದೊಂದಿಗೆ ಚರ್ಚಿಸಲು ಯಾವುದೇ ಸಮಿತಿ ರಚಿಸಿಲ್ಲ – ರೈತ ಮುಖಂಡರು
“ಅವರು ಹೇಗೆ ಬಡವರಾಗುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ. ರೈತರ ಸರ್ವನಾಶ ಅವರ ಅರಿವಿಲ್ಲದೆ ನಡೆಯುತ್ತಿದೆ. ಅವರು ಬೆಳೆಗಳು ಬಿತ್ತನೆ ಮಾಡಲು ಹೋದಾಗ ಬೆಲೆ ಇರುತ್ತದೆ. ಆದರೆ ಅದನ್ನು ಕೊಯ್ಯಲು ಹೋದಾಗ ಬೆಲೆ ಕಡಿಮೆಯಾಗುತ್ತದೆ” ಎಂದು ಸತ್ಯ ಪಾಲ್ ಹೇಳಿದ್ದಾರೆ.
ಹೊಸ ಕೃಷಿ ಕಾನೂನುಗಳ ಪರವಾಗಿ ಮಂಡಿಸಿದ ವಾದಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಸತ್ಯ ಪಾಲ್, “ರೈತರು ಈಗ ಯಾವುದೇ ಸ್ಥಳದಲ್ಲಿ ಬೆಳೆಗಳನ್ನು ಮಾರಾಟ ಮಾಡಬಹುದೆಂದು ಸಾಕಷ್ಟು ಪ್ರಚಾರ ಮಾಡಲಾಯಿತು. ಆದರೆ ಇದು 15 ವರ್ಷಗಳ ಹಳೆಯ ಕಾನೂನು. ಇದರ ಹೊರತಾಗಿಯೂ, ಮಥುರಾದ ರೈತನು ಗೋಧಿಯೊಂದಿಗೆ ಪಾಲ್ವಾಲ್‌ಗೆ ಹೋದಾಗ, ಅವನ ಮೇಲೆ ಲಾಠಿಚಾರ್ಜ್ ಆಗುತ್ತದೆ. ಸೋನಿಪತ್‌ನಿಂದ ಒಬ್ಬ ರೈತ ನರೇಲಾಕ್ಕೆ ಬಂದಾಗ ಅವನ ಮೇಲೆಯು ಲಾಠಿಚಾರ್ಜ್ ಆಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
“ರೈತರ ಅನೇಕ ಪ್ರಶ್ನೆಗಳಿವೆ, ಅದಕ್ಕೆ ಉತ್ತರಿಸಬೇಕು. ಇಂದು, ರೈತರ ಪರವಾಗಿ ಯಾವುದೇ ಕಾನೂನು ಇಲ್ಲ. ಇದನ್ನು ಸರಿಪಡಿಸಬೇಕಾಗಿದೆ. ರೈತರ ಸಮಸ್ಯೆಗಳನ್ನು ಪರಿಹರಿಸುವ ವಿಷಯದಲ್ಲಿ ನಾನು ಯಾವುದೇ ಹಂತಕ್ಕೂ ಹೋಗಲು ಸಿದ್ದನಿದ್ದೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಅವಧಿ ಮುಗಿಯುವವರೆಗೂ ರೈತ ಹೋರಾಟ ಮುಂದುವರಿಯಲಿದೆ: ನರೇಂದ್ರ ಟಿಕಾಯತ್


