ಗಾಂಜಾ ವ್ಯಸನಿಗಳಿಂದ ಹಲ್ಲೆಗೊಳಗಾಗಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸುವ ಬದಲು ಉಳ್ಳಾಲ ಪೊಲೀಸರು ಮತ್ತಷ್ಟು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಇಂದು ಮಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎರಡು ದಿನದ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ- ಕರ್ನಾಟಕದ ವಿದ್ಯಾರ್ಥಿಗಳು ಝೀರೋ ಡ್ರಾಪೌಟ್ ಅಭಿಯಾನದ ಜಾಗೃತಿ ಕಾರ್ಯಕ್ರಮ ನಡೆಸಿ ಹಿಂದಿರುಗುವ ವೇಳೆ ಗಾಂಜಾ ವ್ಯಸನಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಉಳ್ಳಾಲ ಪೋಲಿಸರು ಹಲ್ಲೆಗೊಳಗಾದವರನ್ನೇ ಬಂಧಿಸಿ, ಠಾಣೆಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿ, ಧಾರ್ಮಿಕ ನಿಂದನೆ ನಡೆಸಿ, ಮಾರ್ಮಾಂಗಕ್ಕೆ ತಮ್ಮ ಬೂಟುಗಳಿಂದ ಒದ್ದು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಸಾಧಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ದೌರ್ಜನ್ಯ ಖಂಡಿಸಿ ಮಂಗಳೂರಿನ ಜ್ಯೋತಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಸಕ್ರಿಯವಾಗಿದೆ ಎಂಬುದಕ್ಕೆ ಈ ಘಟನೆಯು ಸ್ಪಷ್ಟ ಉದಾಹರಣೆಯಾಗಿದೆ. ನ್ಯಾಯ ಒದಗಿಸಬೇಕಾದ ಪೊಲೀಸರು ಗಾಂಜಾ ಮಾಫಿಯದೊಂದಿಗೆ ಆಂತರಿಕವಾಗಿ ಶಾಮೀಲಾಗಿದ್ದಾರೆಯೇ ಎಂಬುದಕ್ಕೆ ಸಾರ್ವಜನಿಕರಲ್ಲಿ ಸಂಶಯ ಮೂಡಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು” ಒತ್ತಾಯಿಸಿದರು.
“ಪೊಲೀಸರು ಸಂಜೆ ವೇಳೆ ಏಕೆ ಹೊರಹೋಗುತ್ತೀರಿ ಎಂದು ನಮ್ಮನ್ನೆ ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಡ್ರಾಪೌಟ್ ಆಗುತ್ತಿದ್ದು, ಇದನ್ನು ಮನಗಂಡು ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ಝೀರೋ ಡ್ರಾಪೌಟ್ ಅಭಿಯಾನದ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ನಡೆಸಲು ನಾವು ಹೋಗಿದ್ದೆವು. ಅದು ತಪ್ಪೆ? ಈ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಂಡು ಹಲ್ಲೆ ನಡೆಸಿದ ಗಾಂಜಾ ವ್ಯಸನಿಗಳಿನ್ನು ಬಂಧಿಸಿ, ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಬೇಕೆಂದು” ಸಾಧಿಕ್ ಆಗ್ರಹಿಸಿದರು.
ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದ.ಕ ಜಿಲ್ಲಾಧ್ಯಕ್ಷ ಅಬ್ದುಲ್ ಬಾಸಿತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಸಿರುದ್ದೀನ್ ಬಪ್ಪಳಿಗೆ, ಅಬ್ದುಲ್ ಖಲೀಫ ಸೇರಿದಂತೆ ಇತರರು ಪೊಲೀಸ್ ದೌರ್ಜನ್ಯವನ್ನು ಖಂಡಿಸಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಣದಿಂದ ಡ್ರಾಪೌಟ್ ಆಗುತ್ತಿರುವ ಕುರಿತಾದ ರಾಜ್ಯ ಅಭಿಯಾನದ ಭಾಗವಾಗಿ ಜಾಗೃತಿ ಮೂಡಿಸಲು ತೆರಳಿದ್ದ ದ.ಕ ಜಿಲ್ಲಾ ವಿದ್ಯಾರ್ಥಿ ನಾಯಕರನ್ನು ಕ್ಷುಲ್ಲಕ ಘಟನೆಗೆ ಸಂಬಂಧಿಸಿದಂತೆ ಬಂಧಿಸಿ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಖಂಡನೀಯ. pic.twitter.com/fXNa1byXLb
— Nasiruddin Bappalige (@NBappalige) March 15, 2021
ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಇಹ್ತಿಶಾಮ್ , ಕೋಶಾಧಿಕಾರಿ ಸುಲ್ತಾನ್ , ಕ್ಯಾಂಪಸ್ ಫ್ರಂಟ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಮಂಗಳೂರು, ಕಾರ್ಯದರ್ಶಿ ಅಶ್ರಫ್ ಜೋಕಟ್ಟೆ, ಮುರ್ಶಿದಾ ಉಪಸ್ಥಿತರಿದ್ದರು.
ಇದನ್ನೂ ಓದಿ: ಟಿಆರ್‌ಪಿ ಹಿಂದೆ ಬಿದ್ದಿರುವವರು ನನ್ನನ್ನು ತಪ್ಪಿತಸ್ಥಳೆಂದು ಘೋಷಿಸಿದರು: ದಿಶಾ ರವಿ


