ಕೊಪ್ಪಳದ ಹಿರೇಬಗನಾಳ ಸುತ್ತ ಮುತ್ತಲಿನ ಗ್ರಾಮಗಳಿಗೆ ಹತ್ತಿರದ ಕಾರ್ಖಾನೆಗಳಿಂದ ಭಾರೀ ಸಂಕಷ್ಟ ಬಂದೊದಗಿದೆ. ಕಾರ್ಖಾನೆಗಳ ಹಾರುಬೂದಿ ಮತ್ತು ತ್ಯಾಜ್ಯದಿಂದ ಸುತ್ತಲಿನ ಪರಿಸರ ತೀವ್ರರೀತಿಯಲ್ಲಿ ಕಲುಷಿತಗೊಂಡಿದ್ದು ಜನ – ಜಾನುವಾರಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದರೆ ಕಾರ್ಖಾನೆಗಳ ಆಡಳಿತ ಮಂಡಳಿಯಾಗಲಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾಗಲಿ ತಲೆಕೆಡಿಸಿಕೊಂಡಿಲ್ಲದ್ದರಿಂದ ಅಲ್ಲಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರೇಬಗನಾಳದಲ್ಲಿ ಹರೇಕೃಷ್ಣ ಮೆಟಲಿಕ್ಸ್ ಪ್ರೈ.ಲಿ ಎಂಬ ಸ್ಟೀಲ್ ಕಂಪನಿಯಿದ್ದು ಅದು ಬಳಸುವ ಕಲ್ಲಿದ್ದಲು ಮತ್ತಿತರ ಉರುವಲುಗಳಿಂದ ಪ್ರತಿನಿತ್ಯ ದೊಡ್ಡ ಪ್ರಮಾಣದ ಹಾರುಬೂದಿ ಸುತ್ತಮುತ್ತಲಿನ ಪ್ರದೇಶಗಳನ್ನು ಕಲುಷಿತಗೊಳಿಸಿದೆ. ಹಾರುಬೂದಿಯ ದಾಳಿಗೆ ಸಂಪೂರ್ಣ ಬೆಳೆ ನಾಶವಾಗುತ್ತಿದ್ದು, ಜಾನುವಾರುಗಳ ಸಹ ಮೇವು ತಿನ್ನುತ್ತಿಲ್ಲ. ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು ವಾಂತಿ-ಬೇಧಿಯಂತಹ ಕಾಯಿಲೆಗಳು ಸಾಮಾನ್ಯವಾಗಿವೆ ಎಂದು ರೈತರು ದೂರಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಸಂತ್ರಸ್ತ ರೈತ ಹನುಮಂತ ಕಡ್ಲಿ “ನಮ್ಮದು ಮತ್ತು ನಮ್ಮ ಸಂಬಂಧಿಕರ ಸುಮಾರು 16 ಎಕರೆ ಜಮೀನಿನ ಪಕ್ಕದಲ್ಲೇ ಈ ಕಾರ್ಖಾನೆ ಇದೆ. ಕಾರ್ಖಾನೆಯ ಹಾರುಬೂದಿ ಮತ್ತು ತ್ಯಾಜ್ಯಗಳಿಂದ ಕಳೆದ 10-12 ವರ್ಷಗಳಿಂದ ನಾವು ಸಮರ್ಪಕವಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷವೂ ನಾವು ಬೆಳೆಯುವ ಸೀಬೆಕಾಯಿ, ಮೆಕ್ಕೆಜೋಳ ಹಾಳಾಗುತ್ತಿದೆ. ಈ ಕುರಿತು 5 ವರ್ಷದ ಹಿಂದೆಯೇ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದ್ದೇವೆ” ಎನ್ನುತ್ತಾರೆ.
ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ, ತೋಟಗಾರಿಗೆ ಇಲಾಖೆ ಮತ್ತು ಹಲವು ವೈದ್ಯರು ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಾರುಬೂದಿಯಿಂದಾಗುತ್ತಿರುವ ಅಪಾಯಗಳ ಕುರಿತು ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದಾರೆ. ಕಾರ್ಖಾನೆಯು ಪರಿಸರ ಸಂರಕ್ಷಣೆಯ ನಿಯಮಗಳನ್ನು ಮೀರಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಈ ಸಮಯದಲ್ಲಿ ಲೋಕಾಯುಕ್ತ ನೋಟಿಸ್‌ಗೆ ಪ್ರತಿಕ್ರಿಯಿಸಿದ ಕಾರ್ಖಾನೆಯು 16 ಎಕರೆಗೆ 12 ಲಕ್ಷದಂತೆ 2017ರಿಂದ ಬೆಳೆನಷ್ಟ ಪರಿಹಾರ ಕೊಡುವುದಾಗಿ ಹೇಳಿ ಕಾರ್ಖಾನೆ ಮುಚ್ಚಿಹೋಗುವುದಿರಿಂದ ತಪ್ಪಿಸಿಕೊಂಡಿತು. ಆದರೆ ಅದರ ದುಷ್ಪರಿಣಾಮಗಳು ಮಾತ್ರ ದಿನೇ ದಿನೇ ಹೆಚ್ಚಾಗುತ್ತಿವೆ ಎಂದು ಹನುಮಂತ ಕಡ್ಲಿ ದೂರಿದ್ದಾರೆ.

ಪ್ರತಿನಿತ್ಯ ನಮ್ಮ ಮೇಲೆ ಧೂಳು ಬೀಳುತ್ತಿದ್ದು, ಗಾಳಿ-ನೀರಿನೊಂದಿಗೆ ದೇಹ ಸೇರುತ್ತಿದೆ. ಸುಸ್ತು-ವಾಂತಿ-ಬೇಧಿಯಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ. ನಮ್ಮ ಜಾನುವಾರು ಮೇವು ತಿನ್ನುತ್ತಿಲ್ಲ. ಬೆಲೆಗಳೆಲ್ಲ ನಾಶವಾಗುತ್ತಿದೆ. ಹಾಗಾಗಿ ನಮಗೆ ಕಾರ್ಖಾನೆಯ ಯಾವುದೇ ಪರಿಹಾರ ಹಣ ಬೇಡ. ನಮಗೆ ಶಾಶ್ವತ ಪರಿಹಾರ ಬೇಕಾಗಿದೆ. ಕಾರ್ಖಾನೆಯು ಹಾರುಬೂದಿ ಹರಡುವುದನ್ನು ತಡೆಗಟ್ಟಬೇಕು. ಸಾಧ್ಯವಾಗದಿದ್ದರೆ ನಮಗೆ ಬೇರೆ ಕಡೆ ಜಮೀನು ನೀಡಬೇಕು. ಇಲ್ಲದಿದ್ದಲ್ಲಿ ಕಾರ್ಖಾನೆಯನ್ನು ಮುಚ್ಚಬೇಕು. ಇದಕ್ಕೆ ಲೋಕಾಯುಕ್ತ ನ್ಯಾಯಾಲಯವು ಸಹಮತ ವ್ಯಕ್ತಪಡಿಸಿದೆ. ಆದರೆ ಜಿಲ್ಲಾಧಿಕಾರಿಗಳು ಪಟ್ಟು ಹಿಡಿದು ಜಾರಿಗೊಳಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆಗಾಗಿ ಕೊಪ್ಪಳ ಜಿಲ್ಲಾಧಿಕಾರಿ ಸುರಲ್ಕರ್ ವಿಕಾಸ್ ಕಿಶೋರ್‌ರವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ನಂತರ ಈ ವರದಿಯನ್ನು ಅಪ್‌ಡೇಟ್ ಮಾಡಲಾಗುವುದು.
ಇದನ್ನೂ ಓದಿ: ಅಕ್ರಮ ಪರಿಸರ ಲೂಟಿಗೆ ವಿರೋಧ: ಹೋರಾಟಗಾರ ಗಿರೀಶ್ ಆಚಾರ್ ಮೇಲಿನ ಹಲ್ಲೆಗೆ ತೀವ್ರ ಖಂಡನೆ


